Kannada News

ಪಂಚಮಸಾಲಿಗೆ 2 ಎ ಮೀಸಲಾತಿ : ಸಿಎಂ ಬೊಮ್ಮಾಯಿಗೆ ಯತ್ನಾಳ್ ಕೊಟ್ಟ ಎಚ್ಚರಿಕೆ ಏನು ಗೊತ್ತೆ?

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಪಂಚಮಸಾಲಿ ಹೋರಾಟಕ್ಕೆ ಸರಕಾರ ಮಣಿದಿದ್ದು, ಗುರುವಾರ 2ಎ ಮೀಸಲಾತಿ ಘೋಷಣೆ ಮಾಡುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭರವಸೆ ನೀಡಿದ್ದಾರೆ.

ಸುವರ್ಣ ವಿಧಾನಸೌಧ ಸಮೀಪ ನಡೆದ ಪಂಚಮಸಾಲಿ ಹೋರಾಟ ಸಮಿತಿಯ ಬೃಹತ್ ಸಮಾವೇಶ ಉದ್ದೇಶಿಸಿ ಮಾತನಾಡಿದ ಹೋರಾಟ ಸಮಿತಿ ಅಧ್ಯಕ್ಷ, ಕೇಂದ್ರದ ಮಾಜಿ ಸಚಿವ ಬಸನಗೌಡ ಪಾಟೀಲ ಯತ್ನಾಳ ಈ ವಿಷಯ ತಿಳಿಸಿದರು.  ತಾಯಿ ಮೇಲೆ ಆಣೆ ಮಾಡಿ, ಆಯೋಗದ ವರದಿಯನ್ನು ಸರಕಾರ ಒಪ್ಪಿಕೊಂಡಿದ್ದೇವೆ. ಬುಧವಾರ ಸರ್ವ ಪಕ್ಷ ಸಭೆ ಕರೆದು ಗುರುವಾರ 2ಎ ಘೋಷಣೆ ಮಾಡುತ್ತೇವೆ ಎಂದು ಮುಖ್ಯಮಂತ್ರಿಗಳು ದೇವರ ಸಾಕ್ಷಿಯಾಗಿ ಹೇಳಿದ್ದಾರೆ ಎಂದು ಯತ್ನಾಳ ಹೇಳಿದರು.

ಪಂಚಮಸಾಲಿಗಳಿಗೆ ಒಬ್ಬರೇ ಸ್ವಾಮಿಗಳು, ಅವರು ಕೂಡಲ ಸಂಗಮದ ಸ್ವಾಮಿಗಳು ಎಂದು ಯತ್ನಾಳ ಹೇಳಿದರು. ಜನಶಕ್ತಿಯ ಮುಂದೆ ಯಾರೇ ಇದ್ದರೂ ಬಗ್ಗಬೇಕಾಗುತ್ತದೆ ಎಂದರು.

ಕೊಡ್ತೀರೋ ಇಲ್ವೋ? ಕೊಡದಿದ್ರೆ ಈಗ್ಲೇ ಹೇಳಿ ಬಿಡಿ ಎಂದು ಮುಖ್ಯಮಂತ್ರಿಗಳಿಗೆ ಹೇಳಿದೆವು. ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರು ವರದಿ ಕೊಟ್ಟಿದ್ದಾರೆ. ಅವರು ಪಂಚಮಸಾಲಿಗಳಿಗೆ ಮೀಸಲಾತಿ ಕೊಡುವುದು ಸೂಕ್ತ ಎಂದು ಹೇಳಿದ್ದಾರೆ. ತಕ್ಷಣ ಆ ಕುರಿತು ನಿರ್ಣಯ ಮಾಡುವುದು ಕಷ್ಟ. ಹಾಗಾಗಿ ಒಂದು ವಾರ ಸಮಯ ಕೊಡಿ ಎಂದು ಕೇಳಿದ್ದಾರೆ ಎಂದು ಯತ್ನಾಳ ತಿಳಿಸಿದರು.

ನಂತರ ಸುದೀರ್ಘ ಚರ್ಚೆ ಮಾಡಿದ್ದೇವೆ. ಆಯೋಗದ ವರದಿಯನ್ನು ಸರಕಾರ ಒಪ್ಪಿಕೊಂಡಿದ್ದೇವೆ. ಬುಧವಾರ ಸರ್ವ ಪಕ್ಷ ಸಭೆ ಕರೆದು ಗುರುವಾರ 2ಎ ಘೋಷಣೆ ಮಾಡುತ್ತೇವೆ ಎಂದು ಮುಖ್ಯಮಂತ್ರಿಗಳು ದೇವರ ಸಾಕ್ಷಿಯಾಗಿ, ತಾಯಿ ಮೇಲೆ ಆಣೆ ಮಾಡಿ ಹೇಳಿದ್ದಾರೆ ಎಂದು ಯತ್ನಾಳ ಹೇಳಿದರು.

ಮಾಡಲಿಲ್ಲ ಎಂದರೆ ಅವರನ್ನು ದಂಡೆಗೆ ಹಚ್ಚುವವರೆಗೆ ಬಿಡುವುದಿಲ್ಲ ಎಂದು ಎಚ್ಚರಿಸಿದರು.

