ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಅರಣ್ಯದಲ್ಲಿ ಮೇಯಲು ತೆರಳಿದ್ದ ಎಮ್ಮೆಗಳ ಮೇಲೆ ಹುಲಿ ದಾಳಿ ನಡೆಸಿ ಎರಡು ಎಮ್ಮೆಗಳನ್ನು ಬಲಿಪಡೆದ ಘಟನೆ ತಾಲ್ಲೂಕಿನ ನಾಗರಗಾಳಿ ಅರಣ್ಯ ವ್ಯಾಪ್ತಿಯ ಉಮ್ರಪಾಣಿ ಗ್ರಾಮದ ಹೊರವಲಯದ ನಿರ್ಜನ ಅರಣ್ಯ ಪ್ರದೇಶದಲ್ಲಿ ಮಂಗಳವಾರ ಜರುಗಿದ್ದು, ಬುಧವಾರ ಬೆಳಕಿಗೆ ಬಂದಿದೆ.
ಉಮ್ರಪಾಣಿ ಗ್ರಾಮದ ರೈತ ಗುಣಾಜಿ ಪಾಟೀಲ ಅವರಿಗೆ ಸೇರಿದ ಜಾನುವಾರಗಳು ಮಂಗಳವಾರ ನಾಗರಗಾಳಿ ಅರಣ್ಯ ಸರ್ವೇ ನಂ.58ರಲ್ಲಿ ಮೇಯಲು ತೆರಳಿದ್ದಾಗ ಈ ಘಟನೆ ನಡೆದಿದೆ. ಮೇಯಲು ಹೋದ ಎಮ್ಮೆಗಳು ಮರಳಿ ಮನೆಗೆ ಬರಲಿಲ್ಲ ಎಂದು ರೈತ ಗುಣಾಜಿ ಹುಡುಕಾಟ ನಡೆಸಿದಾಗ ಗ್ರಾಮದಿಂದ 3 ಕಿಮೀ ದೂರದಲ್ಲಿ ಎಮ್ಮೆಗಳ ಕಳೇಬರ ಪತ್ತೆಯಾಗಿದೆ. ಘಟನಾ ಸ್ಥಳಕ್ಕೆ ಉಪ ವಲಯ ಅರಣ್ಯಾಧಿಕಾರಿ ಎನ್.ಜಿ ಹಿರೇಮಠ ಹಾಗೂ ಸಿಬ್ಬಂದಿ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಹಾಲು ನೀಡುವ ಎಮ್ಮೆಗಳನ್ನು ಕಳೆದುಕೊಂಡು ಆರ್ಥಿಕ ನಷ್ಟ ಅನುಭವಿಸುತ್ತಿರುವ ರೈತ ಗುಣಾಜಿ ಅವರಿಗೆ ಅರಣ್ಯ ಇಲಾಖೆಯ ಅಧಿಕಾರಿಗಳು ಕೂಡಲೇ ಸೂಕ್ತ ಪರಿಹಾರ ನೀಡಬೇಕು ಎಂದು ಶಾಸಕ ವಿಠ್ಠಲ ಹಲಗೇಕರ ಆಗ್ರಹಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