Health

*ಅಪ್ಪನ ಸಂಕಷ್ಟದ ನಡುವೆಯೂ ಮರು ಹುಟ್ಟು ಪಡೆದ ಬಾಲಕ: ಸ್ಪರ್ಶ್ ಆಸ್ಪತ್ರೆಯಲ್ಲಿ ಯಶಸ್ವಿ ಹೃದಯ ಕಸಿ*

ಪ್ರಗತಿವಾಹಿನಿ ಸುದ್ದಿ: ಆರ್ಥಿಕ ಸಂಕಷ್ಟಗಳ ನಡುವೆಯೂ ಮಗನನ್ನು ಉಳಿಸಿಕೊಳ್ಳುವ ತಂದೆಯ ಛಲ, ಹೋರಾಟ, ಪರಿಶ್ರಮ ಫಲನೀಡಿದ್ದು, ಸ್ಪರ್ಶ್ ಆಸ್ಪತ್ರೆ ತಜ್ಞ ವೈದ್ಯರಿಂದ 9 ವರ್ಷದ ರಿಯಾಂಶ್ ಗೆ ಪುನರ್ಜನ್ಮ ಸಿಕ್ಕಿದೆ.

ಒಂಭತ್ತು ವರ್ಷದ ಬಾಲಕ ರಿಯಾಂಶ್ ರಾವಲ್ ಎಲ್ಲ ಮಕ್ಕಳಂತೆ ಶಾಲೆಯಲ್ಲಿ ಪಾಠ ಕೇಳುತ್ತಾ ಸಂಜೆಯಾದರೆ ತನ್ನಿಷ್ಟದ ಆಟವಾಡುತ್ತಾ, ಪಾರ್ಕ್ಗಳಲ್ಲಿ ಅಪ್ಪ ಅಮ್ಮಂದಿರೊಂದಿಗೆ ಓಡಾಡುತ್ತಾ ಖುಷಿ ಖುಷಿಯಾಗಿರಲು ಆತನ ಹೃದಯದ ಸಮಸ್ಯೆ ಅವಕಾಶವನ್ನೇ ನೀಡಿರಲಿಲ್ಲ. ಮಗನ ಆಟ ಪಾಠ ತುಂಟಾಟಗಳನ್ನು ನೋಡಿ ನೆಮ್ಮದಿಯಾಗಿರಬೇಕಿದ್ದ ಆತನ ಅಪ್ಪ ಅಮ್ಮಂದಿರೂ ಕೂಡ ಪದೇ ಪದೇ ಆಸ್ಪತ್ರೆಗಳಿಂದ ಆಸ್ಪತ್ರೆಗಳಿಗೆ ಸುತ್ತುತ್ತಾ ನೆಮ್ಮದಿ ಕಳೆದುಕೊಳ್ಳಬೇಕಾಗಿತ್ತು. ಹುಟ್ಟಿನಿಂದಲೇ ಬರುವ ತೀವ್ರ ತರದ ಹೃದಯ ಸಮಸ್ಯೆಯಿಂದ ನರಳುತ್ತಿದ್ದ ಉಸಿರಾಟವನ್ನೂ ಸಮರ್ಪಕವಾಗಿ ನಡೆಸಲಾಗದೇ ಸಂಕಟ ಪಡುತ್ತಿದ್ದ ಸಮಯ ಅಪ್ಪನ ಆರ್ಥಿಕ ಅಸಹಾಯಕತೆಯೂ ಜೊತೆಗೂಡಿದಾಗ ದಾರಿ ಕಾಣದ ಸ್ಥಿತಿ ಬಂದೊದಗಿತ್ತು. ಆದರೆ ಮಗನನ್ನು ಎಷ್ಟೇ ಸಂಕಷ್ಟ ಬಂದರೂ ಉಳಿಸಿಕೊಳ್ಳಬೇಕೆಂಬ ಅಪ್ಪನ ಛಲ ಬಿಡದ ಪ್ರಯತ್ನಕ್ಕೆ ಸ್ಪರ್ಶ್ ಆಸ್ಪತ್ರೆ ತಜ್ಞ ವೈದ್ಯರ ತಂಡವು ಸಾಥ್ ನೀಡಿ ಹೊಸ ಹೃದಯದ ಜೊತೆಗೆ ಹೊಸ ಜೀವವನ್ನು ಕೊಡುವುದರಲ್ಲಿ ಯಶಸ್ವಿಯಾಗಿದೆ.


