ಸ್ಟೆಪ್-2018 ಸಮಾವೇಶದ ವಿವಿಧ ಗೋಷ್ಠಿಗಳು
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ
ಭಾರತ ವಿಶ್ವದಲ್ಲೇ 3ನೇ ಆರ್ಥಿಕ ಬಲಾಢ್ಯ ರಾಷ್ಟ್ರವಾಗಿದ್ದು, ಶೀಘ್ರದಲ್ಲೇ ವಿಶ್ವಗುರು ಎನ್ನುವ ತನ್ನ ಐತಿಹಾಸಿಕ ಪಟ್ಟವನ್ನೂ ಅಲಂಕರಿಸಲಿದೆ ಎಂದು ಇಸ್ರೋ ಮಾಜಿ ಅಧ್ಯಕ್ಷ ಡಾ.ಕಿರಣಕುಮಾರ ಹೇಳಿದ್ದಾರೆ.
ಬೆಳಗಾವಿಯಲ್ಲಿ ಶನಿವಾರ ಆರಂಭವಾದ ಪ್ರಬುದ್ಧ ಭಾರತ ಆಯೋಜನೆಯ ಸ್ಟೆಪ್-2018 ಸಮಾವೇಶದಲ್ಲಿ ಭಾರತದ ಪರಿವರ್ತನೆಗೆ ತಂತ್ರಜ್ಞಾನ ಕುರಿತ ಗೋಷ್ಠಿಯಲ್ಲಿ ಅವರು ಮಾತನಾಡುತ್ತಿದ್ದರು. ತಾತ್ರಿಕತೆಯಲ್ಲಿ ಭಾರತ ಗಣನೀಯ ಸಾಧನೆ ಮಾಡಿದೆ. ಅನಕ್ಷರಸ್ಥರೂ ಕೂಡ ತಂತ್ರಜ್ಞಾನದ ಲಾಭ ಪಡೆಯುವಂತೆ ಮಾಡಿದ್ದು ತಂತ್ರಜ್ಞಾನದ ಹೆಗ್ಗುರುತು. ಮೀನುಗಾರರು ಯಾವ ಸಂದರ್ಭದಲ್ಲಿ, ಯಾವ ಸ್ಥಳಕ್ಕೆ ಮೀನು ಹಿಡಿಯಲು ಹೋಗುವುದು ಸುರಕ್ಷಿತ ಎನ್ನುವುದನ್ನು ಕ್ಷಣ ಮಾತ್ರದಲ್ಲಿ ಅರಿಯುತ್ತಾರೆ. ಚಂಡಮಾರುತದ ಕುರಿತು ಸಾಕಷ್ಟು ಮುಂಚಿತವಾಗಿಯೇ ಮಾಹಿತಿ ದೊರೆಯುತ್ತಿದೆ. ಮಾಹಿತಿ ತಂತ್ರಜ್ಞಾನವಂತೂ ಆಶ್ಚರ್ಯಪಡುವ ರೀತಿಯಲ್ಲಿ ಬೆಳವಣಿಗೆ ಹೊಂದಿದೆ. ದೊಡ್ಡ ಕ್ರಾಂತಿಯನ್ನೇ ಮಾಡಿದೆ ಎಂದು ಕಿಣಕುಮಾರ ಹೇಳಿದರು.
ಇನ್ನೋರ್ವ ಸಂಪನ್ಮೂಲ ವ್ಯಕ್ತಿ, ಲೇಖಕ ಕಿರಣಕುಮಾರ ಎಸ್., ಕಳೆದ 2 ವರ್ಷದಲ್ಲಿ ಭಾರತದ ತಂತ್ರಜ್ಞಾನ ನಾವು ಊಹಸಲು ಸಾಧ್ಯವಿಲ್ಲದಷ್ಟು ವೇಗವಾಗಿ ಬೆಳವಣಿಗೆ ಹೊಂದಿದೆ. ಭಾರತದ ತಾಂತ್ರಿಕತೆ ವಿಶ್ವಕ್ಕೇ ಮಾದರಿಯಾಗುವ ರೀತಿಯಲ್ಲಿ ರೂಪುಗೊಂಡಿದೆ. ನಮ್ಮ ಮಧ್ಯಮಗಳಲ್ಲಿರುವ ನಕಾರಾತ್ಮಕ ಧೋರಣೆಯಿಂದ ಅವು ಬೆಳಕಿಗೆ ಬರುತ್ತಿಲ್ಲ ಎಂದು ವಿಷಾದಿಸಿದರು.