ಈ ಐತಿಹಾಸಿಕ ನಿರ್ಣಯಕ್ಕೆ ಕಾರಣರಾದ ವಿಜಯಾನಂದ ಕಾಶಪ್ಪನವರೇ, ಈ ಹೋರಾಟಕ್ಕೆ ಎಲ್ಲ ರೀತಿಯ ಸಹಕಾರ ನೀಡಿರುವ ಶಾಸಕಿ ಲಕ್ಷ್ಮೀ ಹೆಬ್ಬಾಳಕರ್ ಅವರೇ, ಈ ಹೋರಾಟದಿಂದ ಜಿಲ್ಲಾಮಟ್ಟದ ನಾಯಕರಾಗಿ ಪರಿವರ್ತಿತರಾಗಿರುವ ಈರಣ್ಣ ಕಡಾಡಿಯವರೇ, ಮುಂದಿನ ಶಾಸಕರಾಗಲಿರುವ ವಿಶ್ವನಾಥ ಪಾಟೀಲ ಅವರೇ ಎಂದು ಬಸನಗೌಡ ಪಾಟೀಲ ಯತ್ನಾಳ ಮಾತು ಆರಂಭಿಸಿದರು.

ನಿಮಗೆ ಮೀಸಲಾತಿ ಸಿಕ್ಕಿದೆ. ಇನ್ನು ಹೋರಾಟವಿಲ್ಲ. ಇನ್ನೇನಿದ್ದರೂ ತಹಸಿಲ್ದಾರ್ ಕಚೇರಿಗೆ ಹೋಗಿ 2ಎ ಸರ್ಟಿಫಿಕೇಟ್ ಪಡೆಯುವುದಷ್ಟೆ ಎಂದು ಪಂಚಮಸಾಲಿ ಸಮಾಜದ ರಾಷ್ಟ್ರೀಯ ಅಧ್ಯಕ್ಷ ವಿಜಯಾನಂದ ಕಾಶಪ್ಪನವರ್ ತಿಳಿಸಿದರು.

ಸಮಾವೇಶದಲ್ಲಿ ಮಾತನಾಡಿರುವ ಬಸವಜಯ ಮೃತ್ಯುಂಜಯ ಸ್ವಾಮೀಜಿ, ಮೀಸಲಾತಿ ಘೋಷಿಸಿದರೆ ಸರ್ಕಾರಕ್ಕೆ ಸನ್ಮಾನ ಮಾಡುವುದಾಗಿ ತಿಳಿಸಿದರು.

ಮತ್ತೊಂದು ನರಗುಂದ ಬಂಡಾಯವಾಗಲು ಅವಕಾಶ ನೀಡಬಾರದು. ಪಂಚಮಸಾಲಿಗಳಿಗೆ 2ಎ ಮೀಸಲಾತಿ ನೀಡಿದರೆ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿಯವರಿಗೆ ಸನ್ಮಾನ ಮಾಡೋಣ. ಮೀಸಲಾತಿ ನೀಡದಿದ್ದರೆ ಸುವರ್ಣ ವಿಧಾನಸೌಧಕ್ಕೆ ಮುತ್ತಿಗೆ ಹಾಕೋಣ ಎಂದು ಕರೆ ನೀಡಿದರು.

ಇಷ್ಟು ದಿನ ಕಾದು ಕಾದು ಕಾದು ಸಾಕಾಗಿದೆ. ಮುಖ್ಯಮಂತ್ರಿಗಳು ಏನು ಸಂದೇಶ ಕಳಿಸಿದ್ದಾರೆ ನೋಡೋಣ, ಮುಖಂಡರು ಏನು ಹೇಳುತ್ತಾರೆ ನೋಡೋಣ ಎಂದು ಸ್ವಾಮಿಗಳು ಹೇಳಿದರು. ಇನ್ನು ಮುಂದೆ ಇಲ್ಲಿರುವ ಮುಖಂಡರು ಚುನಾವಣೆಯ ಸಿದ್ಧತೆ ಮಾಡಲಿ. ಅವರೆಲ್ಲ ಗೆಲ್ಲುವುದು ಮುಖ್ಯ. ನಾನು ಏಕಾಂಗಿಯಾಗಿ ಹೋರಾಡುತ್ತೇನೆ ಎಂದು ಅವರು ಹೇಳಿದರು.

ಶಾಸಕಿ ಲಕ್ಷ್ಮೀ ಹೆಬ್ಬಾಳಕರ್, ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ, ಸಂಸದ ಈರಣ್ಣ ಕಡಾಡಿ, ಕಿತ್ತೂರು ಶಾಸಕ ಮಹಾಂತೇಶ ದೊಡ್ಡಗೌಡರ್ ಸೇರಿದಂತೆ ಹಲವರು ಇದ್ದರು.

ಗುರುವಾರ ಪಂಚಮಸಾಲಿ ಸಮುದಾಯಕ್ಕೆ 2 ಎ ಮೀಸಲಾತಿ ಘೋಷಣೆ: ಸಿಎಂ ಬೊಮ್ಮಾಯಿ ಭರವಸೆ – ಯತ್ನಾಳ

https://pragati.taskdun.com/the-government-yielded-to-the-panchmasali-struggle-2a-reservation-announcement/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button