Kannada NewsKarnataka News

12 ಪ್ರಮುಖ ಸುದ್ದಿಗಳು -12 Important News

ಉಪ ಚುನಾವಣೆ: ಮತ ಕ್ಷೇತ್ರವಾರು ನೋಡಲ್ ಅಧಿಕಾರಿಗಳ ನೇಮಕ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಬೆಳಗಾವಿ ಜಿಲ್ಲೆಯಲ್ಲಿ ಅಕ್ಟೋಬರ ೧೦ ರಂದು ಅಥಣಿ, ಕಾಗವಾಡ ಹಾಗೂ ಗೋಕಾಕ ಮತ ಕ್ಷೇತ್ರಗಳಿಗೆ ನಡೆಯಲಿರುವ ಉಪ ಚುನಾವಣೆಯ ನಿಮಿತ್ತ ಮಾದರಿ ನೀತಿ ಸಂಹಿತೆಯನ್ನು ಕಟ್ಟು ನಿಟ್ಟಾಗಿ ಜಾರಿಗೊಳಿಸಲು ವಾಣಿಜ್ಯ ತೆರಿಗೆ ಇಲಾಖೆಯ ವತಿಯಿಂದ ಮತ ಕ್ಷೇತ್ರವಾರು ನೋಡಲ್ ಅಧಿಕಾರಿಗಳನ್ನು ನೇಮಿಸಿ ವಾಣಿಜ್ಯ ತೆರಿಗೆಗಳ ಜಂಟಿ ಆಯುಕ್ತರಾದ ರಾಮನ್. ಕೆ ಅವರು ಆದೇಶ ಹೊರಡಿಸಿದ್ದಾರೆ.
ವಿಜಯಪುರ ವಾಣಿಜ್ಯ ತೆರಿಗೆ ಸಹಾಯಕ ಆಯುಕ್ತರಾದ ಕೆಂಪರಾಜು ಅವರು ಅಥಣಿ ಮತ ಕ್ಷೇತ್ರ, ಬಾಗಲಕೋಟೆ ವಾಣಿಜ್ಯ ತೆರಿಗೆ ಸಹಾಯಕ ಆಯುಕ್ತರಾದ ಶಿವಾನಂದ ಅಲಬಾಳ ಅವರು ಕಾಗವಾಡ ಮತ ಕ್ಷೇತ್ರ ಹಾಗೂ ಬೆಳಗಾವಿ ವಾಣಿಜ್ಯ ತೆರಿಗೆ ಸಹಾಯಕ ಆಯುಕ್ತರಾದ ಜಗದೀಶ ಗಲಗಲಿ ಅವರು ಗೋಕಾಕ ಮತ ಕ್ಷೇತ್ರಗಳ ನೋಡಲ್ ಅಧಿಕಾರಿಗಳನ್ನಾಗಿ ನೇಮಿಸಲಾಗಿದೆ.
ಬೆಳಗಾವಿ ಉತ್ತರ ವಲಯ ವಾಣಿಜ್ಯ ತೆರಿಗೆಗಳ ಉಪ ಆಯುಕ್ತರಾದ ಎಮ್. ಪಟಾಲಪ್ಪ ಅವರನ್ನು ಅಥಣಿ, ಕಾಗವಾಡ ಹಾಗೂ ಗೋಕಾಕ ಮತ ಕ್ಷೇತ್ರಗಳ ನೋಡಲ್ ಅಧಿಕಾರಿಗಳ ಮೇಲುಸ್ತುವಾರಿ ಅಧಿಕಾರಿಯನ್ನಾಗಿ ನೇಮಿಸಿ ಆದೇಶಿಸಲಾಗಿದೆ.
ಜಿಲ್ಲೆಯಲ್ಲಿ ಸಂಚರಿಸುವ ಸರಕು-ಸಾಗಾಣಿಕೆದಾರರು ಖಾಸಗಿ ಬಸ್ಸಿನ ಮಾಲೀಕರು ಹಾಗೂ ಏಜೆಂಟರುಗಳು ವಾಣಿಜ್ಯ ಸರಕುಗಳನ್ನು ಸಾಗಿಸುವ ಸಂದರ್ಭದಲ್ಲಿ ಕಡ್ಡಾಯವಾಗಿ ಇ-ವೇ ಬಿಲ್ಲು ಹಾಗೂ ದರಪಟ್ಟಿಯನ್ನು ಸರಕಿನ ಜೊತೆಯಲ್ಲಿ ಸಾಗಿಸುವುದು, ದಾಖಲೆಗಳು ಇಲ್ಲದೆ ಇರುವ ಸರಕುಗಳನ್ನು ಸಾಗಿಸದಂತೆ ಎಚ್ಚರವಹಿಸುವುದು ಮತ್ತು ತಪಾಸಣೆಯ ಸಂದರ್ಭದಲ್ಲಿ ಅಧಿಕಾರಿಗಳಿಗೆ ಸಹಕಾರವನ್ನು ನೀಡುವುದು.
ವಹಿವಾಟುದಾರರು ಅಥವಾ ಬೆನಾಮಿ ವ್ಯಕ್ತಿಗಳು ತೆರಿಗೆ ವಂಚಿತ ಸರಕುಗಳನ್ನು ಸಾಗಿಸುತ್ತಿದ್ದ ಪಕ್ಷದಲ್ಲಿ ಈ ಬಗ್ಗೆ ಮಾಹಿತಿಯನ್ನು ಈ ಮೇಲೆ ತೋರಿಸಿದ ಮತ ಕ್ಷೇತ್ರಗಳವಾರು ನೋಡಲ್ ಅಧಿಕಾರಿಗಳಿಗೆ ಹಾಗೂ ಮೂರು ಮತ ಕ್ಷೇತ್ರಗಳ ನೋಡಲ್ ಅಧಿಕಾರಿಗಳ ಮೇಲುಸ್ತುವಾರಿ ಅಧಿಕಾರಿಯವರಿಗೆ ದೂರವಾಣಿ ಮುಖಾಂತರ ಮಾಹಿತಿದಾರರು ವಿವರಗಳನ್ನು ನೀಡುವುದು.
ಚುನಾವಣೆಯ ಸಂದರ್ಭದಲ್ಲಿ ಪ್ರತಿಯೊಬ್ಬರು ಸಾಗಿಸುವ ಎಲ್ಲಾ ಮೌಲ್ಯದ ಸರಕುಗಳನ್ನು ತಪಾಸಣೆಗೆ ಒಳಪಡಿಸಲಾಗುವುದು ಆ ಸಂದರ್ಭದಲ್ಲಿ ಸಂಘ-ಸಂಸ್ಥೆಗಳು ಹಾಗೂ ಸಾರ್ವಜನಿಕರು ವಾಣಿಜ್ಯ ತೆರಿಗೆ ಅಧಿಕಾರಿಗಳಿಗೆ ಸಹಕಾರ ನೀಡಬೇಕು ಎಂದು ವಾಣಿಜ್ಯ ತೆರಿಗೆಗಳ ಜಂಟಿ ಆಯುಕ್ತರಾದ ರಾಮನ್. ಕೆ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಧಾನ ಸಭೆ ಉಪಚುನಾವಣೆ: ಅಕ್ರಮ ತಡೆಗಟ್ಟಲು ಅಬಕಾರಿ ನಿಯಂತ್ರಣಾ ಕೊಠಡಿ

