Kannada NewsLatestNational

*ಕಾರ್ಮಿಕರಿದ್ದ ವಾಹನ-ಟ್ರಕ್ ಡಿಕ್ಕಿ: 8 ಜನರು ಸಾವು, 25 ಜನರಿಗೆ ಗಾಯ*

ಪ್ರಗತಿವಾಹಿನಿ ಸುದ್ದಿ: ಕೆಲಸ ಮುಗಿಸಿಕೊಂಡು ತಮ್ಮ ಊರಿನತ್ತ ಹೊರಟಿದ್ದ ಕಾರ್ಮಿಕರು ಪ್ರಯಾಣಿಸುತ್ತಿದ್ದ ವಾಹನಕ್ಕೆ ಟ್ರಕ್ ಡಿಕ್ಕಿ  ಹೊಡೆದ ಪರಿಣಾಮ 8 ಮಂದಿ ಮೃತಪಟ್ಟು, 25ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಇನ್ನು ಕೆಲವರ ಸ್ಥಿತಿ ಗಂಭೀರವಾಗಿರುವ ಘಟನೆ ನಡೆದಿದೆ.

ಮಧ್ಯಪ್ರದೇಶದ ಗ್ವಾಲಿಯರ್‌ನಲ್ಲಿ ಮಧ್ಯರಾತ್ರಿ ಈ ಭೀಕರ ಅಪಘಾತ ನಡೆದಿದೆ. ರಾಷ್ಟ್ರೀಯ ಹೆದ್ದಾರಿ-79ರಲ್ಲಿ ಚಿಂಕಾ ಸಮೀಪ ರಾತ್ರಿ ಸುಮಾರು 12 ಗಂಟೆಗೆ ಅಪಘಾತ ಸಂಭವಿಸಿದೆ. ಭತ್ತ ನಾಟಿ ಕೆಲಸಕ್ಕಾಗಿ ಡಬ್ರಾ ಪ್ರದೇಶದ ಚನೋರ್ ಭಾಗಕ್ಕೆ ತೆರಳಿದ್ದ ಕಾರ್ಮಿಕರು ಕೆಲಸ ಮುಗಿಸಿಕೊಂಡು ವಾಪಸ್ ತೆರಳುತ್ತಿದ್ದರು. ಈ ವೇಳೆ ಕಾರ್ಮಿಕರನ್ನು ಸಾಗಿಸುತ್ತಿದ್ದ ಲೋಡಿಂಗ್ ವಾಹನದ ಎದುರಿಗೆ ಬಂದ ಟ್ರಕ್ ಡಿಕ್ಕಿ ಹೊಡೆದಿದೆ.

Home add -Advt

ಅಪಘಾತದ ರಭಸಕ್ಕೆ ಕಾರ್ಮಿಕರಿದ್ದ ವಾಹನ ನಿಯಂತ್ರಣ ಕಳೆದುಕೊಂಡು ಪಲ್ಟಿಯಾಗಿದೆ. ಅಪಘಾತದ ಶಬ್ದ ಕೇಳಿ ಸ್ಥಳಕ್ಕೆ ಧಾವಿಸಿದ ಸ್ಥಳೀಯರು ತಕ್ಷಣ ರಕ್ಷಣಾ ಕಾರ್ಯಕ್ಕೆ ಮುಂದಾದರು. ಬಳಿಕ ಪೊಲೀಸರು ಕೂಡ ಸ್ಥಳಕ್ಕೆ ಆಗಮಿಸಿ ಸಿಲುಕಿದ್ದವರನ್ನು ಹೊರತೆಗೆದು ಆಸ್ಪತ್ರೆಗೆ ಸಾಗಿಸುವ ವ್ಯವಸ್ಥೆ ಮಾಡಿದರು.

ಗಾಯಾಳುಗಳನ್ನು ಗ್ವಾಲಿಯರ್‌ನ ಜಯ ಆರೋಗ್ಯ ಆಸ್ಪತ್ರೆಯ ಟ್ರಾಮಾ ಸೆಂಟರ್ ಸೇರಿದಂತೆ ನಗರದ ವಿವಿಧ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ವೈದ್ಯರ ಮೇಲ್ವಿಚಾರಣೆಯಲ್ಲಿ ಗಾಯಾಳುಗಳಿಗೆ ಚಿಕಿತ್ಸೆ ಮುಂದುವರಿದಿದ್ದು, ಅವರಲ್ಲಿ ಕೆಲವರ ಆರೋಗ್ಯ ಸ್ಥಿತಿ ಚಿಂತಾಜನಕವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 

ಅಪಘಾತಕ್ಕೀಡಾದವರು ಉತ್ತರ ಪ್ರದೇಶ ಮೂಲದ ಕಾರ್ಮಿಕರು ಎನ್ನಲಾಗಿದೆ. ಕೃಷಿ ಕೆಲಸಕ್ಕಾಗಿ ಅವರು ಗ್ವಾಲಿಯರ್ ಭಾಗಕ್ಕೆ ಬಂದಿದ್ದರು. ಭತ್ತ ನಾಟಿ ಕಾರ್ಯ ಮುಗಿದ ಬಳಿಕ ತಮ್ಮ ಸ್ವಗ್ರಾಮಕ್ಕೆ ಹಿಂದಿರುಗುತ್ತಿದ್ದಾಗಲೇ ಮಾರ್ಗಮಧ್ಯೆ ಈ ದುರ್ಘಟನೆ ಸಂಭವಿಸಿದೆ.

ಅಪಘಾತದಲ್ಲಿ ಮೃತಪಟ್ಟ ಎಲ್ಲರ ಗುರುತು ಇನ್ನೂ ದೃಢಪಟ್ಟಿಲ್ಲ. ಮೃತರ ಗುರುತು ಪತ್ತೆಹಚ್ಚುವ ಜತೆಗೆ ಅವರ ಕುಟುಂಬಸ್ಥರಿಗೆ ಮಾಹಿತಿ ನೀಡುವ ಪ್ರಕ್ರಿಯೆಯನ್ನು ಅಧಿಕಾರಿಗಳು ಕೈಗೊಂಡಿದ್ದಾರೆ. 

Related Articles

Back to top button