
ಪ್ರಗತಿವಾಹಿನಿ ಸುದ್ದಿ: ಬೆಂಗಳೂರಿನಲ್ಲಿ 7 ಕೋಟಿ 11 ಲಕ್ಷ ಹಣ ದರೋಡೆ ಮಾಡಿ ಪರಾರಿಯಾದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಚಿತ್ತೂರು ಬಳಿ ಇಬ್ಬರು ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂಬ ಮಾಹಿತಿ ಹೊರಬಿದ್ದಿದೆ.
ಘಟನೆಯ ನಂತರ ತನಿಖೆ ಆರಂಭಿಸಿದ ಪೊಲೀಸರು ಇದೀಗ ಆಂಧ್ರಪ್ರದೇಶದ ಚಿತ್ತೂರು ಬಳಿ ಇಬ್ಬರು ವಶಕ್ಕೆ ಪಡೆದಿದ್ದಾರೆ ಎಂದು ವರದಿಯಾಗಿದೆ. ಬಂಧಿತ ಆರೋಪಿಗಳು ಬಾಣಸವಾಡಿಯ ಕಲ್ಯಾಣನಗರದ ನಿವಾಸಿಗಳು ಎಂದು ಹೇಳಲಾಗಿದೆ.
ಚಿತ್ತೂರು ತಿರುಪತಿ ಸುತ್ತಮುತ್ತ ಓಡಾಡುತ್ತಾ ತಲೆಮರೆಸಿಕೊಂಡಿದ್ದ ಇಬ್ಬರು ಖದೀಮರು ಹಾಗೂ ದರೋಡೆಗೆ ಬಳಸಿದ್ದ ಇನೋವಾ ಕಾರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಬೆಂಗಳೂರಿನ ಡೈರಿ ಸರ್ಕಲ್ ಫ್ಲೈ ಓವರ್ ಮೇಲೆ ಬುಧವಾರ ಮಧ್ಯಾಹ್ನ 1 ಗಂಟೆಯ ಸುಮಾರಿಗೆ ಕೆಎ 03 ಎನ್‌ಸಿ 8052 ನಂಬರ್‌ನ ಇನ್ನೋವಾ ಕಾರಿನಲ್ಲಿ ಬಂದ ದುಷ್ಕರ್ಮಿಗಳು ಹಣ ಸಾಗಿಸುತ್ತಿದ್ದ ವಾಹನವನ್ನು ಅಡ್ಡಗಟ್ಟಿ ವಾಹನದಲ್ಲಿದ್ದ 7 ಕೋಟಿ 11 ಲಕ್ಷ ರೂಪಾಯಿ ಹಣವನ್ನು ದೋಚಿ ಪರಾರಿಯಾಗಿದ್ದರು.
ಜಯನಗರದ ಅಶೋಕ ಪಿಲ್ಲರ್ ಬಳಿ ನಾವು ಆರ್‌ಬಿಐನವರು ಎಂದು ಹೇಳಿ ವಾಹನ ನಿಲ್ಲಿಸಿದ್ದಾರೆ. ಗನ್‌ಮ್ಯಾನ್ ಸೇರಿದಂತೆ ಎಲ್ಲರನ್ನೂ ವ್ಯಾನ್‌ನಿಂದ ಇಳಿಸಿ ವಾಹನ ಸಮೇತ ಚಾಲಕನನ್ನು ಡೇರಿ ಸರ್ಕಲ್‌ಗೆ ಕರೆದೊಯ್ದು ಕೃತ್ಯವೆಸಗಿದ್ದಾರೆ.