ವಿದೇಶಗಳಲ್ಲಿ ಡ್ರಗ್ ಮತ್ತಿತರ ಚಟಗಳಿಗೆ ಅಂಟಿಕೊಂಡವರು, ದುರ್ಬಲ ಮನಸ್ಸಿನವರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಆದರೆ ಭಾರತದಲ್ಲಿ ಅತ್ಯಂತ ಶ್ರಮಜೀವಿಗಳಾದ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ರೈತರಿಗೆ ತಂತ್ರಜ್ಞಾನವನ್ನು ತಲುಪಿಸಿ ಬಲಗೊಳಿಸಬೇಕು ಎಂದು ಅವರು ಹೇಳಿದರು.
ಜಿಐಟಿ ಪ್ರಾಚಾರ್ಯ ಎ.ಎಸ್.ದೇಶಪಾಂಡೆ ಗೋಷ್ಠಿಯ ಸಂಯೋಜನೆ ಮಾಡಿದರು.
ಪ್ರಜಾಪ್ರಭುತ್ವಕ್ಕೆ ಅಪಾಯ:
ರಾಜಕೀಯಕ್ಕೆ ಸಂಬಂಧಿಸಿದ ಗೋಷ್ಠಿಯಲ್ಲಿ ಮಾತನಾಡಿದ ಡಾ.ಅನರ್ಬಾನ ಗಂಗೂಲಿ, ಸಾಮಾಜಿಕ ಜವಾಬ್ದಾರಿ ಇಲ್ಲದ ಬುದ್ದಿಜೀವಿಗಳಿಂದ ಪ್ರಜಾಪ್ರಭುತ್ವಕ್ಕೆ ಸವಾಲು ಮತ್ತು ಅಪಾಯ ಎದುರಾಗಿದೆ. ಪಶ್ಚಿಮಾತ್ಯ ಸಂಸ್ಕೃತಿಯನ್ನು ಕೆಡಿಸುವ ಯತ್ನ ನಡೆಯುತ್ತಿದೆ. ಭಾರತೀಯತೆಯನ್ನು ಹಾಳುಗೆಡವಲು ಪ್ರಯತ್ನಿಸಲಾಗುತ್ತಿದೆ. ಸ್ವಾರ್ಥ ಮತ್ತು ಸೇವೆಯ ಮಧ್ಯೆ ರಾಜಕಾರಣ ಒದ್ದಾಡುತ್ತಿದೆ ಎಂದರು.
ಇನ್ನೋರ್ವ ಸಂಪನ್ಮೂಲ ವ್ಯಕ್ತಿ ಪ್ರಫುಲ್ ಕೇತ್ಕರ್ ಮಾತನಾಡಿ, ಭಾರತದ ಶ್ರೇಷ್ಠತೆಯನ್ನು ಪುನರ್ ಸ್ಥಾಪಿಸುವುದೇ ಇಂದಿನ ದೊಡ್ಡ ಸವಾಲಾಗಿದೆ. ಅನಕ್ಷರಸ್ಥರೂ ವಿದ್ಯಾವಂತರಿಗಿಂತ ಹೆಚ್ಚು ಪ್ರಜಾಪ್ರಭುತ್ವವನ್ನು ಅರಥ ಮಾಡಿಕೊಂಡಿರುವುದರಿಂದ ಇಷ್ಟಾದರೂ ಬದಲಾವಣೆ ಬರುತ್ತಿದೆ ಎಂದು ಅವರು ಹೇಳಿದರು.
ಸುಶಾಂತ ಜೋಶಿ ಗೋಷ್ಠಿ ಸಂಯೋಜಿಸಿದರು.
