
ಪ್ರಗತಿವಾಹಿನಿ ಸುದ್ದಿ: ಮಧ್ಯ ಪ್ರಾಚ್ಯ ರಾಷ್ಟ್ರಗಳಲ್ಲಿ ಯುದ್ಧದ ಭೀತಿ ಹೆಚ್ಚಿದ್ದು ಇಂದು ದುಬೈ ಮಾರ್ಗವಾಗಿ ಎರಡನೇ ವಿಶೇಷ ವಿಮಾನವು ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಯಶಸ್ವಿಯಾಗಿ ಬಂದಿಳಿದಿದ್ದು ಒಟ್ಟು 490 ಪ್ರಯಾಣಿಕರು ಸುರಕ್ಷಿತವಾಗಿ ಮರಳಿದ್ದಾರೆ.
ಜೆಡಿಎಸ್ ಎಂಎಲ್ ಸಿ ಎಸ್.ಎಲ್. ಭೋಜೇಗೌಡ ಹಾಗೂ ಖ್ಯಾತ ಬ್ಯಾಡ್ಮಿಂಟನ್ ತಾರೆ ಪಿ.ವಿ. ಸಿಂಧು ಸೇರಿದಂತೆ ಹಲವು ಪ್ರಮುಖರು ಬೆಂಗಳೂರಿಗೆ ಆಗಮಿಸಿದ್ದಾರೆ.
ಮೊದಲ ವಿಮಾನದಲ್ಲಿ 213 ಪ್ರಯಾಣಿಕರು ಆಗಮಿಸಿದ್ದರು. ಇದೀಗ ಎರಡನೇ ವಿಮಾನದಲ್ಲಿ ದಾಖಲೆ ಸಂಖ್ಯೆಯ 490 ಜನರು ಮರಳಿದ್ದು ವಿಮಾನ ನಿಲ್ದಾಣ ಭಾವನಾತ್ಮಕ ಕ್ಷಣಗಳಿಗೆ ಸಾಕ್ಷಿಯಾದವು.
ವಿಮಾನ ನಿಲ್ದಾಣಕ್ಕೆ ಬಂದಿಳಿದ ಪ್ರಯಾಣಿಕರನ್ನು ಅಧಿಕಾರಿಗಳು ಬರಮಾಡಿಕೊಂಡಿದ್ದು, ಅಗತ್ಯ ವೈದ್ಯಕೀಯ ತಪಾಸಣೆ ಹಾಗೂ ಮುಂದಿನ ಪ್ರಯಾಣಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ.
ಇವರೆಲ್ಲರೂ ಕಳೆದ 2 ದಿನಗಳಿಂದ ದುಬೈ ಸೇರಿದಂತೆ ವಿವಿಧೆಡೆ ಸಿಲುಕಿದ್ದರು. ವಿಮಾನ ಸೇವೆ ರದ್ದಾಗಿದ್ದರಿಂದ ಸಂಕಷ್ಟದಿಂದ ಕಾಲಕಳೆದಿದ್ದರು. ಸುರಕ್ಷಿತವಾಗಿ ತಾಯಿನಾಡಿಗೆ ಕರೆಸಿಕೊಳ್ಳುವಂತೆ ಮನವಿ ಮಾಡಿದ್ದರು.




