https://youtu.be/0GAaMH15kSA
ಪ್ರಗತಿವಾಹಿನಿ ಸುದ್ದಿ, ಬೆಂಗಳೂರು: ಕೋವಿಡ್ ೧೯ರ ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಮುಖ್ಯಮಂತ್ರಿ ಪರಿಹಾರ ನಿಧಿಗೆ ₹೫ ಕೋಟಿಯನ್ನು ದೇಣಿಗೆಯಾಗಿ ನೀಡಲು ಕೆಎಂಎಫ್ ನಿರ್ಧರಿಸಿದೆ.
ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ಬೆಂಗಳೂರಿನಲ್ಲಿ ನಡೆದ ಅಧಿಕಾರಿಗಳೊಂದಿಗಿನ ಸಭೆಯಲ್ಲಿ ಈ ತೀರ್ಮಾನ ಕೈಗೊಂಡಿದ್ದಾರೆ.
ಪ್ರಕೃತಿ ವಿಕೋಪದಂತಹ ಪರಿಸ್ಥಿತಿಯ ಸಂದರ್ಭದಲ್ಲಿ ಸದಾಕಾಲ ಸಮಾಜ ಮತ್ತು ರಾಜ್ಯ ಸರ್ಕಾರದ ಜೊತೆಗಿರುವ ಕೆಎಂಎಫ್, ಕ್ಲಿಷ್ಟಕರ್ ಸಂದರ್ಭಗಳಲ್ಲಿ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಕಾಲಕಾಲಕ್ಕೆ ದೇಣಿಗೆ ನೀಡುತ್ತಾ ಬಂದಿದೆ. ಹೀಗಾಗಿ ಕೆಎಂಎಫ್ ಕೋವಿಡ್-೧೯ ಮುಖ್ಯಮಂತ್ರಿ ಪರಿಹಾರ ನಿಧಿಗೆ ₹೫ ಕೋಟಿ ನೀಡಲು ತೀರ್ಮಾನಿಸಿದೆ.
ಇದೆ ವೇಳೆ ಕೊರೋನಾ ತುರ್ತು ಪರಿಸ್ಥಿತಿಯ ಹಿನ್ನೆಲೆಯಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರ ನೀಡಿರುವ ಎಲ್ಲಾ ಸೂಚನೆಗಳನ್ನು ಕಟ್ಟುನಿಟ್ಟಾಗಿ ಕೆಎಂಎಫ್ ಅಧಿಕಾರಿಗಳು, ಸಿಬ್ಬಂದಿ ಪಾಲಿಸುವಂತೆ ಮತ್ತೊಮ್ಮೆ ಸಂಬಂಧಪಟ್ಟವರಿಗೆ ತಿಳಿಸಲು ಅಧ್ಯಕ್ಷರು ಸೂಚಿಸಿದರು.
ರಾಜ್ಯದ ಎಲ್ಲ ಸದಸ್ಯ ರೈತರಿಂದ ನಿರಂತರವಾಗಿ ದಿನಕ್ಕೆ ೨ ಬಾರಿ ತಪ್ಪದೆ ಎಲ್ಲ ೧೪ ಹಾಲು ಒಕ್ಕೂಟಗಳ ವ್ಯಾಪ್ತಿಯಲ್ಲಿ ಬರುವ ಹಾಲು ಉತ್ಪಾದಕರ ಸಹಕಾರಿ ಸಂಘಗಳಿಂದ ಗುಣಮಟ್ಟದ ಹಾಲನ್ನು ಖರೀದಿಸುವಂತೆ ಸೂಚಿಸಿದರು.
ಕೊರೋನಾದಂತಹ ಕ್ಲಿಷ್ಟಕರ ಪರಿಸ್ಥಿತಿಯಲ್ಲಿ ಪಶು ಆಹಾರಕ್ಕೆ ಫೆಬ್ರುವರಿ ಮತ್ತು ಮಾರ್ಚ್ ತಿಂಗಳಲ್ಲಿ ಪ್ರತಿ ಟನ್ ಪಶು ಆಹಾರಕ್ಕೆ ನೀಡಿದ ₹೫೦೦ ರಿಯಾಯಿತಿಯನ್ನು ಏಪ್ರಿಲ್ ತಿಂಗಳಿಗೂ ವಿಸ್ತರಿಸಲು ಸಭೆಯಲ್ಲಿ ತೀರ್ಮಾನಿಸಲಾಗಿದೆ.
