ಪ್ರಗತಿವಾಹಿನಿ ಸುದ್ದಿ, ಕೃಷ್ಣರಾಜಪೇಟೆ -ತಾಲ್ಲೂಕಿನ ಅಗ್ರಹಾರಬಾಚಹಳ್ಳಿ ಗ್ರಾಮಕ್ಕೆ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಭೇಟಿ ನೀಡಿದ್ದರು. ಅಕಾಲಿಕವಾಗಿ ಹೃದಯಾಘಾತದಿಂದ ನಿಧನರಾದ ತಾಲ್ಲೂಕು ಜೆಡಿಎಸ್ ಅಧ್ಯಕ್ಷ ಆರ್.ವೆಂಕಟಸುಬ್ಬೇಗೌಡ ಅವರ ಅಂತ್ಯಸಂಸ್ಕಾರದಲ್ಲಿ ಅವರು ಭಾಗಿಯಾಗಿದ್ದರು.
ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿ ಆತ್ಮವಿಶ್ವಾಸ ತುಂಬಿದ ಕುಮಾರ ಅವರು, ನಿಮ್ಮ ಕುಟುಂಬದ ಸಮಸ್ಯೆಗಳನ್ನು ಬಗೆ ಹರಿಸಲು ನಾನಿದ್ದೇನೆ, ಧೈರ್ಯವಾಗಿರಿ ಎಂದು ಪುತ್ರ ಹಾಗೂ ಪುತ್ರಿಯರಿಗೆ ಧೈರ್ಯ ತುಂಬಿದರು.
ಇದೇ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನ್ನ 14 ತಿಂಗಳ ಸಾಧನೆಯನ್ನು ಪುಸ್ತಕ ಮಾಡಿಸಿ ಪ್ರತೀ ತಾಲೂಕಿಗೂ ಕಳಿಸಿಕೊಡ್ತೇನೆ ಎಂದರು.
ನಾನು ಸಾಲ ಮನ್ನಾ ಮಾಡಿದರೆ ಪ್ರಯೋಜನವಿಲ್ಲ. ಆದರೆ ಸಿದ್ಧರಾಮಯ್ಯ ಸಾಲ ಮಾಡಿದ್ದು ರೈತರಿಗೆ ಪ್ರಯೋಜನವಾಯ್ತು ಎಂದು ಕೆ.ಆರ್.ಪೇಟೆ ಕಾಂಗ್ರೆಸ್ ಮಾಜಿಶಾಸಕ ಹೇಳ್ತಾರೆ, ಅದೇನೋ ಸ್ವಾಭಿಮಾನವಂತೆ. ಸ್ವಾಭಿಮಾನ ಏನು ಅನ್ನೋದನ್ನ ತೋರಿಸಿ ಕೊಟ್ಟವರಂತೆ, ಸಿದ್ಧರಾಮಯ್ಯ ಮಾಡಿದ ವಿಶ್ವಾಸ ದ್ರೋಹದ ಬಗ್ಗೆ ರಾಜ್ಯದ ಜನತೆ ತೀರ್ಮಾನ ಮಾಡ್ತಾರೆ ಬಿಡಿ. ನಾನೇಕೆ ಮಾತಾಡಿ ನನ್ನ ಬಾಯನ್ನು ಹೊಲಸು ಮಾಡಿಕೊಳ್ಳಲಿ ಎಂದು ಕುಮಾರಸ್ವಾಮಿ ವಾಕ್ಪ್ರಹಾರ ನಡೆಸಿದರು.
ಕೆ.ಆರ್.ಪೇಟೆ ತಾಲ್ಲೂಕು ಒಂದಕ್ಕೆ 12ಸಾವಿರ ರೈತ ಕುಟುಂಬಗಳಿಗೆ 92ಕೋಟಿಗೂ ಹೆಚ್ಚು ಸಾಲ ಮನ್ನಾ ಆಗಿದೆ. ಮತ್ತೆ ಬರ್ತೀನಿ ಸಾವಿನ ಮನೆಯಲ್ಲಿ ರಾಜಕಾರಣ ಮಾಡೋದು ಬೇಡ ಎಂದೂ ಹೇಳಿದರು. ಅನರ್ಹ ಶಾಸಕ ನಾರಾಯಣಗೌಡರ ಬಗ್ಗೆ ಈ ವೇಲೆ ಜೆಡಿಎಸ್ ಕಾರ್ಯಕರ್ತರು ದೂರಿನ ಸುರಿಮಳೆಗೈದರು.
ಜಿಲ್ಲಾ ಜೆಡಿಎಸ್ ಅಧ್ಯಕ್ಷ ಡಿ.ರಮೇಶ್, ಮುಖಂಡರಾದ ಬಿ.ಎಲ್.ದೇವರಾಜು, ಹೆಚ್.ಟಿ.ಮಂಜು, ಬಸ್ ಕೃಷ್ಣೇಗೌಡ, ಅಕ್ಕಿಹೆಬ್ಬಾಳು ರಘು, ಕಿಕ್ಕೇರಿ ನಾಗೇಂದ್ರಗೌಡ, ಅಗ್ರಹಾರಬಾಚಹಳ್ಳಿ ನಾಗೇಶ್, ತಾಲ್ಲೂಕು ಪಂಚಾಯತ ಮಾಜಿಅಧ್ಯಕ್ಷ ಜವರಾಯಿಗೌಡ, ಡಾ.ಶ್ರೀನಿವಾಸಶೆಟ್ಟಿ, ತೇಜಸ್ವಿಕಿರಣ್ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