Kannada NewsKarnataka NewsLatest

ಸಾವಳಗಿಯ ಜಗದ್ಗುರು ಶ್ರೀ ಸಿದ್ದರಾಮ ಮಹಾಸ್ವಾಮಿಗಳ 44 ನೇ ಪುಣ್ಯಾರಾಧನೆ

ಲೇಖನ, ಮಾಹಿತಿ: ವೇ. ಚನ್ನವೀರಸ್ವಾಮಿ ಹಿರೇಮಠ, ಕಡಣಿ, ಗದಗ

ಕಾಶಿ ಕಾಬಾ ಒಂದೇ. ಈಶ್ವರ-ಅಲ್ಲಾ ಒಬ್ಬನೇ. ಪುರಾಣ- ಕುರಾನ್‌ ಒಂದೇ. ಎಂಬ ಹಿಂದೂ ಮುಸ್ಲಿಂ ಸಾಮರಸ್ಯದ ಸುಂದರ ಸಂದೇಶದ ನಿದರ್ಶನವನ್ನು ಸಾವಳಗಿಯ ಶ್ರೀ ಶಿವಲಿಂಗೇಶ್ವರ ಸಿದ್ಧ ಸಂಸ್ಥಾನ ಮಠದಲ್ಲಿ ಕಾಣಬಹುದು. ಸಾವಳಗಿಯ ಜಗದ್ಗುರು ಶಿವಲಿಂಗೇಶ್ವರ ಹಾಗೂ ಕಲಬುರ್ಗಿಯ ಖಾಜಾ ಬಂದೇನವಾಜರ ಸ್ನೇಹದ ಸಂಕೇತವಿದೆ. ಸಾವಳಗಿಯ ಶ್ರೀಮಠದಿಂದ ಭಾರತದಜಾತ್ಯಾತೀತತತ್ವಕ್ಕೆಜೀವಂತಿಕೆ ಬಂದಿದೆ. ದೇಶದ ವಿವಿಧ ಭಾಗಗಳಲ್ಲಿ ಕೋಮು ಗಲಭೆಗಳು ಕಂಡು ಬರುತ್ತಿರುವ ಇಂದಿನ ಸಂದರ್ಭದಲ್ಲಿ ಸಾವಳಗಿ ಮಠವು ಬೀರುವ ಭಾವೈಕ್ಯತೆಯ ಬೆಳಕು ರಾಷ್ಟ್ರೀಯ ಐಕ್ಯತೆಯತ್ತ ಸಾಗಲು ದಾರಿದರ್ಶನವಾಗಬಹುದು.
ಈ ಮಠವು ಗೋಕಾಕ ತಾಲೂಕಿನಿಂದ 16 ಕಿಲೋಮೀಟರ್‌ ಅಂತರದಲ್ಲಿದೆ. ಗೋಕಾಕ್‌ ರೋಡ್‌ರೈಲು ನಿಲ್ದಾಣದಿಂದ 5 ಕಿಲೋಮೀಟರ ದೂರದಲ್ಲಿದೆ. ಮೊದಲ ನೋಟದಲ್ಲಿ ಮಠವೋ ಮಸೀದಿಯೋ ಎಂಬ ಸಂದೇಹ ಬರುವುದು ಸಹಜ. ಮಠದ ವಿನ್ಯಾಸವು ಮುಸ್ಲಿಂ ವಾಸ್ತು ಶಿಲ್ಪಕ್ಕೆ ಸಂಬAಧಿಸಿರುವುದೇ ಇದಕ್ಕೆಕಾರಣ. ಕಮಾನುಗಳು ಗುಮ್ಮಟ, ಮಿನಾರ್ಗಳು ಮುಸ್ಲಿಂ ಸಂಸ್ಕೃತಿದ್ಯೋತಕವಾಗಿವೆ. ಮಠದ ಎಡ- ಬಲ ಹಾಗೂ ಹಿಂಭಾಗಗಳು ಹಿಂದೂ ವಾಸ್ತುಶಿಲ್ಪದ ವಿನ್ಯಾಸವನ್ನು ಹೊಂದಿವೆ. ಹೀಗೆ ಹಿಂದೂ-ಮುಸ್ಲಿಂ ವಾಸ್ತುಶಿಲ್ಪದ ಸಂಗಮವನ್ನು ಹೊಂದಿರುವುದು ಒಂದು ವೈಶಿಷ್ಟ್ಯ. ಮಠದ ಕೆಳಭಾಗದಲ್ಲಿಯ ನೆಲಗವಿಯಲ್ಲಿ ಶಿವಲಿಂಗೇಶ್ವರರ ನಿರ್ವಿಕಲ್ಪ ಸಮಾಧಿಯಿದೆ. ಅದರ ಮೇಲ್ಭಾಗದಲ್ಲಿ ಮುಸ್ಲಿಂ ವಾಸ್ತು ಶೈಲಿಯ ಕಮಾನುಗಳು ಗುಮ್ಮಟ ಮಿನಾರುಗಳಿವೆ. ಇದು ಹಿಂದೂ ಮುಸ್ಲಿಂ ಧರ್ಮ ಸಮನ್ವಯ ಸಾರುವ ಇನ್ನೊಂದು ವೈಶಿಷ್ಟö್ಯವಾಗಿದೆ.
