Kannada NewsKarnataka NewsLatest

ರೇಣುಕಾ ಸಾವಿನ ತನಿಖೆಯಲ್ಲಿ ಒತ್ತಡಕ್ಕೆ ಮಣಿದ ಪೊಲೀಸರು; ಹುಲ್ಲಿಯಾನೂರು ಗ್ರಾಮಸ್ಥರ ಆರೋಪ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಕಳೆದ ಭಾನುವಾರ ಪತಿಯ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾದ ವಿವಾಹಿತೆ ರೇಣುಕಾ ಸಾವಿಗೆ ನ್ಯಾಯ ಒದಗಿಸಬೇಕೆಂದು ಒತ್ತಾಯಿಸಿ ಹುಲ್ಲಿಯಾನೂರು ಗ್ರಾಮಸ್ಥರು ಬುಧವಾರ ಪೊಲೀಸ್ ಆಯುಕ್ತರ ಕಚೇರಿ ಎದುರು ಧರಣಿ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.

ಕಳೆದ ಭಾನುವಾರ ಕಾಕತಿ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ನಡೆದ ನವ ವಿವಾಹಿತೆ ರೇಣುಕಾ ಕೊಲೆ ಮಾಡಲಾಗಿದೆ. ಇದನ್ನು ಆತ್ಮಹತ್ಯೆ ಎಂದು ಬಿಂಬಿಸುತ್ತಿರುವ ಹಾಗೂ ಪ್ರಭಾವಿ ಬಿಜೆಪಿ ಮುಖಂಡರ ಅಣತಿಯಂತೆ ಕಾಕತಿ ಸಿಪಿಐ ಗುರುನಾಥ ಹಾಗೂ ಎಸಿಪಿ ಕಾರ್ಯಪ್ರವೃತ್ತರಾಗಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದರು.

ಸೋಮವಾರ ಕಾಕತಿ ಪೊಲೀಸರು ವಶಕ್ಕೆ ಪಡೆದ ಆರೋಪಿ ಮೇಲೆ ಕ್ರಮ ಕೈಗೊಳ್ಳದಂತೆ ಬಿಜೆಪಿ  ಮುಖಂಡ ಮಾರುತಿ ಅಷ್ಟಗಿ, ಹಾಗೂ ಸಂಸದರ ಆಪ್ತ ಸಹಾಯಕನ  ಒತ್ತಾಯಕ್ಕೆ ಮಣಿದು ಆತನ ಮೇಲೆ ಕ್ರಮ ಕೈಗೊಳ್ಳುವ ಬದಲು ಬಿಜೆಪಿ ಮುಖಂಡನ ಕಾರಿನಲ್ಲಿ ಕಳುಹಿಸಿ ಕೊಡಲಾಗಿದೆ ಎಂದು ಗ್ರಾಮಸ್ಥರು ಕಾಕತಿ ಸಿಪಿಐ  ವಿರುದ್ಧ ಆರೋಪಿಸಿದರು.

ಕಳೆದ ಏಪ್ರಿಲ್ ನಲ್ಲಿ ಹುಲ್ಲಿಯಾನೂರಿನ ರೇಣುಕಾ ಅವರು ಭರಮಪ್ಪಾ ನಾಯಕ ಜತೆಗೆ ವಿವಾಹವಾಗಿದ್ದರು. ಮದುವೆ ವೇಳೆ ಸಾಕಷ್ಟು ವರೋಪಚಾರ ಮಾಡಿದ್ದರೂ ಇನ್ನಷ್ಟು ಹಣ ತರುವಂತೆ ರೇಣುಕಾ ಅವರನ್ನು ಪೀಡಿಸಲಾಗುತ್ತಿತ್ತು.  ಈ ಬಗ್ಗೆ ತವರು ಮನೆಗೆ ಬಂದು ಸ್ವತಃ ರೇಣುಕಾ ಅಳಲು ತೋಡಿಕೊಂಡಿದ್ದರು. ಗ್ರಾಮದ ಹಿರಿಯರು ರಾಜಿ ಪಂಚಾಯಿತಿ ಮಾಡಿಸಿದ ಮೇಲೂ ಈ ಘಟನೆ ನಡೆದಿದೆ.

ರೇಣುಕಾ ಸಾವಿಗೆ ಪತಿಯ ಮನೆಯವರ ಕಿರುಕುಳವೇ ಕಾರಣವಾಗಿದ್ದು ಆಕೆಯದು ಆತ್ಮಹತ್ಯೆಯಲ್ಲ, ಬದಲಾಗಿ ಕೊಲೆ ಎಂದು ಆರೋಪಿಸಿದ ಗ್ರಾಮಸ್ಥರು ಪೊಲೀಸರು ಈ ವಿಷಯದಲ್ಲಿ ಪ್ರಭಾವಕ್ಕೆ ಮಣಿದಿದ್ದು ಆರೋಪಿಗಳ ಮೇಲೆ ಸೂಕ್ತ ಕ್ರಮಗಳು ನಡೆಯುತ್ತಿಲ್ಲ ಎಂದು ದೂರಿದರು.

ಬೆಳಗಾವಿ ಜಿಲ್ಲೆಯಲ್ಲಿ ಮಕ್ಕಳ ಅಪಹರಣ ನಡೆದಿಲ್ಲ; ಎಸ್ಪಿ ಸ್ಪಷ್ಟನೆ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button