Wanted Tailor2
Cancer Hospital 2
Bottom Add. 3

 ಭಗವದ್ಗೀತೆ ಅಭಿಯಾನದ ಹಿಂದೆ 4 ಉದ್ದೇಶ – ಸ್ವರ್ಣವಲ್ಲೀ ಸ್ವಾಮೀಜಿ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ವ್ಯಕ್ತಿತ್ವ ಪುನರುತ್ಥಾನ​, ನೈತಿಕತೆ ಪುನರುತ್ಥಾನ​, ಸಾಮಾಜಿಕ ಸಾಮರಸ್ಯ​ ಹಾಗೂ ರಾಷ್ಟ್ರೀಯ ಭಾವೈಕ್ಯತೆ​ – ಈ 4 ಉದ್ದೇಶ​ವಿಟ್ಟುಕೊಂಡು ಕಳೆದ 17 ವರ್ಷಗಳಿಂದ ನಿರಂತರವಾಗಿ ಭಗವದ್ಗೀತೆ ಅಭಿಯಾನ ನಡೆಸಿಕೊಂಡು ಬರಲಾಗುತ್ತಿದೆ ಎಂದು ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನದ ಶ್ರೀಮದ್ ಜಗದ್ಗುರು ಶಂಕರಾಚಾರ್ಯ ಶ್ರೀ ಗಂಗಾಧರೇಂದ್ರ ಸರಸ್ವತಿ ಸ್ವಾಮಿಗಳು ಹೇಳಿದ್ದಾರೆ.

ಬೆಳಗಾವಿಯಲ್ಲಿ ನವೆಂಬರ್ 21ರಿಂದ ಡಿಸೆಂಬರ್ 23ರ ವರೆಗೆ ನಡೆಯಲಿರುವ ರಾಜ್ಯ ಮಟ್ಟದ ಭಗವದ್ಗೀತೆ ಅಭಿಯಾನದ ಹಿನ್ನೆಲೆಯಲ್ಲಿ ಶುಕ್ರವಾರ ನಗರದ ಗುರುದೇವ ರಾನಡೆ ಮಂದಿರದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ವಿವಿಧ ಸಮಾಜಗಳ ಪ್ರಮುಖರನ್ನು ಉದ್ದೇಶಿಸಿ ಅವರು ಮಾತನಾಡುತ್ತಿದ್ದರು.

ವೈಜ್ಞಾನಿಕವಾಗಿ​ ನಾವು ಮುಂದೆ ಹೋಗುತ್ತಿ​ದ್ದೇವೆ.  ಆದರೆ ಮಾನಸಿಕ ಆರೋಗ್ಯ​ ಸಮಸ್ಯೆ ಎದುರಿಸುತ್ತಿದ್ದೇವೆ.  ಮಾನಸಿಕ ಒತ್ತಡಗಳಿಂದ ಅನೇಕ ರೋಗ​ಗಳನ್ನು ಅನುಭವಿಸುತ್ತಿದ್ದೇವೆ.  ಮಧುಮೇಹ, ಅಧಿಕ ರಕ್ತದೊತ್ತಡ, ಹೃದಯಾಘಾತ ಮೊದಲಾದವು ಹೆಚ್ಚುತ್ತಿವೆ. ಇದಕ್ಕೆಲ್ಲ ಭಗವದ್ಗೀತೆಯಲ್ಲಿ ಪರಿಹಾರವಿದೆ. ಜನ​ರ ಮನಸ್ಥಿತಿ ಸರಿ ಇಲ್ಲದಿದ್ದರೆ ಏನೇ ಮಾಡಿದರೂ ಪ್ರಯೋಜನವಿಲ್ಲ ಎಂದು ಶ್ರೀಗಳು ಹೇಳಿದರು. 