ವಿಧಾನ ಸಭೆ ಉಪಚುನಾವಣೆ ನಿಮಿತ್ಯ ಅಬಕಾರಿ ಅಕ್ರಮಗಳನ್ನು ತಡೆಗಟ್ಟಿ ಶಾಂತಿಯುತ, ಮುಕ್ತ ಹಾಗೂ ನ್ಯಾಯಸಮ್ಮತವಾಗಿ ಉಪಚುನಾವಣೆ ನಡೆಯುವ ದೃಷ್ಟಿಯಿಂದ ಅಥಣಿ, ಕಾಗವಾಡ ಮತ್ತು ಗೋಕಾಕ ವಿಧಾನ ಸಭೆ ಮತ ಕ್ಷೇತ್ರ ವ್ಯಾಪ್ತಿಯಲ್ಲಿ ಅಬಕಾರಿ ನಿಯಂತ್ರಣಾ ಕೊಠಡಿಗಳನ್ನು ತೆರೆಯಾಲಾಗಿದೆ.

ಅಬಕಾರಿ ನಿಯಂತ್ರಣಾ ಕೇದ್ರಗಳ ವಿವರ:
ಜಿಲ್ಲಾ ನಿಯಂತ್ರಣ ಕೊಠಡಿ ದೂರವಾಣಿ ಸಂಖ್ಯೆ ೦೮೩೧ ೨೪೭೫೧೯೨, ಚಿಕ್ಕೋಡಿ ಉಪವಿಭಾಗ ದೂರವಾಣಿ ಸಂಖ್ಯೆ ೦೮೩೩೮ ೨೭೩೩೬೭, ೯೪೪೯೫೯೭೦೭೬, ೯೪೪೯೫೯೭೦೭೭, ರಾಮದುರ್ಗ ಉಪವಿಭಾಗ ದೂರವಾಣಿ ಸಂಖ್ಯೆ ೦೮೩೩೫ ೨೪೩೦೪೬, ೯೪೪೯೫೯೭೦೭೪, ೯೪೪೯೫೯೭೦೭೫, ಅಥಣಿ ವಲಯ ದೂರವಾಣಿ ಸಂಖ್ಯೆ ೦೮೨೮೯ ೨೮೫೨೧೦, ೯೬೨೦೪೧೬೬೯೩, ಗೋಕಾಕ ವಲಯ ದೂರವಾಣಿ ಸಂಖ್ಯೆ ೦೮೩೩೨ ೨೨೯೩೩೩, ೭೮೨೯೪೬೧೨೦೭.
ಸದರಿ ಮತ ಕ್ಷೇತ್ರ ವ್ಯಾಪ್ತಿಯಲ್ಲಿ ಯಾವುದೇ ರೀತಿಯ ಅಬಕಾರಿ ಅಕ್ರಮಗಳು ಕಂಡುಬಂದಲ್ಲಿ ಸಂಬಂಧಿಸಿದ ತಾಲೂಕಿನ ಅಬಕಾರಿ ನಿಯಂತ್ರಣಾ ಕೊಠಡಿಗೆ ಮಾಹಿತಿ, ದೂರುಗಳನ್ನು ನೀಡಲು ಅಬಕಾರಿ ಉಪ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸದೃಢ ಭಾರತ ನಿರ್ಮಾಣಕ್ಕಾಗಿ ಎಲ್ಲ ಮಕ್ಕಳಿಗೆ ಜಂತು ನಿವಾರಣಾ ಮಾತ್ರೆ ನುಂಗಿಸಿ: ಡಾ.ರಾಜೇಂದ್ರ ಕೆ.ವಿ


