Latest

ಪಠ್ಯ ಪುಸ್ತಕ ಮರು ಮುದ್ರಣವಾದರೆ 153 ಕೋಟಿ ಹೊರೆ! ಸಾರ್ವಜನಿಕ ಹಣ ವ್ಯರ್ಥಕ್ಕೆ ಯಾರು ಹೊಣೆ?

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು – ರಾಜ್ಯದಲ್ಲಿ ಪಠ್ಯ ಪುಸ್ತಕ ಪರಿಷ್ಕರಣೆ ಸುದ್ದಿ ಕೋಲಾಹಲವನ್ನೇ ಸೃಷ್ಟಿಸಿದೆ. ವಿರೋಧ ಪಕ್ಷದವರಷ್ಟೇ ಅಲ್ಲ, ಆಡಳಿತ ಪಕ್ಷದ ಶಾಸಕರೂ ರಾಜ್ಯ ಸರಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಭಾರಿ ವಿವಾದದ ನಂತರ ರಾಜ್ಯ ಸರಕಾರವೇ ಲೋಪವಾಗಿರುವುದನ್ನು ಒಪ್ಪಿಕೊಂಡಿದೆ. ತಪ್ಪಾಗಿರುವುದನ್ನು ಸರಿಪಡಿಸುವುದಾಗಿ ಹೇಳಿದೆ. ಹಾಗಾಗಿ ಈಗಾಗಲೆ ಮುದ್ರಣವಾಗಿರುವ ಪುಸ್ತಕಗಳನ್ನು ರದ್ದಿಗೆ ಹಾಕಿ ಹೊಸದಾಗಿ ಪಠ್ಯ ಪುಸ್ತಕಗಳು ಮುದ್ರಣವಾಗಬೇಕಿದೆ. ಸರಕಾರದ ಅಂದಾಜಿನಂತೆ ಹೇಳುವುದಾದರೆ ಪಠ್ಯ ಪುಸ್ತಕ ಮುದ್ರಣಕ್ಕೆ 152.81 ಕೋಟಿ ರೂ. ಬೇಕಾಗಲಿದೆ.

ಪಠ್ಯ ಪುಸ್ತಕದಲ್ಲಿ ಆರ್ ಆಸ್ ಎಸ್ ಸಂಸ್ಥಾಪಕ ಹೆಡ್ಗೇವಾರ್ ಭಾಷಣ ಸೇರಿಸಿದ್ದು ವಿವಾದದ ಆರಂಭಕ್ಕೆ ಕಾರಣವಾದರೂ, ನಂತರದಲ್ಲಿ ಭಗತ್ ಸಿಂಗ್ ಪಾಠ ತೆಗೆದುಹಾಕಿದ್ದು, ಕುವೆಂಪು ಪಾಠಕ್ಕೆ ಕತ್ತರಿ ಹಾಕಿದ್ದು, ಅಂಬೇಡ್ಕರ್ ಹೆಸರಿನ ಹಿಂದಿದ್ದ ಸಂವಿಧಾನ ಶಿಲ್ಪಿ ಶಬ್ಧ ತೆಗೆದು ಹಾಕಿದ್ದು ಎಲ್ಲವೂ ದೊಡ್ಡ ವಿವಾದಕ್ಕೆ ಕಾರಣವಾಯಿತು. ಆಡಳಿತ ಪಕ್ಷದ ಶಾಸಕರೂ ಆಕ್ರೋಶ ವ್ಯಕ್ತಪಡಿಸಿದರು.

ಆರಂಭದಲ್ಲಿ ಸಮರ್ಥನೆ ಮಾಡಿಕೊಳ್ಳುವ ಪ್ರಯತ್ನ ಮಾಡಿದ ರಾಜ್ಯ ಸರಕಾರ, ನಂತರದಲ್ಲಿ ತಪ್ಪಾಗಿರುವುದನ್ನು ಒಪ್ಪಿಕೊಂಡಿತಲ್ಲದೆ, ಪಿಯುಸಿ ಪಠ್ಯಪುಸ್ತಕ ಪರಿಷ್ಕರಣೆ ವಿಷಯವನ್ನೇ ಕೈ ಬಿಟ್ಟಿತು. ತಪ್ಪಾಗಿರುವ ಪಠ್ಯ ಪುಸ್ತಕಗಳನ್ನು ಮರುಮುದ್ರಿಸುವುದಾಗಿ ಹೇಳಿದೆ.

ಕೇವಲ ಶಿಕ್ಷಕರ ಕೈಪಿಡಿಯನ್ನಷ್ಟೆ ಮರುಮುದ್ರಣ ಮಾಡಲಾಗುವುದು ಎಂದು ಸರಕಾರದಲ್ಲಿ ಕೆಲವರು ಹೇಳುತ್ತಿದ್ದಾರೆ. ಆದರೆ ಲೋಪವಿರುವ ಪುಸ್ತಕವನ್ನು ಮಕ್ಕಳ ಕೈಗಿಡುವುದು ಸರಿಯೇ ಎನ್ನುವ ಪ್ರಶ್ನೆ ಮೂಡುತ್ತದೆ.

ಈಗಾಗಲೆ ಶಾಲೆಗಳು ಆರಂಭವಾಗಿರುವುದರಿಂದ ಶಾಲೆಗಳಿಗೆ ತುರ್ತಾಗಿ ಪಠ್ಯ ಪುಸ್ತಕ ಬೇಕಾಗಿದೆ. ಆದರೆ ಪಠ್ಯಪುಸ್ತಕ ಹೊಸದಾಗಿ ಮುದ್ರಣವಾಗಿ ತಲುಪಲು ಇನ್ನಷ್ಟು ಸಮಯ ಹಿಡಿಯಲಿದೆ. ಜೊತೆಗೆ ದೊಡ್ಡ ಪ್ರಮಾಣದಲ್ಲಿ ಹಣ ವೆಚ್ಚವಾಗುತ್ತಿದೆ. ಅಷ್ಟು ದೊಡ್ಡ ಬಜೆಟ್ ಸರಕಾರ ಹೊಂದಿಸಬೇಕಿದೆ. ಇದಕ್ಕೆ ಯಾರು ಹೊಣೆ ಎನ್ನುವ ಸಹಜ ಪ್ರಶ್ನೆಯೂ ಮೂಡುತ್ತದೆ.

ಪ್ರಧಾನ ಮಂತ್ರಿಯವರ ರಾಜ್ಯ ಪ್ರವಾಸ: ಮುಖ್ಯಮಂತ್ರಿಯವರೊಂದಿಗೆ ಚರ್ಚಿಸಿದ ಪ್ರಧಾನಿ ಮೋದಿ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button