ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಕಂದಾಯ, ಆರೋಗ್ಯ, ಆಹಾರ ಸೇರಿದಂತೆ 84 ಇಲಾಖೆಗಳ ಸುಮಾರು 800 ಬಗೆಯ ಸರ್ಕಾರಿ ಸೇವೆಗಳನ್ನು ಜನರ ಮನೆ ಬಾಗಿಲಿಗೆ ಒದಗಿಸುವ ಉದ್ದೇಶದಿಂದ “ಗ್ರಾಮ ಒನ್” ಕೇಂದ್ರಗಳನ್ನು ಆರಂಭಿಸಲಾಗಿದೆ. ನಿಗದಿತ ಸೇವೆಗಳನ್ನು ಜನರಿಗೆ ಸಮರ್ಪಕವಾಗಿ ಒದಗಿಸಬೇಕು ಎಂದು ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಅವರು ಗ್ರಾಮ ಒನ್ ಕೇಂದ್ರಗಳ ಆಪರೇಟರ್ ಗಳಿಗೆ ಸೂಚನೆ ನೀಡಿದರು.
ಸಮೀಪದ ಹಿಂಡಲಗಾ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗಣೇಶಪುರದಲ್ಲಿ ಆರಂಭಿಸಲಾಗಿರುವ “ಗ್ರಾಮ ಒನ್” ಸೇವಾ ಕೇಂದ್ರಕ್ಕೆ ಶುಕ್ರವಾರ (ಫೆ.4) ಭೇಟಿ ನೀಡಿ ಪರಿಶೀಲನೆ ನಡೆಸಿ ಅವರು ಮಾತನಾಡಿದರು.
ಕಂದಾಯ, ಆರೋಗ್ಯ ಸೇರಿದಂತೆ ಪ್ರಮುಖ ಇಲಾಖೆಗಳ ಸೇವೆಗಳನ್ನು ಆಯಾ ಗ್ರಾಮದಲ್ಲಿ ಒದಗಿಸುವ ಮೂಲಕ ಸರಕಾರಿ ಸೇವೆಗಳನ್ನು ಜನರ ಮನೆ ಬಾಗಿಲಿಗೆ ಕೊಂಡೊಯ್ಯುವ ಆಶಯವನ್ನು ಸರಕಾರ ಹೊಂದಿದೆ. ಆದ್ದರಿಂದ ಈ ಆಶಯಕ್ಕೆ ಧಕ್ಕೆಯಾಗದಂತೆ ಗ್ರಾಮ ಒನ್ ಕೇಂದ್ರಗಳಲ್ಲಿ ಉತ್ತಮ ಸೇವೆಯನ್ನು ಒದಗಿಸಬೇಕು ಎಂದು ತಿಳಿಸಿದರು.
ಪ್ರತಿಯೊಂದು ಸೇವೆಗೂ ನಿಗದಿತ ಶುಲ್ಕವನ್ನು ಸರಕಾರ ನಿಗದಿಪಡಿಸಿರುತ್ತದೆ. ಆ ಪ್ರಕಾರವೇ ನಾಗರಿಕರಿಂದ ಶುಲ್ಕವನ್ನು ಪಡೆಯಬೇಕು. ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಅವರು ಕೇಂದ್ರಗಳ ಆಪರೇಟರ್ ಗಳಿಗೆ ಸೂಚನೆ ನೀಡಿದರು.
ಇದೇ ಸಂದರ್ಭದಲ್ಲಿ ಗ್ರಾಮ ಒನ್ ಕೇಂದ್ರದಲ್ಲಿ ಲಭ್ಯವಿರುವ ಸೇವೆಗಳು ಹಾಗೂ ಅವುಗಳನ್ನು ಪಡೆದುಕೊಳ್ಳುವ ವಿಧಾನಗಳ ಕುರಿತು ಆಪರೇಟರ್ ಗಳಿಂದ ಮಾಹಿತಿಯನ್ನು ಪಡೆದುಕೊಂಡ ಜಿಲ್ಲಾಧಿಕಾರಿಗಳು, ಕೇಂದ್ರದಲ್ಲಿನ ಮೂಲಸೌಕರ್ಯಗಳನ್ನು ವೀಕ್ಷಿಸಿದರು.
