Latest

ಇವೇ ನೋಡಿ ‘ಕರ್ನಾಟಕದ 7 ಅದ್ಭುತಗಳು’: ಸಿಎಂ ಬಸವರಾಜ ಬೊಮ್ಮಾಯಿ ಘೋಷಣೆ

 ಪ್ರಗತಿವಾಹಿನಿ ಸುದ್ದಿ, ಬೆಂಗಳೂರು :  ಜಾಗತಿಕ ಹೆಗ್ಗುರುತುಗಳಾಗಿ ‘ಪ್ರಪಂಚದ 7 ಅದ್ಭುತಗಳು’ ಇರುವ ರೀತಿಯಲ್ಲೇ ಇದೀಗ ಕರುನಾಡಿನ ಹೆಗ್ಗುರುತುಗಳಾಗಿ ‘ಕರ್ನಾಟಕದ 7 ಅದ್ಭುತಗಳು’ ಘೋಷಣೆಯಾಗಿದೆ. ರಾಜ್ಯದ ನೆಲ-ಜಲ, ಕಾಡು-ಕಡಲು, ವಾಸ್ತು-ವಿಜ್ಞಾನ, ಶಿಲ್ಪಕಲೆ, ಇತಿಹಾಸ-ಪರಂಪರೆ ಸೇರಿದಂತೆ ಎಲ್ಲ ವೈವಿಧ್ಯಗಳನ್ನೂ ಪ್ರತಿನಿಧಿಸುವ ಏಳು ವಿಶಿಷ್ಟ ತಾಣಗಳನ್ನು ನಾಡಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ‘ಕರ್ನಾಟಕದ 7 ಅದ್ಭುತಗಳು’ ಎಂದು ಘೋಷಿಸಿದ್ದಾರೆ.

ಬೆಂಗಳೂರಿನ ಪಂಚತಾರಾ ಹೋಟೆಲ್‌ವೊಂದರಲ್ಲಿ ಶನಿವಾರ ನಡೆದ ವರ್ಣರಂಜಿತ ಕಾರ್ಯಕ್ರಮದಲ್ಲಿ ‘ಕರ್ನಾಟಕದ 7 ಅದ್ಭುತ’ಗಳನ್ನು ಉದ್ಘೋಷಿಸಲಾಯಿತು. ಇದೇ ವೇಳೆ, ವಿಜೇತ ತಾಣಗಳಿರುವ ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ ಪ್ರಮಾಣಪತ್ರ ಹಸ್ತಾಂತರಿಸಲಾಯಿತು. ನಾಡಿನ ಏಳು ಅದ್ಭುತ ತಾಣಗಳನ್ನು ಏಳು ವಿಭಾಗಗಳ ಅಡಿಯಲ್ಲಿ ಹೆಸರಿಸಲಾಗಿದ್ದು, ಅವು ಇಂತಿವೆ.

1. ಹಿರೇಬೆಣಕಲ್ ಶಿಲಾಸಮಾಧಿಗಳು: ಕ್ರಿ.ಪೂ.800ರಿಂದ 200ರವರೆಗಿನ ಕಾಲದ್ದು ಎನ್ನಲಾದ ಕೊಪ್ಪಳ ಜಿಲ್ಲೆ ಗಂಗಾವತಿ ತಾಲೂಕಿನಲ್ಲಿರುವ ಪ್ರಾಗೈತಿಹಾಸಿಕ ತಾಣವನ್ನು ‘ಬೃಹತ್ ಶಿಲಾಯುಗದ ಅದ್ಭುತ’ ಎಂದು ಘೋಷಿಸಲಾಗಿದೆ.

 

2. ಹಂಪಿ: 14ರಿಂದ 16ನೇ ಶತಮಾನದ ನಡುವೆ ನಿರ್ಮಾಣಗೊಂಡ ‘ಭವ್ಯ ವಿಜಯನಗರ ಸಾಮ್ರಾಜ್ಯದ ವೈಭವವನ್ನು ಸಾರುವ ಈಗಿನ ವಿಜಯನಗರ ಜಿಲ್ಲೆಯ ‘ಹಂಪಿ’ಯನ್ನು ‘ಪುರಾತತ್ವ ಅದ್ಭುತ’ ಎಂದು ಘೋಷಿಸಲಾಗಿದೆ.

 

3. ಗೊಮ್ಮಟೇಶ್ವರ: ಈಗಿನ ಹಾಸನ ಜಿಲ್ಲೆ ಶ್ರವಣಬೆಳಗೊಳದ ವಿಂಧ್ಯಗಿರಿಯ ನೆತ್ತಿಯಲ್ಲಿ 10ನೇ ಶತಮಾನದಲ್ಲಿ ಸ್ಥಾಪನೆಯಾದ 57 ಅಡಿಯ ಭವ್ಯ ಗೊಮ್ಮಟೇಶ್ವರ ಪ್ರತಿಮೆಯನ್ನು ‘ತಾತ್ವಿಕ ಅದ್ಭುತ’ವೆಂದು ಘೋಷಿಸಲಾಗಿದೆ.

 

4 . ಗೋಲಗುಮ್ಮಟ: 17ನೇ ಶತಮಾನದಲ್ಲಿ ಆಗಿನ ಬಿಜಾಪುರ (ಹಾಲಿ ವಿಜಯಪುರ) ಸುಲ್ತಾನ ಮೊಹಮ್ಮದ್ ಆದಿಲ್ ಶಾಹ್ ನಿರ್ಮಿಸಿದ ಬೃಹತ್ ಗೋಲಗುಮ್ಮಟವು ‘ವಾಸ್ತು ವಿಜ್ಞಾನ ಅದ್ಭುತ’ವೆಂಬ ಗೌರವಕ್ಕೆ ಪಾತ್ರವಾಗಿದೆ.

5. ಮೈಸೂರು ಅರಮನೆ: 19-20ನೇ ಶತಮಾನದಲ್ಲಿ ಒಡೆಯರ್ ರಾಜವಂಶಸ್ಥರಿಂದ ನಿರ್ಮಾಣಗೊಂಡ ಮೈಸೂರಿನ ಜಗದ್ವಿಖ್ಯಾತ ಅಂಬಾ ವಿಲಾಸ ಅರಮನೆಯನ್ನು ‘ರಾಜಪರಂಪರಾ ಅದ್ಭುತ’ ಎಂದು ಘೋಷಿಸಲಾಗಿದೆ.

 

6. ಜೋಗ ಜಲಪಾತ: ಭಾರತದಲ್ಲೇ ಅತಿ ಸುಂದರ ಎನಿಸಿರುವ, 830 ಅಡಿ ಎತ್ತರದಿಂದ ಧುಮುಕುವ ಶಿವಮೊಗ್ಗ ಜಿಲ್ಲೆಯ ವಿಶ್ವಪ್ರಸಿದ್ಧ ಜೋಗ ಜಲಪಾತವನ್ನು ‘ನೈಸರ್ಗಿಕ ಅದ್ಭುತ-ನೆಲ’ ಎಂದು ಘೋಷಿಸಲಾಗಿದೆ.

