Kannada NewsKarnataka News

ಅ.23 ರಿಂದ ಮೂರು ದಿನ ಕಿತ್ತೂರು ಉತ್ಸವ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ- ಕಿತ್ತೂರು ಉತ್ಸವವನ್ನು ಪ್ರತಿವರ್ಷದಂತೆ ಅ.23 ರಿಂದ ಮೂರು ದಿನಗಳ ಕಾಲ ಆಚರಿಸಲು ನಿರ್ಧರಿಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವರಾದ ಜಗದೀಶ್ ಶೆಟ್ಟರ್ ಅವರು ತಿಳಿಸಿದರು.
ಕಿತ್ತೂರು ಉತ್ಸವಕ್ಕೆ ಸಂಬಂಧಿಸಿದಂತೆ ಮಂಗಳವಾರ (ಅ.೧) ನಡೆದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕಿತ್ತೂರು ಇತಿಹಾಸ, ಚೆನ್ನಮ್ಮಳ ಶೌರ್ಯ-ಸಾಹಸ ಯುವಪೀಳಿಗೆಗೆ ಸ್ಫೂರ್ತಿಯಾಗಬೇಕು ಎಂಬ ಉದ್ದೇಶದಿಂದ ಉತ್ಸವ ಆಚರಿಸಲಾಗುತ್ತಿದೆ.
ಪ್ರವಾಹದಿಂದ ಕಷ್ಟದಲ್ಲಿರುವ ಜನರಿಗೆ ಸ್ಪಂದಿಸುವುದರ ಜತೆಗೆ ಎಲ್ಲರ ಆಶಯದಂತೆ ಕಿತ್ತೂರು ಉತ್ಸವವನ್ನು ಅಕ್ಟೋಬರ್ 23, 24 ಹಾಗೂ 25 ರಂದು ಆಚರಿಸಲು ನಿರ್ಧರಿಸಲಾಗಿದೆ.
ಉತ್ಸವಕ್ಕೆ ಒಂದು ಕೋಟಿ ರೂಪಾಯಿ ಅನುದಾನ ನೀಡಲು ಮುಖ್ಯಮಂತ್ರಿಗಳು ಈಗಾಗಲೇ ಒಪ್ಪಿಕೊಂಡಿದ್ದಾರೆ. ಇನ್ನೂ ಒಂದು ಕೋಟಿ ರೂಪಾಯಿ ಒದಗಿಸುವಂತೆ ಮತ್ತೊಮ್ಮೆ ಕೋರಲಾಗುವುದು ಎಂದರು.

ಪ್ರಾಧಿಕಾರಕ್ಕೆ 200 ಕೋಟಿ ಪ್ರಸ್ತಾವ:

ಕಿತ್ತೂರು ಅಭಿವೃದ್ಧಿ ಪ್ರಾಧಿಕಾರಕ್ಕೆ 200 ಕೋಟಿ ಪ್ರಸ್ತಾವವಿದೆ. ಮುಖ್ಯಮಂತ್ರಿಗಳ ಜತೆ ಚರ್ಚಿಸಿ ಮುಂದಿನ ಬಜೆಟ್ಟಿನಲ್ಲಿ ಈ ಅನುದಾನ ಒದಗಿಸಲು ಪ್ರಯತ್ನಿಸಲಾಗುವುದು ಎಂದು ಸಚಿವ ಜಗದೀಶ್ ಶೆಟ್ಟರ್ ಹೇಳಿದರು.
ಪ್ರವಾಹದಿಂದ ಸಂತ್ರಸ್ತರಾಗಿರುವ ಕುಟುಂಬಗಳಿಗೆ ಇದೇ ಮೊದಲ ಬಾರಿಗೆ ಹೆಚ್ಚಿನ ಪರಿಹಾರವನ್ನು ಘೋಷಿಸಲಾಗಿದೆ. ಆದಷ್ಟು ಬೇಗನೆ ಎಲ್ಲ ಕುಟುಂಬಗಳಿಗೆ ಪರಿಹಾರ ತಲುಪಿಸಲಾಗುವುದು ಎಂದರು.
ಅನೇಕ ಜನರು ಹಿಂದೇಟು ಹಾಕುತ್ತಿದ್ದರೂ ಮುಖ್ಯಮಂತ್ರಿಯಾಗಿ ಕೂಡ ಕಿತ್ತೂರು ಉತ್ಸವವನ್ನು ಉದ್ಘಾಟಿಸಿದ್ದೇನೆ. ಕಿತ್ತೂರು ಅನ್ನು ವಿಶೇಷ ಪ್ರಕರಣ ಎಂದು ಪರಿಗಣಿಸಿ ತಾಲ್ಲೂಕು ಎಂದು ಘೋಷಣೆ ಮಾಡಿದ್ದೆ ಎಂದು ಸಚಿವರು ಸ್ಮರಿಸಿಕೊಂಡರು.
ಶಾಸಕ ಮಹಾಂತೇಶ ಕೌಜಲಗಿ ಅವರು ಮಾತನಾಡಿ, ಪ್ರತಿವರ್ಷದಂತೆ ಮೂರು ದಿನಗಳ ಉತ್ಸವ ಇರಲಿ. ಅವುಗಳ ಜತೆಗೆ ಕ್ರೀಡೆ, ಕಲೆ, ಸಾಹಿತ್ಯ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ಹಮ್ಮಿಕೊಳ್ಳಬೇಕು ಎಂದರು.

