ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಬೆಳೆಯುತ್ತಿರುವ ಬೆಳಗಾವಿ ಮಹಾನಗರ ಈಗ ಎಲ್ಲ ರೀತಿಯಿಂದಲೂ ಸ್ಮಾರ್ಟ್ ಆಗುತ್ತಿದೆ. ಕೇಂದ್ರ ಮತ್ತು ರಾಜ್ಯ ಸರಕಾರಗಳ ಜಂಟಿ ಯೋಜನೆ ಸ್ಮಾರ್ಟ್ ಸಿಟಿಯಿಂದಾಗಿ ನಗರದ ರಸ್ತೆಗಳೂ ವೈಟ್ ಟಾಪಿಂಗ್ ಆಗುತ್ತಿವೆ.
ಇದೀಗ ಇದಕ್ಕೆ ತಕ್ಕಂತೆ ರಸ್ತೆಗಳ ಸ್ವಚ್ಛತೆಯ ವಿಧಾನವೂ ಸ್ಮಾರ್ಟ್ ಆಗಲಿದೆ. ರಸ್ತೆಗಳ ಸ್ವಚ್ಛತೆಗಾಗಿ 4 ಅತ್ಯಾಧುನಿಕ ಸ್ವೀಪಿಂಗ್ ಯಂತ್ರಗಳು ಬೆಳಗಾವಿಗೆ ಬರಲಿದೆ. ಬೆಳಗಾವಿ ಸ್ಮಾರ್ಟ್ ಸಿಟಿ ಯೋಜನೆಯ ಹಣದಲ್ಲಿ ಸ್ವೀಪಿಂಗ್ ಯಂತ್ರಗಳನ್ನು ಖರೀದಿಸಲಾಗುತ್ತದೆ. ಮಹಾನಗರ ಪಾಲಿಕೆ ಅವುಗಳ ನಿರ್ವಹಣೆ ಮಾಡುತ್ತದೆ. ಅಂದರೆ, ಸ್ಮಾರ್ಟ್ ಸಿಟಿ ಯೋಜನೆಯಿಂದ ಮಹಾನಗರ ಪಾಲಿಕೆಗೆ 4 ಸ್ವೀಪಿಂಗ್ ಯಂತ್ರಗಳನ್ನು ಕಾಣಿಕೆ ನೀಡಲಾಗುತ್ತದೆ.
ಸ್ವೀಪಿಂಗ್ ಯಂತ್ರಗಳ ಖರೀದಿಗಾಗಿ ಮಹಾನಗರ ಪಾಲಿಕೆಗೆ ಹಣ ನೀಡುವಂತೆ ಪಾಲಿಕೆಯ ಆಡಳಿತಾಧಿಕಾರಿಯೂ ಆಗಿರುವ ಪ್ರಾದೇಶಿಕ ಆಯುಕ್ತರು ಸೂಚಿಸಿದ್ದರು. ಈ ಹಿನ್ನೆಲೆಯಲ್ಲಿ ಸ್ಮಾರ್ಟ್ ಸಿಟಿ ಯೋಜನೆಯ ಬೋರ್ಡ್ ಮೀಟಿಂಗ್ ನಲ್ಲಿ ಪ್ರಸ್ತಾವನೆ ಇಟ್ಟು ಒಪ್ಪಿಗೆ ಪಡೆಯಲಾಗಿದೆ.
ಇದರ ಒಟ್ಟೂ ವೆಚ್ಚ ಸುಮಾರು 2.50 ಕೋಟಿ ರೂ. ಆಗಲಿದ್ದು, ಅಷ್ಟು ಹಣವನ್ನು ಮಹಾನಗರ ಪಾಲಿಕೆಗೆ ನೀಡಲಾಗುತ್ತಿದೆ. ಪಾಲಿಕೆಯೇ ನಗರಕ್ಕೆ ಸೂಕ್ತವಾಗುವಂತಹ ಸ್ವೀಪಿಂಗ್ ಯಂತ್ರವನ್ನು ಖರೀದಿಸಲಿದೆ ಎಂದು ಸ್ಮಾರ್ಟ್ ಸಿಟಿ ಎಂಡಿ ಶಶಿಧರ ಕುರೇರ ತಿಳಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