೧-೧೯ ವರ್ಷದೊಳಗಿನ ಎಲ್ಲಾ ಮಕ್ಕಳಿಗೆ ಇಂದು ಜಂತು ನಿವಾರಣಾ ಮಾತ್ರೆಯನ್ನ ನೀಡಲಾಗುತ್ತಿದ್ದು, ಎಲ್ಲ ಮಕ್ಕಳು ತಪ್ಪದೇ ಸೇವಿಸುವಂತೆ ಕರೆ ನೀಡಿ, ಉಳಿದ ಮಕ್ಕಳು ಕೂಡಾ ಜಂತು ನಿವಾರಣಾ ಮಾತ್ರೆಗಳನ್ನು ಸೇವಿಸಲು ಪ್ರೇರೆಪಿಸುವಂತೆ ಶಾಲಾ ಮಕ್ಕಳಿಗೆ ಬೆಳಗಾವಿ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಡಾ.ರಾಜೇಂದ್ರ ಕೆ.ವಿ ತಿಳಿಸಿದರು.
ಬುಧವಾರ(ಸೆ.೨೫) ನಗರದ ಬಿ.ಕೆ ಮಾಡಲ್ ಹೈಸ್ಕೋಲ್‌ನಲ್ಲಿ ನಡೆದ ರಾಷ್ಟ್ರೀಯ ಆರೋಗ್ಯ ಅಭಿಯಾನ, ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ, ವಾರ್ತಾ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಶಿಕ್ಷಣ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾಂತರ ಇಲಾಖೆ, ಬಿ.ಕೆ ಮಾಡಲ್ ಹೈಸ್ಕೋಲ್, ಸ್ವಯಂ ಸೇವಾ ಸಂಸ್ಥೆಗಳು ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಬೆಳಗಾವಿ ಇವರ ಸಹಯೋಗದಲ್ಲಿ ರಾಷ್ಟೀಯ ಜಂತು ಹುಳು ನಿವಾರಣಾ ದಿನ ಕಾರ್ಯಕ್ರಮದ ಅಂಗವಾಗಿ ಜಿಲ್ಲಾ ಮಟ್ಟದ ಉದ್ಘಾಟನಾ ಸಮಾರಂಭವನ್ನು ಉದ್ಘಾಟಸಿ ಅವರು ಮಾತನಾಡಿದರು.
ಕಳಪೆ ನೈರ್ಮಲ್ಯ ಮತ್ತು ಕೊಳಕು ಸ್ಥಿತಿಗಳಿಂದ ಸೋಂಕುಗಳು ಉಂಟಾಗುತ್ತವೆ. ಜಂತುಹುಳು ಸೋಂಕಿತ ಮಣ್ಣಿನ ಸಂಪರ್ಕದಿಂದ ಹರಡುತ್ತದೆ. ಮಕ್ಕಳ ಕರುಳಿನಲ್ಲಿ ಹೆಚ್ಚು ಸಂಖ್ಯೆಯ ಜಂತುಹುಳು ಇದ್ದಲ್ಲಿ ಹೆಚ್ಚು ಪ್ರಮಾಣದ ರೋಗಲಕ್ಷಣಗಳು ಕಾಣಿಸಿಕೊಳ್ಳುತ್ತವೆ ಎಂದು ಹೇಳಿದರು.
ಸೋಂಕಿತ ಮಗು ಬೀದಿಯಲ್ಲಿ ಮಲ ವಿಸರ್ಜನೆ ಮಾಡುವುದರಿಂದ ಮಣ್ಣು ಕಲುಷಿತಗೊಳಿಸುತ್ತದೆ. ಮೊಟ್ಟೆಗಳನ್ನು ಹೊಂದಿರುವ ಮಲ ಮಣ್ಣಿನಲ್ಲಿ ಲಾರ್ವಾಗಳಾಗಿ ಬೆಳೆಯುತ್ತವೆ. ಸೋಂಕಿತ ಮಗು, ಕೊಳಕು ಕೈಗಳಿಂದ ಆಹಾರವನ್ನು ಸೇವಿಸುವುದರಿಂದ ಹುಳುಗಳ ಮೊಟ್ಟೆಗಳು ಚರ್ಮದೊಳಕ್ಕೆ ಸೇರುವುದರ ಮೂಲಕ ಇತರ ಮಕ್ಕಳು ಸೋಂಕಿತರಾಗುತ್ತಾರೆ ಎಂದು ತಿಳಿಸಿದರು.
ಸೋಂಕಿತ ಮಗುವಿನಲ್ಲಿ ಮೊಟ್ಟೆಗಳು ಮತ್ತು ಲಾರ್ವಾಗಳು ವಯಸ್ಕ ಹುಳುಗಳಾಗಿ ಬೆಳೆಯುತ್ತವೆ, ಇದು ಮೊಟ್ಟೆಗಳನ್ನು ಉತ್ಪಾದಿಸುತ್ತದೆ ಮತ್ತು ಮಗುವಿನ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ ಎಂದು ತಿಳಿಸಿ ಸದೃಡ ಭಾರತ ನಿರ್ಮಾಣಕ್ಕಾಗಿ ಎಲ್ಲ ಮಕ್ಕಳಿಗೆ ಜಂತು ನಿವಾರಣಾ ಮಾತ್ರೆ ನುಂಗಿಸುವಂತೆ ಡಾ.ರಾಜೇಂದ್ರ ಕೆ.ವಿ ಅವರು ಕರೆ ನೀಡಿದರು.
ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ ಬೆಳಗಾವಿ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರಾದ ಎ.ಬಿ ಪುಂಡಲೀಕ ಅವರು ಮಾತನಾಡಿ ಅತಿಯಾದ ಸೋಂಕಿನಿಂದ, ಮಕ್ಕಳು ಆಗಾಗ ಖಾಯಿಲೆ ಬೀಳುವ ಹಾಗೂ ಶಾಲೆಯಲ್ಲಿ ಗಮನ ಕೇಂದ್ರಿಕರಿಸಲು ಅಸಮರ್ಥರಾಗುತ್ತಾರೆ ಅಂತೆಯೇ ಶಾಲೆ, ಅಂಗನವಾಡಿ ಕೇಂದ್ರಗಳಲ್ಲಿ ಹಾಜರಾತಿಯೂ ಕಡಿಮೆಯಾಗುತ್ತದೆ ಎಂದು ಹೇಳಿದರು.
ಜಂತು ಹುಳು ಸೋಂಕಿನಿಂದಾಗಿ, ಮಕ್ಕಳ ದೈಹಿಕ ಬೆಳವಣಿಗೆ ಹಾಗೂ ಮಾನಸಿಕ, ಬೆಳವಣಿಗೆಯ ಮೇಲೆ ನಕಾರಾತ್ಮಕವಾಗಿ ಪರಿಣಾಮ ಬೀರುತ್ತವೆ ಎಂದು ತಿಳಿಸಿ ಈ ದಿನ ೧-೧೯ ಎಲ್ಲಾ ಮಕ್ಕಳು ಜಂತು ನಿವಾರಣಾ ಮಾತ್ರೆ ಸೇವಿಸುವಂತೆ ಕರೆ ನೀಡಿದರು.
ವೇದಿಕೆ ಮೇಲೆ ಬೆಳಗಾವಿ ಜಿಲ್ಲಾ ಪಂಚಾಯತ ಅಕ್ಷರ ದಾಸೋಹ ಇ ಓ ಬಿ.ಎಚ್ ಮಿಲ್ಲಾನಟ್ಟಿ, ಬೆಳಗಾವಿ ಮಹಿಳಾ ಮತ್ತು ಮಕ್ಕಳ ಅಬಿವೃದ್ಧಿ ಇಲಾಖೆ ಜಿಲ್ಲಾ ನಿರೂಪಣಾ ಅಧಿಕಾರಿಗಳಾದ ಎಸ್.ಎಮ್ ಹಂಜಿ, ಬೆಳಗಾವಿ ನಗರ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಕೆ.ಡಿ ಬಡಿಗೇರ, ಬೆಳಗಾವಿ ತಾಲೂಕ ಪಂಚಾಯತ ಎ.ಡಿ ಆರ್.ಸಿ ಮುದಕನಗೌಡರ, ಶಿಶು ಅಭಿವೃದ್ದಿ ಯೋಜನಾ ಅಧಿಕಾರಿಗಳಾದ ಎಪ್.ಬಿ ನದಾಪ, ತಾಲೂಕಾ ಆರೋಗ್ಯಾಧಿಕಾರಿಗಳಾದ ಡಾ.ಸಂಜಯ ಡುಮ್ಮಗೋಳ, ಬೆಳಗಾವಿ ಬಿ.ಕೆ ಮಾಡಲ್ ಹೈಸ್ಕೋಲ್ ಪ್ರಭಾರಿ ಮುಖ್ಯೋಪಾದ್ಯಯರಾದ ಎಸ್.ಎ ಚಾಟೆ, ಸಹ ಶಿಕ್ಷಕರಾದ ಜೋಶಿ ಅವರು ಉಪಸ್ಥಿತರಿದ್ದರು.

ಎನ್.ಎಸ್.ಪೈ ಪ್ರಾಥಮಿಕ ಶಾಲೆಯ ವಿದ್ಯಾರ್ಥಿನಿಯರು ನಾಡಗೀತೆಯನ್ನು ಹಾಡಿದರು. ಬೆಳಗಾವಿ ಜಿಲ್ಲಾ ಆರೋಗ್ಯ ಮತ್ತು ಕು.ಕ ಅಧಿಕಾರಿಗಳಾದ ಡಾ. ಶಶಿಕಾಂತ ಮುನ್ಯಾಳ ಅವರು ಸ್ವಾಗತಿಸಿದರು. ಜಿಲ್ಲಾ ಆರ್ ಸಿ ಹೆಚ್ ಅಧಿಕಾರಿಗಳಾದ ಡಾ. ಐ.ಪಿ ಗಡಾದ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು, ಪ್ರಭಾರಿ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿಗಳಾದ ಡಾ.ಬಿ.ಪಿ ಯಲಿಗಾರ ಅವರು ವಂದಿಸಿದರು, ಸಿ.ಜಿ.ಅಗ್ನಿಹೋತ್ರಿ ಕಾರ್ಯಕ್ರಮವನ್ನು ನಿರೂಪಿಸಿದರು.

