ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಸರ್ವಧರ್ಮ ಸಮಾನತೆ ಸಾರಿ, ಮಾನವೀಯ ಮೌಲ್ಯಗಳನ್ನು ಗಟ್ಟಿ ಗೊಳಿಸಲು ಶ್ರಮಿಸಿದ ಬಸವಣ್ಣನವರ ವಚನಗಳು ಸಾರ್ವಕಾಲಿಕ. ಅವರ ತತ್ವಾದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಪ್ರತಿನಿತ್ಯವೂ ವಚನ ಪಠಣ ಮಾಡಬೇಕೆಂದು ಏಕಸ್ ಫೌಂಡೇಶನ್ ಅಧ್ಯಕ್ಷೆ ಅಕ್ಕಮಹಾದೇವಿ ಅರವಿಂದ ಮೆಳ್ಳಿಗೇರಿ ಹೇಳಿದರು.
ಇಲ್ಲಿನ ಕೆಎಲ್‌ಇ ಜೆಎನ್‌ಎಮ್‌ಸಿ ಜಿರಗೆ ಹಾಲ್‌ನಲ್ಲಿ ಮಂಗಳವಾರ ಲಿಂಗಾಯತ ಮಹಿಳಾ ಸಮಾಜ ವತಿಯಿಂದ ಆಯೋಜಿಸಿದ ೨೫ ನೇ ಬೆಳ್ಳಿ-ಬೆಳಗು ಹಾಗೂ ರಜತ ಮಹೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ವೀರಶೈವ ಲಿಂಗಾಯತ ಧರ್ಮವನ್ನು ಗಟ್ಟಿಗೊಳಿಸಿ ಸಮಾನತೆ ಸಾರುತ್ತಿರುವ ಜನರನ್ನು ಗುರುತಿಸಿ ಗೌರವಿಸುವ ಕಾರ್ಯವಾಗಬೇಕಿದೆ. ಸಮಾಜ ಸೇವೆಯಲ್ಲಿ ಲಿಂಗಾಯತ ಮಹಿಳಾ ಸಮಾಜದ ಪಾತ್ರ ಅನನ್ಯವಾಗಿದೆ. ಜತೆಯಲ್ಲಿ ಮಕ್ಕಳಿಗೆ ವಿವಿಧ ಸ್ಪರ್ಧೆ ಹಾಗೂ ಪ್ರತಿನಿತ್ಯವೂ ಬಸವಣ್ಣನವರ ವಚನ ಪಠಣವಾಗಬೇಕಿದೆ. ಇದಕ್ಕಾಗಿ ವಿಶೇಷ ಮಕ್ಕಳ ತಂಡ ರಚಿಸಿಬೇಕೆಂದು ಸಲಹೆ ನೀಡಿದರು.
ಜಿಲ್ಲೆಯ ಅಕ್ಷಯಪಾತ್ರೆಯೊಂದಿಗೆ ಲಿಂಗಾಯತ ಮಹಿಳಾ ಸಮಾಜ ಕೈಜೋಡಿಸಿ ಶಾಲಾ ಮಕ್ಕಳಿಗಾಗಿ ಅನ್ನದಾಸೋಹವನ್ನು ನೀಡಬೇಕು. ಇದಕ್ಕಾಗಿ ಏಕಸ್‌ದಿಂದ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಲಾಗುವುದು ಎಂದು ಭರವಸೆ ನೀಡಿದರು.
ಇಂತಹ ಸಾವಿರಾರು ಕಾರ್ಯಗಳನ್ನು ಮಾಡಿರುವ ಲಿಂಗಾಯತ ಮಹಿಳಾ ಸಮಾಜದ ಪ್ರೇರಣೆಯಿಂದ ಏಕಸ್ ಫೌಂಡೇಶನ್ ೩೭ ಸರಕಾರಿ ಶಾಲೆಗಳಿಗೆ ಹಾಗೂ ೪೦ ಸಾವಿರಕ್ಕಿಂತ ಅಧಿಕ ಮಕ್ಕಳಿಗೆ ಕಂಪ್ಯೂಟರ್ ಪೂರೈಸಿ ಗುಣಮಟ್ಟದ ಶಿಕ್ಷಣ ತಂತ್ರಜ್ಞಾನ ಹಾಗೂ ಸರಳ ವಿಜ್ಞಾನ ಬೋದಿಸಲಾಗುತ್ತಿದೆ.