ರಾಜಸ್ಥಾನದ ಪಾಲಿ ಮೂಲದ ಅಮಿತ್ ಲೆಕ್ಕಪತ್ರ ವಿಭಾಗದಲ್ಲಿ ಉದ್ಯೋಗಿಯಾಗಿ ಪ್ರಸ್ತುತ ಬೆಂಗಳೂರಿನಲ್ಲಿ ವಾಸವಾಗಿದ್ದು ತನ್ನ ಕಿರಿಯ ಪುತ್ರ ರಿಯಾಂಶ್ ಗೆ ಹುಟ್ಟಿನಿಂದಲೇ ಬರುವ ಹೃದಯ ಕಾಯಿಲೆಯಿಂದ ನರಳುತ್ತಿರುವುದು ಪತ್ತೆ ಆಗಿತ್ತು. ಅತ್ಯಂತ ವೇಗವಾಗಿ ಕಾಯಿಲೆಯ ಪ್ರಮಾಣವೂ ವೃದ್ಧಿಸುತ್ತಾ ಅಂತಿಮ ಹಂತದ ಹೃದಯ ವೈಫಲ್ಯಕ್ಕೆ ತುತ್ತಾಗುವಂತಹ ಸ್ಥಿತಿ ಬಂದಾಗ ಆಕಾಶವೇ ಕಳಚಿ ಬಿದ್ದಂತಾಗಿತ್ತು.ಒಂದೆಡೆ ದಿನೇ ದಿನೇ ವಿಷಮಿಸುತ್ತಿರುವ ಆರೋಗ್ಯ ಪರಿಸ್ಥಿತಿ ಮತ್ತೊಂದೆಡೆ ಚಿಕಿತ್ಸೆಗೆ ತಗಲುತ್ತಿದ್ದ ವಿಪರೀತ ಖರ್ಚಿನ ಜೊತೆಗೆ ಆರ್ಥಿಕ ದುಸ್ಥಿತಿ ಅಮಿತ್ಗೆ ದಿಕ್ಕೇ ತೋಚದಂತೆ ಮಾಡಿತ್ತು. ಆಸ್ಪತ್ರೆಯಿಂದ ಆಸ್ಪತ್ರೆಗೆ ಅಲೆದೂ ಅಲೆದೂ ಎಲ್ಲ ರೀತಿಯ ಪರೀಕ್ಷೆಗಳನ್ನೂ ಮಾಡಿಸಿ ಬೆಂಗಳೂರು ಮಾತ್ರವಲ್ಲ ಅಹಮದಾಬಾದ್ನ ಸೂಪರ್ ಸ್ಪೆಷಾಲಿಟಿ ಹೃದ್ರೋಗ ಆಸ್ಪತ್ರೆಯಲ್ಲೂ ಪರೀಕ್ಷಿಸಿದಾಗ ಹೃದಯ ಕಸಿ ಒಂದೇ ಉಳಿದಿರುವ ಮಾರ್ಗ ಎಂಬುದಾಗಿ ದೃಢಪಟ್ಟಿತ್ತು.

Home add -Advt


ಮಗನನ್ನು ಎಷ್ಟೇ ಕಷ್ಟವಾದರೂ ಉಳಿಸಿಕೊಳ್ಳಲೇಬೇಕೆಂದು ಪಣ ತೊಟ್ಟಿದ್ದ ಅಮಿತ್ ತನ್ನ ಬಳಿ ಇದ್ದ ಬೆಲೆ ಬಾಳುವ ನಿವೇಶನವೊಂದನ್ನೂ ಮಾರಾಟ ಮಾಡಿ ಹೃದಯ ಕಸಿ ಮಾಡಿಸಿಕೊಳ್ಳಬೇಕೆಂಬ ನಿರ್ಧಾರಕ್ಕೆ ಬಂದಿದ್ದರು. ಮಗನ ಚಿಕಿತ್ಸೆಗೆಂದು ದೇಶದ ಹಲವು ಆಸ್ಪತ್ರೆಗಳನ್ನು ಸುತ್ತಿ ದಾರಿಕಾಣದೇ ಇತ್ತ ಹಣವೂ ಇಲ್ಲದೇ ಸಮುದಾಯದ ನೆರವು ಕೋರಿದಾಗಲೂ ಹೃದಯ ಕಸಿಗೆ ಅಗತ್ಯ ಹಣಕಾಸು ಹೊಂದಿಸಲಾಗದೇ ಅಸಹಾಯಕನಾಗಿದ್ದಾಗ ಅವರ ಆಪ್ತ ಸಂಬಂಧಿಯೊಬ್ಬರು ಯಶವಂತಪುರ ಸ್ಪರ್ಶ್ ಆಸ್ಪತ್ರೆಯ ಡಾ.ರವಿಶಂಕರ್ ಶೆಟ್ಟಿ.ಕೆ. ಅವರನ್ನು ಪರಿಚಯ ಮಾಡಿಸಿಕೊಟ್ಟರು.