7. ನೇತ್ರಾಣಿ ದ್ವೀಪ: ಉತ್ತರ ಕನ್ನಡ ಜಿಲ್ಲೆ ಮುರುಡೇಶ್ವರ ಬಳಿಯ ಅರಬ್ಬಿ ಸಮುದ್ರದ ನಡುವೆ ಪ್ರೀತಿಯ ಸಂಕೇತದಂತೆ ಹೃದಯಾಕಾರದಲ್ಲಿರುವ ನೇತ್ರಾಣಿ ದ್ವೀಪವನ್ನು ‘ನೈಸರ್ಗಿಕ ಅದ್ಭುತ-ಜಲ’ ಎಂದು ಘೋಷಿಸಲಾಗಿದೆ.

 

ಉದ್ಘೋಷಣೆ ಬಳಿಕ ಮಾತನಾಡಿದ ಬಸವರಾಜ ಬೊಮ್ಮಾಯಿ ಅವರು, ‘ಕರ್ನಾಟಕದ ಏಳು ಅದ್ಭುತಗಳು’ ಹೊಸ ಪ್ರವಾಸೋದ್ಯಮ ಮಾದರಿಗಳ ಸೃಷ್ಟಿಗೆ ದಿಕ್ಸೂಚಿಯಾಗಲಿವೆ. ಈ ಏಳು ಅಧಿಕೃತ ಅದ್ಭುತಗಳ ಪಟ್ಟಿಯಲ್ಲಿ ಒಂದಾಗಿರುವ ಹಿರೇಬಣಕಲ್ ಅಭಿವೃದ್ಧಿಗೆ ಸಮಗ್ರ ವರದಿ ಸಿದ್ಧಪಡಿಸಲು ಈಗಾಗಲೇ ಸೂಚಿಸಿದ್ದೇನೆ. ಜತೆಗೆ ಏಳೂ ಅದ್ಭುತಗಳ ಸ್ಥಳದಲ್ಲಿ ಆಗಬೇಕಿರುವ ಅಭಿವೃದ್ಧಿಗಳ ಬಗ್ಗೆ ನೀಲನಕ್ಷೆ ಸಿದ್ಧಪಡಿಸಿ ಸರ್ಕಾರಕ್ಕೆ ಸಲ್ಲಿಸುವಂತೆ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡುತ್ತಿದ್ದೇನೆ ಎಂದು ತಿಳಿಸಿದರು.

ಕರ್ನಾಟಕದ ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್ ಮಾತನಾಡಿ, ನಾನು ಪ್ರವಾಸೋದ್ಯಮ ಸಚಿವನಾದ ಬಳಿಕ ರಾಜ್ಯದ ಸಾಕಷ್ಟು ತಾಣಗಳಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಮಾಡಲಾಗಿದೆ. ಅದರ ಜತೆಗೆ ಇನ್ನಷ್ಟು ಕಾರ್ಯಗಳು ಆಗಬೇಕಿದೆ. ಏಳು ಅದ್ಭುತ ತಾಣಗಳ ಸಂರಕ್ಷಣೆ ನಿರಂತರವಾಗಿರಬೇಕು. ಆದರೆ, ನಾವಿನ್ನು ಕೆಲವೇ ದಿನಗಳಲ್ಲಿ ವಿಧಾನಸಭಾ ಚುನಾವಣೆಗೆ ಹೋಗುತ್ತಿದ್ದೇವೆ. ಪಕ್ಷಗಳು ಅಧಿಕಾರಕ್ಕೆ ಬರುತ್ತವೆ ಹೋಗುತ್ತವೆ. ಕಾರ್ಯಾಂಗವು ಈ ತಾಣಗಳ ರಕ್ಷಣೆಯನ್ನು ಮುಂದುವರೆಸಿಕೊಂಡು ಹೋಗಬೇಕು. ಈ ಕಾರ್ಯಕ್ಕೆ ಜನತೆ ಸಹಕರಿಸಬೇಕು. ಸರ್ಕಾರ ಯಾವುದೇ ಇರಲಿ ಜಿಲ್ಲಾಧಿಕಾರಿಗಳು, ಪ್ರವಾಸೋದ್ಯಮ ಇಲಾಖೆ ಅಧಿಕಾರಿಗಳು ಇಂಥಹ ಹೊಣೆಗಾರಿಕೆ ನಿಭಾಯಿಸುವಲ್ಲಿ ಹಿಂದೆ ಬೀಳಬಾರದು ಎಂದರು.

‘ಕರ್ನಾಟಕದ 7 ಅದ್ಭುತಗಳು’ ಅಭಿಯಾನದ ರಾಯಭಾರಿ, ಖ್ಯಾತ ನಟ ರಮೇಶ್ ಅರವಿಂದ್ ಮಾತನಾಡಿ, ಕರ್ನಾಟಕದಲ್ಲಿ ನೂರಾರು ಅದ್ಭುತಗಳಿವೆ. ಅವುಗಳಲ್ಲಿ ಏಳನ್ನು ಪ್ರಾತಿನಿಧಿಕವಾಗಿ ಆಯ್ಕೆ ಮಾಡಿ ಅದ ಮೇಲೆ ಬೆಳಕು ಚೆಲ್ಲುವ ಕೈಂಕರ್ಯಕ್ಕೆ ರಾಯಭಾರಿಯಾಗುವಂತೆ ನನ್ನನ್ನು ಕೇಳಿಕೊಂಡಾಗ ತಕ್ಷಣ ಪ್ರೀತಿಯಿಂದ ಒಪ್ಪಿಕೊಂಡೆ. ಪ್ರತಿವರ್ಷ ವಿಶ್ವ ಸುಂದರಿಯರು ಬದಲಾಗುತ್ತಾರೆ. ಆದರೆ, ಈ ಏಳು ಅದ್ಭುತಗಳೆಂದ ಈ ವಿಶ್ವ ಸುಂದರಿಯರು ನೂರಾರು ವರ್ಷಗಳಿಂದ ಸೌಂದರ್ಯ ಉಳಿಸಿಕೊಂಡಿವೆ. ಸರ್ವ ಕಾಲಕ್ಕೂ ಈ ಸೌಂದರ್ಯ ಹಾಗೇ ಇರಲಿದೆ. ನಮ್ಮ ಗ್ರಂಥಗಳಲ್ಲಿ ಸತ್ಯಂ ಶಿವಂ ಸುಂದರಂ ಎಂದು ತಿಳಿಸಿದಂತೆ ಒಂದು ವಿಚಾರ ಶಾಶ್ವತವಾಗಿ ಸುಂದರವಾಗಿರಬೇಕಾದರೆ ಅದರ ಹಿಂದೆ ಸತ್ಯ, ದೈವತ್ವ, ಸತ್ವ ಅಡಗಿರಬೇಕು. ಈ ಏಳು ಅದ್ಭುತಗಳು ನೋಟಕ್ಕೆ ಮಾತ್ರ ಸುಂದರವಾಗಿಲ್ಲ. ಅದರ ಜತೆಗೆ ನಮ್ಮತನ, ನಮ್ಮ ಸಂಸ್ಕೃತಿ, ನಮ್ಮ ಪರಂಪರೆಯನ್ನು  ಪ್ರತಿಬಿಂಬಿಸುವಂತಹ ಸತ್ಯ, ಸತ್ವವನ್ನು ಒಳಗೊಂಡಿವೆ ಎಂದು ಬಣ್ಣಿಸಿದರು.

