Kannada NewsKarnataka NewsLatest

12.12 ಲಕ್ಷ ರೂ. ಮೌಲ್ಯದ ಪಡಿತರ ಅಕ್ಕಿ ವಶ

 ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಯ ಕಾರ್ಯಾಚರಣೆ 

ಪ್ರಗತಿವಾಹಿನಿ ಸುದ್ದಿ, ಖಾನಾಪುರ: ಪಟ್ಟಣದ ತಹಸೀಲ್ದಾರ್ ಕಚೇರಿಯ ಆಹಾರ ಮತ್ತು ನಾಗರಿಕ ಪೂರೈಕೆ ಶಾಖೆಯ ಅಧಿಕಾರಿಗಳು ನಡೆಸಿದ ವಿಶೇಷ ಕಾರ್ಯಾಚರಣೆಯಲ್ಲಿ ೧೨.೧೨ ಲಕ್ಷ ಮೌಲ್ಯದ ಪಡಿತರ ಅಕ್ಕಿಯನ್ನು ವಶಕ್ಕೆ ಪಡೆದು ಐವರನ್ನು ಬಂಧಿಸಿದ ಘಟನೆ ಬುಧವಾರ ವರದಿಯಾಗಿದೆ.

ಖಚಿತ ಮಾಹಿತಿ ಮೇರೆಗೆ ಬುಧವಾರ ತಾಲೂಕಿನ ಗೋಲಿಹಳ್ಳಿ ಗ್ರಾಮದ ಬಳಿ ಬೆಳಗಾವಿ ತಾಳಗುಪ್ಪ ಹೆದ್ದಾರಿಯಲ್ಲಿ ಹುಬ್ಬಳ್ಳಿಯಿಂದ ಅಕ್ಕಿಯ ಮೂಟೆಗಳನ್ನು ಹೊತ್ತುಕೊಂಡು ಮಹಾರಾಷ್ಟ್ರದತ್ತ ಹೊರಟಿದ್ದ ಎರಡು ಸರಕು ಸಾಗಾಣಿಕೆ ಲಾರಿಗಳನ್ನು ಪತ್ತೆ ಹಚ್ಚಿದ ಆಹಾರ ಇಲಾಖೆಯ ಅಧಿಕಾರಿಗಳು ಎರಡೂ ಲಾರಿಗಳನ್ನು ಮಾಲು ಸಮೇತ ವಶಕ್ಕೆ ಪಡೆದು ಪೊಲೀಸರ ವಶಕ್ಕೆ ನೀಡಿದ್ದಾರೆ.

ನ್ಯಾಯಬೆಲೆ ಅಂಗಡಿಗಳ ಮೂಲಕ ಬಡವರ ಪಾಲಾಗಬೇಕಿದ್ದ ಅಕ್ಕಿಯನ್ನು ಅಕ್ರಮವಾಗಿ ಹೊರರಾಜ್ಯಕ್ಕೆ ಸಾಗಿಸುತ್ತಿರುವ ಆರೋಪದಡಿ ಹುಬ್ಬಳ್ಳಿ ನಗರದ ನಿವಾಸಿಗಳಾದ ರಿಯಾಜ್ ಅಹ್ಮದ ಹನೀಫ್, ಯಲ್ಲಪ್ಪ ಬಿಂಗಿ, ಮಹಮ್ಮದ್ ಹನೀಫ್, ಹುಸೇನಸಾಬ್ ದಿವಾನಖಾನ್, ಸುರೇಶ ಬನ್ನಿಗೋಳ ಎಂಬ ಐವರ ವಿರುದ್ಧ ಪ್ರಕರಣ ದಾಖಲಿಸಿದ್ದು, ಜೊತೆಗೆ ಆಹಾರ ಇಲಾಖೆ ವಶಕ್ಕೆ ಪಡೆದ ಲಾರಿಗಳ ಮೌಲ್ಯ ೪೦ ಲಕ್ಷ ಮತ್ತು ವಶಕ್ಕೆ ಪಡೆದ ಅಕ್ಕಿಮೂಟೆಗಳ ಮೌಲ್ಯ ೧೨.೧೨ ಲಕ್ಷ ಸೇರಿದಂತೆ ಒಟ್ಟು ೫೨.೧೨ ಲಕ್ಷ ಮೊತ್ತದ ಮಾಲನ್ನು ಪೊಲೀಸರ ಸುಪರ್ದಿಗೆ ಒಪ್ಪಿಸಲಾಗಿದೆ.

ಪಟ್ಟಣದ ತಹಸೀಲ್ದಾರ್ ಕಚೇರಿಯ ಆಹಾರ ನಿರೀಕ್ಷಕ ಎಂ.ಪಿ ಚೋಟಣ್ಣವರ ಅವರು ನೀಡಿದ ದೂರಿನನ್ವಯ ನಂದಗಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ವಶಪಡಿಸಿಕೊಂಡ ಅಕ್ಕಿ ಯಾವ ಉಗ್ರಾಣದಿಂದ ಹೊರಟು ಯಾವ ನ್ಯಾಯಬೆಲೆ ಅಂಗಡಿಗಳಿಗೆ ತಲುಪಿತ್ತು ಮತ್ತು ಹಂಚದೇ ಕದ್ದುಮುಚ್ಚಿ ಮಹಾರಾಷ್ಟ್ರ ರಾಜ್ಯಕ್ಕೆ ಸಾಗಿಸಲಾಗುತ್ತಿತ್ತು ಎಂಬುದರ ಆಹಾರ ಇಲಾಖೆ ತನಿಖೆ ನಡೆಸಲಿದ್ದು, ತನಿಖೆಯ ನಂತರ ಸ್ಪಷ್ಟ ಮಾಹಿತಿ ಲಭ್ಯವಾಗಲಿದೆ ಎಂದು ಇಲಾಖೆಯ ಸಿಬ್ಬಂದಿಯೊಬ್ಬರು ತಿಳಿಸಿದ್ದಾರೆ.

 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button