Kannada NewsKarnataka News

177 ಗ್ರಾಮ ಪಂಚಾಯತ್ ಕಟ್ಟಡಗಳು ಶಿಥಿಲ

ಪ್ರವಾಹ ಬಾಧಿತ ಪ್ರದೇಶಗಳಿಗೆ ಎಲ್.ಕೆ ಅತೀಕ್ ಭೇಟಿ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ-

ಪ್ರವಾಹದಿಂದ ಹಾನಿಗೊಳಗಾಗಿರುವ ಪ್ರದೇಶಗಳಲ್ಲಿ ಕುಡಿಯುವ ನೀರಿನ ವ್ಯವಸ್ಥೆ, ವಿದ್ಯುತ್ ವ್ಯವಸ್ಥೆ, ರಸ್ತೆ ಮತ್ತು ಸೇತುವೆಗಳ ಸಂಪರ್ಕಗಳನ್ನು ಆದಷ್ಟು ಬೇಗನೆ ಸರಿಪಡಿಸಬೇಕೆಂದು ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ ಇಲಾಖೆಯ ಪ್ರಧಾನ ಕಾರ್ಯದರ್ಶಿ ಎಲ್.ಕೆ ಅತೀಕ್ ಸೂಚಿಸಿದ್ದಾರೆ.
ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನಿಡುವುಕ್ಕಿಂತ ಮುಂಚೆ ಸೋಮವಾರ ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ ಅಧಿಕಾರಿಗಳ ಜೊತೆ ಸಭೆ ನಡೆಸಿ ಪ್ರವಾಹದಲ್ಲಿ ಉಂಟಾಗಿರುವ ಹಾನಿಯ ಕುರಿತು ಮಾಹಿತಿ ಪಡೆದುಕೊಂಡರು.
ಈಗಾಗಲೇ ಪ್ರವಾಹ ಪೀಡಿತವಾಗಿರುವ ಪ್ರದೇಶಗಳಲ್ಲಿ ವಿದ್ಯುತ್  ಸಮಸ್ಯೆ ಇರುವುದರಿಂದ ಅದಕ್ಕೆ ಪರ್ಯಾಯವಾಗಿ ಯಾವ ರೀತಿಯ ವ್ಯವಸ್ಥೆ ಮಾಡಿಲಾಗಿದೆ ಎಂದು ಹೆಸ್ಕಾಂ ಅಧಿಕಾರಿಗಳನ್ನು ಕೇಳಿದರು.
ಇದಕ್ಕೆ ಪ್ರತಿಕ್ರಿಯಿಸಿದ ಹೆಸ್ಕಾಂ ಅಧಿಕಾರಿಗಳು, ಈಗಾಗಲೇ ನಾಶವಾಗಿರುವಂತ ಪ್ರದೇಶಗಳಿಗೆ ಹೊಸದಾಗಿ ಕಂಬಗಳನ್ನು ನಿಲ್ಲಿಸಿ, ವಿದ್ಯುತ್ ತಂತಿ ಅಳವಡಿಸಿ ಪ್ರತಿಯೊಂದು ಗ್ರಾಮಗಳಿಗೂ ವಿದ್ಯುತ್ ಸರಬರಾಜು ಮಾಡುತ್ತಿದ್ದೇವೆ ಎಂದರು.

ಜಿಲ್ಲೆಯಲ್ಲಿ ಪ್ರವಾಹ ಮತ್ತು ಧಾರಾಕಾರ ಮಳೆಯಿಂದ ಎಷ್ಟು ಕಿಲೋ ಮೀಟರ್ ರಸ್ತೆ ಹಾಗೂ ಸೇತುವೆ ಹಾಳಾಗಿವೆ ಎಂದು ಮಾಹಿತಿ ಪಡೆದುಕೊಂಡರು.
ಒಟ್ಟು ೨೦೨೩ ಕಿಲೋ ಮೀಟರ್ ರಸ್ತೆ ಹಾಗೂ ೯೩ ಸೇತುವೆಗಳು ಹಾಳಾಗಿದ್ದು, ಅವುಗಳ ಪುನರ್ ನಿರ್ಮಾಣ ಮಾಡುವ ಕಾಮಗಾರಿಯು ಪ್ರಗತಿಯಲ್ಲಿದೆ ಎಂದು ತಿಳಿಸಿದರು.
ಪ್ರವಾಹದ ಸಂದರ್ಭದಲ್ಲಿ ಎಷ್ಟು ಗ್ರಾಮ ಪಂಚಾಯತಿಗಳು ಹಾಗೂ ಶಾಲೆಗಳು ಶಿಥಿಲಗೊಂಡಿವೆ ಮತ್ತು ಅವುಗಳನ್ನು ಪುನರ್ ನಿರ್ಮಾಣ ಮಾಡಲು ಯಾವ ರೀತಿ ಕ್ರಮಕೈಗೊಂಡ್ಡಿದ್ದೀರಿ ಎಂದು ಸಿ.ಇ.ಒ ಅವರನ್ನು ಕೇಳಿದರು.

