ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ನಿವೃತ್ತ ಐಎಎಸ್ ಅಧಿಕಾರಿ, ಕರ್ನಾಟಕ ನೀತಿ ಮತ್ತು ಯೋಜನಾ ಆಯೋಗದ ಸದಸ್ಯ ಕೆ ಅಮರನಾರಾಯಣ ಅವರು 200 ಯುನಿಟ್ ಉಚಿತ ವಿದ್ಯುತ್ ಹಂಚಿಕೆ ಸಂಬಂಧ ಡಿಸಿಎಂ ಡಿ ಕೆ ಶಿವಕುಮಾರ್ ಅವರಿಗೆ ಪತ್ರ ಬರೆದಿದ್ದಾರೆ.
ಕರ್ನಾಟಕ ರಾಜ್ಯದ ನೂತನ ಉಪ ಮುಖ್ಯಮಂತ್ರಿಗಳಾಗಿ ಪ್ರಚಂಡ ಬಹುಮತದಿಂದ ಆಯ್ಕೆಗೊಂಡಿರುವ ತಮಗೆ ಹಾರ್ದಿಕ ಅಭಿನಂದನೆಗಳು. ಕಾಂಗ್ರೆಸ್ ಪಕ್ಷದ ಪ್ರಣಾಳಿಕೆಯಂತೆ, ತಾವುಗಳು ಇಡೀ ರಾಜ್ಯಾದ್ಯಂತ ಪ್ರವಾಸ ಮಾಡುವ ಸಂಧರ್ಭದಲ್ಲಿ ಪ್ರತಿಯೊಬ್ಬರಿಗೂ 200 ಯೂನಿಟ್ ವಿದ್ಯುತ್ತನ್ನು ಉಚಿತವಾಗಿ ಕೊಡುವುದಾಗಿ ಘೋಷಣೆ ಮಾಡಿದ್ದೀರಿ. ಈ ಘೋಷಣೆಯು ಬಡವರ ಪಾಲಿಗೆ ಆಶಾಕಿರಣವಾಗಿದೆ. ಇದೊಂದು ಸ್ತುತ್ಯಾರ್ಹವಾದ ಕಾರ್ಯವಾಗಿದೆ. ಹೊಸ ಸರ್ಕಾರದ ಈ ಯೋಜನೆಯ ಪ್ರಯೋಜನವನ್ನು ನಿಜವಾದ ಅರ್ಥದಲ್ಲಿ ಅದಕ್ಕೆ ಅರ್ಹರಾದವರಿಗೆ ಕೊಡುವುದು ಉಚಿತವೆಂದು ನಾನು ವೈಯುಕ್ತಿಕವಾಗಿ ಅಭಿಪ್ರಾಯಪಡುತ್ತೇನೆ ಎಂದು ತಿಳಿಸಿದ್ದಾರೆ.
ಕರ್ನಾಟಕ ರಾಜ್ಯದಲ್ಲಿ ಲಕ್ಷಾಂತರ ಬಡ ಜನರು ಈ ಪ್ರಯೋಜನಕ್ಕೆ ಅರ್ಹರು. ಆದರೆ ನನ್ನಂತಹ ತೆರಿಗೆ ಪಾವತಿ ಮಾಡುವ ಮತ್ತು ಅನುಕೂಲವಾಗಿರುವವರಿಗೆ ಈ ಸೌಲಭ್ಯದ ಅವಶ್ಯಕತೆ ಅಷ್ಟಾಗಿ ಕಂಡುಬರುವುದಿಲ್ಲವೆಂದು ನನ್ನ ಸ್ವಂತ ಅಭಿಪ್ರಾಯವಾಗಿದ. ಈ ವಿಷಯಕ್ಕೆ ಸಂಬಂಧಿಸಿದಂತೆ ಸರ್ಕಾರವು ಕೈಗೊಳ್ಳುವ ಕೆಲವು ನಿರ್ಧಾರಗಳು ಬಡವರ, ಅಶಕ್ತರ ಪರವಾಗಿ ಇರಬೇಕೆಂದು ನನ್ನ ಆಶಯ, ಒಬ್ಬ ಆದಾಯ ತೆರಿಗೆ ಪಾವತಿದಾರನಾಗಿ ನನಗೆ ಚೈತನ್ಯವಿದ್ದರೂ ಉಚಿತವಾಗಿ 200 ಯೂನಿಟ್ ವಿದ್ಯುತ್ತನ್ನು ಪಡೆದುಕೊಳ್ಳಲು ನನಗೆ ಮನಸಿಲ್ಲವಾಗಿದೆ. ನಾನೊಬ್ಬ ಪರಿಸರಪ್ರೇಮಿ, ಇದರ ದ್ಯೋತಕವಾಗಿ ನಾನು ವಾಸಿಸುತ್ತಿರುವ ಮನೆಯ ಮೇಲ್ಯಾವಣಿಯಲ್ಲಿ 6.5. ಕವಿಎ ಸೌರ ವಿದ್ಯುತ್ ಸೌಕರ್ಯವನ್ನು ಮಾಡಿಕೊಂಡಿದ್ದೇನೆ, ನಾನು ಬಳಸಿ ಹೆಚ್ಚುವರಿ ವಿದ್ಯುತ್ತನ್ನು ಬೆಸ್ಕಾಂ ಸಂಸ್ಥೆಗೆ ಪೂರೈಸುತ್ತಿದ್ದೇನೆ. ಅದರಿಂದ ನನಗೆ ಕೊಂಚ ಆದಾಯವೂ ಬರುತ್ತಿದೆ. ಮತ್ತೊಂದು ಕುಟುಂಬಕ್ಕೆ ಸಾಕಾಗುವಷ್ಟು ವಿದ್ಯುತ್ತನ್ನು ಒದಗಿಸುವ ಮೂಲಕ ಪರಿಸರಪ್ರೇಮವನ್ನು ಮರೆದಿದ್ದೇನ. ಆದುದರಿಂದ ನಾನು ಉಚಿತವಾಗಿ 200 ಯೂನಿಟ್ ವಿದ್ಯುತ್ತನ್ನು ಬಳಸಿಕೊಳ್ಳಲು ಇಚ್ಛಿಸುವುದಿಲ್ಲ. ದಯಮಾಡಿ ಬೆಸ್ಕಾಂ ನವರು ನನಗೆ ಉಚಿತವಾಗಿ ವಿದ್ಯುತ್ ಸರಬರಾಜು ಮಾಡುವ ಬದಲು, ಸರ್ಕಾರವು ಈ ಸೌಲಭ್ಯವನ್ನು ಒಂದು ಬಡ ಕುಟುಂಬಕ್ಕ ನೀಡಬೇಕೆಂದು ತಮ್ಮಲ್ಲಿ ಕಳಕಳಿಯಿಂದ ಪ್ರಾರ್ಥಿಸುತ್ತೇನೆ.
ಈ ಸಂದರ್ಭದಲ್ಲಿ ನಾನು ಈ ಮೂಲಕ ರಾಜ್ಯದ ಎಲ್ಲಾ ಐ ಎ ಎಸ್, ಐ ಪಿ ಎಸ್, ಐ ಎಫ್ ಎಸ್, ಕೆ ಎ ಎಸ್ ಮತ್ತು ಇತರ ಒಂದನೇ ಶ್ರೇಣಿ ಮತ್ತು ಎರಡನೇ ಶ್ರೇಣಿಯ ಅಧಿಕಾರಿಗಳಲ್ಲಿ ಮನವಿ ಮಾಡಿಕೊಳ್ಳುವುದೇನೆಂದರೆ, ಇಂತಹ ಉಚಿತ ಸೌಲಭ್ಯವನ್ನು ಅರ್ಹ ಫಲಾನುಭವಿಗಳಿಗೆ ಬಿಟ್ಟು ಕೊಡುವ ಮೂಲಕ ತಮ್ಮ ಪ್ರಭುದ್ಧತೆಯನ್ನು ಮರೆಯಬೇಕೆಂದು ವಿನಂತಿಸುತ್ತೇನ. ನಾವೆಲ್ಲರೂ ಸ್ವಲ್ಪ ತ್ಯಾಗ ಮಾಡುವುದರಿಂದ, ನಿಸ್ವಾರ್ಥ ಸೇವೆ ಮಾಡಿತಂತಾಗಿ ನೈಜ ಮತ್ತು ಅರ್ಹ ಫಲಾನುಭವಿಗಳಿಗೆ ಈ ಸೌಲಭ್ಯ ದೊರೆಯುವಂತಾಗಲಿ ಎಂದು