ಕೊಪ್ಪಳ ಜಿಲ್ಲಾಧಿಕಾರಿ ಸುಂದರೇಶ್ ಬಾಬು, ವಿಜಯನಗರ ಜಿಲ್ಲಾಧಿಕಾರಿ ಟಿ.ವೆಂಕಟೇಶ್, ಹಾಸನ ಜಿಲ್ಲಾಧಿಕಾರಿ ಎಂ.ಎಸ್.ಅರ್ಚನಾ, ವಿಜಯಪುರ ಜಿಲ್ಲಾಧಿಕಾರಿ ಮಹಾಂತೇಶ್ ದಾನಮ್ಮನವರ್, ಮೈಸೂರು ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ, ಶಿವಮೊಗ್ಗ ಜಿಲ್ಲಾಧಿಕಾರಿಗಳ ಪರವಾಗಿ ಸಾಗರ ಉಪವಿಭಾಗಾಧಿಕಾರಿ ಪಲ್ಲವಿ, ಉತ್ತರ ಕನ್ನಡ ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಅವರು ವಿಜೇತ ತಾಣಗಳ ಪ್ರಮಾಣಪತ್ರ ಹಾಗೂ ಘೋಷಣಾ ಫಲಕ ಸ್ವೀಕರಿಸಿದರು. ಕರ್ನಾಟಕ ಪ್ರವಾಸೋದ್ಯಮ ಇಲಾಖೆಯ ಸಹಯೋಗದೊಂದಿಗೆ ಕನ್ನಡಪ್ರಭ ದಿನಪತ್ರಿಕೆ ಹಾಗೂ ಏಷ್ಯಾನೆಟ್ ಸುವರ್ಣ ನ್ಯೂಸ್ ಸುದ್ದಿವಾಹಿನಿ ‘ಕರ್ನಾಟಕದ 7 ಅದ್ಭುತಗಳ’ ಆಯ್ಕೆಗೆ ಮಹಾ ಅಭಿಯಾನ ಕೈಗೊಂಡಿದ್ದವು.

 

ತೀರ್ಪುಗಾರರ ಸಮಿತಿ:

‘ಕರ್ನಾಟಕದ 7 ಅದ್ಭುತಗಳು’ ಆಯ್ಕೆಗೆ ತೀರ್ಪುಗಾರರಾಗಿ ರಾಜ್ಯ ಸ್ಟಾರ್ಟಪ್ ವಿಷನ್ ಗ್ರೂಪ್‌ನ ಅಧ್ಯಕ್ಷರೂ ಆಗಿರುವ ಸರಣಿ ಆತಿಥ್ಯ ಉದ್ಯಮಿ ಪ್ರಶಾಂತ್ ಪ್ರಕಾಶ್; 3 ಬಾರಿ ಗ್ರ್ಯಾಮಿ ಪ್ರಶಸ್ತಿ ಪುರಸ್ಕೃತ ಸಂಗೀತಗಾರ, ವಿಶ್ವಸಂಸ್ಥೆಯ ಗುಡ್‌ವಿಲ್ ರಾಯಭಾರಿ, ಪರಿಸರವಾದಿ ರಿಕ್ಕಿ ಕೇಜ್; ವೈಲ್ಡ್ ಕರ್ನಾಟಕ, ಗಂಧದ ಗುಡಿ ಚಿತ್ರಗಳ ನಿರ್ದೇಶಕ, ನಿಸರ್ಗ ಛಾಯಾಚಿತ್ರಗಾರ ಅಮೋಘವರ್ಷ; ಕರ್ನಾಟಕ ಇತಿಹಾಸ ಅಕಾಡೆಮಿಯ ಅಧ್ಯಕ್ಷರೂ ಆಗಿರುವ ಖ್ಯಾತ ಪುರಾತತ್ವ ಹಾಗೂ ಇತಿಹಾಸ ತಜ್ಞ ಡಾ|ದೇವರಕೊಂಡ ರೆಡ್ಡಿ; ವಿಶ್ವವಿಖ್ಯಾತ ವೇಗದ ಚಿತ್ರ ಕಲಾವಿದ ಹಾಗೂ ಯುವ ವಿಶ್ವ ಪ್ರವಾಸಿಗ ವಿಲಾಸ್ ನಾಯಕ್; ಕರ್ನಾಟಕ ರಾಜ್ಯ ಪ್ರವಾಸೋದ್ಯಮ ನಿಗಮದ ವ್ಯವಸ್ಥಾಪಕ ನಿರ್ದೇಶಕ ಹಾಗೂ ಮುಖ್ಯಮಂತ್ರಿಗಳ ಜಂಟಿ ಕಾರ್ಯದರ್ಶಿ ಜಿ.ಜಗದೀಶ್; ಕನ್ನಡಪ್ರಭ ಮತ್ತು ಏಷ್ಯಾನೆಟ್ ಸುವರ್ಣ ನ್ಯೂಸ್ ಮಾಧ್ಯಮ ಸಂಸ್ಥೆಗಳ ಪ್ರಧಾನ ಸಂಪಾದಕ ರವಿ ಹೆಗಡೆ ಪಾಲ್ಗೊಂಡಿದ್ದರು.

