Latest

ರಾಜ್ಯದಲ್ಲಿ 2,58,709 ಹುದ್ದೆ ಖಾಲಿ; 25 ಇಲಾಖೆಗಳಲ್ಲಿ ಭರ್ತಿಗಿಂತ ಖಾಲಿ ಹುದ್ದೆಗಳೇ ಅಧಿಕ!

ಎಂ.ಕೆ.ಹೆಗಡೆ, ಬೆಂಗಳೂರು – ರಾಜ್ಯ ಸರಕಾರಿ ನೌಕರರ ಡಿಎ., ವೇತನ ಇತ್ಯಾದಿ ಹೆಚ್ಚಳವಾದಾಗಲೆಲ್ಲ ರಾಜ್ಯ ಸರಕಾರಕ್ಕೆ ಅಷ್ಟು ಹೆಚ್ಚುವರಿ ಆರ್ಥಿಕ ಹೊರೆ, ಇಷ್ಟು ಹೆಚ್ಚುವರಿ ಹೊರೆ ಎನ್ನುವ ಮಾತನ್ನು ಉಲ್ಲೇಖಿಸಲಾಗುತ್ತದೆ.

ಆದರೆ ವಾಸ್ತವಾಂಶವೇ ಬೇರೆ ಇದೆ. ರಾಜ್ಯ ಸರಕಾರಕ್ಕೆ ಹೆಚ್ಚುವರಿ ಆರ್ಥಿಕ ಹೊರೆಯಾಗುವ ಬದಲು ರಾಜ್ಯ ಸರಕಾರಿ ನೌಕರರು ವರ್ಷಪೂರ್ತಿ ಹೆಚ್ಚುವರಿ ಕೆಲಸದ ಹೊರೆ ಹೊರುತ್ತಿದ್ದಾರೆ. ಇದಕ್ಕೆ ಕಾರಣ ರಾಜ್ಯದಲ್ಲಿರುವ 43 ಇಲಾಖೆಗಳಲ್ಲಿ ಒಟ್ಟಾರೆಯಾಗಿ ಇರಬೇಕಾದ 7,69,981 ಹುದ್ದೆಗಳ ಪೈಕಿ ಈಗ ಭರ್ತಿಯಾಗಿರುವುದು ಕೇವಲ 5,11,272 ಹುದ್ದೆಗಳು. ಅಂದರೆ 2,58,709 ಹುದ್ದೆಗಳು ಖಾಲಿ ಉಳಿದಿವೆ. ಈ ಹುದ್ದೆಗಳ ವೇತನದ ಹಣ ಸರಕಾರಕ್ಕೆ ಪ್ರತಿತಿಂಗಳು ಉಳಿತಾಯವಾಗುತ್ತಿದ್ದರೆ, ಖಾಲಿ ಹುದ್ದೆಗಳ ಕೆಲಸದ ಹೊರೆ ಇತರ ಸರಕಾರಿ ನೌಕರರ ಮೇಲೆ ಬೀಳುತ್ತಿದೆ.

ವಿಶೇಷವೆಂದರೆ, 25 ಇಲಾಖೆಗಳಲ್ಲಿ ಭರ್ತಿಯಾಗಿರುವುದಕ್ಕಿಂತ ಖಾಲಿ ಇರುವ ಹುದ್ದೆಗಳೇ ಅಧಿಕ!

ಈಚೆಗೆ ನಡೆದ ವಿಧಾನಮಂಡಳದ ಅಧಿವೇಶನದ ವೇಳೆ ಸ್ವತಃ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೇ ಈ ಮಾಹಿತಿಗಳನ್ನು ನೀಡಿದ್ದಾರೆ.

ಕಳೆದ 5 ವರ್ಷಗಳಲ್ಲಿ ಕೇವಲ 20,747 ಹುದ್ದೆಗಳ ಭರ್ತಿಗೆ ಮಾತ್ರ ಸರಕಾರದ ಅಧಿಸೂಚನೆ ಹೊರಡಿಸಿದೆ. ಇಷ್ಟಾಗ್ಯೂ ಲೋಕಸೇವಾ ಆಯೋಗವು ಯಾವುದೇ ರೀತಿಯ ವಿಳಂಬವಿಲ್ಲದೆ ಹುದ್ದೆಗಳನ್ನು ಭರ್ತಿ ಮಾಡುತ್ತಿದೆ ಎಂದು ಮುಖ್ಯಮಂತ್ರಿಗಳು ತಿಳಿಸಿದ್ದಾರೆ.

ವಿಶೇಷ ನೋಡಿ

ಇ ಆಡಳಿತ ಇಲಾಖೆಯಲ್ಲಿ ಒಟ್ಟೂ 77 ಹುದ್ದೆಗಳಿದ್ದು ಅವುಗಳ ಪೈಕಿ 75 ಹುದ್ದೆಗಳು ಖಾಲಿ ಇವೆ. ಕೇವಲ ಇಬ್ಬರು ಮಾತ್ರ ಕೆಲಸ ಮಾಡುತ್ತಿದ್ದಾರೆ.

ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಇಲಾಖೆಯಲ್ಲಿ 75 ಹುದ್ದಗಳಿದ್ದು, ಕೇವಲ 15 ಜನರು ಕೆಲಸ ಮಾಡುತ್ತಿದ್ದು, 60 ಹುದ್ದೆಗಳು ಖಾಲಿ ಇವೆ.

ಕೃಷಿ ಇಲಾಖೆಯಲ್ಲಿ 10,324 ಹುದ್ದೆಗಳಿದ್ದು, ಕೇವಲ 4,008 ಹುದ್ದೆಗಳು ಭರ್ತಿಯಾಗಿವೆ. 6,316 ಹುದ್ದೆಗಳು ಖಾಲಿ ಇವೆ.

ಪಶುಸಂಗೋಪನಾ ಇಲಾಖೆಯಲ್ಲಿ ಒಟ್ಟೂ ಮಂಜೂರಾದ ಹುದ್ದೆಗಳು 18,553, ಭರ್ತಿಯಾದ ಹುದ್ದೆಗಳು 8581. 9972 ಹುದ್ದೆಗಳು ಖಾಲಿ ಇವೆ.

ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಲ್ಲಿ 15,287 ಹುದ್ದೆಗಳಿದ್ದು, 7224 ಹುದ್ದೆಗಳು ಭರ್ತಿಯಾಗಿವೆ. 8063 ಹುದ್ದೆಗಳು ಖಾಲಿ ಇವೆ.

ಸಹಕಾರಿ ಇಲಾಖೆಯಲ್ಲಿ  7196 ಹುದ್ದೆಗಳಿದ್ದು, 2458 ಹುದ್ದೆಗಳು ಭರ್ತಿಯಾಗಿದ್ದು, 4731 ಹುದ್ದೆಗಳು ಖಾಲಿ ಇವೆ.

ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯಲ್ಲಿ 10,986 ಹುದ್ದೆಗಳು ಮಂಜೂರಾಗಿದ್ದು, 5248 ಹುದ್ದೆಗಳು ಮಾತ್ರ ಭರ್ತಿಯಾಗಿವೆ. 5738 ಹುದ್ದೆಗಳು ಖಾಲಿ ಇವೆ.

ವಾರ್ತಾ ಇಲಾಖೆಯಲ್ಲಿ 577 ಮಂಜೂರಾದ ಹುದ್ದೆ ಇದ್ದು, 258 ಹುದ್ದೆ ಭರ್ತಿಯಾಗಿದ್ದು, 319 ಖಾಲಿ ಇದೆ.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಲ್ಲಿ 596 ಹುದ್ದೆಗಳಿದ್ದು, 173 ಹುದ್ದೆ ಮಾತ್ರ ಭರ್ತಿಯಾಗಿದೆ. 423 ಹುದ್ದೆ ಖಾಲಿ ಇದೆ.

ಕಾರ್ಮಿಕ ಇಲಾಖೆಯಲ್ಲಿ 4352 ಹುದ್ದೆಗಳಿದ್ದು, 1852 ಹುದ್ದೆಗಳು ಭರ್ತಿಯಾಗಿದ್ದು, 2500 ಖಾಲಿ ಹುದ್ದೆಗಳಿವೆ.

ಭಾರಿ ಮತ್ತು ಮಧ್ಯಮ ಕೈಗಾರಿಕೆಯಲ್ಲಿ 604 ಹುದ್ದೆಗಳಿದ್ದು, 251 ಹುದ್ದೆ ಭರ್ತಿಯಾಗಿದ್ದು, 353 ಖಾಲಿ ಇದೆ.

ಗಣಿ ಇಲಾಖೆಯಲ್ಲಿ 1155 ಹುದ್ದೆಗಳಿದ್ದು, 478 ಭರ್ತಿಯಾಗಿದೆ. 677 ಖಾಲಿ ಇವೆ.

ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಲ್ಲಿ 5619 ಹುದ್ದೆಗಳಿದ್ದು, 1986 ಹುದ್ದೆಗಳು ಮಾತ್ರ ಭರ್ತಿಯಾಗಿವೆ. 3633 ಹುದ್ದೆಗಳು ಖಾಲಿ ಇವೆ.

ಯೋಜನೆ, ಸಾಂಖ್ಯಿಕ ವಿಜ್ಞಾನ, ತಂತ್ರಜ್ಞಾನ ಇಲಾಖೆಯಲ್ಲಿ 2044 ಹುದ್ದಗಳಿದ್ದು, 762 ಹುದ್ದೆ ಮಾತ್ರ ಭರ್ತಿಯಾಗಿವೆ. 1282 ಹುದ್ದೆಗಳು ಖಾಲಿ ಇವೆ.

ಪರಿಶಿಷ್ಟ ಜಾತಿಗಳ ಕಲ್ಯಾಣ ಇಲಾಖೆಯಲ್ಲಿ 15177 ಹುದ್ದೆಗಳಿದ್ದು, 5585 ಹುದ್ದೆಗಳು ಭರ್ತಿಯಾಗಿವೆ. 9592 ಹುದ್ದೆ ಖಾಲಿ ಇದೆ.

ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆಯಲ್ಲಿ 2758 ಹುದ್ದೆಗಳಿದ್ದು, 440 ಭರ್ತಿಯಾಗಿದೆ. 2318 ಹುದ್ದೆ ಖಾಲಿ ಇದೆ.

ರೇಶ್ಮೆ ಇಲಾಖೆಯಲ್ಲಿ  4560 ಹುದ್ದೆಗಳಿದ್ದು, 1758 ಹುದ್ದೆಗಳು ಮಾತ್ರ ಭರ್ತಿಯಾಗಿವೆ. 2802 ಹುದ್ದೆಗಳು ಖಾಲಿ ಇವೆ.

ಕೌಶಲ್ಯಾಭಿವೃದ್ಧಿ  ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯಲ್ಲಿ 6838 ಹುದ್ದೆಗಳಿವೆ. 2622 ಹುದ್ದೆಗಳು ಭರ್ತಿಯಾಗಿದ್ದು, 4216 ಹುದ್ದೆಗಳು ಖಾಲಿ ಇವೆ.

ಸಣ್ಣ ಕೈಗಾರಿಕೆ ಇಲಾಖೆಯಲ್ಲಿ 563 ಹುದ್ದೆಗಳಿದ್ದು, 207 ಹುದ್ದೆಗಳು ಭರ್ತಿಯಾಗಿದ್ದು, 356 ಹುದ್ದೆ ಖಾಲಿ ಇದೆ.

ಪ್ರವಾಸೋದ್ಯಮ ಇಲಾಖೆಯಲ್ಲಿ 440 ಹುದ್ದೆಗಳಿದ್ದು, 154 ಹುದ್ದೆ ಭರ್ತಿಯಾಗಿದೆ. 286 ಖಾಲಿ ಇದೆ.

ಸಾರಿಗೆ ಇಲಾಖೆಯಲ್ಲಿ 2806 ಹುದ್ದೆಗಳಿದ್ದು, 1204 ಹುದ್ದೆಗಳು ಭರ್ತಿಯಾಗಿವೆ. 1602 ಖಾಲಿ ಇವೆ.

ನಗರಾಭಿವೃದ್ಧಿ ಇಲಾಖೆಯಲ್ಲಿ 1433 ಹುದ್ದೆಗಳಿದ್ದು, 594 ಭರ್ತಿಯಾಗಿವೆ. 839 ಹುದ್ದೆಗಳು ಖಾಲಿ ಇವೆ.

ಉನ್ನತ ಶಿಕ್ಷಣ ಇಲಾಖೆಯಲ್ಲಿ 24,785 ಹುದ್ದೆಗಳಿದ್ದು, 12,111 ಹುದ್ದೆಗಳು ಭರ್ತಿಯಾಗಿವೆ. 12,674 ಹುದ್ದೆಗಳು ಖಾಲಿ ಇವೆ.

ಮೀನುಗಾರಿಕೆ ಇಲಾಖೆಯಲ್ಲಿ 1401 ಹುದ್ದೆ ಇದ್ದು, 624 ಮಾತ್ರ ಭರ್ತಿಯಾಗಿದೆ. 777 ಖಾಲಿ ಇವೆ.

ಇಂಧನ ಇಲಾಖೆಯಲ್ಲಿ 452 ಹುದ್ದೆಗಳಿದ್ದು, 207 ಭರ್ತಿಯಾಗಿದೆ. 245 ಖಾಲಿ ಇದೆ.

ಯುವಜನ ಸೇವೆಯಲ್ಲಿ 322 ಹುದ್ದೆಗಳಿದ್ದು, 115 ಭರ್ತಿಯಾಗಿದ್ದು, 207 ಖಾಲಿ ಇವೆ.

ಪ್ರಮುಖ ಇಲಾಖೆಗಳಾದ ಪ್ರಾಥಮಿಕ ಮತ್ತು ಮಾಧ್ಯಮಿಕ ಶಿಕ್ಷಣದಲ್ಲಿ 2,81, 862 ಹುದ್ದೆಗಳಿದ್ದು, 2,15,803 ಹುದ್ದೆಗಳು ಭರ್ತಿಯಾಗಿದ್ದು, 66,059 ಹುದ್ದೆ ಖಾಲಿ ಇದೆ.

ಮಂಜೂರಾಗಿ ಖಾಲಿ ಇರುವ ಹುದ್ದೆಗಳ ಪೈಕಿ ಗ್ರುಪ್ ಸಿ ಮತ್ತು ಡಿ ವೃಂದಗಳಲ್ಲಿ 82,700 ಹುದ್ದೆಗಳನ್ನು ಹೊರಗುತ್ತಿಗೆ ಆಧಾರದ ಮೇಲೆ ಭರ್ತಿ ಮಾಡಲಾಗಿದೆ.

ದೇಹದ ತೂಕ ಇಳಿಸಬೇಕೇ ? ಈ 9 ಅಂಶಗಳನ್ನು ಗಮನದಲ್ಲಿಡಿ

https://pragati.taskdun.com/latest/9-major-tips-to-reduce-body-weight/

https://pragati.taskdun.com/karnataka-news/11-da-for-government-employees-yeddyurappa-signed-in-one-minute/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button