ಆಶಿಸುತ್ತೇನೆ. ಮುಂದುವರೆಯುತ್ತಾ, ಎಲ್ಲ ಆದಾಯ ತೆರಿಗೆ ಪಾವತಿ ಮಾಡುವ ನಿಷ್ಠಾವಂತ ನಾಗರಿಕರು ಇಂತಹ ಉಚಿತ ಸೌಲಭ್ಯವನ್ನು ಸ್ವಇಚ್ಛೆಯಿಂದ ಪಡೆದುಕೊಳ್ಳಬಾರದೆಂದು ಕಳಕಳಿಯ ಮನವಿ, ಬಹುಷ: ಆದಾಯ ತೆರಿಗೆ ಪಾವತಿದಾರರಿಗೆ 200 ಯೂನಿಟ್ಟೆ ಗೆ ತಗಲುವ ದರವನ್ನು ಪಾವತಿ ಮಾಡುವ ಶಕ್ತಿ ಇರುತ್ತದೆಂದು ನನ್ನ ಭಾವನೆ. ಒಂದು ವೇಳೆ ಸಾಧ್ಯವಿಲ್ಲದಿದ್ದರೆ, ಈ ಸೌಲಭ್ಯವನ್ನು ಪಡೆದುಕೊಳ್ಳುವ ಅವಕಾಶವನ್ನು ಸರ್ಕಾರವು ಒಪ್ಪಿದರೆ ಪಡೆದುಕೊಳ್ಳಬಹುದು. ಅರ್ಥ ಶಾಸ್ತ್ರದಲ್ಲಿ ಒಂದು ಮಾತಿದೆ: ಅನುಕೂಲಸ್ಥರು ಹೆಚ್ಚಿನ ಹೊರೆಯನ್ನು ಹೊರಬೇಕು ಎಂದು-Broadest shoulders should bear the heaviest burden. ಅಂತಯೇ ನಮಗೆ ಸರ್ಕಾರವು ಸಕಲ ಅವಕಾಶಗಳನ್ನು ಕಲ್ಪಿಸಿರುವ ಸಂಧರ್ಭದಲ್ಲಿ, ಇಂತಹ ಉಚಿತ ಸೇವೆಯನ್ನು ಪಡೆಯದಿರುವುದು ಉತ್ತಮವಾದ ನಾಗರೀಕ ಲಕ್ಷಣ ಎಂದು ವೈಯುಕ್ತಿಕವಾಗಿ ಅಭಿಪ್ರಾಯಪಡುತ್ತೇನೆ. ಇದೇ ರೀತಿಯಾಗಿ ಸರ್ಕಾರಿ ಸೇವೆಯಲ್ಲಿರುವ ಮತ್ತು ಚೈತನ್ಯವಿರುವ ಇತರ ಸಿ ವರ್ಗದ ನೌಕರರು ಅವರ ಇಚ್ಛಾನುಸಾರ 200 ಯೂನಿಟ್ ವಿದ್ಯುತ್ತನ್ನು ಉಚಿತವಾಗಿ ಬಳಸಿಕೊಳ್ಳುವ ಬಗ್ಗೆ ಅವರ ಸಂಘದ ಮೂಲಕ ಚರ್ಚಿಸಿ ನಿರ್ಧಾರವನ್ನು ಕೈಗೊಳ್ಳಬಹುದಾಗಿದೆ. ಇದಲ್ಲದೆ ಲಕ್ಷಾಂತರ ಐ ಟಿ ಮತ್ತು ಬಿ ಟಿ ಸಂಸ್ಥೆಗಳಲ್ಲಿ ಕೆಲಸ ಮಾಡುವವರೂ ಸಹ ಇದೇ ಮಾರ್ಗವನ್ನು ಅನುಸರಿಸಿ ಮಾದರಿ ಪ್ರಜೆಗಳಾಗಬೆಂದು ಅವರಲ್ಲಿ ಮನವಿ ಮಾಡಿಕೂಳ್ಳುತ್ತಿದ್ದೇನೆ ಎಂದು ತಿಳಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