Kannada NewsKarnataka News

4 ವೈದ್ಯಕೀಯ ಕಾಲೇಜು ನಿರ್ಮಾಣದಲ್ಲಿ ಅಕ್ರಮ; ತನಿಖೆ ವರದಿ ನಿರೀಕ್ಷಿಸಿ ಗುತ್ತಿಗೆದಾರರ ಬಿಲ್ ಪಾವತಿ: ಮುಖ್ಯಮಂತ್ರಿ ಸಿದ್ದರಾಮಯ್ಯ

ಪ್ರಗತಿವಾಹಿನಿ ಸುದ್ದಿ, ಹಾವೇರಿ : ವೈದ್ಯಕೀಯ ಕಾಲೇಜುಗಳು ಪ್ರಾರಂಭ ಆಗಿರುವುದರಿಂದ ತನಿಖೆಯು ಮುಂದುವರಿಯಲಿದ್ದರೂ, ಕೆಲಸ ಮಾಡಿರುವ ಗುತ್ತಿಗೆದಾರರ ಬಾಕಿ ಬಿಲ್ ಗಳನ್ನು ಷರತ್ತುಬದ್ಧವಾಗಿ ತನಿಖೆ ವರದಿಯನ್ನು ನಿರೀಕ್ಷಿಸಿ ಪಾವತಿಸಲು ಸಚಿವ ಸಂಪುಟದಲ್ಲಿ ತೀರ್ಮಾನಿಸಲಾಗಿದೆ. ಕಾಲೇಜುಗಳ ಕಾಮಗಾರಿ ನಿಲ್ಲಬಾರದು ಎಂಬ ದೃಷ್ಟಿಯಿಂದ ಈ ತೀರ್ಮಾನ ಕೈಗೊಂಡಿರುವುದಾಗಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಅವರು ಇಂದು ಮಾಧ್ಯಮದವರೊಂದಿಗೆ ಮಾತನಾಡುತ್ತಾ, ರಾಜ್ಯದ 4 ವೈದ್ಯಕೀಯ ಕಾಲೇಜುಗಳ ನಿರ್ಮಾಣದಲ್ಲಿ ಆಗಿರಬಹುದಾದ ಅಕ್ರಮದ ತನಿಖೆಗೆ ಸಂಬಂಧಿಸಿದ ಪ್ರಶ್ನೆಗೆ ಉತ್ತರಿಸಿದರು.

ಭ್ರಷ್ಟಾಚಾರ ನಿಗ್ರಹಕ್ಕೆ ಕ್ರಮ:

ಈಗಿನ ಸರ್ಕಾರದಲ್ಲಿಯೂ ಭ್ರಷ್ಟಾಚಾರ ನಡೆಯುತ್ತಿರುವ ಬಗ್ಗೆ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿ, ಭ್ರಷ್ಟಾಚಾರವನ್ನು ಕಡಿಮೆ ಮಾಡುವ ಉದ್ದೇಶ ಸರ್ಕಾರಕ್ಕಿದೆ. ಆದ್ದರಿಂದ ಭ್ರಷ್ಟಾಚಾರದಲ್ಲಿ ತೊಡಗಿರುವವರನ್ನು ಪತ್ತೆಹಚ್ಚಿ ಶಿಕ್ಷಿಸುವ ಕೆಲಸವನ್ನು ಮಾಡುತ್ತೇವೆ ಎಂದು ತಿಳಿಸಿದರು.

ಅಕ್ಕಿ ಕೊರತೆ ಇಲ್ಲ

ಹಿಂದುಳಿದ ವರ್ಗಗಳ ವಸತಿ ನಿಲಯಗಳಿಗೆ ಅಕ್ಕಿ ಕೊರತೆ ಕಾಡುತ್ತಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿ, ಅಕ್ಕಿ ಹಾಸ್ಟೆಲ್ ಗಳಿಗಾಗಲಿ, ಫಲಾನುಭವಿಗಳಿಗಾಗಲಿ ನೀಡುವ ಅಕ್ಕಿಸರಬರಾಜಿಗೆ ಕೊರತೆ ಇಲ್ಲ ಎಂದು ಮುಖ್ಯಮಂತ್ರಿಗಳು ಸ್ಪಷ್ಟಪಡಿಸಿದರು.