ಸ್ಪರ್ಶ್ ಆಸ್ಪತ್ರೆಯಲ್ಲಿ ರಿಯಾಂಶ್ ಹೃದಯ ಕಸಿಯೊಂದೇ ಬಾಲಕನನ್ನು ಉಳಿಸುವ ಮಾರ್ಗ ಎಂಬ ನಿರ್ಧಾರಕ್ಕೆ ಬರಲಾಗಿ ಹೃದಯ ಕಸಿಗಾಗಿ ಹೆಸರು ನೋಂದಾಯಿಸಲಾಯಿತು. ಆದರೆ ಸೂಕ್ತ ಹೃದಯ ದೊರಕುವವರೆಗೂ ಕ್ಷಣ ಕ್ಷಣವನ್ನೂ ಯುಗವೊಂದರಂತೆ ಕಳೆಯಬೇಕಾಗಿದ್ದ ಅಮಿತ್ ಕುಟುಂಬ ಕೊನೆಗೂ ಪವಾಡಸದೃಶ ದಿನ ಬಂದೇ ಬರುತ್ತದೆಂಬ ಅಚಲ ವಿಶ್ವಾಸದೊಂದಿಗೆ ದಿನದೂಡುತ್ತಿದ್ದರು. ಅಂತಿಮವಾಗಿ ಆ ದಿನ ಬಂದೇ ಬಿಟ್ಟಿತು. ರಿಯಾಂಶ್ಗೆ ಅಗತ್ಯವಾಗಿದ್ದ ಮತ್ತು ಹೊಂದಾಣಿಕೆಯಾಗುವ ಹೃದಯವು ಕರ್ನಾಟಕ ಅಂಗ ಮತ್ತು ಅಂಗಾಂಶಗಳ ಕಸಿ ಸಂಸ್ಥೆ (SOTTO Karnataka)ಯ ಸಕ್ರಿಯ ಮತ್ತು ಸಕಾಲಿಕ ಪ್ರಯತ್ನದೊಂದಿಗೆ ದೊರೆಯುವಂತಾಗಿ ಹೊಸ ಹೃದಯದ ಜೊತೆಗೆ ಹೊಸ ಜೀವ –ಜೀವನದ ದಿನಗಳನ್ನು ಕಾಣುವಂತಾಯಿತು. ಡಾ.ರವಿಶಂಕರ್ ಶೆಟ್ಟಿ ನೇತೃತ್ವದ ತಜ್ಞ ವೈದ್ಯರ ತಂಡ, ಅರಿವಳಿಕೆ ತಜ್ಞರು, ತುರ್ತು ಚಿಕಿತ್ಸಾ ವಿಭಾಗದ ನುರಿತರ ನಿರಂತರ ನಿಗಾ, ದಾದಿಯರು ಹಾಗೂ ಹೃದಯ ಕಸಿ ನಂತರದ ಚಿಕಿತ್ಸಾ ವಿಭಾಗದ ತಜ್ಞರಿಂದ ಹೃದಯವೂ ಸೇರಿದಂತೆ ಉಳಿದ ಅಂಗಾಂಗಗಳಿಗೆ ಸೂಕ್ತವಾದ ರಕ್ತ ಸಂಚಲನ ಪ್ರಕ್ರಿಯೆ ನಡೆಸುವ ತಂಡದ ಆರೈಕೆ ರಿಯಾಂಶ್ಗೆ ಮರು ಜನ್ಮ ನೀಡುವಲ್ಲಿ ನಡೆಸಿದ ಪರಿಶ್ರಮ ಫಲ ನೀಡಿತು. ಈ ಮೂಲಕ ಮಗನ ಮೇಲಿನ ಪ್ರೀತಿ ಎಷ್ಟೇ ಸಂಕಷ್ಟಗಳ ನಡುವೆಯೂ ಮಗನನ್ನು ಉಳಿಸಿಕೊಳ್ಳಲೇ ಬೇಕೆಂಬ ಛಾತಿ ಸಕಾಲಕ್ಕೆ ಸ್ಪರ್ಶ್ನ ಅತ್ಯುನ್ನತ ಮಟ್ಟದ ಸುಧಾರಿತ ಚಿಕಿತ್ಸಾ ಪದ್ಧತಿ ರಿಯಾಂಶ್ ಮತ್ತೆ ಎಲ್ಲ ಮಕ್ಕಳಂತಾಗಲು ಅವಕಾಶ ಮಾಡಿಕೊಟ್ಟಿತು.