ಉತ್ತರ ಭಾರತದಲ್ಲಿ ಬಾಬಾ- ನಾನಕ- ಕಬೀರದಾಸರನ ಒಳಗೊಂಡ ಸತ್ಪುರುಷರು ಹಿಂದೂ ಮುಸಲ್ಮಾನರಲ್ಲಿ ಪರಸ್ಪರ ಪ್ರೇಮ ವಿಶ್ವಾಸ ಐಕ್ಯವನ್ನೇರ್ಪಡಿಸಲು ಯತ್ನಿಸಿದಂತೆ ಕನ್ನಡ ನಾಡಿನಲ್ಲಿ ಸಾವಳಗಿಯ ಶ್ರೀ ಶಿವಲಿಂಗೇಶ್ವರ ಮಹಾಸ್ವಾಮಿಗಳು ಭಿನ್ನಧರ್ಮಗಳ ಸಮನ್ವಯವನ್ನು ಸಾಧಿಸಲುತಮ್ಮ ಪ್ರಭಾವನ್ನು ಬೀರಿರುವರು. ಇಂತಹ ಭಾವೈಕ್ಯದ ಜಗದ್ಗುರು ಮಹಾ ಪೀಠಾರೋಹಣ ಮಾಡಿದವರು 15 ಮಹಾ ಮಹಿಮರು. ಪ್ರಸ್ತುತ ಜಗದ್ಗುರುಗಳಾದ ಶ್ರೀ ಮ.ನಿ.ಪ್ರ. ಜಗದ್ಗುರು ಶಿವಲಿಂಗೇಶ್ವರ ಕುಮಾರೇಂದ್ರ ಮಹಾ ಸ್ವಾಮಿಗಳವರು 15ನೆಯ ಜಗದ್ಗುರುಗಳಾಗಿದ್ದಾರೆ.
ಈ ಹಿಂದಿನ ಜಗದ್ಗುರುಗಳು ಅಂದರೆ 14 ನೆಯ ಜಗದ್ಗುರುವಾಗಿ ಬಂದವರು ಶಿವಯೋಗಿ ಸಿದ್ದರಾಮ ಸ್ವಾಮಿಗಳು. ಸಿದ್ದರಾಮ ಸ್ವಾಮಿಗಳು ಯಕ್ಕುಂಡಿಯ ಮುರುಘರಾಜೇಂದ್ರ ಸ್ವಾಮಿಗಳ ಕರಕಮಲ ಸಂಜಾತರು. ರಾಘವಾಂಕ ಚರಿತ್ರೆ, ಗುರುರಾಜ ಚರಿತ್ರೆ ಕಾವ್ಯಗಳನ್ನು ವಿರಚಿಸಿದ ಸಿದ್ದನಂಜೇಶ, ಚಿಕ್ಕನಂಜೇಶ ಕವಿಗಳ ವಂಶಜರು. ಸಾವಳಗಿಯ ಪೀಠಕ್ಕೆಜಗದ್ಗುರುವಾಗಿಬರುವ ಮುನ್ನಯಕ್ಕುಂಡಿ ವಿರಕ್ತಮಠದ ಪೀಠಾಧಿಪತಿಗಳಾಗಿದ್ದರು. ಅಲ್ಲಿದ್ದಾಗಲೇ ಹುಳು ಹತ್ತಿ ನಾಶಾವಾಗಬಹುದಾಗಿದ್ದ ಅನೇಕ ತಾಡೋಲೆ ಗ್ರಂಥಗಳನ್ನು ಪ್ರೊ. ಶಿ.ಶಿ. ಬಸನಾಳರ ಜೊತೆಗೆ ಬೆಳಕಿಗೆ ತಂದು ಖ್ಯಾತರಾದವರು. 1958 ರಲ್ಲಿ ಪ್ರಕಟವಾದ ಭೀಮಕವಿಯ ಬಸವ ಪುರಾಣ ತಾಡೋಲೆ ಕೋರಿ ಕಾಗದ ಪ್ರತಿ ಒದಗಿಸಿದವರೇ ಈ ಸಿದ್ದರಾಮ ಶಿವಯೋಗಿಗಳು.
ಧಾರವಾಡದ ಮೃತ್ಯುಂಜಯ ಶಿವಯೋಗಿಗಳ ನೇತೃತ್ವದಲ್ಲಿ ನಡೆಯುತ್ತಿದ್ದ ಶಿವಾನುಭವ ಗೋಷ್ಠಿಗಳ ಪ್ರಧಾನ ಸಂಚಾಲಕರಾಗಿ, ಸಾವಧಾನ ಪತ್ರಿಕೆಯ ವ್ಯವಸ್ಥಾಪಕ ಸಮಿತಿಯ ಕಾರ್ಯಾಧ್ಯಕ್ಷರಾಗಿ ಅನುಭವ ಮತ್ತು ಖ್ಯಾತಿಗಳನ್ನು ಪಡೆದಿದ್ದರು. 