ವಿದ್ಯುತ್ ಬಳಕೆಯ ಬಿಲ್ಲಿನ ಬಾಕಿ ಮೊತ್ತವನ್ನು ಸ್ವೀಕರಣಾ ಕೇಂದ್ರದಲ್ಲಿ ಪಾವತಿಸಿ

ಬೆಳಗಾವಿ ನಗರ ವಿಭಾಗ ವ್ಯಾಪ್ತಿಯ ಎಲ್ಲ ವಿದ್ಯುತ್ ಗ್ರಾಹಕರು ತಮ್ಮ ವಿದ್ಯುತ್ ಬಳಕೆಯ ಬಿಲ್ಲಿನ ಬಾಕಿ ಮೊತ್ತವನ್ನು ಕೂಡಲೇ ತಮ್ಮ ಹತ್ತಿರದ ನಗದು ಸ್ವೀಕರಣಾ ಕೇಂದ್ರದಲ್ಲಿ ಪಾವತಿಸಬೇಕು.
ನಿಗದಿತ ಅವಧಿಯೊಳಗೆ ರೂ.೧೦೦ ಮೇಲ್ಪಟ್ಟು ಬಾಕಿ ಪಾವತಿಸದೇ ಇರುವ ಗ್ರಾಹಕರ ಸ್ಥಾವರದ ವಿದ್ಯುತ್ ಸಂಪರ್ಕವನ್ನು ಕಡ್ಡಾಯವಾಗಿ ಕಡಿತಗೊಳಿಸಲಾಗುವುದೆಂದು ಕಾರ್ಯನಿರ್ವಾಹಕ ಇಂಜಿನೀಯರ್(ವಿ) ನಗರ ವಿಭಾಗ, ಹುವಿಸಕಂನಿ, ಬೆಳಗಾವಿ ರವರು ತಿಳಿಸಿರುತ್ತಾರೆ. ಹಾಗೂ ವಿದ್ಯುತ್ ಬಿಲ್ಲು ಪಾವತಿಗಾಗಿ ಡಿಜಿಟಲ್ ಪೆಮೆಂಟ್ ಆಯ್ಕೆಗಳ ಸೌಲಭ್ಯವಿದ್ದು, ಗ್ರಾಹಕರು ಇದರ ಸದುಪಯೋಗ ಪಡಿಸಿಕೊಂಡು ತಮ್ಮ ವಿದ್ಯುತ್ ಬಾಕಿಯನ್ನು ಪಾವತಿಸಿ ಹುವಿಸಕಂನಿಯೊಂದಿಗೆ ಸಹಕರಿಸಬೇಕು ಎಂದು ಹೆಸ್ಕಾ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಆರ್ಥಿಕವಾಗಿ ಸಬಲರು ಪಡೆದಿರುವ ಬಿಪಿಎಲ್ ಕಾರ್ಡ್ ಹಿಂದಿರುಗಿಸಲು ಸೂಚನೆ

ಆರ್ಥಿಕವಾಗಿ ಹಿಂದುಳಿದ ಕುಟುಂಬಗಳಿಗೆ ನೀಡುವ ಬಿ.ಪಿ.ಎಲ್ ಪಡಿತರ ಚೀಟಿಯನ್ನು ಆರ್ಥಿಕವಾಗಿ ಸದೃಢವಾಗಿರುವ ಕುಟುಂಬಗಳು ಸುಳ್ಳು ಮಾಹಿತಿ ನೀಡಿ ಬಿ.ಪಿ.ಎಲ್ ಕಾರ್ಡ್‌ಗಳನ್ನು ಪಡೆದುಕೊಂಡಿರುವುದು ಬೆಳಕಿಗೆ ಬಂದಿದ್ದು, ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಿದ್ದು ಸುಳ್ಳು ಮಾಹಿತಿ ನೀಡಿ ಬಿ.ಪಿ.ಎಲ್ ಕಾರ್ಡ್‌ಗಳನ್ನು ಪಡೆದುಕೊಂಡಿರುವವರು ಕೂಡಲೆ ಕಛೇರಿಗೆ ಹಿಂದಿರುಗಿಸಬೇಕು.

 ಬಿ.ಪಿ.ಎಲ್ ಕಾರ್ಡ್‌ಗಳನ್ನು ಹೊಂದಿರುವ ಅನರ್ಹರು:
ಆದಾಯ ತೆರಿಗೆ ಪಾವತಿಸುತ್ತಿರುವ ಮತ್ತು ನಗರ, ಪಟ್ಟಣ ಪ್ರದೇಶಗಳಲ್ಲಿ ೧೦೦೦ ಚದರ ಅಡಿಗಿಂತ ದೊಡ್ಡದಾದ ಮನೆ ಹೊಂದಿರುವವರು, ಸರ್ಕಾರಿ ನೌಕರರು, ಸಹಕಾರ ಸಂಘಗಳ ಖಾಯಂ ನೌಕರರು, ಸ್ವಾಯತ್ತ ಸಂಸ್ಥೆ, ಮಂಡಳಗಳ ನೌಕರರು, ಬ್ಯಾಂಕ್ ನೌಕರರು, ಆಸ್ಪತ್ರೆ ನೌಕರರು, ವಕೀಲರು, ಆಡಿಟರ‍್ಸ್‌ಗಳು, ದೊಡ್ಡ ಅಂಗಡಿ ಮತ್ತು ಹೋಟೆಲ್ ವರ್ತಕರು, ಸ್ವಂತ ಕಾರು, ಜೆಸಿಬಿ, ಲಾರಿ ಮೊದಲಾದ ವಾಹನ ಹೊಂದಿರುವವರು, ಅನುದಾನಿತ ಶಾಲಾ, ಕಾಲೇಜು ನೌಕರರು, ಗುತ್ತಿಗೆದಾರರು ಕಮೀಷನ್ ಏಜಂಟ್‌ಗಳು, ಮನೆ, ಕಟ್ಟಡಗಳನ್ನು ಬಾಡಿಗೆ ನೀಡಿರುವವರು, ಬಹು ರಾಷ್ಟ್ರೀಯ ಕಂಪನಿ ಉದ್ಯಿಮೆದಾರರು, ನಿವೃತ್ತಿ ವೇತನ ಪಡೆಯುತ್ತಿರುವವರು ಹಾಗೂ ವಾರ್ಷಿಕ ರೂ.೧,೨೦,೦೦೦ ಕ್ಕಿಂತ ಹೆಚ್ಚಿನ ಆದಯ ಹೊಂದಿರುವ ಕುಟುಂಬಗಳು ಬಿ.ಪಿ.ಎಲ್ ಕಾರ್ಡ್‌ಗಳನ್ನು ಪಡೆಯುವುದು ಶಿಕ್ಷಾರ್ಹವಾಗಿದೆ.
ಒಂದು ಕೆ.ಜಿ ಅಕ್ಕಿಗೆ ರೂ.೩೫ ರಂತೆ ಸರ್ಕಾರ ಪಾವತಿಸಿ ದುರ್ಬಲ ಕುಟುಂಬಗಳಿಗೆ ನೀಡುತ್ತಿರುವ ಯೋಜನೆಯ ಲಾಭವನ್ನು ಕೆಲವು ಸದೃಢವಾಗಿರುವ ಕುಟುಂಬಗಳು ಸುಳ್ಳು ಮಾಹಿತಿ ನೀಡಿ ಪಡೆದಿರುವುದು ವಿಷಾದನೀಯ ಈ ರೀತಿಯ ಪ್ರಕರಣಗಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿ ಪತ್ತೆ ಮಾಡುತ್ತಿದೆ.

