ಪ್ರಗತಿವಾಹಿನಿ ಸುದ್ದಿ, ಮುಂಬಯಿ: ನವಿ ಮುಂಬಯಿಯ ಕೆಎಲ್‌ಇ ಕಾಲೇಜ್ ಆಫ್ ಲಾನಲ್ಲಿ 4 ನೇ ರಾಷ್ಟ್ರೀಯ ಕಾನೂನು ಉತ್ಸವ- SPARKLE 4.0 ರ ಸಮಾರೋಪ ಸಮಾರಂಭ ಎರಡು ಪ್ರಧಾನ ಘಟ್ಟಗಳಲ್ಲಿ ಜರುಗಿತು.
ರಾಷ್ಟ್ರೀಯ ಮೂಟ್‌ಕೋರ್ಟ್ ಸ್ಪರ್ಧೆ ಮತ್ತು ರಾಷ್ಟ್ರೀಯ ಕ್ಲೈಂಟ್ ಕೌನ್ಸಿಲಿಂಗ್ ಸ್ಪರ್ಧೆ ಪ್ರಮುಖವಾಗಿದ್ದವು. ಸ್ಪಾರ್ಕಲ್ 4.0 ನಲ್ಲಿ ದೇಶದ 9 ರಾಜ್ಯಗಳ 60 ತಂಡಗಳು ಭಾಗವಹಿಸಿದ್ದವು.
ಮುಖ್ಯ ಅತಿಥಿಯಾಗಿ ಭಾರತದ ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಜಸ್ಟೀಸ್ ಅಭಯ್ ಎಸ್. ಓಕಾ ಭಾಗವಹಿಸಿ ಮಾತನಾಡಿ, ‘ಆರ್ಟ್ಆಫ್ ಅಡ್ವೋಕಸಿ’ಯಲ್ಲಿ ಉದಯೋನ್ಮುಖ ವಕೀಲರು ಮತ್ತು ಕಾನೂನು ಸದಸ್ಯರನ್ನುಕುರಿತು ಸಲಹೆಗಳನ್ನು ನೀಡಿದರು. ಇಂದಿನ ಯುವ ಪ್ರತಿಭಾ ಸಂಪನ್ನ ನ್ಯಾಯವಾದಿಗಳಿಗೆ ಸಾಕಷ್ಟು ಅವಕಾಶಗಳಿದ್ದು ಕಾನೂನಿನ ಪ್ರತಿಯೊಂದು ಸೂಕ್ಷ್ಮಗಳನ್ನು ಅರಿತುಕೊಳ್ಳಬೇಕು. ಹೆಚ್ಚೆಚ್ಚು ಅಧ್ಯಯನ ನಮ್ಮನ್ನುಜ್ಞಾನವಂತರನ್ನಾಗಿ ಮಾಡುತ್ತದೆ. ಇಂದಿನ ತಂತ್ರಜ್ಞಾನ ತಿಳಿಯುವ ಹಂಬಲ ನಮ್ಮಲ್ಲಿರಬೇಕು” ಎಂದರು.
ಅತಿಥಿಗಳಾಗಿ ಬಾಂಬೆ ಹೈಕೋರ್ಟ್ ನ್ಯಾಯಾಧೀಶ ರಾಜೇಶ್ ಎಸ್. ಪಾಟೀಲ್, ಕರ್ನಾಟಕ ಹೈಕೋರ್ಟ್ ನ್ಯಾಯಾಧೀಶರು ವಿಜಯಕುಮಾರ್ ಪಾಟೀಲ್, ಮುಂಬಯಿ ಅಮಿಟೆ ವಿಶ್ವವಿದ್ಯಾಲಯ ಅಮಿಟೆ ಕಾನೂನು ಕಾಲೇಜಿ ಮಾಜಿ ನಿರ್ದೇಶಕ ಪ್ರೊ.ಡಾ.ಕುಶಾಲ ವಿಭೂತೆ ಭಾಗವಹಿಸಿದ್ದರು.