1953 ನೇ ಜನವರಿ 22ರಂದು ಸಾವಳಗಿ ಮಠದ ಪೀಠಾಧಿಕಾರ ವಹಿಸಿಕೊಂಡು ತಮ್ಮ ಶುಭ್ರಚರಿತ್ರೆ, ಸದಾಚಾರಗಳಿಂದ ಭಕ್ತರ ಮೇಲೆ ಅಪಾರ ಪ್ರಭಾವ ಬೀರಿದ್ದರು. ಜಗದ್ಗುರುಗಳ ಆಗಿದ್ದರೂ ಎನಗಿಂತ ಕಿರಿಯರಿಲ್ಲ ಶಿವಭಕ್ತರಿಗಿಂತ ಹಿರಿಯರಿಲ್ಲ ಎನ್ನುವ ಬಸವ ವಚನವನ್ನುಅಕ್ಷರ ಸಹ ಆಚರಣೆಯಲ್ಲಿ ತಂದ ಸರಳ ನಿಗರ್ವಿಮತ್ತು ಮುಗ್ಧ ಭಕ್ತಿಯಆಚಾರ ವಿಚಾರ ಸದಾಚಾರವನ್ನು ಶಿವಲಿಂಗೇಶನ ಸದ್ಭಕ್ತರು ಗುರುತಿಸಿ ಪೂಜ್ಯರ ಮೇಲೆ ಅಪಾರವಾದ ಭಕ್ತಿಯನ್ನು ಅರ್ಪಿಸಿದರು. ಜಾತಿ ಸಾಮರಸ್ಯದ ಪ್ರಯೋಗವನ್ನು ಬಸವಣ್ಣನವರು ಮಾಡಿದರುಆದರೆ ಧರ್ಮ ಸಮನ್ವಯದ ಪ್ರಯೋಗವನ್ನು ಶಿವಲಿಂಗೇಶ್ವರರು ಮಾಡಿದರು. ಕರ್ತೃ ಶಿವಲಿಂಗೇಶ್ವರನಲ್ಲಿ ಇವರಿಟ್ಟ ಭಕ್ತಿಯಂತೂ ಅಗಾಧವಾದದ್ದು. ಸ್ವತಃ ಅನುಷ್ಠಾನ ಮಾಡುತ್ತಿದ್ದರಲ್ಲದೇ ರುದ್ರಾನುಷ್ಠಾನ ಮಾಡುತ್ತಿದ್ದರು. 1978 ರಲ್ಲಿ ಲಿಂಗೈಕ್ಯರಾದರು
ಸದ್ಯದ ಪೀಠ ಪೀಠಾಧಿಪತಿಗಳಾದ ಶ್ರೀಮನ್ ಮಹಾರಾಜ ನಿರಂಜನಜಗದ್ಗುರು ಶಿವಲಿಂಗೇಶ್ವರ ಕುಮಾರೇಂದ್ರ ಮಹಾಸ್ವಾಮಿಗಳು 15ನೆಯವರಾಗಿ 1978 ಮೇ 18ರಂದು ಜಗದ್ಗುರುಗಳಾಗಿ ಬಂದನAತರ ಭವ್ಯ ಪರಂಪರೆ ಮುಂದುವರಿಸಿಕೊಂಡು ಹೊಟಿದ್ದಾರೆ. ಮಠದ ವೈಭವದ ಜಾತ್ರೆಯು ನಾಡನ ಹೊರನಾಡುಗಳ ನಾನಾ ಭಾಗದಜನರನ್ನುಆಕರ್ಷಿಸುತ್ತಲಿದೆ. ಸಂಗೀತ ಸಾಹಿತ್ಯ ಮಹಾ ಪೋಷಕರಾದ ಪೂಜ್ಯರು ಸ್ವತಃ ಸಂಗೀತಗಾರರಾಗಿದ್ದಾರೆ. ದಾಸೋಹಪ್ರೇಮಿಗಳಾದ ಇವರು ವೈವಿಧ್ಯಮಯವಾದಪ್ರಸಾದವನ್ನು ಸಿದ್ಧಪಡಿಸಿ ಭಕ್ತರಿಗೆತೃಪ್ತಿಪಡಿಸುವುದರಲ್ಲಿಇವರಿಗೆ ಮಹದಾನಂದ. ಕಾಲ ಕಾಲಕ್ಕೆ ಪರಂಪರೆಯ ಜಗದ್ಗುರುಗಳ ಸ್ಮರಿಸಿಕೊಳ್ಳುವ ಮೂಲಕ ಸಂಗೀತಉಪನ್ಯಾಸಕೀರ್ತನೆ ಪ್ರವಚನ ಸಾಂಸ್ಕೃತಿಕ ಸಮಾರಂಭಗಳನ್ನು ಏರ್ಪಡಿಸಿ ಕವಿ, ಕಲಾವಿದ ಸಾಹಿತಿಗಳಿಗೆ ವೇದಿಕೆ ನೀಡಿ ಪ್ರೋತ್ಸಾಹಿಸುವುದು ಸನ್ಮಾನಿಸಿ ಗೌರವಿಸುವದು ನಿರಂತರ ನಡೆಸಿಕೊಂಡು ಬಂದಿದ್ದಾರೆ ಅದರ ಅಂಗವಾಗಿ ಧರ್ಮಸಮನ್ವಯದ ಸಿದ್ಧಸಂಸ್ಥಾನ ಮಹಾಪೀಠ ಸಾವಳಗಿಯ 14ನೆಯ ಜಗದ್ಗುರುಗಳಾಗಿ ಬಂದ ಶಿವಯೋಗಿ ಸಿದ್ದರಾಮೇಶ್ವರರ 44ನೇ ಪುಣ್ಯರಾಧನೆ ಮತ್ತು ಗಣರಾಧನೆ ಸಮಾರಂಭವನ್ನು ಸರಳ, ಸುಂದರ ಮತ್ತು ಅರ್ಥಪೂರ್ಣವಾಗಿ ಆಚರಿಸಲಾಗುತ್ತಿದೆ.