ಜಿಲ್ಲೆಯಲ್ಲಿ 778 ಗ್ರಾಮ ಒನ್ ಕೇಂದ್ರಗಳು:
ಬೆಳಗಾವಿ ಜಿಲ್ಲೆಯಲ್ಲಿ ಒಟ್ಟು 778 ಗ್ರಾಮ ಒನ್ ಕೇಂದ್ರಗಳನ್ನು ಈಗಾಗಲೇ ಆರಂಭಿಸಲಾಗಿದೆ. ಈ ಕೇಂದ್ರದಲ್ಲಿ 84 ಇಲಾಖೆಗಳ 800 ಕ್ಕೂ ಅಧಿಕ ಸೇವೆಗಳು ಲಭ್ಯವಿರುತ್ತವೆ.
ಕಂದಾಯ ಇಲಾಖೆಯ ಆರ್.ಟಿ.ಸಿ., ಆದಾಯ ಪ್ರಮಾಣಪತ್ರ, ಜಾತಿ ಪ್ರಮಾಣಪತ್ರ; ಆರೋಗ್ಯ ಇಲಾಖೆಯ ಆಯುಷ್ಮಾನ್ ಭಾರತ-ಆರೋಗ್ಯ ಕರ್ನಾಟಕ ಕಾರ್ಡು; ಕಾರ್ಮಿಕ ಇಲಾಖೆಯ ಕಾರ್ಮಿಕ ಕಾರ್ಡುಗಳು ಸೇರಿದಂತೆ ಬಹುತೇಕ ಸೇವೆಗಳನ್ನು ಗ್ರಾಮ ಒನ್ ಕೇಂದ್ರದಲ್ಲಿ ಪಡೆದುಕೊಳ್ಳಬಹುದು ಎಂದು ಜಿಲ್ಲಾಧಿಕಾರಿ ಹಿರೇಮಠ ತಿಳಿಸಿದರು.
ಅಪರ ಜಿಲ್ಲಾಧಿಕಾರಿ ಅಶೋಕ ದುಡಗುಂಟಿ ಉಪಸ್ಥಿತರಿದ್ದರು.
ಗ್ರಾಮ ಒನ್ ಆಪರೇಟರ್ ಸಭೆ:
ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಅವರ ಅಧ್ಯಕ್ಷತೆಯಲ್ಲಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಶುಕ್ರವಾರ ಬೆಳಿಗ್ಗೆ ಗ್ರಾಮ ಒನ್ ಕೇಂದ್ರಗಳ ಆಪರೇಟರ್ ಗಳ ಸಭೆ ನಡೆಯಿತು.
ಸರಕಾರಿ ಸೇವೆಗಳನ್ನು ಜನರ ಮನೆಬಾಗಿಲಿಗೆ ಒದಗಿಸುವ ಉದ್ದೇಶದಿಂದ ಮುಖ್ಯಮಂತ್ರಿಗಳು ಗ್ರಾಮ ಒನ್ ಯೋಜನೆ ಜಾರಿಗೆ ತಂದಿದ್ದಾರೆ. ಸರಕಾರದ ಈ ಮಹತ್ವಾಕಾಂಕ್ಷಿ ಯೋಜನೆಯನ್ನು ಸಮರ್ಪಕವಾಗಿ ಜಾರಿಗೆ ತರಬೇಕು ಎಂದು ಜಿಲ್ಲಾಧಿಕಾರಿ ಸೂಚನೆ ನೀಡಿದರು.
ಅಪರ ಜಿಲ್ಲಾಧಿಕಾರಿ ಅಶೋಕ ದುಡಗುಂಟಿ, ಸೇವಾಸಿಂಧು ಸಂಯೋಜಕ ಅತೀಶ್ ಢಾಲೆ ಮತ್ತಿತರರು ಉಪಸ್ಥಿತರಿದ್ದರು.
ಜಿಲ್ಲೆಯ ಪ್ರತಿ ತಾಲ್ಲೂಕಿನಿಂದ ಆಯ್ದ ಐದು ಆಪರೇಟರ್ ಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