​ ಅಪರಾಧ ಪ್ರಕರಣ​ಗಳು ವರ್ಷದಿಂದ ವರ್ಷಕ್ಕೆ ಜಾಸ್ತಿಯಾ​ಗುತ್ತಿವೆ. ಅಪರಾಧ ನಡೆದ ನಂತರ ಏನು ಮಾಡಬೇಕು ಎನ್ನುವುದಕ್ಕಿಂತ ಅಪರಾಧ ಮಾಡದೆ ಇರುವಂತೆ ಮಾಡುವುದ​ಕ್ಕಾಗಿ ಭಗವದ್ಗೀತೆ ಅಭಿಯಾನ ಮಾಡಲಾಗುತ್ತಿದೆ. ಅಪರಾಧದ ಮೂಲವನ್ನೇ ಚಿವುಟಿ ಹಾಕುವುದು​ ಇದರ ಉದ್ದೇಶ. ಆಸೆ ಮತ್ತು ದ್ವೇಷ ಅಪರಾಧಕ್ಕೆ ಮೂಲ​. ಅಪರಾಧ ಪೃವೃತ್ತಿ​ಯ ಮೂಲವನ್ನೇ ತೆಗೆದುಹಾಕಲು ಭಗವದ್ಗೀತೆ​ ಸಹಕಾರಿಯಾಗಿದೆ ಎಂದು ಅವರು ಹೇಳಿದರು.

ಧರ್ಮದ ಪಂಥಗಳಲ್ಲಿ ಏಕತೆಯನ್ನು ಬೆಸೆಯುವುದು​ ಸಹ ಭಗವದ್ಗೀತೆಯ ಉದ್ದೇಶ. ಭಗವದ್ಗೀತೆ ಎಲ್ಲರನ್ನೂ ಒಟ್ಟಿಗೆ ತರುತ್ತದೆ​. ಮಕ್ಕಳು ಅಡ್ಡ ದಾರಿಗೆ ಹೋಗುವುದ​ನ್ನು ತಡೆಯುತ್ತದೆ. ದೇಶದಲ್ಲಿ​ ಹೆಚ್ಚುತ್ತಿರುವ ನಕ್ಸಲ್ ಚಟುವಟಿಕೆ ಸೇರಿದಂತೆ ಅನೇಕ ದೇಶವಿರೋಧಿ ಚಟುವಟಿಕೆಗಳ​ನ್ನು ನಿಯಂತ್ರಿಸಬಹುದು. ಕಳೆದ 17ವರ್ಷದಲ್ಲಿ​ ಭಗವದ್ಗೀತೆ ಅಭಿಯಾನದಿಂದ ನಮಗೆ ಸಮಾಧಾನಕರ ಫಲಿತಾಂಶ ಸಿಕ್ಕಿದೆ​. ​ಭಗವದ್ಗೀತೆ ಅಭಿಯಾನಕ್ಕೆ ಎಲ್ಲರ ಸಹಕಾರ ಅಗತ್ಯ​. ಎಲ್ಲ ಸಮುದಾಯಗಳು ಕೂಡ ಭಾಗವಹಿಸಬೇಕು​. ಗಣೇಶೋತ್ಸವದ ರೀತಿಯಲ್ಲಿ ಗೀತಾ ಜಯಂತಿ ಆಚರಣೆಯಾಗಬೇಕು​ ಎನ್ನುವ ಉದ್ದೇಶವಿಟ್ಟುಕೊಂಡಿದ್ದೇವೆ  ​ಎಂದೂ ಶ್ರೀಗಳು ತಿಳಿಸಿದರು.