ಭಾರತ ವಿರೋಧಿ ಧೋರಣೆ:
ಸಾಮಾಜಿಕ ಸ್ಥಿತಿಗತಿಗೆ ಸಂಬಂಧಿಸಿದ ಗೋಷ್ಠಿಯಲ್ಲಿ ಮಾತನಾಡಿದ ಲೇಖಕ ಶೆಹಜಾದ್ ಪೂಣಾವಾಲೆ, ಸರಕಾರ ವಿರೋಧಿಸುವ ಭರದಲ್ಲಿ ಭಾರತನ್ನೇ ವಿರೋಧಿಸುವ ಧೋರಣೆ ಬಂದಿರುವುದು ಭಾರತದ ದೊಡ್ಡ ದುರಂತವಾಗಿದೆ ಎಂದರು.
ರಾಮಾಯಣ ಮಹಾಭಾರತಗಳು ಹಿಂದೂಗಳ ಗ್ರಂಥವಲ್ಲ. ಇವು ಭಾರತೀಯ ಗ್ರಂಥಗಳು. ಭಾರತಕ್ಕೆ ಪಠವಾಗಬಲ್ಲ ಅದೆಷ್ಟೋ ವಿಷಯಗಳು ಅದರಲ್ಲಿವೆ. ಸರ್ವರ ಸಮಾನತೆ, ಸರ್ವರ ವಿಕಾಸ, ಹೊಂದಾಣಿಕೆ ಮೊದಲಾದ ಸಂಸ್ಕೃತಿಗಳು ಭಾರತದ ಯಶಸ್ಸಿನ ಮೂಲಗಳಾಗಿವೆ. ಅದನ್ನೆಲ್ಲ ಅರಿಯದೆ ಇಂದು ಸರಕಾರಗಳನ್ನು ವಿರೋಧಿಸುವ ಆತುರದಲ್ಲಿ ಭಾರತವನ್ನ ವಿರೋಧಿಸುವ ಮನೋಭಾವ ಹೆಚ್ಚಾಗುತ್ತಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದರು.
ಜಾತ್ಯತೀತ ಎನ್ನುವ ಕಾಂಗ್ರೆಸ್ ಎಷ್ಟು ಜನ ಮುಸ್ಲಿಮರನ್ನು, ದಲಿತರನ್ನು ಪ್ರಧಾನಿ ಮಾಡಿದೆ? ಮುಖ್ಯಮಂತ್ರಿ ಮಾಡಿದೆ? ಹೋಗಲಿ ಪಕ್ಷದ ಅಧ್ಯಕ್ಷರನ್ನಾಗಿಸಿದೆ. ಈ ಪಟ್ಟಿ ಕೊಟ್ಟರೆ ನಾನು ಪುಕ್ಕಟೆಯಾಗಿ ಕಾಂಗ್ರೆಸ್ ಪರ ಪ್ರಚಾರ ಮಾಡುತ್ತೇನೆ. ಮುಸ್ಲಿಂ ಆತಂಕವಾದ ಎನ್ನುವುದನ್ನು ವಿರೋಧಿಸುವವರು ಹಿಂದೂ ಆತಂಕವಾದ ಎಂದು ಹೇಳುತ್ತಾರೆ. ಈ ರೀತಿ ಜಾತಿಯ ಆಧಾರಾದ ಮೇಲೆ ಹೇಳುವುದನ್ನು ನಾನು ವಿರೋಧಿಸುತ್ತೇನೆ ಎಂದ ಅವರು, ರಾಮ ಹುಟ್ಟಿದ ಸ್ಥಳದಲ್ಲಿ ರಾಮಮಂದಿರ ಮಾಡದೆ ಬೇರೆಲ್ಲಿ ಮಾಡಲು ಸಾಧ್ಯ ಎಂದು ಪ್ರಶ್ನಿಸಿದರು.
ಇನ್ನೋರ್ವ ಸಂಪನ್ಮೂಲ ವ್ಯಕ್ತಿ ಮಧು ಕಿಶ್ವರ ಭಾರತೀಯ ಸಮಾಜದಲ್ಲಿ ಕೌಟುಂಬಿಕ ವ್ಯವಸ್ಥೆ ಕುರಿತು ವಿವರಿಸಿದರು. ಕೀರ್ತಿ ಶಿವಕುಮಾರ ಗೋಷ್ಠಿ ಸಂಯೋಜಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