ಸುಳ್ಳು ಮಾಹಿತಿ ನೀಡಿ ಬಿ.ಪಿ.ಎಲ್ ಕಾರ್ಡ್‌ಗಳನ್ನು ಪಡೆದುಕೊಂಡಿರುವವರು ಸೆಪ್ಟಂಬರ್ ೩೦ ರೊಳಗಾಗಿ ಕೂಡಲೆ ಕಛೇರಿಗೆ ಹಿಂದಿರುಗಿಸಿ, ಇಲ್ಲವಾದರೆ ಅಂತಹ ಅನರ್ಹರನ್ನು ಸರ್ಕಾರವೇ ಪತ್ತೆ ಮಾಡಿ ಯಾವಾಗಿನಿಂದ ಎಷ್ಟು ಅಕ್ಕಿಯನ್ನು ಪಡೆದಿದ್ದಾರೆ ಎಂಬುದನ್ನು ಲೆಕ್ಕಾ ಹಾಕಿ, ಪ್ರಸಕ್ತ ಮಾರುಕಟ್ಟೆಯ ದರದಂತೆ ದಂಡ ವಿದಿಸಲಾಗುವುದು ಹಾಗೂ ಅಂತಹವರ ವಿರುದ್ಧ ಕ್ರಮ ಜರುಗಿಸಲಾಗುವುದು ಮತ್ತು ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗುವುದು ಎಂದು ಹುಕ್ಕೇರಿ ತಹಶೀಲ್ದಾರಾದ ರೇಷ್ಮಾ ತಾಳಿಕೋಟೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸ್ವಂತ ಉದ್ಯಮ ಪ್ರಾರಂಭಿಸುವವರಿಗೆ ಸೂಕ್ತ ಮಾರ್ಗದರ್ಶನ ಹಾಗೂ ತರಬೇತಿ

ಉದ್ಯಮಶೀಲತೆ ಹಾಗೂ ಜೀವನೋಪಾಯ ಇಲಾಖೆ, ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ, ಸಂಯುಕ್ತ ರಾಷ್ಟ್ರಗಳ ಅಭಿವೃದ್ಧಿ ಸಂಸ್ಥೆ ಇವರುಗಳ ಸಂಯುಕ್ತಾಶ್ರಯದಲ್ಲಿ ಸ್ವಂತ ಉದ್ಯಮ ಪ್ರಾರಂಭಿಸುವವರಿಗೆ ಸೂಕ್ತ ಮಾರ್ಗದರ್ಶನ ಹಾಗೂ ತರಬೇತಿ ನೀಡುವ ಉದ್ದೇಶದಿಂದ ದಿಶಾ ಯೋಜನೆಯನ್ನು ಪ್ರಾರಂಭಿಸಲಾಗಿರುತ್ತದೆ.
ಈ ಯೋಜನೆಯಡಿ ವಿವಿಧ ಕ್ಷೇತ್ರಗಳಲ್ಲಿ ಇರುವ ಅವಕಾಶಗಳ ಕುರಿತು ವಿವಿಧ ತರಬೇತಿಯನ್ನು ಹಮ್ಮಿಕೊಳ್ಳಲಾಗುತ್ತಿದೆ.

ತರಬೇತಿಗಳು:
ಪೇಪರ್ ಬ್ಯಾಗ್ಸ್, ಪೇಪರ್ ಕಪ್‌ಗಳು, ಪೇಪರ್ ಪ್ಲೇಟ್, ಟಿಶ್ಯೂ ಪೇಪರ್, ಗ್ರಾಫಕ್ ಡಿಸೈನಿಂಗ್, ಬೇಸಿಕ್ ಮೇಟಲ್ಸ್, ಜನರಲ್ ಇಂಜಿನಿಯರಿಂಗ್, ಜವಳಿ ಆಧಾರಿತ ಕೈಗಾರಿಕೆಗಳು
ಸ್ವಂತ ಉದ್ಯಮ ಸ್ಥಾಪಿಸಲು ಆಸಕ್ತಿಯುಳ್ಳವರು ಸಿಡಾಕ್-ದಿಶಾ ಉದ್ಯಮಶೀಲತಾ ಮಾರ್ಗದರ್ಶನ ಕೇಂದ್ರ, ಜಿಲ್ಲಾ ಕೈಗಾರಿಕಾ ಕೇಂದ್ರದ ಮೊದಲನೇಯ ಮಹಡಿ, ಖಾನಾಪೂರ ರಸ್ತೆ, ಉದ್ಯಮಬಾಗ, ಇಲ್ಲಿಗೆ ನೇರವಾಗಿ ಭೇಟಿಯಾಗಿ ಹೆಸರನ್ನು ಅಕ್ಟೋಬರ ೩ ರೊಳಗೆ ನೊಂದಾಯಿಸಿಕೊಳ್ಳಬೇಕು.
ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ ೦೮೩೧೨೪೧೪೭೪೨, ೭೪೮೩೪೫೦೬೭೯, ೯೫೯೧೩೬೬೨೬ ಮತ್ತು ೮೦೭೩೪೯೪೭೭೨ ಇವುಗಳನ್ನು ಸಂಪರ್ಕಿಸಬಹುದು ಎಂದು ಬೆಳಗಾವಿ ಸಿಡಾಕ್ ಜಂಟಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪೇಶ್ ಇಮಾಮ್ ಮತ್ತು ಮೌಜನರ ಗೌರವ ಸಂಭಾವನೆ ಪರಿಶೀಲನೆ

ಬೆಳಗಾವಿ ಜಿಲ್ಲೆ ವ್ಯಾಪ್ತಿಯಲ್ಲಿ ಬರುವ ಕರ್ನಾಟಕ ರಾಜ್ಯ ವಕ್ಫ್ ಮಂಡಳಿಯಲ್ಲಿ ನೋಂದಾಯಿತ ಮಸೀದಿಗಳಲ್ಲಿ ಸೇವೆ ಸಲ್ಲಿಸುತ್ತಿರುವ ಪೇಶ್ ಇಮಾಮ್ ಮತ್ತು ಮೌಜನರ ಗೌರವ ಸಂಭಾವನೆ ಕುರಿತು ಪರಿಶೀಲನೆ ಕೈಕೊಳ್ಳಲಾಗುತ್ತಿದೆ.
ಮಸೀದಿಗಳಲ್ಲಿ ಸೇವೆ ಸಲ್ಲಿಸುತ್ತಿರುವ ಪೇಶ್ ಇಮಾಮ್ ಮತ್ತು ಮೌಜನ್ನರ ಬ್ಯಾಂಕ್ ಖಾತೆ ಪುಸ್ತಕದ ನಕಲು, ೩ ತಿಂಗಳ ಬ್ಯಾಂಕ್ ಸ್ಟೇಟಮೆಂಟ್, ಆಧಾರರ್ಕಾ ನಕಲು ಹಾಗೂ ಮೊಬೈಲ್ ಸಂಖ್ಯೆ ವಿವರ, ಮಸೀದಿ ಆಡಳಿತ ಮಂಡಳಿ ದೃಢೀಕೃತ ಪತ್ರ ದಾಖಲಾತಿಗಳನ್ನು ಮಸೀದಿ ಆಡಳಿತ ಮಂಡಳಿಯವರು ದೃಢೀಕರಿಸಿ ಪತ್ರದ ಮೂಲಕ ಸೆಪ್ಟೆಂಬರ ೩೦ ರ ಒಳಗಾಗಿ ಬೆಳಗಾವಿ ಅಂಜುಮನ್ ಬಿಲ್ಡಿಂಗ್ ಜಿಲ್ಲಾ ವಕ್ಫ್ ಕಚೇರಿಗೆ ಸಲ್ಲಿಸಬೇಕು ಎಂದು ಬೆಳಗಾವಿ ಜಿಲ್ಲಾ ವಕ್ಫ್ ಕಚೇರಿ ಜಿಲ್ಲಾ ವಕ್ಫ್ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಇಲಿ ಮತ್ತು ಹೆಗ್ಗಣಗಳ ನಿಯಂತ್ರಣ