ನವೆಂಬರ್ 21ರಂದು ಅಭಿಯಾನದ ಉದ್ಘಾಟನೆ ನಡೆಯಲಿದೆ. ಅಲ್ಲಿಂದ ಡಿಸೆಂಬರ್ 21ರ ವರೆಗೆ ರಾಜ್ಯಾದ್ಯಂತ ಭಗವದ್ಗೀತೆ ಪಠಣ, ಪ್ರವಚನ ಮೊದಲಾದ ಕಾರ್ಯಕ್ರಮಗಳು ನಡೆಯಲಿವೆ. ​ಡಿಸೆಂಬರ್ 2 ​ರಂದು ಬೆಳಗಾವಿಯಲ್ಲಿ ಭಗವದ್ಗೀತೆ ಮತ್ತು ಕಾನೂನು ಕಾರ್ಯಕ್ರಮ ನಡೆಯುವುದು. ಡಿಸೆಂಬರ್ 18ರಂದು ಗೀತಾ ಸಮನ್ವಯ ಎನ್ನುವ ವಿಶೇಷ ಕಾರ್ಯಕ್ರಮ ನಡೆಯಲಿದೆ. ಡಿಸೆಂಬರ್ 22ರಂದು ಶಾಲಾ ಮಕ್ಕಳಿಗಾಗಿ ಭಗವದ್ಗೀತೆ ಶ್ಲೋಖ ಪಠಣ ಸ್ಪರ್ಧೆ ನಡೆಯುವುದು. ಡಿಸೆಂಬರ್ 23ರಂದು ಮಹಾಸಮರ್ಪಣೆ ನಡೆಯಲಿದೆ ಎಂದು ಸ್ವಾಮಿಗಳು ಹೇಳಿದರು. 

​ಬೆಳಗಾವಿ ಒಂದು ಪುಣ್ಯ ಭೂಮಿ​. ಅನೇಕ ಮಹಾತ್ಮರು​ ಇಲ್ಲಿಗೆ ಬಂದು ಹೋಗಿದ್ದಾರೆ​. ಸ್ವಾಮಿ ವಿವೇಕಾನಂದ, ಮಹಾತ್ಮಾ ಗಾಂ​ಧೀಜಿ, ಗುರುದೇವ ರಾನಡೆ ಸೇರಿದಂತೆ​ ಹಲವರು ಓಡಾಡಿದ ಪವಿತ್ರ ನೆಲ​ ಇದು. ಈ ಭೂಮಿಯಲ್ಲಿ ಭಗವದ್ಗೀತೆ ಅಭಿಯಾನ​ ಯಶಸ್ವಿಯಾಗಿ ನಡೆಯಬೇಕು. ಆದ್ಯಾತ್ಮ ಜಾಗೃತವಾಗಿರಬೇಕು​ ಎಂದು ಅವರು ಆಶಿಸಿದರು.

​ಗುರುದೇವ ರಾನಡೆ ಮಂದಿರದ ಗೌರವ ಕಾರ್ಯದರ್ಶಿ ಎಂ.ಬಿ.ಜಿರಲಿ, ಮಾಜಿ ಶಾಸಕ ಅನಿಲ ಬೆನಕೆ, ವಿಧಾನ ಪರಿಷತ್ ಮಾಜಿ ಸದಸ್ಯ ಮಹಾಂತೇಶ ಕವಟಗಿಮಠ, ಅಭಿಯಾನದ ಕಾರ್ಯಾಧ್ಯಕ್ಷ ಪರಮೇಶ್ವರ ಹೆಗಡೆ, ಕಾರ್ಯದರ್ಶಿ ಎಂ.ಕೆ.ಹೆಗಡೆ, ಸಂಚಾಲಕ ಸುಬ್ರಹ್ಮಣ್ಯ ಭಟ್, ಉಪಾಧ್ಯಕ್ಷೆ ಪೂರ್ಣಿಮಾ ಹೆಗಡೆ, ವಿವಿಧ ಸಮಿತಿಗಳ ಪ್ರಮುಖರಾದ ರಾಮನಾಥ ನಾಯಕ, ಗಣೇಶ ಹೆಗಡೆ, ಕೃಷ್ಣ ಭಟ್, ವಿನಾಯಕ ಹೆಗಡೆ, ಗೀತಾ ಹೆಗಡೆ, ಸುಧಾ ಹೆಗಡೆ, ವಸುಮತಿ ಹೆಗಡೆ ಮೊದಲಾದವರು ಇದ್ದರು.  

Bottom Add3
Bottom Ad 2

You cannot copy content of this page