177 ಗ್ರಾಮ ಪಂಚಾಯತ್ ಕಟ್ಟಡಗಳು ಶಿಥಿಲ

ನಂತರ ಗ್ರಾಮ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಡಾ.ರಾಜೇಂದ್ರ ಕೆ.ವಿ ಅವರು ಮಾತನಾಡಿ, ಒಟ್ಟು ೧೭೭ ಗ್ರಾಮ ಪಂಚಾಯತ್ ಕಟ್ಟಡಗಳು ಶಿಥಿಲಗೊಂಡಿದ್ದು ಅವುಗಳನ್ನು  ಜಿಲ್ಲಾಧಿಕಾರಿಗಳ ಅನುದಾನದ ಜೊತೆಗೆ ಗ್ರಾಮ ಪಂಚಾಯತಿ ಅನುದಾನ ಸೇರಿಸಿ ಪಂಚಾಯತ ಹಾಗೂ ಶಾಲೆಗಳು ನಿರ್ಮಾಣ ಮಾಡಲಾಗುವುದು ಎಂದು ತಿಳಿಸಿದರು.
ಇದುವರೆಗೆ ಸಂಪೂರ್ಣವಾಗಿ ಕುಡಿಯಲು ನೀರು ಸಿಗದೆ ಇರುವಂತ ೨೧ ಗ್ರಾಮಗಳಿಗೆ ಟ್ಯಾಂಕರ್‌ಗಳ ಮೂಲಕ ನಿರಂತರ ನೀರು ಸರಬರಾಜು ಮಾಡುತ್ತಿದ್ದೇವೆ ಎಂದು ಡಾ. ರಾಜೇಂದ್ರ ಕೆ.ವಿ ವಿವರಿಸಿದರು.
ಪ್ರವಾಹದಿಂದ ನಾಶವಾದ ಕೆಲವು ಸ್ಥಳಗಳನ್ನು ಹಾಗೂ ಖಾನಾಪುರ ಹಾಗೂ ಲೊಂಡಾ ನಡುವೆ ರೈಲು ಮಾರ್ಗ ಪ್ರವಾಹದಿಂದ ಯಾವ ರೀತಿಯಾಗಿ ಕಡಿತಗೊಂಡಿತ್ತು ಎಂಬುದರ ಚಿತ್ರಣವನ್ನು ಪಿಪಿಟಿ ಪ್ರಜೆಂಟೇಶನ್ ಮೂಲಕ ಹಿರಿಯ ಅಧಿಕಾರಿಗಳಿಗೆ ವಿವರಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ ಉಪ ಕಾರ್ಯದರ್ಶಿ ಎಸ್.ಬಿ. ಮುಳ್ಳಳ್ಳಿ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಪಾಲ್ಗೊಂಡಿದ್ದರು.

ಜಿಲ್ಲಾ ಪ್ರವಾಸ:

ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ ಇಲಾಖೆಯ ಪ್ರಧಾನ ಕಾರ್ಯದರ್ಶಿ ಎಲ್.ಕೆ ಅತೀಕ್ ಅವರು ಸಭೆಯ ಬಳಿಕ ತಾಲ್ಲೂಕಿನ ಕಾಕತಿಯ ಬಹುಗ್ರಾಮ ಕುಡಿಯುವ ನೀರಿನ ಘಟಕ ಹಾಗೂ ರಸ್ತೆ ಬದಿಯಲ್ಲಿ ಹಾಳಾಗಿರುವ ಸ್ಥಳದ ವೀಕ್ಷಣೆ ಮಾಡಿದರು.

ಚಿಕ್ಕೋಡಿ ತಾಲ್ಲೂಕಿನ ಅಂಕಲಿ ಗ್ರಾಮದ ಬಹುಗ್ರಾಮ ಕುಡಿಯುವ ನೀರಿನ ಘಟಕ, ಕಾಗವಾಡ ತಾಲ್ಲೂಕಿನ ಶಿರಗುಪ್ಪಿ ಗ್ರಾಮದ ಕುಡಿಯುವ ನೀರಿನ ಘಟಕ ವೀಕ್ಷಣೆ, ಜುಗೂಳ ಗ್ರಾಮದ ಶಾಹಾಪೂರ ರಸ್ತೆ, ಕುಡಿಯುವ ನೀರಿನ ಜಾಕ್ ವೆಲ್, ಗ್ರಾಮ ಪಂಚಾಯತ ಕಟ್ಟಡ ವೀಕ್ಷಣೆ, ಮಂಗಾವತಿ ಗ್ರಾಮದ ಶಾಲಾ ಕಟ್ಟಡ, ದವಾಖಾನೆ ಕಟ್ಟಡ, ಅಂಗನವಾಡಿ ಕಟ್ಟಡ ಹಾಗೂ ಅಥಣಿ ತಾಲ್ಲೂಕಿನ ಹಲ್ಯಾಳ ಅವರಖೋಡ ರಸ್ತೆ ಹಾಗೂ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಜಾಕ್ ವೆಲ್ ವೀಕ್ಷಣೆ ಮಾಡಿದರು.
ರಾಯಬಾಗ ತಾಲ್ಲೂಕಿನ ಖೇಮಲಾಪೂರ ಹಾರುಗೇರಿ ಕ್ರಾಸ್, ಯರಗಟ್ಟಿ ಬಂಗಲೆಯ ಬಹುಗ್ರಾಮ ಕುಡಿಯುವ ನೀರಿನ ಯೋಜನೆ, ಅಂಗನವಾಡಿ ಕಟ್ಟಡ, ಗ್ರಾಮ ಪಂಚಾಯತ ಕಟ್ಟಡ ಹಾಗೂ ಶಾಲಾ ಕಟ್ಟಡ ವೀಕ್ಷಣೆ ಮಾಡಿದರು.
ಶಿರಗೂರ, ಪರಮಾನಂದವಾಡಿ ಹಾಲ್, ಗ್ರಾಮ ಪಂಚಾಯತ, ಶಾಲಾ ಕಟ್ಟಡ, ಅಂಗನವಾಡಿ ಕಟ್ಟಡ, ಎಸ್.ಸಿ ಕಾಲೋನಿ ಸ್ಥಳಗಳಿಗೆ ಭೇಟಿ ನೀಡಿದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button