ಬೆಳಗಾವಿ ಮಕ್ಕಳಿಗಾಗಿ ಈ ಸೌಲಭ್ಯವನ್ನು ಕಲ್ಪಿಸಲು ಶೀಘ್ರದಲ್ಲೇ ಏಕಸ್ ಫೌಂಡೇಶನ್ ಆರಂಭಿಸಲಾಗುವುದು. ರಾಜ್ಯದ ವಿವಿಧ ಕಡೆ ಆರ್ಥಿಕ ಸಂಕಷ್ಟದಿಂದ ಶಾಲೆಯಿಂದ ಹೊರಗುಳಿದ ಬಡಮಕ್ಕಳಿಗೆ ಮರು ಶಾಲೆಗೆ ಕರೆತರುವ ಪ್ರಯತ್ನವಾಗುವುದು.
ಶುದ್ಧ ಪರಿಸರ ನಿರ್ಮಾಣಕ್ಕಾಗಿ, ಪ್ಲಾಸ್ಟಿಕ್ ಮುಕ್ತ ಪಣ ತೊಟ್ಟ ಮಹಿಳಾ ಸಮಾಜಕ್ಕೆ ಪ್ರತಿಯೊಬ್ಬರೂ ಕೈಜೋಡಿಸಬೇಕೆಂದರು. ಈಗಾಗಲೇ ಗಡಿನಾಡಿನಲ್ಲಿ ಸಮಾಜ ಸೇವೆಯಲ್ಲಿ ಛಾಪು ಮೂಡಿಸಿರುವ ಲಿಂಗಾಯತ ಮಹಿಳಾ ಸಮಾಜ ರಾಜ್ಯಾದ್ಯಂತ ಬೆಳಗಲಿ ಎಂದರು.
ರಾಣಿ ಚನ್ನಮ್ಮ ಮಹಿಳಾ ಸಹಕಾರಿ ಬ್ಯಾಂಕ ಅಧ್ಯಕ್ಷೆ ಆಶಾ ಪ್ರಭಾಕರ ಕೋರೆ ಸ್ಮರಣ ಸಂಚಿಕೆ ಲೋಕಾರ್ಪಣೆಗೋಳಿಸಿದರು.
ಈ ಸಂದರ್ಭದಲ್ಲಿ ಜಯಶೀಲಾ ಬ್ಯಾಕೋಡ, ಆಶಾ ಪಾಟೀಲ, ಶೈಲಜಾ ಭಿಂಗೆ, ರತ್ನಪ್ರಭಾ ಬೆಲ್ಲದ, ಜ್ಯೋತಿ ಬದಾಮಿ, ಸುನಂದಾ ಎಮ್ಮಿ, ಸರಳಾ ಹಿರೇಕರ, ಕೀರ್ತಿ ಪಾಟೀಲ, ಶರಣಮ್ಮಾ ಗೌರವಿಸಿ ಸನ್ಮಾನಿಸಲಾಯಿತು.
ಗೌರವಾಧ್ಯಕ್ಷರು ಶೈಲಜಾ ಭಿಂಗೆ, ಶೈಲಜಾ ಪಾಟೀಲ, ಮಂಗಲಾ ಸುರೇಶ ಅಂಗಡಿ, ಆಶಾ ಪಾಟೀಲ, ಜಯಾಶೀಲಾ ಬ್ಯಾಕೋಡ, ಜ್ಯೋತಿ ಬದಾಮಿ, ರಜತ ಸ್ಮರಣ ಸಂಚಿಕೆ ಸಂಪಾದಕರು ಡಾ. ಗುರುದೇವಿ ಹುಲೆಪ್ಪನವರ , ಸುನಂದಾ ಎಮ್ಮಿ , ಶೈಲಜಾ ಪಾಟೀಲ, ಜಯಾಶಿಲಾ, ಬೀನಾ ಕತ್ತಿ ಹಾಗೂ ಇತರರು ಇದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