 

ಆಯ್ಕೆ ಹೇಗಾಯಿತು?:

ಕರುನಾಡಿನ ನೆಲ, ಜಲ, ಕಾಡು, ಕಡಲು, ವಾಸ್ತು, ವಿಜ್ಞಾನ, ಶಿಲ್ಪ, ಕಲೆ, ಇತಿಹಾಸ, ಪರಂಪರೆ, ಕನ್ನಡಿಗರ ತತ್ವ ಸಿದ್ಧಾಂತಗಳೂ ಸೇರಿದಂತೆ ರಾಜ್ಯದ ಎಲ್ಲ ವೈವಿಧ್ಯಗಳ ಪ್ರಾತಿನಿಧಿಕ ಹೆಗ್ಗುರುತುಗಳು ಎನಿಸುವಂತಹ ‘7 ಅದ್ಭುತ ತಾಣ’ಗಳ ಆಯ್ಕೆಗೆ ಸುದೀರ್ಘ ಅಭಿಯಾನ ನಡೆದಿತ್ತು. ‘ಕರ್ನಾಟಕದ 7 ಅದ್ಭುತ’ಗಳಿಗಾಗಿ ರಾಜ್ಯದ ಮೂಲೆ ಮೂಲೆಯ ಜನರು ಐದು ಸಾವಿರಕ್ಕೂ ಹೆಚ್ಚು ತಾಣಗಳನ್ನು ನಾಮನಿರ್ದೇಶನ ಮಾಡಿದ್ದರು. ಇವುಗಳನ್ನು ಆಂತರಿಕ ತೀರ್ಪುಗಾರರ ಸಮಿತಿಯು ಪರಿಶೀಲಿಸಿ ಉತ್ತಮ ಎನಿಸುವಂತಹ 100 ತಾಣಗಳನ್ನು ಆರಿಸಿತ್ತು. ಬಳಿಕ ಈ 100 ತಾಣಗಳನ್ನು ಜನಮತ ಪರೀಕ್ಷೆಗೆ ಒಡ್ಡಲಾಯಿತು. ಕನ್ನಡಪ್ರಭ ಹಾಗೂ ಏಷ್ಯಾನೆಟ್ ಸುವರ್ಣ ನ್ಯೂಸ್ ಮಾಧ್ಯಮದಲ್ಲಿ ನೀಡಲಾದ ಕರೆಯ ಮೇರೆಗೆ ವೆಬ್‌ಸೈಟ್ ಹಾಗೂ ಆನ್‌ಲೈನ್ ಮಾಧ್ಯಮಗಳ ಮೂಲಕ ಸುಮಾರು 82 ಲಕ್ಷಕ್ಕೂ ಹೆಚ್ಚು ಜನಮತ ಚಲಾವಣೆಯಾಗಿದ್ದವು. ಈ ಪೈಕಿ ಅತಿಹೆಚ್ಚು ಜನಮತ ಪಡೆದ 21 ತಾಣಗಳನ್ನು ಅಂತಿಮ ಸುತ್ತಿಗೆ ಆರಿಸಲಾಗಿತ್ತು. ಒಂದು ವರ್ಷದ ಕಾಲ ಸುದೀರ್ಘ ಸ್ಥಳ ಸಮೀಕ್ಷೆ ನಡೆಸಿದ ಬಳಿಕ ಈ ತಾಣಗಳನ್ನು ಜಾಗತಿಕ ಪ್ರವಾಸೋದ್ಯಮ ಹಾಗೂ ಇತಿಹಾಸ ತಜ್ಞರಿರುವ ಏಳು ತೀರ್ಪುಗಾರರ ಸಮಿತಿಯ ಮುಂದಿಡಲಾಗಿತ್ತು. ಈ ಸಮಿತಿಯ ಸದಸ್ಯರು 7 ಅಂಶಗಳ ಮಾನದಂಡಗಳನ್ನು ಮುಂದಿಟ್ಟು ವಿಜೇತ ತಾಣಗಳ ಆಯ್ಕೆಗೆ ವಿಚಾರ ಮಂಥನ ನಡೆಸಿದರು. ಚಾರಿತ್ರಿಕ, ನಿರ್ಮಾಣ ಹಾಗೂ ಬಳಕೆಯಾದ ದ್ರವ್ಯ, ವೈಶಿಷ್ಟ್ಯ ಮತ್ತು ಅನನ್ಯತೆ, ಸೌಂದರ್ಯ ಮತ್ತು ಕಲಾತ್ಮಕತೆ, ಬೃಹದಾಕಾರ, ಸುಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಅಂತಿಮವಾಗಿ 7 ಅದ್ಭುತಗಳನ್ನು ಒಮ್ಮತದಿಂದ ಆರಿಸಿದರು.

 

ಕರ್ನಾಟಕದ 7 ಅದ್ಭುತಗಳ ಪರಿಚಯ

 

1. ಹಿರೇಬೆಣಕಲ್ ಶಿಲಾ ಸಮಾಧಿಗಳು (ಬೃಹತ್ ಶಿಲಾಯುಗದ ಅದ್ಭುತ)

ಬಹುತೇಕ ಕನ್ನಡಿಗರಿಗೇ ಅಪರಿಚಿತವಾದ ಕರ್ನಾಟಕದ ಅದ್ಭುತ ಇದು. ಸುಮಾರು 3000-4000 ವರ್ಷಗಳಷ್ಟು ಹಳೆಯ ಇತಿಹಾಸ ಇರುವ ತಾಣ. ಕೊಪ್ಪಳ ಜಿಲ್ಲೆ ಗಂಗಾವತಿಯಿಂದ ಸುಮಾರು 10 ಕಿ.ಮೀ. ದೂರದ ಹಿರೇಬೆಣಕಲ್ ಗ್ರಾಮದ ಮೋರ್ಯಾರ ಗುಡ್ಡದಲ್ಲಿ ಆದಿಮಾನವ ನಿರ್ಮಿತ ಬೃಹತ್ ಶಿಲಾಯುಗದ ನೂರಾರು ಶಿಲಾಸಮಾಧಿಗಳು ಹಾಗೂ ಆದಿಮಾನವ ರಚಿತ ಗುಹಾಚಿತ್ರಗಳು ಇವೆ. ಲಂಡನ್ನಿನ ಸ್ಟೋನ್ ಹೆಂಜಸ್, ಈಜಿಪ್ಟಿನ ಪಿರಮಿಡ್ಡುಗಳು, ಬಹರೈನಿನ ದಿಲ್ಮನ್ ಸಮಾಧಿ ದಿಬ್ಬಗಳಂತೆ – ಸಾವಿನ ಗೌರವ ಸೂಚಕಗಳು – ಈ ಶಿಲಾಸಮಾಧಿ ಡೋಲ್ಮನ್‌ಗಳು. ವಿಶ್ವದ ಹಲವೆಡೆ ಇಂಥ ಡೋಲ್ಮನ್‌ಗಳು ಇದ್ದು, ಕೊರಿಯಾ ಒಂದರಲ್ಲೇ ವಿಶ್ವದ ಶೇ.40ರಷ್ಟು ಡೋಲ್ಮನ್‌ಗಳು ಪತ್ತೆಯಾಗಿವೆ. ಭಾರತದಲ್ಲಿ ಹಲವೆಡೆ ಈ ಶಿಲಾಸಮಾಧಿಗಳು ಪತ್ತೆಯಾಗಿವೆಯಾದರೂ, ಹಿರೇಬೆಣಕಲ್ ಮೋರ್ಯಾರ ಗುಡ್ಡ ಇಡೀ ದಕ್ಷಿಣ ಭಾರತದಲ್ಲೇ ಅತಿದೊಡ್ಡ ಮೆಗಾಲಿಥಿಕ್ ತಾಣವಾಗಿದೆ. ಒಂದು ಅಡಿಯ ಶಿಲಾಸಮಾಧಿಯಿಂದ ಹಿಡಿದು 10 ಅಡಿ ಶಿಲಾಚಪ್ಪಡಿಯ ಸಮಾಧಿಗಳು ಮೂರು-ನಾಲ್ಕು ಸಾವಿರ ವರ್ಷಗಳ ಪ್ರಾಕೃತಿಕ ಹೊಡೆತಗಳನ್ನು ತಾಳಿಯೂ ಇನ್ನೂ ಗಟ್ಟಿಯಾಗಿ ನಿಂತಿರುವುದು ನಿಜಕ್ಕೂ ಅದ್ಭುತ. ಕರ್ನಾಟಕದಲ್ಲಿ ಇರುವ ಇಂಥ ಅನೇಕ ಪ್ರಾಗೈತಿಹಾಸಿಕ ತಾಣಗಳ ಪ್ರಾತಿನಿಧಿಕ ಅದ್ಭುತವೇ ಹಿರೇಬೆಣಕಲ್ ಮೋರ್ಯಾರ ಗುಡ್ಡದ ಶಿಲಾ ಸಮಾಧಿಗಳು.