ಜಿಂಕ್ ಫಾಸ್ಪೈಡ್ ಮತ್ತು ರೋಬಾನ್(ಇಲಿ ಪಾಷಾಣಗಳು), ಅಕ್ಕಿ, ರಾಗಿ, ಹುರಿದ ಕಡಲೆ ಬೀಜ ಹಾಗೂ ಕಡಲೆಕಾಯಿ ಎಣ್ಣೆ, ಪ್ಲಾಸ್ಟಿಕ್ ಬೋಗುಣಿ ಅಥವಾ ಬೇಸಿನ್, ಪ್ಲಾಸ್ಟಿಕ್ ಚಮಚ, ಪ್ಲಾಸ್ಟಿಕ್ ಕವರುಗಳು(೬” ಉದ್ದ ೪” ಅಗಲ, ತೆಳ್ಳನೆಯ ಮಾದರಿ) ಇಲಿ ನಿಯಂತ್ರಣಕ್ಕೆ ಬೇಕಾದ ಸಾಮ್ಯಾನ ಸಲಕರಣೆಗಳು ಎಂದು ತೋಟಗಾರಿಕೆ ಇಲಾಖೆ ವಿಷಯ ತಜ್ಞರಾದ ಡಾ. ಲಗಮಣ್ಣಾ ಕಳ್ಳೂರ ಅವರು ತಿಳಿಸಿದ್ದಾರೆ.

ಪೂರ್ವ ಸಿದ್ಧತೆಗಳು:
ವಿಷರಹಿತ ಆಮಿಷದ ತಯಾರಿಕೆ: ಒಂದು ದೂಡ್ಡ ಪ್ಲಾಸ್ಟಿಕ್ ಬೋಗುಣಿಯಲ್ಲಿ ೪೮ ಭಾಗ ಅಕ್ಕಿ, ೪೮ ಭಾಗ ರಾಗಿ, ೩ ಭಾಗ ಹುರಿದು ಕುಟ್ಟಿದ ಕಡಲೆಕಾಯಿ ಬೀಜ, ೩ ಭಾಗ ಕಡಲೆಕಾಯಿ ಎಣ್ಣೆ ಹಾಕಿ. ಇದನ್ನು ಪ್ಲಾಸ್ಟಿಕ್ ಅಥವಾ ಮರದ ಸೌಟಿನಿಂದ ಚೆನ್ನಾಗಿ ಬೆರೆಸಿ, ಹೀಗೆ ಬೆರೆಸಿದ ೨೦ಗ್ರಾಂ ಮಿಶ್ರಣವನ್ನು ಪ್ಲಾಸ್ಟಿಕ್ ಚಮಚದ ಸಹಾಯದಿಂದ ಪ್ಲಾಸ್ಟಿಕ್ ಕವರಿನೊಳಗೆ ಹಾಕಿ, ಗಂಟು ಹಾಕಿ. ಹೀಗೆ ಎಲ್ಲಾ ಮಿಶ್ರಣವನ್ನು ಪ್ಲಾಸ್ಟಿಕ್ ಕವರಿನೊಳಗೆ ತುಂಬಿ, ಗಂಟು ಹಾಕಬೇಕು.
ವಿಷದ ಆಮಿಷ ತಯಾರಿಕೆ: ಮೇಲೆ ಹೇಳಿದಂತೆ ವಿಷರಹಿತ ಆಮಿಷವನ್ನು ತಯಾರಿಸಿ ಅದಕ್ಕೆ ಶೇ.೨ ರಷ್ಟು ಜಿಂಕ್ ಫಾಸ್ಪೈಡ್ ಎಂಬ ಇಲಿ ಪಾಷಂವನ್ನು ಬೆರೆಸಿ, ಈ ವಿಷಯುಕ್ತವನ್ನು ತಲಾ ೧೦ಗ್ರಾಂ ನಂತೆ ಪ್ಲಾಸ್ಟಿಕ್ ಕವರಿನೊಳಗೆ ಹಾಕಿ, ಗಂಟು ಹಾಕಬೇಕು.

ಇಲಿ ನಿಯಂತ್ರಣದ ವೇಳಾ ಪಟ್ಟಿ:
ಮೊದಲನೇ ದಿನ ಹೊಲ, ಗದ್ದೆಗಳಲ್ಲಿರುವ ಎಲ್ಲಾ ಇಲಿ ಬಿಲಗಳನ್ನು ಮುಚ್ಚಿ, ಎರಡನೇ ದಿನ ಬಾಯ್ದೆರೆದಿರುವ ಬಿಲಗಳಲ್ಲಿ ಒಂದೊಂದು ವಿಷರಹಿತ ಪ್ಲಾಸ್ಟಿಕ್ ಕವರನ್ನು ಹಾಕಿ, ಬಿಲದ ಬಾಯನ್ನು ಮಣ್ಣಿನಿಂದ ಮುಚ್ಚಿ, ನಾಲ್ಕನೇ ದಿನ ಪ್ರತಿ ಬಿಲದೊಳಕ್ಕೂ ಒಂದರಂತೆ ವಿಷಪೂರಿತ ಆಹಾರವಿರುವ ಪ್ಲಾಸ್ಟಿಕ್ ಕವರನ್ನು ಹಾಕಿ, ಬಿಲದ ಬಾಯನ್ನು ಮಣ್ಣಿನಿಂದ ಮುಚ್ಚಿ, ಐದನೇ ದಿನ ಮೇಲಿನ ಕ್ರಮದಿಂದ ಶೇ.೬೦-೭೦ ರಷ್ಟು ಇಲಿ, ಹೆಗ್ಗಣಗಳು ಸಾಯುತ್ತವೆ. ಉಳಿದಿರುವ ಇಲಿಗಳನ್ನು ಕೊಲ್ಲಲು ಬಾಯಿ ತೆಗೆದಿರುವ ಬಿಲದೊಳಕ್ಕೆ ತಲಾ ಒಂದರಂತೆ ರೋಬಾನ್ ಬೆಲ್ಲೆ ಹಾಕಬೇಕು.

