
ಕರ್ನಾಟಕ ಪ್ರದೇಶ ಗಡಿ ಅಭಿವೃದ್ಧಿ ಪ್ರಾಧಿಕಾರ,ಬೆಳಗಾವಿ ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ ಇವರ ಸಹಯೋಗದಲ್ಲಿ 71 ನೇ ಕರ್ನಾಟಕ ರಾಜ್ಯೋತ್ಸವ
ಅಂಗವಾಗಿ ಬೆಳಗಾವಿಯ ವಿವಿಧ ಭಾಗಗಳಲ್ಲಿ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.
ಶನಿವಾರ 28 ರಂದು ರಾಣಿ ಚೆನ್ನಮ್ಮ ನಗರದ ಮಹಾಲಕ್ಷಿ ದೇವಸ್ಥಾನದ ಆವರಣದಲ್ಲಿ ಸಂಜೆ 5 ಗಂಟೆಗೆ ಕರ್ನಾಟಕ ರಾಜೋತ್ಸವ ಕಾರ್ಯಕ್ರಮವಿದ್ದು ಅಶೋಕ ಚಂದರಗಿ ಹಾಗೂ ಹಿರಿಯ ಪತ್ರಕರ್ತ ಎಂ.ಕೆ.ಹೆಗಡೆ ಅವರು ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ.ಮಾಜಿ ನಗರ ಸೇವಕಿ ಹಾಗೂ ಬೆಳಗಾವಿ ಜಿಲ್ಲಾಡಳಿತದ ರಾಜ್ಯೋತ್ಸವ ಪ್ರಶಸ್ತಿ ವಿಜೇತೆ ಶ್ರೀಮತಿ ಶಿಲಾ ದೇಶಪಾಂಡೆ ಅಧ್ಯಕ್ಷತೆ ವಹಿಸುವರು.
ರವಿವಾರ 29 ರಂದು ಸಂಜೆ 5 ಗಂಟೆಗೆ ಬೆಳಗಾವಿ ಮಧ್ಯಭಾಗದಲ್ಲಿರುವ ಶೇರಿಗಲ್ಲಿ ವೃತ್ತದಲ್ಲಿ ನೃಪತುಂಗ ಯುವಕ ಸಂಘ ಹಾಗೂ ಸ್ವಸ್ತಿಕ್ ಫೌಂಡೇಶನ್ ಆಶ್ರಯದಲ್ಲಿ ಕನ್ನಡ ನುಡಿಹಬ್ಬ ಕಾರ್ಯಕ್ರವಿದೆ.ಅಧ್ಯಕ್ಷತೆಯನ್ನು ಬೆಳಗಾವಿ ಉತ್ತರ ಶಾಸಕ ಶ್ರೀ ಆಸಿಫ್ ಸೇಠ್ ಅವರು ವಹಿಸಲಿದ್ದಾರೆ.ಅತಿಥಿಗಳಾಗಿ ಅಶೋಕ ಚಂದರಗಿ ಮತ್ತಿತರರು ಆಗಮಿಸುವರು.
ಸೋಮವಾರ 30 ರಂದು ಮತ್ತು ಮಂಗಳವಾರ ಡಿಸೆಂಬರ್ ಒಂದರಂದು ವಡಗಾವಿ ಸಫಾರಗಲ್ಲಿಯ ಶ್ರೀ ಬನಶಂಕರಿ ದೇವಸ್ಥಾನದ ಸಭಾಂಗಣಗಳಲ್ಲಿ ಹಳೆಯ ಸುಮಧುರ ಕನ್ನಡ ಚಲನಚಿತ್ರಗಳ ಅಮರ ಗೀತೆಗಳ ರಸದೌತಣ ಕಾರ್ಯಕ್ರಮ ನಡೆಯಲಿದೆ.
ಅಧ್ಯಕ್ಷತೆಯನ್ನು ಬೆಳಗಾವಿ ದಕ್ಷಿಣ ಶಾಸಕ ಶ್ರೀ ಅಭಯ ಪಾಟೀಲ ವಹಿಸಲಿದ್ದು ಮುಖ್ಯ ಅತಿಥಿಗಳಾಗಿ ಶ್ರೀ ಅಶೋಕ ಚಂದರಗಿ ,ಸೊಲ್ಲಾಪುರದ ಹೊರನಾಡು ಕನ್ನಡ ಹೋರಾಟಗಾರ ಶ್ರೀ ಓಂ ಶಂಕರ ಹುಲಗೇರಿ ,ನಗರ ಸೇವಕ ರಮೇಶ ಸೊಂಟಕ್ಕಿ,ವೆಂಕಟೇಶ ವನಹಳ್ಳಿ,ಬಲರಾಮ ಮಾಸೇನಟ್ಟಿ,ಮಹಾದೇವ ತಳವಾರ ಆಗಮಿಸಲಿದ್ದು ರಾಜಕುಮಾರ ಅಭಿಮಾನಿ ಸಂಘ ಹಾಗೂ ಬೆಳಗಾವಿ ಜಿಲ್ಲಾ ನೇಕಾರರ ಒಕ್ಕೂಟದ ಆಶ್ರಯದಲ್ಲಿ ಎರಡು ದಿನಗಳ ಕಾಲ ಕಾರ್ಯಕ್ರಮ ನಡೆಯಲಿವೆ.
ರಾಜ್ಯೋತ್ಸವ ಕಾರ್ಯಕ್ರಮಗಳಿಗೆ ಆಗಮಿಸಬೇಕೆಂದು ಕೋರಲಾಗಿದೆ.