 

2. ಹಂಪಿ (ಪುರಾತತ್ವ ಅದ್ಭುತ)

ರೋಮ್ ನಂತೆ ಇಡೀ ಹಂಪಿಯೇ ಒಂದು ಅದ್ಭುತ. ಇದನ್ನು ಜಗತ್ತಿನ ಅತಿದೊಡ್ಡ ಓಪನ್ ಏರ್ ಆರ್ಕಿಯಾಲಜಿಕಲ್ ಮ್ಯೂಸಿಯಂಗಳಲ್ಲಿ ಒಂದು ಎಂದು ಹೇಳಬಹುದು. ಇಲ್ಲಿನ ಶಿಲ್ಪಕಲಾ ವೈಭವ, ಶಿಲ್ಪಕಲಾ ವೈವಿಧ್ಯ, ನೂರಾರು ಸ್ಮಾರಕಗಳು, ಜಗತ್ಪ್ರಸಿದ್ಧ. ಹಂಪಿಯ ಕಲ್ಲಿನ ರಥ ಯಾರಿಗೆ ಗೊತ್ತಿಲ್ಲ ಹೇಳಿ. ಇಲ್ಲಿನ ಕಲ್ಲುಕಲ್ಲಿನಲಿ ಶಿಲೆಗಳು ಸಂಗೀತ ನುಡಿಸುತ್ತವೆ ಎಂಬುದು ಅಕ್ಷರಶಃ ನಿಜ. ಇದಕ್ಕೆ ವಿಜಯ ವಿಠ್ಠಲ ದೇವಾಲಯದ ಸಂಗೀತ ಕಂಬಗಳಿಂದ ಹಿಡಿದು, ಮಹಾನವಮಿ ದಿಬ್ಬದ ಬಳಿ ಇರುವ ಕಲ್ಲಿನ ಊಟದ ತಟ್ಟೆಗಳವರೆಗೆ ಅನೇಕ ಸಾಕ್ಷಾತ್ ನಿದರ್ಶನಗಳಿವೆ. ಅಲ್ಲದೆ, ಹಂಪಿಯ ಸುತ್ತ ಇರುವ ಬಂಡೆ ಬೆಟ್ಟಗಳ ಪರಿಸರ ಕರ್ನಾಟಕದ ವೈವಿಧ್ಯಮಯ ನಿಸರ್ಗ ಸೌಂದರ್ಯಕ್ಕೆ ಪ್ರತ್ಯೇಕ ಮೆರುಗನ್ನೇ ನೀಡಿದೆ. ಕರ್ನಾಟಕದಲ್ಲಿ ಹಂಪಿಯಂಥ ಹಲವಾರು ಶಿಲ್ಪಕಲೆಯ ಪುರಾತತ್ವ ಅದ್ಭುತಗಳಿವೆ. ಪ್ರತಿಯೊಂದೂ ತಾವೇ ತಾವಾಗಿ ಒಂದೊಂದು ಅದ್ಭುತ ಎನಿಸಿಕೊಳ್ಳಬೇಕಾದಂಥವು. ಬೇಲೂರು ಚನ್ನಕೇಶವ ದೇವಾಲಯ ಭಾರತೀಯ ಶಿಲ್ಪಕಲೆಯ ಔನ್ನತ್ಯಕ್ಕೆ ಉದಾಹರಣೆ. ಹಳೇಬೀಡು, ಪಟ್ಟದಕಲ್ಲು ದೇವಾಲಯಗಳು ಒಂದೆಡೆಯಾದರೆ ಐಹೊಳೆಯು ಭಾರತೀಯ ದೇವಾಲಯ ಶಿಲ್ಪಕಲೆಯ ತೊಟ್ಟಿಲು ಎಂದೇ ಖ್ಯಾತ. ಬಾದಾಮಿಯ ಗುಹಾಂತರ ದೇವಾಲಯಗಳೂ ಏನೂ ಕಡಿಮೆ ಇಲ್ಲ. ಲಕ್ಕುಂಡಿ, ತಲಕಾಡು ಸೇರಿದಂತೆ ಕರ್ನಾಟಕಾದ್ಯಂತ ಇರುವ ಇಂಥ ಹಲವಾರು ಪುರಾತತ್ವ ವೈಭವದ ಪ್ರಾತಿನಿಧಿಕ ಅದ್ಭುತವೇ ಹಂಪಿ.

