ಅಂಜಲಿತಾಯಿ ಫೌಂಡೇಶನ್ ನಿಂದ 5 ಸಾವಿರ ಆಹಾರ ಧಾನ್ಯದ ಕಿಟ್, 1 ಲಕ್ಷ ಮಾಸ್ಕ್ ವಿತರಣೆ
ಪ್ರಗತಿವಾಹಿನಿ ಸುದ್ದಿ, ಖಾನಾಪುರ: ಡಾ.ಅಂಜಲಿ ನಿಂಬಾಳಕರ ಫೌಂಡೇಶನ್ ವತಿಯಿಂದ ಲಾಕ್ ಡೌನ್ ಸಡಿಲಿಕೆಯ ನಂತರ ಸುಮಾರು 5000 ಆಹಾರ ಕಿಟ್ ಗಳು ಹಾಗೂ 35,೦೦೦ ಮಾಸ್ಕ್ ಗಳನ್ನು ತಾಲೂಕಿನಾದ್ಯಂತ ವಿತರಿಸಲಾಗಿದೆ. ಈ ವಾರಾಂತ್ಯದೊಳಗೆ 1 ಲಕ್ಷ ಮಾಲ್ಕ್ ವಿತರಿಸಲಾಗುವುದು ಎಂದು ಖಾನಾಪುರ ಶಾಸಕಿ ಡಾ.ಅಂಜಲಿ ಹೇಮಂತ ನಿಂಬಾಳಕರ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೊರೋನಾ ಮಹಾಮಾರಿ ಸಾಂಕ್ರಾಮಿಕ ರೋಗದಿಂದ ತಾಲೂಕಿನ ಜನತೆ ಕೂಡಾ ಭಯಭೀತಗೊಂಡು ಲಾಕಡೌನ್ ದಿಂದ ಜನಜೀವನ ಅಸ್ತವ್ಯಸ್ತಗೊಂಡಿದೆ. ಸಂಘಟಿತ ಮತ್ತು ಅಸಂಘಟಿತ ಕಾರ್ಮಿಕರ ಬದುಕು ದುಸ್ತರವಾಗಿದೆ. ಜೀವನ ನಿರ್ವಹಣೆಗೆ ದಾನಿಗಳು ಆಹಾರ ಸಾಮಗ್ರಿ ಕಿಟ್ ಮತ್ತು ಮಾಸ್ಕ್, ಸ್ಯಾನಿಟೈಜರ್ ಗಳನ್ನು ಸಂಕಷ್ಟದಲ್ಲಿದ್ದ ಜನರಿಗೆ ವಿತರಿಸುತ್ತಿರುವುದು ಶ್ಲಾಘನೀಯ ಎಂದರು.
ತಾಲೂಕಿನಲ್ಲಿ ಸುಮಾರು ೧೦ ರೈತ ಕೇಂದ್ರಗಳ ಮೂಲಕ ರೈತರಿಗೆ ಪ್ರಮಾಣೀಕೃತ ಬಿತ್ತನೆ ಬೀಜ ಹಾಗೂ ರಸಗೊಬ್ಬರ ಹಂಚುವ ಕೆಲಸ ಭರದಿಂದ ಸಾಗಿದೆ ಎಂದರು.
ಆದರೆ ಸರಕಾರ ಜನರ ಕಷ್ಟ ಕಾರ್ಪಣ್ಯಗಳಿಗೆ ತಕ್ಷಣ ಸ್ಪಂದಿಸಿ ಅಗತ್ಯ ಆಹಾರ ಸಾಮಗ್ರಿಗಳನ್ನು ಪೂರೈಸಬೇಕು. ಮೆಣಸಿನಕಾಯಿ, ಡಬ್ಬಗಾಯಿ ಮುಂತಾದವುಗಳನ್ನು ತೋಟಗಾರಿಕೆ ಬೆಳೆಗಳಿಗೆ ಸೇರಿಸಿ ಬೆಲೆ ಕುಸಿತದ ಸಂದರ್ಭದಲ್ಲಿ ಪರಿಹಾರಧನ ಕೊಡಬೇಕು. ನಾಶವಾದ ಬೆಳೆಗಳಿಗೆ ನಷ್ಟ ಪರಿಹಾರ ಧನವನ್ನು ರೈತ ಸಮುದಾಯದ ಖಾತೆಗಳಿಗೆ ನೇರ ಸಂದಾಯ ಮಾಡಬೇಕು. ಲಾಕಡೌನ್ ಸಂದರ್ಭದಲ್ಲಿ ಕ್ಷೌರಿಕರು, ಫೋಟೋಗ್ರಾಫರ್, ಪತ್ರಕರ್ತರು, ಆಟೋ ರಿಕ್ಷಾ ಚಾಲಕರಿಗೆ, ಟ್ಯಾಕ್ಸಿ ಡ್ರೈವರ್, ಮೇದಾರ, ಟೈಲರ್, ಕುಂಬಾರ, ತರಕಾರಿ ಮಾರಾಟಗಾರು, ಮುಂತಾದ ಕಸಬುದಾರರ ಸಂಕಷ್ಟವನ್ನು ಮಾಧ್ಯಮಗಳ ಮುಖಾಂತರ ಸರಕಾರದ ಗಮನ ಸೆಳೆಯುವ ಪ್ರಯತ್ನವನ್ನು ಮಾಡಬೇಕೆಂದರು.
ಖಾನಾಪುರ ತಾಲೂಕು ಪಕ್ಕದ ಗೋವಾ ಮತ್ತು ಮಹಾರಾಷ್ಟ್ರ ರಾಜ್ಯದ ಗಡಿಗೆ ಅಂಟಿಕೊಂಡಿದೆ. ಆದ್ದರಿಂದ ಗೋವಾ ರಾಜ್ಯದಲ್ಲಿ ಕೂಲಿಕೆಲಸ ಮಾಡಲು ಹೋದ ಸಾವಿರಾರು ಕಾರ್ಮಿಕರು ಬರಲು ವಾಹನದ ವ್ಯವಸ್ಥೆ ಜೋತೆಗೆ ಕೈಯಲ್ಲಿ ದುಡ್ಡಿಲ್ಲದಿರುವುದರಿಂದ ತುತ್ತು ಅನ್ನಕ್ಕೂ ಪರದಾಡುವಂತ ಪರಿಸ್ಥಿತಿ ಎದುರಾಗಿದೆ. ಆದ್ದರಿಂದ ಕರ್ನಾಟಕ ಸರಕಾರದ ಮುಖ್ಯಮಂತ್ರಿ ಅವರು ಕಾರ್ಮಿಕರಿಗೆ ಉಚಿತವಾಗಿ ವಾಹನದ ವ್ಯವಸ್ಥೆ ಮಾಡಿ ಅವರವರ ಸ್ವಗ್ರಾಮಗಳಿಗೆ ತಲುಪಿಸುವ ಕಾರ್ಯ ಮಾಡಬೇಕು ಎಂದು ಆಗ್ರಹಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