“ರಿಯಾಂಶ್ ನ ಹೃದಯ ಕಸಿ ಯಶಸ್ಸು ತಂದೆಯ ಬೆಲೆಕಟ್ಟಲಾಗದ ಪ್ರೀತಿ ಜೊತೆಗೆ ನಮ್ಮ ಸ್ಪರ್ಶ್ ತಜ್ಞರ ತಂಡದ ನಿಪುಣತೆ ಮತ್ತು ಅತ್ಯಾಧುನಿಕ ಚಿಕಿತ್ಸಾ ಪದ್ಧತಿಗೆ ಸಲ್ಲುತ್ತದೆ. ಇದು ಅತ್ಯಂತ ಸಂಕೀರ್ಣವಾದಹಾಗೂತುಂಬತೊಡಕಿನಪ್ರಕ್ರಿಯೆಯಾಗಿರುತ್ತದೆ. ಅತ್ಯಂತ ಕರಾರುವಾಕ್ಕಾದ ಮೌಲ್ಯಮಾಪನ, ನಿಖರವಾದ ಯೋಜನೆ ರೂಪಿಸುವುದು,ವೈದ್ಯಕೀಯ ವಿಭಾಗಗಳ ಅಡೆ ತಡೆಯಿಲ್ಲದ ನಿರಂತರ ಸಮನ್ವಯತೆ ಅಗತ್ಯವಿರುತ್ತದೆ. ರಿಯಾಂಶ್ನ ಚೇತರಿಕೆಯು ಮಕ್ಕಳ ಹೃದ್ರೋಗ ಚಿಕಿತ್ಸೆಯಲ್ಲಿ ಸ್ಪರ್ಶ್ನ ತಜ್ಞರ ಬದ್ಧತೆ ಮೂಲಕ ಸೀಮಾತೀತ ಸಾಧನೆಯ ಪ್ರತೀಕವಾಗಿದೆ ಎಂದು ಸ್ಪರ್ಶ್ಆಸ್ಪತ್ರೆ ಯಶವಂತಪುರದ ಹೃದ್ರೋಗ ವಿಭಾಗದ ಹೃದಯ ಕಸಿ ತಜ್ಞ, ಹೃದಯ ರಕ್ತನಾಳಗಳ ಹಿರಿಯ ಶಸ್ತ್ರ ಚಿಕಿತ್ಸಕರಾದ ಡಾ.ರವಿಶಂಕರ್ಶೆಟ್ಟಿ.ಕೆ. ಅಭಿಪ್ರಾಯಪಟ್ಟರು.


ರಿಯಾಂಶ್ ಚಿಕಿತ್ಸೆ ಮತ್ತು ಚೇತರಿಕೆಯು ವೈದ್ಯಕೀಯ ವಿಭಾಗದಲ್ಲಿನ ತಂತ್ರಜ್ಞಾನದ ಸುಧಾರಣೆ ಅತ್ಯಾಧುನಿಕ ಪ್ರಗತಿ ಜೊತೆಗೆ ವೈದ್ಯರ ಸಮೂಹದ ಪರಿಶ್ರಮ ಕಾರಣವಾಗಿದೆ. ಮಕ್ಕಳಲ್ಲಿ ಹೃದಯ ಕಸಿ ಅತ್ಯಂತ ಕ್ಲಿಷ್ಟಕರ ಶಸ್ತ್ರ ಚಿಕಿತ್ಸೆಯಾಗಿದ್ದು ಬಾಲಕ ಪ್ರಾಣಾಪಾಯದಿಂದ ಹೊರ ಬಂದು ಚೇತರಿಕೆ ಕಂಡಿರುವುದು ನಿಜಕ್ಕೂ ಸ್ಪೂರ್ತಿದಾಯಕವಾಗಿದೆ ಎಂದು ಯಶವಂತಪುರ ಸ್ಪರ್ಶ್ ಆಸ್ಪತ್ರೆಯ ಸಿಒಒ ಕ.ರಾಹುಲ್ ತಿವಾರಿ ಅಭಿಪ್ರಾಯಪಟ್ಟರು.


ರಿಯಾಂಶ್ ಕುಟುಂಬ ಆರ್ಥಿಕವಾಗಿ ತೀವ್ರ ಸಂಕಷ್ಟದಲ್ಲಿರುವ ಕೆಳ ಮಧ್ಯಮ ವರ್ಗದ ಕುಟುಂಬವಾಗಿದ್ದು ಮುಂದಿನ ಚಿಕಿತ್ಸಾ ವೆಚ್ಚಗಳನ್ನು ಭರಿಸಲು ದಾನಿಗಳ ನೆರವಿನ ಅಗತ್ಯವಿದೆ. ಹೃದಯ ಕಸಿ ಬಳಿಕದ ಚಿಕಿತ್ಸೆ ಮುಂದುವರೆಯಬೇಕಿದ್ದು ಇದಕ್ಕಾಗಿ ಕುಟುಂಬಕ್ಕೆ ಸಹಾಯ ಹಸ್ತ ಚಾಚಬೇಕಿದೆ. ರಿಯಾಂಶ್ ನ ಭವಿಷ್ಯದ ಶಿಕ್ಷಣ ಮತ್ತು ಆರೋಗ್ಯಕ್ಕೆ ನೆರವು ನೀಡುವುದು ಅವಶ್ಯಕವಾಗಿದೆ.

Back to top button