ಕಾರ್ಯಕ್ರಮ:

ಧರ್ಮ ಸಮನ್ವಯದ ಸಿದ್ಧಸಂಸ್ಥಾನ ಮಹಾಪೀಠ ಸಾವಳಗಿಯ 14 ನೆಯ ಜಗದ್ಗುರು ಶ್ರೀ ಶಿವಯೋಗಿ ಸಿದ್ದರಾಮೇಶ್ವರರ ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ ಸೇವೆಯನ್ನು ಸ್ಮರಿಸಿಕೊಳ್ಳುವ ಉದ್ದೇಶದಿಂದ ಪೂಜ್ಯರ 44ನೇ ಪುಣ್ಯರಾಧನೆ ಮತ್ತು ಗಣರಾಧನೆ ಸಮಾರಂಭವನ್ನು ಮೇ 5 ರಂದು ಬೆಳಗಿನಿಂದ ರಾತ್ರಿಯವರೆಗೆ ದಿನಪೂರ್ತಿ ಆಚರಿಸಲಾಗುತ್ತಿದೆ.

ಮೇ 5ರಂದು ಬೆಳಗ್ಗೆ ಬ್ರಾಹ್ಮಿ ಮುಹೂರ್ತದಲ್ಲಿ ಮಹಾರುದ್ರಾಭಿಷೇಕ ಬೆಳಗ್ಗೆ 10 ಗಂಟೆಗೆ ಮಹಾಪೂಜೆ ಹಾಗೂ ಬೆಳಗ್ಗೆಯಿಂದ ರಾತ್ರಿವರೆಗೆ ಮಹಾದಾಸೋಹ ಇರುತ್ತದೆ. ಸಂಜೆ 7 ಗಂಟೆಗೆ, ಶೂನ್ಯ ಸಿಂಹಾಸನಾದೀಶ್ವರ ಶ್ರೀಮನ್ ಮಹಾರಾಜ ನಿರಂಜನ ಜಗದ್ಗುರು ಶ್ರೀ ಶಿವಲಿಂಗೇಶ್ವರ ಕುಮಾರೇಂದ್ರ ಮಹಾಸ್ವಾಮಿಗಳು ಸಾನ್ನಿಧ್ಯ ವಹಿಸಿ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ.