ಮುಂಜಾಗ್ರತೆಗಳು:
ಝಿಂಕ್ ಫಾಸ್ಪೈಡ್ ಬಳಕೆಯನ್ನು ಹೊಲಗದ್ದೆ,ತೋಟಗಳಲ್ಲಿ ಮಾತ್ರ ಮಾಡಿ, ವಿಷವನ್ನು ಬರಿ ಕೈಯಿಂದಾಗಲಿ,ಲೋಹದ ಪಾತ್ರೆಗಳಲ್ಲಾಗಲಿ ಬೆರಸಬೇಡಿ, ಕೇವಲ ಪ್ಲಾಸ್ಟಕ್ ಬೇಸಿನ್ ಮತ್ತು ಸೌಟುಗಳನ್ನು ಬಳಸಬೇಕು, ವಿಷ ಪ್ರಾಶನದ ನಂತರ ಕೈಕಾಲು, ಮುಖವನ್ನು ಸಾಬೂನಿನಿಂದ ತೊಳೆಯಬೇಕು, ಸತ್ತ ಇಲಿ, ಹೆಗ್ಗಣಗಳನ್ನು ಆಳವಾದ ಗುಂಡಿ ತೋಡಿ ಅದರಲ್ಲಿ ಹೂಳಬೇಕು.

ಆಕಸ್ಮಿಕವಾಗಿ ಜಿಂಕ್ ಫಾಸ್ಪೈಡ್ ವಿಷವನ್ನು ಯಾರಾದರೂ ತಿಂದಿದ್ದರೆ ತಕ್ಷಣವೇ ಉಪ್ಪು ನೀರು ಅಥವಾ ಮೊಟ್ಟೆಯ ಬಿಳಿ ಭಾಗ ನುಂಗಿಸಿ ವಾಂತಿ ಮಾಡಿಸಬೇಕು, ತಡ ಮಾಡದೆ ವೈದ್ಯರ ಬಳಿಗೆ ಕರೆದುಕೊಂಡು ಹೋಗಬೇಕು, ರೋಬಾನ್ ಆಕಸ್ಮಿಕವಾಗಿ ಸೇವಿಸಲ್ಪಟ್ಟರೆ ವೈದ್ಯರಲ್ಲಿಗೆ ಕರೆದುಕೊಂಡು ಹೋಗಿ ವಿಟಾಮಿನ್ ಕೆ-೧ ರ ಚುಚ್ಚು ಮದ್ದನ್ನು ಕೊಡಿಸಬೇಕು ಎಂದು ತೋಟಗಾರಿಕೆ ಇಲಾಖೆ ವಿಷಯ ತಜ್ಞರಾದ ಡಾ. ಲಗಮಣ್ಣಾ ಕಳ್ಳೂರ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸೆಪ್ಟೆಂಬರ ೨೭ ರಂದು ವಿಶ್ವ ಪ್ರವಾಸೋದ್ಯಮ ದಿನಾಚರಣೆ

ಜಿಲ್ಲಾಡಳಿತದ ವತಿಯಿಂದ ವಿಶ್ವ ಪ್ರವಾಸೋದ್ಯಮ ದಿನಾಚರಣೆಯನ್ನು ಜಿಲ್ಲಾ ಪಂಚಾಯತಿ ಸಭಾ ಭವನದಲ್ಲಿ ಸೆಪ್ಟೆಂಬರ ೨೭ ರಂದು ಬೆಳಿಗ್ಗೆ ೧೧ ಗಂಟೆಗೆ ಹಮ್ಮಿಕೊಳ್ಳಲಾಗಿದೆ.
ಪ್ರವಾಸೋದ್ಯಮ ಹಾಗೂ ಉದ್ಯೋಗ: ಸರ್ವರಿಗೂ ಉಜ್ವಲ ಭವಿಷ್ಯ  ಎಂಬುದು ವಿಶ್ವ ಪ್ರವಾಸೋದ್ಯಮ ದಿನಾಚರಣೆ-೨೦೧೯ರ ಸಂದೇಶವಾಗಿದೆ.
ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ಸಮಿತಿ ಅಧ್ಯಕ್ಷರಾದ ಡಾ. ಎಸ್.ಬಿ ಬೊಮ್ಮನಹಳ್ಳಿ ಅವರು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ.
ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಡಾ.ಕೆ.ವಿ.ರಾಜೇಂದ್ರ ಅವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ.
ಗೌರವಾನ್ವಿತ ಅತಿಥಿಗಳಾಗಿ ಬೆಳಗಾವಿ ನಗರ ಪೋಲಿಸ್ ಆಯುಕ್ತರಾದ ಬಿ.ಎಸ್.ಲೋಕೇಶ್ ಕುಮಾರ, ಬೆಳಗಾವಿ ಜಿಲ್ಲೆ ಪೋಲಿಸ್ ವರಿಷ್ಠಾಧಿಕಾರಿಗಳಾದ ಲಕ್ಷ್ಮಣ ನಿಂಬರಗಿ ಅವರು ಭಾಗವಹಿಸಲಿದ್ದಾರೆ.

ಬೆಳಗಾವಿ ರಾಣಿ ಪಾರ್ವತಿದೇವಿ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯ ಇತಿಹಾಸ ವಿಭಾಗದ ಮುಖ್ಯಸ್ಥರಾದ ಸಿ.ಎಂ.ಮುನವಳ್ಳಿ ಅವರ ಉಪನ್ಯಾಸ ನಡೆಯಲಿದೆ.

ಸೆಪ್ಟೆಂಬರ್ ೨೬ ರಂದು ವಿದ್ಯುತ್ ನಿಲುಗಡೆ

ಯು ಜಿ ಕೇಬಲ್ ಹಾಗೂ ಇತರೆ ತುರ್ತು ನಿರ್ವಹಣಾ ಕಾರ್ಯಗಳನ್ನು ಕೈಗೊಳ್ಳುವ ಸಲುವಾಗಿ ೧೧೦ ಕೆವಿ ಮಚ್ಛೆ ಉಪಕೇಂದ್ರದಿಂದ ಸರಬರಾಜು ಆಗುವ ಬೆಳಗಾವಿ ತಾಲೂಕಿನ ನವಗೇಕರ ನಗರ, ಗೋಡಶೆ ಕಾಲನಿ, ಸಂಭಾಜಿ ನಗರ, ಖಾದರವಾಡಿ, ಮಚ್ಛೆ, ಝಾಡಶಾಪೂರ, ದೇಸೂರು, ಮಚ್ಛೆ ಕೆ.ಎಸ್.ಆರ್.ಪಿ ವಸತಿ ಗೃಹಗಳು, ಅಲ್ಮಾ ಮೋಟರ‍್ಸ್, ಆರೋಗ್ಯ ಮಿಲ್ಕ, ಆಲುಕಾಸ್ಟ, ಅತುನಿ ಸ್ಟಿಲ್ಸ್, ಜೆ.ಕೆ ಮೋಟಾರ‍್ಸ್, ವಿಮಲ್ ಫೌಂಡ್ರಿ, ಪೀರನವಾಡಿ, ವಿನಮಾರ, ಅಭೀಷೆಕ ಅಲ್ಯೂಸ್, ವೇಗಾಹೆಲ್ಮೆಟ, ಖಾನಪೂರ ರೋಡ್, ಹುಂಚಾನಟ್ಟಿ ಗ್ರಾಮಗಳಿಗೆ ಹಾಗೂ ಮಚ್ಛೆ ಔದ್ಯೋಗಿಕ ಕ್ಷೇತ್ರಗಳಿಗೆ ಅಗಸ್ಟ್ ೧೮ ರಂದು ಬೆಳಿಗ್ಗೆ ೧೧ ಗಂಟೆಯಿಂದ ಸಾಯಂಕಾಲ ೬ ಗಂಟೆಯವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ ಎಂದು ಹೆಸ್ಕಾಂ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸೆಪ್ಟೆಂಬರ್ ೨೭ ರಂದು ವಿದ್ಯುತ್ ನಿಲುಗಡೆ