ಅಧ್ಯಕ್ಷತೆ ವಹಿಸಿದ್ದ ಕೆಎಲ್ ಇ ಸಂಸ್ಥೆ ಕಾರ್ಯಾಧ್ಯಕ್ಷ ಡಾ.ಪ್ರಭಾಕರ ಕೋರೆ ಮಾತನಾಡಿ “ಸಪ್ತಋಷಿಗಳೆಂಬ ಏಳುಜನ ಮಹಾನ್ ಗುರುಗಳು ಆರಂಭಿಸಿದ ಕೆಎಲ್‌ಇ ಸಂಸ್ಥೆ ಇದು ಜಾಗತಿಕವಾಗಿ ವಿಸ್ತರಿಸಿದೆ. ಶಿಕ್ಷಣ ಎಲ್ಲ ಬೇಕು- ಬೇಡಗಳನ್ನು ಪೂರೈಸಿದೆ. ಯುಎಸ್‌ಎನಲ್ಲಿನ ಅತ್ಯಂತ ಹಳೆಯ ವೈದ್ಯಕೀಯ ವಿಶ್ವವಿದ್ಯಾಲಯ, ಥಾಮಸ್ ಜೆಫರ್ಸನ್ ವಿಶ್ವವಿದ್ಯಾಲಯದಂತಹ ಖ್ಯಾತನಾಮ ವಿವಿಗಳೊಂದಿಗೆ ಒಡಂಬಡಿಕೆ ಮಾಡಿಕೊಂಡು ಸಂಶೋಧನೆಯತ್ತ ಹೆಜ್ಜೆ ಇಟ್ಟಿದೆ. ಮಾಜಿ ಸಂಸದ ಬ್ಯಾರಿಸ್ಟರ್ ನಾಥ್ ಪೈ, ಮಾಜಿ ಕೇಂದ್ರ ಕಾನೂನು ಸಚಿವ ಬಿ. ಶಂಕರಾನಂದ, ಕರ್ನಾಟಕದ ಈಗಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್, ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ ಜೋಶಿ, ಇನ್ಫೋಸಿಸ್ ಅಧ್ಯಕ್ಷೆ ಸುಧಾ ಮೂರ್ತಿ ಸೇರಿದಂತೆ ಅನೇಕರು ಕೆಎಲ್‌ಇ ಸಂಸ್ಥೆಯಲ್ಲಿ ಶಿಕ್ಷಣ ಪೂರೈಸಿ ರಾಷ್ಟ್ರ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ತಂದಿದ್ದಾರೆ. ಅವರು ನಮ್ಮ ಸಂಸ್ಥೆಯ ವಿದ್ಯಾರ್ಥಿಗಳೆಂಬುದು ಹೆಮ್ಮೆಯ ಸಂಗತಿ” ಎಂದರು.
ಇದೇ ಸಂದರ್ಭದಲ್ಲಿ ಕರ್ನಾಟಕ ಹೈಕೋರ್ಟ್ ನಲ್ಲಿ ತಮ್ಮ ಅಧಿಕಾರಾವಧಿಯಲ್ಲಿ ತಮ್ಮ ಐತಿಹಾಸಿಕ ತೀರ್ಪುಗಳಿಗಾಗಿ ಭಾರತದ ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶ ಜಸ್ಟಿಸ್ ಅಭಯ್‌ಎಸ್. ಓಕಾ ಅವರನ್ನು ಶ್ಲಾಘಿಸಿದರು.
ಸಮಾರೋಪ ಸಮಾರಂಭದಲ್ಲಿರಾಷ್ಟ್ರೀಯ ಮೂಟ್‌ಕೋರ್ಟ್ ಸ್ಪರ್ಧೆಯಲ್ಲಿ ಮುಂಬೈನ ರಿಜ್ವಿ ಕಾನೂನು ಕಾಲೇಜು ಹಾಗೂ ರನ್ನರ್ ಅಪ್ ಕ್ರೈಸ್ಟ್ಯೂನಿವರ್ಸಿಟಿ ಲವಾಸಾ ಕಾಲೇಜುಗಳು ಕ್ರಮವಾಗಿ ಪ್ರಶಸ್ತಿ ಪಡೆದವು. ರಾಷ್ಟ್ರೀಯ ಕ್ಲೈಂಟ್ ಕೌನ್ಸೆಲಿಂಗ್ ಸ್ಪರ್ಧೆಯ ವಿಜೇತರಾಗಿ ಮುಂಬೈನ NMIMSನ ಪಿ. ಮೆಹ್ತಾ ಸ್ಕೂಲ್‌ಆಫ್ ಲಾ, ಚಂಡೀಗಢದ ಯುಐಎಲ್‌ಎಸ್ ಕಾನೂನು ಕಾಲೇಜು ರನ್ನರ್ ಅಪ್ ಆಗಿ ಹೊರಹೊಮ್ಮಿದವು.
ಈ ಸಂದರ್ಭದಲ್ಲಿ ಕೆಎಲ್‌ಇ ಸಂಸ್ಥೆಯ ಹಿರಿಯ ನಿರ್ದೇಶಕ ಶಂಕರ ಮುನವಳ್ಳಿ, ಮಾಜಿ ಎಂಎಲ್‌ಸಿ ಮಹಾಂತೇಶ ಕವಟಗಿಮಠ, ಬೆಂಗಳೂರು ಕಾನೂನು ಕಾಲೇಜಿನ ಪ್ರಾಚಾರ್ಯ ಡಾ. ಮಲ್ಲಿಕಾರ್ಜುನಯ್ಯ ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