ಒಂದು ಕೋಟಿ ರೂಪಾಯಿ ನೀಡಲು ಸಿಎಂ ಸಮ್ಮತಿ:

ಇದೇ ಸಂದರ್ಭದಲ್ಲಿ ಮಾತನಾಡಿದ ಕಿತ್ತೂರು ಶಾಸಕ ಮಹಾಂತೇಶ ದೊಡ್ಡಗೌಡರ, ಕಳೆದ ಬಾರಿ ಉತ್ಸವಕ್ಕೆ ಸರ್ಕಾರ ಒಂದು ಕೋಟಿ ರೂಪಾಯಿ ಬಿಡುಗಡೆ ಮಾಡಿದೆ. ಅದೇ ರೀತಿ ಈ ವರ್ಷ ಎರಡು ಕೋಟಿ ರೂಪಾಯಿ ಬಿಡುಗಡೆಗೆ ಕೋರಲಾಗಿತ್ತು. ಆದರೆ ಮುಖ್ಯಮಂತ್ರಿಗಳು ಒಂದು ಕೋಟಿ ರೂಪಾಯಿ ಬಿಡುಗಡೆಗೆ ಸಮ್ಮತಿಸಿದ್ದಾರೆ ಎಂದು ಹೇಳಿದರು.
ಚೆನ್ನಮ್ಮನ ಕಿತ್ತೂರು ಅನ್ನು ಪೂರ್ಣಪ್ರಮಾಣದ ತಾಲ್ಲೂಕು ಆಗಿ ರೂಪಿಸಲು ಸರ್ಕಾರ ಎಲ್ಲ ಕ್ರಮಗಳನ್ನು ಕೈಗೊಂಡಿದೆ. ಕಿತ್ತೂರು ಅಭಿವೃದ್ಧಿ ಪ್ರಾಧಿಕಾರಕ್ಕೆ ಹೆಚ್ಚಿನ ಹಣವನ್ನು ಒದಗಿಸುವ ಮೂಲಕ ಇನ್ನಷ್ಟು ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಗುವುದು ಎಂದರು.
2089 ಸಂತ್ರಸ್ತ ಕುಟುಂಬಗಳಿಗೆ ಈಗಾಗಲೇ ಪರಿಹಾರದ ಹಣವನ್ನು ತಲುಪಿಸಲಾಗಿದ್ದು, ತಾಂತ್ರಿಕ ತೊಂದರೆಯಿಂದ ಕೆಲವರಿಗೆ ಪರಿಹಾರ ತಲುಪಿಲ್ಲ. ಅಂತಹವರಿಗೆ ಕೂಡಲೇ ಪರಿಹಾರ ಕಲ್ಪಿಸಲು ಕ್ರಮಕೈಗೊಳ್ಳಲಾಗಿದೆ ಎಂದರು.