 

3. ಶ್ರವಣಬೆಳಗೊಳದ ಗೊಮ್ಮಟೇಶ್ವರ (ತಾತ್ವಿಕ ಅದ್ಭುತ)

ಪ್ರಪಂಚದ ಏಳು ಅದ್ಭುತಗಳಲ್ಲಿ ಒಂದಾದ ರಿಯೋ-ಡಿ-ಜನೈರೋದ ಕಿಸ್ತನ ಪ್ರತಿಮೆ ಹೇಗೋ, ನಮಗೆ ಕರ್ನಾಟಕದ ಶ್ರವಣಬೆಳಗೊಳದ ಗೊಮ್ಮಟೇಶ್ವರ ಪ್ರತಿಮೆ ಹಾಗೆ. ಇತ್ತೀಚೆಗೆ ರಾಜ್ಯದಲ್ಲಿ ಅತಿ ಎತ್ತರದ ಅನೇಕ ಏಕಶಿಲಾ ಪ್ರತಿಮೆಗಳು ರಚನೆಯಾಗುತ್ತಿದ್ದರೂ ಶ್ರವಣಬೆಳಗೊಳದ ಗೊಮ್ಮಟನ ನೂರಾರು ವರ್ಷದ ಇತಿಹಾಸಕ್ಕೆ ಅದ್ಯಾವುದೂ ಸಮವಾಗಲಾರದು. ಶ್ರವಣಬೆಳಗೊಳದ ಬಾಹುಬಲಿ – ಕರ್ನಾಟಕದ ಏಳು ಅದ್ಭುತಗಳಲ್ಲಿ ಒಂದು ಎಂದು ಆಯ್ಕೆಯಾಗಲು ಈ ಪ್ರತಿಮೆ ಜಗತ್ತಿನಾದ್ಯಂತ ಪ್ರಸಿದ್ಧ ಎನ್ನುವುದಷ್ಟೇ ಕಾರಣವಲ್ಲ. ಈ ಪ್ರತಿಮೆ ಕನ್ನಡನಾಡಿನ ಸಮರ-ಶಾಂತಿ ತತ್ವದ ಪ್ರಾತಿನಿಧಿಕ ಕುರುಹು. ‘ರತ-ಬಾಹುಬಲಿಯ ಕಥೆಯನ್ನೊಮ್ಮೆ ಅವಲೋಕಿಸಿ. ನಾವು ಕನ್ನಡಿಗರೂ ಅಷ್ಟೇ ಸಮರಕ್ಕೂ ಸಿದ್ಧ, ಶಾಂತಿಗೂ ಬದ್ಧ. ನಮ್ಮ ಅಪಾರ ಶಕ್ತಿ ಸಾಮರ್ಥ್ಯ ಯಾರ ಮೇಲೋ ದಬ್ಬಾಳಿಕೆ ನಡೆಸಲು ಅಲ್ಲ. ‘ರತನಂತೆ ಯಾರಾದರೂ ನಮ್ಮ ಮೇಲೆ ಹೋರಾಟಕ್ಕೆ ಇಳಿದಾಗ ಬಾಹುಬಲಿಯಾಗಿ ಅವರನ್ನು ಹೊಸಕಿ ಹಾಕುವುದು ನಮಗೆ ಕಷ್ಟವಲ್ಲ. ಆದರೂ ನಮ್ಮಷ್ಟಕ್ಕೆ ನಾವು ಗೊಮ್ಮಟನಂತೆ ಶಾಂತಿ ಪ್ರಿಯರು. ನಮ್ಮ ಈ ಸಮರಕ್ಕೂ ಸಿದ್ಧ, ಶಾಂತಿಗೂ ಬದ್ಧ ತತ್ವದ ಪ್ರಾತಿನಿಧಿಕ ಅದ್ಭುತವೇ ಶ್ರವಣಬೆಳಗೊಳದ ಗೊಮ್ಮಟೇಶ್ವರ. ಅಷ್ಟೇ ಅಲ್ಲ, ಜಗತ್ತಿಗೆ ಅನೇಕ ತತ್ವಾದರ್ಶಗಳನ್ನು ನೀಡಿದ ಕನಕ, ಪುರಂದರ, ಬಸವ, ಮಧ್ವ, ಶಿಶುನಾಳ ಶರೀಫ ಮುಂತಾದ ಎಲ್ಲ ಕನ್ನಡನಾಡಿನ ಮಹನೀಯರ ತಾತ್ವಿಕ ಪ್ರತಿನಿಧಿಯೂ ಹೌದು ಈ ಅದ್ಭುತ.

 

5. ಗೋಲ ಗುಮ್ಮಟ (ವಾಸ್ತು ವಿಜ್ಞಾನ ಅದ್ಭುತ)

ಜಗತ್ತಿನ 7 ಅದ್ಭುತಗಳಲ್ಲಿ ಒಂದಾದ ತಾಜ್ ಮಹಲ್ ಶ್ವೇತ ಸುಂದರಿಯಾದರೆ, ಕರ್ನಾಟಕದ ಗೋಲ ಗುಮ್ಮಟ ಕೃಷ್ಣ ಸುಂದರಿ. ಜಗತ್ತಿನ ಅತಿ ದೊಡ್ಡ ಗುಮ್ಮಟಗಳಲ್ಲಿ ಒಂದು ವಿಜಯಪುರದ ಗೋಲ ಗುಮ್ಮಟ. ಇಂಡೋ-ಸಾರ್ಸೆನಿಕ್ ಶೈಲಿಯ ಈ ಬೃಹತ್ ಸ್ಮಾರಕ ಆದಿಲ್ ಶಾಹಿ ರಾಜಮನೆತನದ ಮಹಾನ್ ಸಮಾಧಿಯಾದರೂ ಪುರಾತತ್ವ ವಾಸ್ತುಶಾಸ್ತ್ರ, ರೇಖಾಗಣಿತ ಮತ್ತು ಶಬ್ದವಿಜ್ಞಾನಕ್ಕೂ ಅತ್ಯುತ್ತಮ ಉದಾಹರಣೆ. ನಾಲ್ಕು ಗೋಡೆಗಳ ಮೇಲೆ, ನಡುವೆ ಯಾವುದೇ ಆಧಾರಗಳಿಲ್ಲದೆ ಬಹುದೊಡ್ಡ ಗುಮ್ಮಟವೊಂದನ್ನು ನಿರ್ಮಿಸಿರುವುದು ವಾಸ್ತುಶಾಸ್ತ್ರಜ್ಞರ ಅಪ್ರತಿಮ ಕೌಶಲ್ಯಕ್ಕೆ ಸಾಕ್ಷಿ. ಅದಕ್ಕಿಂತ ಈ ಗುಮ್ಮಟದ ಶಬ್ದಚಾತುರ್ಯ ಅಮೋಘವಾದುದು. ಗುಮ್ಮಟದ ಒಂದು ಬದಿಯಲ್ಲಿ ಪಿಸುಮಾತನ್ನಾಡಿದರೂ ಅಷ್ಟು ದೂರದ ಇನ್ನೊಂದು ತುದಿಯಲ್ಲಿ ಸ್ಪಷ್ಟವಾಗಿ ಕೇಳಿಸುತ್ತದೆ. ಗುಮ್ಮಟದಲ್ಲಿ ಒಂದು ಕೂಗು ಏಳು ಬಾರಿ ಮಾರ್ದನಿಸುತ್ತದೆ. ಈ ಶಬ್ದವೈಚಿತ್ರ್ಯವನ್ನು, ರೇಖಾಗಣಿತ ಆಧಾರಿತ ಕಟ್ಟಡ ವೈವಿಧ್ಯವನ್ನು ಪ್ರತಿನಿಧಿಸುವ ಕರ್ನಾಟಕದ ಅದ್ಭುತವೇ ಗೋಲ ಗುಮ್ಮಟ. ಅಷ್ಟೇ ಅಲ್ಲದೆ, ಕರ್ನಾಟಕದ ಅನೇಕ ಪ್ರಾಚೀನ ಹಾಗೂ ಆಧುನಿಕ ವಾಸ್ತು ವಿಜ್ಞಾನದ ಪ್ರಾತಿನಿಧಿಕವೂ ಹೌದು ಈ ಅದ್ಭುತ.

