ಪ್ರಗತಿವಾಹಿನಿ ಸುದ್ದಿ, ಅಥಣಿ : ತಾಲೂಕಿನಲ್ಲಿ ಅಲ್ಲಲ್ಲಿ ಅಭಿವೃದ್ಧಿ ಕಾಮಗಾರಿಗಳು ಭರದಿಂದ ಸಾಗಿದ್ದು ಅಭಿವೃದ್ಧಿಯ ಪರ್ವವೇ ನಡೆಯುತ್ತಿದೆ ಎಂಬ ಭ್ರಮೆಯನ್ನು ಜನಪ್ರತಿನಿಧಿಗಳು ಜನಸಾಮಾನ್ಯರಲ್ಲಿ ಹುಟ್ಟಿಸುತ್ತಿದ್ದಾರೆ. ಆದರೆ ಈ ಕಾಮಗಾರಿಗಳ ಗುಣಮಟ್ಟವೇನು ಎಂಬುದಕ್ಕೆ ಇಲ್ಲಿನ ರಸ್ತೆಯೊಂದರ ನಿರ್ಮಾಣ ಕಾಮಗಾರಿ ಸಾಕ್ಷಿಯಾಗಿದೆ.
ಜಿಲ್ಲಾ ಪಂಚಾಯಿತಿ ಇಲಾಖೆಯಿಂದ ಸುಮಾರು 2 ಕೋಟಿ ರೂ. ವೆಚ್ಚದಲ್ಲಿ ಅಥಣಿ ಪಟ್ಟಣದಿಂದ ಎಕನತ್ತಿಖೋಡಿ ರಸ್ತೆ (ಹಳೆ ಕಿರಣಗಿ ರಸ್ತೆ) ಕಾಮಗಾರಿ ನಡೆಯುತ್ತಿದೆ. ಸುಮಾರು 7 ಕಿಲೋ ಮೀಟರ್ ರಸ್ತೆಗೆ ಹಾಕಿದ ಡಾಂಬರ್ ಸುಮ್ಮನೆ ಮುಟ್ಟಿದರೂ ಕಿತ್ತು ಬರುತ್ತಿದ್ದು ಈ ಕಾಮಗಾರಿ ಕಳಪೆಯಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
74 ವರ್ಷಗಳ ನಂತರ ಒಂದೇ ವರ್ಷದಲ್ಲಿ ಎರಡನೇ ಬಾರಿ ಪುನರ್ ನಿರ್ಮಾಣ ಭಾಗ್ಯ ಕಂಡ ಈ ರಸ್ತೆ ನಿರ್ಮಾಣ ಮಾಡುತ್ತಿರುವ ಗುತ್ತಿಗೆದಾರರು ಈಗಾಗಲೇ ರಾಜ್ಯ ಸರಕಾರ ಹೊತ್ತಿರುವ ಶೇ.40 ಕಮಿಷನ್ ದಂಧೆಯ ಹೊಡೆತಕ್ಕೆ ಸಿಕ್ಕಿ ಈ ರೀತಿ ನಿರ್ಮಿಸುತ್ತಿದ್ದಾರೆಯೇ ಎಂದು ಜನ ಪ್ರಶ್ನಿಸತೊಡಗಿದ್ದಾರೆ.
ರಸ್ತೆ ಮೆತ್ತಗಿನ ಕೇಕ್ ನಂತೆ ಆಗಿದ್ದು ದ್ವಿಚಕ್ರ ವಾಹನ ಸವಾರರು ಅಲ್ಲಲ್ಲಿ ಸಿಲುಕಿಕೊಂಡು ಎಡವಿ ಬೀಳುತ್ತಿದ್ದಾರೆ. ಕೋಟಿ ವೆಚ್ಚದ ಕಾಮಗಾರಿ ಇಷ್ಟು ಕಳಪೆಯಾಗಿರುವುದು ಹಲವು ಸಂದೇಹಗಳನ್ನು ಹುಟ್ಟುಹಾಕಿದ್ದು ಮೇಲಧಿಕಾರಿಗಳು ಕೂಡ ನಿರ್ಮಾಣ ಹಂತದಲ್ಲೇ ಸ್ಥಳ ಪರಿಶೀಲನೆ ಮಾಡಿ ಸರಿಪಡಿಸಲು ಕ್ರಮ ವಹಿಸದ ಕಾರಣ ಇಲ್ಲಿ ಸಂಚರಿಸುವವರು ದಂಡ ತೆರುವಂತಾಗಿದೆ.
ಹೊಂಡಗಳೇ ತುಂಬಿರುವ ಈ ರಸ್ತೆಗೆ ಗುತ್ತಿಗೆದಾರರು ಶಾಸ್ತ್ರಕ್ಕೆಂಬಂತೆ ಜೆಲ್ಲಿ ಕಲ್ಲು, ಡಾಂಬರು ಸುರಿವಿದಂತಿದೆ. ತೀರ ಲಘು ಭಾರದ ವಾಹನ ಓಡಾಡಿದರೂ ನಿಯಂತ್ರಣ ತಪ್ಪಿ ಓಲಾಡುವ ಪರಿಸ್ಥಿತಿ ಉಂಟಾಗಿದೆ. ಜನಪ್ರತಿನಿಧಿಗಳು ತಮ್ಮ ಬೆಂಬಲಿಗರಿಗೆ ಗುತ್ತಿಗೆ ನೀಡಿ ಔದಾರ್ಯ ಮೆರೆಯುತ್ತಿರುವುದು ಈ ಕಳಪೆತನಕ್ಕೆ ಕಾರಣವೆಂಬುದು ಇನ್ನಷ್ಟು ಜನರ ಆರೋಪ.
ಕಳಪೆ ಕಾಮಗಾರಿ ಮಾಡಿರುವ ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸಿ, ಕಳಪೆ ರಸ್ತೆಯನ್ನು ಸರಿಪಡಿಸಿಕೊಡಬೇಕು ಎಂದು ರವಿ ಬಡಕಂಬಿ, ಗುರುನಿಂಗ ಭಾಸಿಂಗಿ ಸೇರಿದಂತೆ ಹಲವರು ಆಗ್ರಹಿಸಿದ್ದಾರೆ.
ಗುರುವಾರ ಮತ್ತೆ ಇಳಿಕೆ ಕಂಡಿತು ಚಿನ್ನ, ಬೆಳ್ಳಿ ದರ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