ರಾಜ್ಯದ ಎಲ್ಲ ಗ್ರಾಹಕರಿಗೆ ನಿರಂತರವಾಗಿ ನಿಗದಿತ ದರದಲ್ಲಿ ಹಾಲು/ಮೊಸರು/ ಹಾಲಿನ ಉತ್ಪನ್ನಗಳನ್ನು ಸರಬರಾಜು ಮಾಡಲು ಮತ್ತು ಹಾಲಿನ ನಿರಂತರ ಲಭ್ಯತೆ ಕುರಿತಂತೆ ಸಾರ್ವಜನಿಕರಿಗೆ ವ್ಯಾಪಕ ಪ್ರಚಾರ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸಲಹೆ ನೀಡಿದರು.
ಇದೆ ವೇಳೆ ಲಾಕ್‌ಡೌನ್ ಅವಧಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಕೆಎಂಎಫ್ ಕಾಯಂ ಸಿಬ್ಬಂದಿಗೆ ಅವರು ಕಾರ್ಯನಿರ್ವಹಿಸುವ ಪ್ರತಿ ದಿನ ಒಂದು ದಿನದ ಹೆಚ್ಚುವರಿ ವೇತನ ನೀಡಲು ಅಥವಾ ಪರಿಹಾರ ರಜೆಯನ್ನು ಈ ವರ್ಷಾಂತ್ಯದೊಳಗೆ ಪಡೆಯಲು ಅವಕಾಶ ನೀಡಬೇಕು. ಇನ್ನು ಗುತ್ತಿಗೆ ನೌಕರರು ಪ್ರತಿ ದಿನ ₹೫೦೦ ಹೆಚ್ಚುವರಿಯಾಗಿ ಹಾಗೂ ಹಾಲು ಮತ್ತು ಹಾಲೋತ್ಪನ್ನಗಳ ಸಾಗಣೆ ಮಾಡುವ ವಾಹನ ಚಾಲಕರು / ಸಿಬ್ಬಂದಿಗೆ ಪ್ರೋತ್ಸಾಹ ಧನ ನೀಡಲು ಸಭೆಯಲ್ಲಿ ತೀರ್ಮಾನ ಕೈಗೊಂಡರು.
ಸಿದ್ಧ ಪಶು ಆಹಾರ ಮತ್ತು ಕಚ್ಚಾ ಪದಾರ್ಥಗಳ ಸಾಗಾಣಿಕೆ ಚಾಲಕರು, ಹಾಲಿನ ಟ್ಯಾಂಕರ್‌ಗಳ ಚಾಲಕರು ಹಾಗೂ ಹಾಲು, ಹಾಲು ಉತ್ಪನ್ನಗಳ ಸಾಗಾಣಿಗೆ ವಾಹನಗಳಾದ ಪ್ರೊಕ್ಯುರ್‌ಮೆಂಟ್ ಟ್ರಾನ್ಸ್‌ಪೋರ್ಟ್ / ಡಿಸ್ಟ್ರಿಬ್ಯೂಷನ್ ಟ್ರಾನ್ಸಪೋರ್ಟೇಷನ್ ಚಾಲಕರಿಗೆ ಪ್ರೋತ್ಸಾಹಧನವಾಗಿ ಪ್ರತಿ ದಿನ ₹೫೦೦ ನಂತೆ ಪಾವತಿಸಲು ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ.
ಸಭೆಯಲ್ಲಿ ಕೆಎಂಎಫ್ ವ್ಯವಸ್ಥಾಪಕ ನಿರ್ದೇಶಕ ಬಿ.ಸಿ.ಸತೀಶ್ ಮತ್ತು ಹಿರಿಯ ಅಧಿಕಾರಿಗಳು ಸೇರಿದಂತೆ ಇತರರು ಪಾಲ್ಗೊಂಡಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