
ಪ್ರಗತಿವಾಹಿನಿ ಸುದ್ದಿ, ಹಂದಿಗುಂದ: ಸಮೀಪದ ಸುಲ್ತಾನಪೂರ ಗ್ರಾಮದ ರೈತ ಲಕ್ಕಪ್ಪ ಸಂಗಪ್ಪ ದೊಡ್ಡಮನಿ ಅವರು ತಿಂಗಳ ಹಿಂದೆ ತಾನು ಕೊರೆಯಿಸಿದ ಕೊಳವೆ ಬಾವಿಯಲ್ಲಿ ನೀರು ಬಾರದೆಯಿದ್ದಾಗ ಸಾಲದ ಸೂಲಕ್ಕೆ ಸಿಲುಕಿ ಮನನೊಂದು ಅದೇ ಕೊಳವೆ ಬಾವಿಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದ.

ಈ ಘಟನೆ ನಡೆದ ಕೆಲ ಗಂಟೆಗಳಲ್ಲಿ ಬೆಳಗಾವಿ ಜಿಲ್ಲಾಧಿಕಾರಿ ಹಾಗೂ ಬೆಳಗಾವಿ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ಭೇಟಿ ನೀಡಿ ಮೃತ ರೈತನ ಕುಟುಂಬಕ್ಕೆ ಸಾಂತ್ವನ ಹೇಳಿ ಸೂಕ್ತ ಪರಿಹಾರ ಕೊಡಿಸುವ ಭರವಸೆ ನೀಡಿದ್ದರು.
ಮೃತ ರೈತನ ಕುಟುಂಬದ ಸ್ಥಿತಿ ಚಿಂತಾಜನಕವಾಗಿರುವುದನ್ನು ಕಣ್ಣಾರೆ ಕಂಡು ಮಾನವೀಯತೆಯ ದೃಷ್ಟಿಯಿಂದ ಹಾಗೂ ಇಬ್ಬರು ಮಕ್ಕಳ ಶಿಕ್ಷಣಕ್ಕಾಗಿ, ಕುಟುಂಬದ ನಿರ್ವಹಣೆಗಾಗಿ ಎಸ್ಪಿ ಲಕ್ಷ್ಮಣ ನಿಂಬರಗಿ ವೈಯಕ್ತಿಕವಾಗಿ 50 ಸಾವಿರ ರೂ. ಗಳನ್ನು ನೀಡಿದ್ದಾರೆ.
ಮಂಗಳವಾರ ಎಸ್.ಪಿ ಅವರ ಪರವಾಗಿ ರಾಯಬಾಗ ವೃತ್ತ ನಿರೀಕ್ಷಕ (ಸಿ.ಪಿ.ಐ) ಕೆ.ಎಸ್.ಹಟ್ಟಿ ಮೃತ ರೈತನ ಪತ್ನಿ ಕಸ್ತೂರಿ ಲಕ್ಕಪ್ಪ ದೊಡ್ಡಮನಿ, ಪುತ್ರ ಸಂಗಮೇಶ ದೊಡ್ಡಮನಿ ಹಾಗೂ ಪುತ್ರಿ ಜಯಶ್ರೀ ದೊಡ್ಡಮನಿ ಅವರಿಗೆ ನಗದು ಹಣ ನೀಡಿದ್ದಾರೆ.
ಈ ಸಂದರ್ಭದಲ್ಲಿ ಹಾರೂಗೇರಿ ಠಾಣೆಯ ಪೋಲಿಸ್ ಶಾಂತು ದಾನೊಳ್ಳಿ, ಗ್ರಾಪಂ ಸದಸ್ಯರಾದ ನಿಂಗಪ್ಪ ಪೂಜೇರಿ, ಸಿದ್ದಲಿಂಗಯ್ಯಾ ಹಿರೇಮಠ, ಈರಪ್ಪ ಚೌಗಲಾ, ನಾಗಪ್ಪ ಜಗದಾಳ, ಮುತ್ತಪ್ಪ ಖಾನಗೌಡರ, ಲಕ್ಷ್ಮಣ ಲಾಲಿಬುಡ್ಡಿ, ಮಹಾದೇವ ಡುಮ್ಮೆಲ್ಲಗೋಳ, ಧರೆಪ್ಪ ದೊಡ್ಡಮನಿ ಇದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