 

5. ಮೈಸೂರು ಅರಮನೆ (ರಾಜಪರಂಪರಾ ಅದ್ಭುತ)

ಭಾರತದ ಅತ್ಯಂತ ಸುಂದರ ಅರಮನೆಗಳಲ್ಲಿ ಒಂದು ಮೈಸೂರಿನ ಅರಮನೆ ಎಂದೇ ಖ್ಯಾತವಾದ ಮೈಸೂರಿನ ಅಂಬಾವಿಲಾಸ ಅರಮನೆ. ಕರ್ನಾಟಕದ ಗತವೈಭವವನ್ನು ಭವ್ಯವಾಗಿ ಬಿಂಬಿಸುವ ಈ ಅರಮನೆ ದೀಪಾಲಂಕಾರಗೊಂಡಾಗಲಂತೂ ಬಂಗಾರದ ಅರಮನೆಯಂತೆಯೇ ಭಾಸವಾಗುತ್ತದೆ. ತಾಜ್ ಮಹಲಿನಷ್ಟೇ ಪ್ರವಾಸಿಗರನ್ನು ಸೆಳೆಯುವ ಈ ಅರಮನೆ ಕರ್ನಾಟಕ ಪ್ರವಾಸೋದ್ಯಮದ ಅತ್ಯಂತ ಪ್ರಮುಖ ಆಕರ್ಷಣೆಯೂ ಹೌದು. ಕರ್ನಾಟಕದ 7 ಅದ್ಭುತಗಳಲ್ಲಿ ಒಂದಾಗಿ ಇದು ಆಯ್ಕೆಯಾಗಲು ಇಷ್ಟೇ ಕಾರಣವಲ್ಲ. ಸುಮಾರು 400 ವರ್ಷಗಳ ಇತಿಹಾಸ ಇರುವ ರಾಜಪರಂಪರೆಯ ಮೈಸೂರು ದಸರಾ ಹಬ್ಬ ಇಂದಿಗೂ ಸಜೀವ ಸಂಸ್ಕೃತಿಯಾಗಿ ವಿಜ್ರಂಭಣೆಯಿಂದ ಆಚರಣೆಯಾಗುತ್ತಿದೆ. ಅಲ್ಲದೆ, ಮೈಸೂರಿನ ಒಡೆಯರು, ಅಭಿವೃದ್ಧಿ, ಆಧುನಿಕತೆ, ಆಡಳಿತದಲ್ಲಿ ದೇಶದಲ್ಲೇ ಮುಂಚೂಣಿಯಲ್ಲಿದ್ದರು. ಅಣೆಕಟ್ಟೆ, ನೀರಾವರಿ, ವಿದ್ಯುತ್, ಬೀದಿದೀಪ, ಚಿನ್ನದ ಗಣಿ, ರೈಲ್ವೆಯಂತಹ ಅನೇಕ ಪ್ರಗತಿಪರ ಕೈಂಕರ್ಯದಲ್ಲಿ ಅಗ್ರಗಣ್ಯರಾಗಿದ್ದ ಮೈಸೂರು ಅರಸರು ದೇಶದ ಸ್ವಾತಂತ್ರ್ಯಕ್ಕೂ ಮುನ್ನವೇ ಪ್ರಜಾಪ್ರತಿನಿಧಿ ಸಭೆಯನ್ನೂ ನಡೆಸಿ ದೇಶಕ್ಕೇ ಮಾದರಿಯಾಗಿದ್ದರು. ಕರ್ನಾಟಕದಲ್ಲಿ ವಿಜಯನಗರ ಅರಸರು, ಕದಂಬರು, ರಾಷ್ಟ್ರಕೂಟರು, ಹೊಯ್ಸಳರು, ಚಾಲುಕ್ಯರು… ಹೀಗೆ ಅನೇಕ ಹಿರಿ-ಕಿರಿಯ ಸಂಸ್ಥಾನಗಳ ಶ್ರೇಷ್ಠ ರಾಜಪರಂಪರೆಯಿದೆ. ಈ ಎಲ್ಲ ರಾಜ-ರಾಣಿಯರ ಕೊಡುಗೆ, ದಿಟ್ಟ, ಭವ್ಯ ಪರಂಪರೆಯ ಪ್ರಾತಿನಿಧಿಕ ಅದ್ಭುತವೇ ಮೈಸೂರು ಅರಮನೆ.

 

6. ಜೋಗ ಜಲಪಾತ (ನೈಸರ್ಗಿಕ ಅದ್ಭುತನೆಲ)