ಮಟ್ಕಾ ದಂಧೆ , ಪರಿಶೀಲಿಸಿ ಕ್ರಮ

ಹಾವೇರಿ ಜಿಲ್ಲೆಯಲ್ಲಿ ಮಟ್ಕಾ ದಂಧೆ ನಡೆಯುತ್ತಿರುವ ಬಗ್ಗೆ ಮಾಹಿತಿ ಕೋರಿದ್ದಕ್ಕೆ ಉತ್ತರಿಸಿದ ಮುಖ್ಯಮಂತ್ರಿಗಳು, ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದರು.

ಮರಳು ದಂಧೆ ವಿರುದ್ಧ ಕ್ರಮ

ತುಂಗಭದ್ರಾ ನದಿದಂಡೆಯಲ್ಲಿ ಮರಳು ದಂಧೆ ಅವ್ಯಾಹತವಾಗಿ ನಡೆಯುತ್ತಿರುವ ಬಗ್ಗೆ ಪ್ರಶ್ನಿಸಲಾಗಿ, ಮರಳು ದಂಧೆ ನಡೆಯುತ್ತಿದ್ದಲ್ಲಿ , ಕಾರಣಕರ್ತರನ್ನು ಪತ್ತೆಹಚ್ಚಿ ಕಠಿಣ ಕ್ರಮ ಕೈಗೊಳ್ಳಲಾಗುವುದು. ಅಕ್ರಮ ಮರಳು ದಂಧೆಯನ್ನು ನಿಲ್ಲಿಸಲಾಗುವುದು ಎಂದರು.

ಕೇಂದ್ರದಿಂದ ಬರಪರಿಹಾರ ಬಂದಿಲ್ಲ

ಸಂಕಷ್ಟದಲ್ಲಿರುವ ರೈತರಿಗೆ ಬರಪರಿಹಾರ ಸಮರ್ಪಕವಾಗಿ ತಲುಪುತ್ತಿಲ್ಲ ಎಂಬುದಕ್ಕೆ ಪ್ರತಿಕ್ರಿಯೆ ನೀಡಿ, ಸರ್ಕಾರ 5 ತಿಂಗಳ ಹಿಂದೆ ಕೇಂದ್ರ ಸರ್ಕಾರಕ್ಕೆ ಮೂರು ಮನವಿಗಳನ್ನು ಸಲ್ಲಿಸಿದೆ. 35 ಸಾವಿರ ಕೋಟಿ ರೂ.ಗಳ ಬೆಳೆ ನಷ್ಟವಾಗಿದ್ದು, ಎನ್ ಡಿ ಆರ್ ಎಫ್ ಮಾರ್ಗಸೂಚಿಗಳ ಪ್ರಕಾರ , ರಾಜ್ಯ ಸರ್ಕಾರ 18171 ಕೋಟಿ ರೂ.ಗಳ ಬರಪರಿಹಾರವನ್ನು ಕೇಂದ್ರಕ್ಕೆ ಕೋರಿದೆ. ಆದರೆ ಇಂದಿನವರೆಗೆ ಕೇಂದ್ರದಿಂದ ಹಣಬಿಡುಗಡೆ ಸೇರಿದಂತೆ ಯಾವುದೇ ಕ್ರಮ ಆಗಿಲ್ಲ ಎಂದರು.

ಸಿಎಂ ಹಾಗೂ ಡಿಸಿಎಂ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಲಿದ್ದಾರೆಯೇ ಹಾಗೂ ಕಾಂಗ್ರೆಸ್ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆಯ ಬಗ್ಗೆ ಉತ್ತರಿಸಿ, ಜಿಲ್ಲಾ ಮಟ್ಟದಲ್ಲಿ ಸ್ಥಳೀಯ ನಾಯಕರು, ಶಾಸಕರು, ಪಕ್ಷದ ಸಮಿತಿಯವರು ಸೂಚಿಸಿದ ಅಭ್ಯರ್ಥಿಯು ಚುನಾವಣೆಯಲ್ಲಿ ಸ್ಪರ್ಧಿಸುತ್ತಾರೆ. ಲೋಕಸಭೆ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಗಳ ಆಯ್ಕೆ ಬಗ್ಗೆ ಪ್ರಾಥಮಿಕ ಸಭೆಯಾಗಿದ್ದು, ಮೊದಲ ಪಟ್ಟಿ ಸಧ್ಯದಲ್ಲಿಯೇ ಬಿಡುಗಡೆ ಮಾಡಲಿರುವುದಾಗಿ ತಿಳಿಸಿದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button