CrimeKannada NewsKarnataka NewsNationalPolitics

*ರಸ್ತೆ ಅಪಘಾತದಲ್ಲಿ 6 ಜನ ಸಜೀವ ದಹನ: ಮೃತರ ಮಾಹಿತಿ ಲಭ್ಯ*

ಪ್ರಗತಿವಾಹಿನಿ ಸುದ್ದಿ: ಯಾದಗಿರಿಯ ಸುರಪುರ ತಾಲೂಕಿನ ಶಾಂತಪುರ ಕ್ರಾಸ್ ಬಳಿ ಇಂದು ಬೆಳಗ್ಗೆ ಸಂಭವಿಸಿದ ಭೀಕರ ರಸ್ತೆ ಅಪಘಾತದ ಮೃತರ ಮಾಹಿತಿ ಲಭ್ಯವಾಗಿದ್ದು, ಮೃತಪಟ್ಟವರೆಲ್ಲರೂ ರಾಯಚೂರು ಜಿಲ್ಲೆಯ ಶಿರವಾರ ಮೂಲದವರು ಎಂದು ತಿಳಿದುಬಂದಿದೆ. 

ಕಾರು ಮತ್ತು ಖಾಸಗಿ ಬಸ್ ನಡುವೆ ನಡೆದ ಈ ಮುಖಾಮುಖಿ ಡಿಕ್ಕಿಯ ತೀವ್ರತೆಗೆ ವಾಹನಗಳಲ್ಲಿ ಬೆಂಕಿ ಹೊತ್ತಿಕೊಂಡಿತ್ತು. ಸ್ಥಳದಲ್ಲೇ ಐವರು ಸಜೀವ ದಹನವಾಗಿದ್ದು, ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಮತ್ತೊಬ್ಬ ಮಹಿಳೆ ಕೊನೆಯುಸಿರೆಳೆದಿದ್ದಾರೆ. ಸದ್ಯ ಆರು ಮಂದಿ ಈ ದುರಂತಕ್ಕೆ ಬಲಿಯಾಗಿದ್ದು, ಇತರ ಇಬ್ಬರ ಸ್ಥಿತಿ ಅತ್ಯಂತ ಚಿಂತಾಜನಕವಾಗಿದೆ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ.

ದುರಂತದಲ್ಲಿ ಮೃತಪಟ್ಟವರನ್ನು ಕೃಷ್ಣಾ ನಾಯಕ (52), ಅನಂತಾ ನಾಯಕ (45), ಶರಣಪ್ಪ (36), ನಿಸರ್ಗ (30), ಶಶೀಕಲಾ (30) ಮತ್ತು ಕೇವಲ ಒಂದೂವರೆ ವರ್ಷದ ಹಸುಳೆ ಶ್ರೀನಿಧಿ ಎಂದು ಗುರುತಿಸಲಾಗಿದೆ. ಸಿದ್ದಾರ್ಥ ಎಂಬುವವರ ಸ್ಥಿತಿ ಗಂಭೀರವಾಗಿದ್ದು, ಚಿಕಿತ್ಸೆ ಮುಂದುವರಿದಿದೆಮ

ಖಾಸಗಿ ಬಸ್‌ನಲ್ಲಿ ಸುಮಾರು 20 ಮಂದಿ ಪ್ರಯಾಣಿಕರಿದ್ದರು. ಅಪಘಾತ ಸಂಭವಿಸಿ ಬೆಂಕಿ ಹೊತ್ತಿಕೊಳ್ಳುತ್ತಿದ್ದಂತೆಯೇ ಸಮಯಪ್ರಜ್ಞೆ ಮೆರೆದ ಪ್ರಯಾಣಿಕರು ತಕ್ಷಣವೇ ಬಸ್‌ನಿಂದ ಕೆಳಗಿಳಿದಿದ್ದಾರೆ. ಇದರಿಂದಾಗಿ ಬಸ್‌ನಲ್ಲಿದ್ದ 20 ಮಂದಿ ಪ್ರಾಣಾಪಾಯದಿಂದ ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ.

ಲಿಂಗಸಗೂರು ಕಡೆಯಿಂದ ಬರುತ್ತಿದ್ದ ಕಾರ್ ಸಂಪೂರ್ಣವಾಗಿ ಸುಟ್ಟು ಕರಕಲಾಗಿದ್ದು, ರಕ್ಷಣಾ ಕಾರ್ಯಾಚರಣೆಯ ವೇಳೆ ಸಿಕ್ಕ ದೇಹಗಳ ಸ್ಥಿತಿ ಕಂಡು ಸ್ಥಳೀಯರು ಮರುಗಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button