ಕ.ವಿ.ಪ್ರ.ನಿ.ನಿ. ವತಿಯಿಂದ ಎರಡನೇಯ ತ್ರೈಮಾಸಿಕ ಹಾಗೂ ತುರ್ತು ನಿರ್ವಹಣಾ ಕಾರ್ಯಗಳನ್ನು ಕೈಗೊಳ್ಳುತ್ತಿರುವುದರಿಂದ ೧೧೦ ಕೆ.ವ್ಹಿ. ಹುದಲಿ ಉಪಕೇಂದ್ರದಿಂದ ಸರಬರಾಜು ಆಗುವ ಹುದಲಿ, ಕುಮರಿ, ರಂಗದೋಳಿ, ತುಮ್ಮರಗುದ್ದಿ, ಸೋಮನಟ್ಟಿ, ಕಬಲಾಪೂರ, ಚಂದೂರ, ಖನಗಾಂವ ಕೆ.ಎಚ್, ಖನಗಾಂವ ಬಿ.ಕೆ, ಅಷ್ಟೆ, ಮುಚ್ಚಂಡಿ, ವಾಟರ್ ಸಪ್ಲಾಯ ನಂದಿ, ಕಲಕಾಂಬ ಗ್ರಾಮಗಳಲ್ಲಿ ಸೆಪ್ಟಂಬರ್ ೨೭ ರಂದು ಬೆಳಿಗ್ಗೆ ೯ ಘಂಟೆಯಿಂದ ಸಾಯಂಕಾಲ ೪ ಘಂಟೆಯವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ ಎಂದು ಹೆಸ್ಕಾಂ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸೇನಾ ನೇಮಕಾತಿಗೆ ಅರ್ಜಿ ಆಹ್ವಾನ

ಬೆಳಗಾವಿಯ ಮಹಾರ್ ಬಟಾಲಿಯನ್‌ನಲ್ಲಿ ಸೈನಿಕ (ಜನರಲ್ ಡ್ಯೂಟಿ) ಸೇರಿದಂತೆ ಖಾಲಿ ಇರುವ ವಿವಿಧ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ.
ಅಕ್ಟೋಬರ್ ೧೫ ರಿಂದ ೨೫ ರ ವರಿಗೆ ಸೇನಾ ನೇಮಕಾತಿ ಜರುಗಲಿದ್ದು, ಅರ್ಜಿಯನ್ನು ಸಲ್ಲಿಸಲು ಅಕ್ಟೋಬರ್ ೭ ಕೊನೆಯ ದಿನವಾಗಿದೆ.
ಜಿಡಿ(೪೧), ಗುಮಾಸ್ತ (೦೨), ಬಾಣಸಿಗ (೦೧), ವಿಶೇಷ ಬಾಣಸಿಗ (೦೧), ಹೇರ್ ಡ್ರೆಸ್ಸರ್(೦೧) ಹಾಗೂ ವಾಷರ್ ಮ್ಯಾನ್ (೦೧) ಖಾಲಿ ಇರುವ ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆ ನಡೆಯಲಿದೆ.
ಸೈನಿಕ (ಜನರಲ್ ಡ್ಯೂಟಿ)ಹುದ್ದೆಗೆ ಎಸ್.ಎಸ್.ಎಲ್.ಸಿಯಲ್ಲಿ ಶೇ ೪೫ ರಷ್ಟು ಅಂಕ ಪಡೆದು ಪಾಸಾಗಿರಬೇಕು ಮತ್ತು ಪ್ರತಿ ವಿಷಯದಲ್ಲಿ ಶೇ ೩೩ ರಷ್ಟು ಅಂಕ ಪಡಿದಿರಬೇಕು, ಸೈನಿಕ(ಸಿ ಟ್ರೇಡ್ಸ್‌ಮ್ಯಾನ್) ಹುದ್ದೆಗೆ ಎಸ್.ಎಸ್.ಎಲ್.ಸಿ ಉತ್ತಿರ್ಣರಾಗಿರಬೇಕು(ಹೌಸ್ ಕೀಪರ್ ಮತ್ತು ಮೇಸ್ ಕೀಪರ್‌ಗೆ ೮ನೇ ತರಗತಿ ಉತ್ತಿರ್ಣರಾಗಿರಬೇಕು). ಸೈನಿಕ (ಗುಮಾಸ್ತ) ಹುದ್ದೆಗೆ ಪಿ.ಯು.ಸಿ ಯಲ್ಲಿ ಶೆ.೬೦ ರಷ್ಟು ಅಂಕ ಪಡೆದು ಪಾಸಾಗಿರಬೇಕು ಹಾಗೂ ಕಂಪ್ಯೂಟರ್ ಜ್ಞಾನ ಹೊಂದಿರುವ ವಿದ್ಯಾರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದಾಗಿದೆ.
ಆಂಧ್ರಪ್ರದೇಶ, ತೆಲಂಗಾಣ, ಗುಜರಾತಿನ ನಿವಾಸಿಗಳು. ಕೇರಳ, ತಮಿಳುನಾಡು, ಮಹಾರಾಷ್ಟ್ರ, ಕರ್ನಾಟಕ ಮತ್ತು ರಾಜಸ್ತಾನ ಮತ್ತು ಕೇಂದ್ರ ಪ್ರದೇಶದಗಳಾದ ದಾದ್ರಾ ಮತ್ತು ನಗರ ಹಾವೇಲಿ, ಗೋವಾ, ದಮನ್ ಮತ್ತು ಡಿಯು, ಲಕ್ಷದ್ವೀಪ ಮತ್ತು ಪಾಂಡಿಚೇರಿ ಅಭ್ಯರ್ಥಿಗಳು ಮಾತ್ರ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ.

ದೈಹಿಕ ಪರೀಕ್ಷೆ:
ಎತ್ತರ ೧೬೦ ಸೆ.ಮೀ, ತೂಕ ಕನಿಷ್ಠ ೫೦ ಕೆ.ಜಿ, ಎದೆ ಸುತ್ತಳತೆ ಅಳತೆ ೭೭.೫ ಸೆ.ಮೀ ದೇಹಾರ್ಡ್ಯತೆ ಹೊಂದಿರಬೇಕು. ವಯಸ್ಸು ನೇಮಕಾತಿ ದಿನದಂದು ೧೮ ರಿಂದ ೪೨ ವರ್ಷ ತುಂಬಿರಬೇಕು.
ಲಿಖಿತ ಪರೀಕ್ಷೆ: ದೈಹಿಕ ಮತ್ತು ವೈದ್ಯಕೀಯ ಪರೀಕ್ಷೆಯಲ್ಲಿ ಅರ್ಹತೆ ಪಡೆದ ಅಭ್ಯರ್ಥಿಗಳು ಮಾತ್ರ ಪರೀಕ್ಷೆ ಬರೆಯಲು ಅರ್ಹರಿರುತ್ತಾರೆ.

 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button