ಭಾರತದ ಅತ್ಯಂತ ಸುಂದರ ಹಾಗೂ ಬೃಹತ್ ಜಲಪಾತಗಳಲ್ಲಿ ಜೋಗ ಜಲಪಾತ ಅಗ್ರ ಪಂಕ್ತಿಯಲ್ಲಿ ನಿಲ್ಲುತ್ತದೆ. 830 ಅಡಿ ಎತ್ತರದಿಂದ ಧುಮುಕುವ ಜೋಗ ಜಲಪಾತ ಮಳೆಗಾಲದಲ್ಲಂತೂ ನೀರಿನಿಂದ ತುಂಬಿ ರಾಜಗಾಂಭೀರ್ಯವನ್ನು ಪಡೆಯುತ್ತದೆ. ಲಕ್ಷಾಂತರ ಪ್ರವಾಸಿಗರನ್ನು ಸೆಳೆಯುವ ಜೋಗ ಕರ್ನಾಟಕ ಪ್ರವಾಸೋದ್ಯಮದ ಅತ್ಯಂತ ಪ್ರಮುಖ ಆಕರ್ಷಣೆಯಲ್ಲಿ ಒಂದು. ಕರ್ನಾಟಕದ 7 ಅದ್ಭುತಗಳಲ್ಲಿ ಒಂದಾಗಿ ಇದು ಆಯ್ಕೆಯಾಗಲು ಇವಿಷ್ಟೇ ಕಾರಣವಲ್ಲ. ಜೀವವೈವಿಧ್ಯಗಳಿಂದ ಶ್ರೀಮಂತವಾಗಿರುವ ಪಶ್ಚಿಮ ಘಟ್ಟಗಳು ಭೂಮಿಯ ಅತಿ ಅಪರೂಪದ ಕಾಡುಗಳಲ್ಲಿ ಒಂದು. ಅಂತಹ ಅದ್ಭುತ ನಿಸರ್ಗದಲ್ಲಿರುವ ಜೋಗದ ಪರಿಸರಲ್ಲಿ ಕರ್ನಾಟಕದ ಅಪರೂಪದ ಸಸ್ಯ ಹಾಗೂ ಪ್ರಾಣಿಸಂಕುಲಗಳೂ ಇವೆ. ಶೋಲಾ ಕಾಡುಗಳಿಂದ ಹಿಡಿದು ದಟ್ಟ ನಿತ್ಯಹರಿದ್ವರ್ಣ ಕಾಡುಗಳವರೆಗೆ ಕರ್ನಾಟಕದಲ್ಲಿ 6 ವೈವಿಧ್ಯಮಯ ಕಾಡುಗಳಿವೆ. ನಾಗರಹೊಳೆ, ದಾಂಡೇಲಿಯಂಥ ಹುಲಿ ಸಂರಕ್ಷಿತ ಅಭಯಾರಣ್ಯಗಳಿವೆ.  ಕುದುರೆಮುಖ, ಕೊಡಗು, ಕೊಡಚಾದ್ರಿಯಂಥ ಹಸಿರು ಗಿರಿಧಾಮಗಳಿವೆ. ಶರಾವತಿಯಲ್ಲದೆ ಕಾವೇರಿ, ಕೃಷ್ಣೆ, ತುಂಗಭದ್ರಾದಂಥ ಅನೇಕ ಹಿರಿ-ಕಿರಿಯ ನದಿಗಳಿವೆ. ಹೆಬ್ಬೆ, ಗೋಕಾಕ್ ಫಾಲ್ಸ್, ಗಗನಚುಕ್ಕಿ, ಭರಚುಕ್ಕಿ, ಉಂಚಳ್ಳಿಯಂಥ ಹಲವಾರು ಸುಂದರ ಜಲಪಾತಗಳಿವೆ. ಈ ಎಲ್ಲ ಕರ್ನಾಟಕದ ನೆಲದ ಸೌಂದರ್ಯ ಮತ್ತು ಮಹತ್ವಗಳ ಪ್ರಾತಿನಿಧಿಕ ಅದ್ಭುತವೇ ಜೋಗ ಜಲಪಾತ.

 

7. ನೇತ್ರಾಣಿ ದ್ವೀಪ (ನೈಸರ್ಗಿಕ ಅದ್ಭುತಜಲ)

ಕರ್ನಾಟಕದ ಅದ್ಭುತಗಳೆಂದರೆ ಬರೀ ನೆಲದ ಮೇಲಿನ ಅದ್ಭುತಗಳಷ್ಟೇ ಅಲ್ಲ. ಕರ್ನಾಟಕದ ಅರಬ್ಬಿ ಸಮುದ್ರದ ಕಡಲಗರ್ಭವೂ ಕೂಡ ಅದ್ಭುತವೇ. ಉತ್ತರ ಕನ್ನಡ ಜಿಲ್ಲೆಯ ಮುರುಡೇಶ್ವರ ಬಳಿ ಇರುವ ನೇತ್ರಾಣಿ ದ್ವೀಪ ಪ್ರೀತಿಯ ಸಂಕೇತದಂತೆ ಹೃದಯಾಕಾರದಲ್ಲಿದೆ. ಈ ದ್ವೀಪದ ಸುತ್ತ ಇರುವ ಸಮುದ್ರ ಗರ್ಭ ಎಷ್ಟು ಅದ್ಭುತವಾಗಿದೆಯೆಂದರೆ, ಸ್ಕೂಬಾ ಡೈವಿಂಗ್ ಮಾಡಲು ಭಾರತದಲ್ಲಿ ನೇತ್ರಾಣಿ ದ್ವೀಪ ಎರಡನೇ ಅತ್ಯುತ್ತಮ ಪ್ರದೇಶ. ಒಂದನೇ ಅತ್ಯುತ್ತಮ ಪ್ರದೇಶ ಅಂಡಮಾನ್ ದ್ವೀಪ. ನೇತ್ರಾಣಿ ದ್ವೀಪದ ಕಡಲ ಗ‘ರ್ದಲ್ಲಿ ಆರೋಗ್ಯಕರ ಹವಳದ ಬಂಡೆಗಳಿವೆ. ಅಪರೂಪದ ಜಲಚರಗಳಿವೆ. ಸಾಗರ ಸಸ್ಯಗಳಿವೆ. ಇನ್ನೊಂದು ಗಮನೀಯ ವಿಚಾರ ಎಂದರೆ, ದೇಶದ ಎಲ್ಲ ರಾಜ್ಯಗಳಿಗೂ ಸಮುದ್ರ ಸೌಂದರ್ಯವಿಲ್ಲ. ಆದರೆ, ಕರ್ನಾಟಕದಲ್ಲಿ 310 ಕಿ.ಮೀ.ಯಷ್ಟು ಅದ್ಭುತ ಸಮುದ್ರ ಕಿನಾರೆಯಿದೆ. ನೇತ್ರಾಣಿ ಬಳಿ ಇರುವ ಮುರುಡೇಶ್ವರ ಈಗಾಗಲೇ ಕರ್ನಾಟಕದ ಪ್ರವಾಸೋದ್ಯಮದಲ್ಲಿ ಪ್ರಮುಖ ಸ್ಥಾನ ಪಡೆದಿದ್ದು ರಾಜ್ಯದ ಸಾಗರ ಪ್ರವಾಸೋದ್ಯಮಕ್ಕೆ ಇನ್ನಷ್ಟು ಹೇರಳ ಅವಕಾಶಗಳನ್ನು ಹೊಂದಿದೆ. ಇದರಿಂದ ಕರ್ನಾಟಕದ ಎಲ್ಲ ಸಮುದ್ರ ಕಿನಾರೆಗಳ ಪ್ರಾತಿನಿಧಿಕ ಅದ್ಭುತವೇ ನೇತ್ರಾಣಿ ದ್ವೀಪದ ಕಡಲಗರ್ಭ.

 

*ಭಾರತದ ಪ್ರಥಮ ಮರೀನಾ, ಪುರಾತನ ದೇವಾಲಯಗಳ ಕಾರಿಡಾರ್ ನಿರ್ಮಾಣ: ಸಿಎಂ ಬೊಮ್ಮಾಯಿ*

https://pragati.taskdun.com/karawalibindurindias-first-marinacm-basavaraj-bommai/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button