ಪ್ರವಾಸಿತಾಣವಾಗಿ ಅಭಿವೃದ್ಧಿಪಡಿಸಿ 

ಕಿತ್ತೂರು ಕೋಟೆಯನ್ನು ಪ್ರವಾಸಿತಾಣವಾಗಿ ಅಭಿವೃದ್ಧಿಪಡಿಸಲು ಅಗತ್ಯವಿರುವ ಮೂಲಸೌಕರ್ಯಗಳನ್ನು ಒದಗಿಸಬೇಕು ಮತ್ತು ಕಿತ್ತೂರು ಅಭಿವೃದ್ಧಿ ಪ್ರಾಧಿಕಾರದ ಕಾರ್ಯಚಟುವಟಿಕೆಗಳ ಬಗ್ಗೆ ಮಾಹಿತಿ ನೀಡಬೇಕು ಎಂದು ಹಿರಿಯ ನಾಗರಿಕರು ಮನವಿ ಮಾಡಿಕೊಂಡರು.
ಕಿತ್ತೂರು, ಸಂಗೊಳ್ಳಿ ಹಾಗೂ ಬೆಳವಡಿ ಉತ್ಸವದ ಮಾದರಿಯಲ್ಲಿ ಅಮಟೂರ ಬಾಳಪ್ಪ ಉತ್ಸವವನ್ನು ಪ್ರಾರಂಭಿಸಬೇಕು ಎಂದು ಚಂದ್ರಗೌಡ ಪಾಟೀಲ ಒತ್ತಾಯಿಸಿದರು.
ಕೋಟೆ ನೋಡಲು ಆಗಮಿಸುವ ಪ್ರವಾಸಿಗರು ನಿರಾಶರಾಗುತ್ತಿದ್ದು, ಕೋಟೆಯನ್ನು ಹಾಗೂ ಸುತ್ತಮುತ್ತಲಿನ ಪ್ರದೇಶವನ್ನು ಅಭಿವೃದ್ಧಿಪಡಿಸಬೇಕು; ಈ ಬಾರಿಯ ಉತ್ಸವದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳ ಜತೆಗೆ ಕೃಷಿ ಸಂಬಂಧಿತ ವಿಚಾರಸಂಕಿರ ಏರ್ಪಡಿಸಬೇಕು ಎಂದು ಸಾರ್ವಜನಿಕರು ಸಲಹೆ ನೀಡಿದರು.
ಯ.ರು.ಪಾಟೀಲ ಮಾತನಾಡಿ, ಪ್ರವಾಹದಿಂದ ಜನರು ಸಂಕಷ್ಟದಲ್ಲಿರುವುದರಿಂದ ಈ ಬಾರಿಯ ಉತ್ಸವವನ್ನು ಸರಳವಾಗಿ ಆಚರಿಸುವ ಬಗ್ಗೆ ತೀರ್ಮಾನಿಸಬೇಕಿದೆ ಎಂದರು.
ವರ್ಣರಂಜಿತ ಅಥವಾ ಅದ್ಧೂರಿ ಬದಲಾಗಿ ಅರ್ಥಪೂರ್ಣ ರೀತಿಯಲ್ಲಿ ಉತ್ಸವ ಆಚರಿಸಬೇಕು. ಸರ್ಕಾರ ನೀಡುವ ಅನುದಾನದಲ್ಲಿ ಸ್ವಲ್ಪ ಪ್ರಮಾಣವನ್ನು ಸಂತ್ರಸ್ತರಿಗೆ ನೀಡುವ ಬಗ್ಗೆ ಆಲೋಚನೆ ಮಾಡಬೇಕಿದೆ ಎಂದು ಅಭಿಪ್ರಾಯಪಟ್ಟರು.

  ವಿಜೃಂಭಣೆಯ ಉತ್ಸವ ಆಗಲಿ:

ಈ ಭಾಗದ ಪ್ರಮುಖ ಉತ್ಸವವಾಗಿರುವುದರಿಂದ ಪ್ರತಿವರ್ಷದಂತೆ ವಿಜೃಂಭಣೆಯಿಂದ ಮತ್ತು ಚೆನ್ನಮ್ಮನ ಸಾಹಸಗಾಥೆ ಯುವಪೀಳಿಗೆಗೆ ಪರಿಚಯಿಸಲು ಮೂರು ದಿನಗಳ ಕಾಲ ಉತ್ಸವ ನಡೆಸಬೇಕು ಎಂದು ಕೆಲವರು ಅಭಿಪ್ರಾಯಪಟ್ಟರು.
ಕಿತ್ತೂರು ಉತ್ಸವಕ್ಕೆ ಪ್ರತಿವರ್ಷ ಒಂದು ಕೋಟಿ ರೂಪಾಯಿ ಅನುದಾನವನ್ನು ನಿಗದಿತ ಅವಧಿಯಲ್ಲಿ ಬಿಡುಗಡೆಗೊಳಿಸಬೇಕು ಎಂದು ಹೇಳಿದರು.
ಜಿಲ್ಲಾಧಿಕಾರಿ ಡಾ.ಎಸ್.ಬಿ.ಬೊಮ್ಮನಹಳ್ಳಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ಮತ್ತಿತರರು ಉಪಸ್ಥಿತರಿದ್ದರು.
ಬೈಲಹೊಂಗಲ ಉಪ ವಿಭಾಗಾಧಿಕಾರಿ ಶಿವಾನಂದ ಭಜಂತ್ರಿ ಸ್ವಾಗತಿಸಿ, ಉತ್ಸವದ ಹಿನ್ನೆಲೆಯಲ್ಲಿ ರಚಿಸಲಾಗುವ ವಿವಿಧ ಸಮಿತಿಗಳ ರಚನೆಯ ಕುರಿತು ತಿಳಿಸಿದರು.
ಸಾನಿಧ್ಯ ವಹಿಸಿದ್ದ ಕಲ್ಮಠದ ಸ್ವಾಮೀಜಿಗಳು ಆಶೀರ್ವಚನ ನೀಡಿದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button