
ಪ್ರಗತಿವಾಹಿನಿ ಸುದ್ದಿ: ರಾಜ್ಯದಲ್ಲಿ ಪ್ರತಿನಿತ್ಯ ಹೃದಯಾಘಾತ ಪ್ರಕರರಣಗಳು ಹೆಚ್ಚುತ್ತಿದ್ದು, ಹೃದಯಾಘಾತದಿಂದ 4ನೇ ತರಗತಿ ವಿದ್ಯಾರ್ಥಿ ಮೃತಪಟ್ಟ ಘಟನೆ ನಡೆದಿದೆ.
ಚಾಮರಾಜ ನಗರದ ಗುಂಡ್ಲುಪೇಟೆ ಪಟ್ಟಣದ ಕುರಬಗೇರಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಇಂದು ಬೆಳಗ್ಗೆ ಈ ಘಟನೆ ನಡೆದಿದೆ. ಮನೋಜ್ ಕುಮಾರ್(10) ಮೃತ ವಿದ್ಯಾರ್ಥಿ.
ಈತ ಶಾಲೆಯಲ್ಲಿ ಪಾಠ ಕೇಳುತಿದ್ದ ವೇಳೆ ಹೃದಯಾಘಾತದಿಂದ ಕುಸಿದು ಬಿದ್ದು, ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಸಾವನ್ನಪ್ಪಿದ್ದಾನೆ ಎಂದು ತಿಳಿದು ಬಂದಿದೆ.
ವಿದ್ಯಾರ್ಥಿಗೆ ಹೃದಯ ಸಂಬಂಧಿ ಸಮಸ್ಯೆಯಿದ್ದು, ಮೈಸೂರಿನ ಜಯದೇವ ಹಾಗೂ ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸುತಿದ್ದ ಎನ್ನಲಾಗಿದೆ.
ಮೂಲತಃ ದೊಡ್ಡಹುಂಡಿ ಗ್ರಾಮದ ದಿ.ನಾಗರಾಜು-ನಾಗರತ್ನ ಪುತ್ರ ಮನೋಜ್ ಕುಮಾರ್ ದೊಡ್ಡಹುಂಡಿಯಲ್ಲಿ 1,2ನೇ ತರಗತಿ ವ್ಯಾಸಂಗ ಮಾಡಿ 3ನೇ ತರಗತಿಗೆ ಪಟ್ಟಣದ ಕುರಬಗೇರಿ ಹಿರಿಯ ಪ್ರಾಥಮಿಕ ಶಾಲೆಗೆ ದಾಖಲಾಗಿ 4ನೇ ತರಗತಿ ವ್ಯಾಸಂಗ ಮಾಡುತ್ತಿದ್ದ. ಮೃತ ವಿದ್ಯಾರ್ಥಿಯ ತಾಯಿ ಕೂಲಿ ಕೆಲಸ ಮಾಡಿಕೊಂಡು ಜೀವನ ನಡೆಸುತಿದ್ದರು ಎಂದು ತಿಳಿದು ಬಂದಿದೆ.