ಜ್ಞಾನ ಜ್ಞಾನಪೀಠ ಪ್ರಶಸ್ತಿ ಪ್ರಶಸ್ತಿ ಪುರಸ್ಕೃತ ಹಿರಿಯ ಸಾಹಿತಿ ಡಾ. ಚಂದ್ರಶೇಖರ ಕಂಬಾರ ಇವರು ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಸಾಹಿತಿ, ಹಿರಿಯ ಪತ್ರಕರ್ತ ಡಾ. ಸರ್ಜೂ ಕಾಟಕರ್ ಹಾಗೂ ಮುಖ್ಯ ಅತಿಥಿಯಾಗಿ ನ್ಯಾಯವಾದಿ ಸಾಹಿತಿ ರವೀಂದ್ರ ತೋಟಿಗೇರ ಭಾಗವಹಿಸಲಿದ್ದಾರೆ.

ಆಕಾಶವಾಣಿ ದೂರದರ್ಶನ ಕಲಾವಿದ, ಗದುಗಿನ ಶ್ರೀ ವೇದಮೂರ್ತಿ ಚೆನ್ನವೀರ ಸ್ವಾಮಿ ಹಿರೇಮಠ (ಕಡಣಿ) ಇವರಿಂದ ಕಥಾ ಕೀರ್ತನೆ ಹಾಗೂ ಸುಪ್ರಸಿದ್ಧ ಸಂಗೀತ ಕಲಾವಿದರಾದ ವಿದ್ವಾನ್ ಶಿವಕುಮಾರ ಗವಾಯಿಗಳು ಚಿಕ್ಕಹೆಸರೂರ, ಧಾರವಾಡ, ‘ಗಾನ ಭೂಷಣ’ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಗದುಗಿನ ವೀರೇಶ್ವರ ಕಿತ್ತೂರ ಅವರಿಂದ ಸಂಗೀತ ಕಾರ್ಯಕ್ರಮ ಏರ್ಪಡಿಸಲಾಗಿದೆ. ಇವರಿಗೆ ವಿಜಯ ದೊಡ್ಡಣ್ಣವರ ಗೋಕಾಕ್ ಇವರು ತಬಲಾ ಸಾಥ್ ನೀಡಲಿದ್ದಾರೆ ಕಾರ್ಯಕ್ರಮವನ್ನು ರೋಹಿಣಿ ಬಂಗಾರಿ ನಿರೂಪಿಸುವರು. ನಿವೃತ್ತ ಶಿಕ್ಷಕ ಬಾಲಶೇಖರ ಬಂದಿ, ಮೂಡಲಗಿ ಕಾರ್ಯಕ್ರಮದ ಸಂಚಾಲಕರಾಗಿದ್ದಾರೆ.

ಶ್ರೀಮದ್ ಜಗದ್ಗುರು ಶಿವಲಿಂಗೇಶ್ವರ ಸಂಸ್ಥಾನ ಮಠದ ಶಾಖಾಮಠಗಳಾದ ಖಾನಾಪುರ, ಸಾವಳಗಿ, ಮುತ್ನಾಳ, ನಂದಗಾವ, ಅವರಗೋಳ, ಗುಡಿಕ್ಯಾತರ, ಕೋಟಬಾಗಿ, ಹಿಡಕಲ್ ಡ್ಯಾಮ್, ಹುಕ್ಕೇರಿ, ಗುಡಸ, ಖಾನಟ್ಟಿ, ಅವರಾದಿ, ಮೂಡಲಗಿ, ಚಿಕ್ಕೋಡಿ, ಗೋಕಾಕ ಮತ್ತು ನಾಡಿನ ವಿವಿಧಡೆಯ ಭಕ್ತರು ಭಾಗವಹಿಸಿ ವೈವಿಧ್ಯಮಯ ಸೇವೆ ಸಲ್ಲಿಸಲಿದ್ದಾರೆ.

https://pragati.taskdun.com/demand-to-name-belagavi-railway-station-as-dr-shivabasava-swamini-station/
https://pragati.taskdun.com/minister-sasikala-jolle-election-campaign-in-mangur-village/
https://pragati.taskdun.com/election-campaign-in-various-places-in-raibag-by-taluk-dr-prabhakar-kore/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button