Latest

ದಸರಾ ವೈಭವದಲ್ಲಿ ಮೈಸೂರು; ಐತಿಹಾಸಿಕ ಜಂಬೂಸವಾರಿಗೆ ಕ್ಷಣಗಣನೆ

ಪ್ರಗತಿವಾಹಿನಿ ಸುದ್ದಿ, ಮೈಸೂರು: ಅರಮನೆಯ ನಗರ ಮೈಸೂರಿನಲ್ಲಿ ದಸರಾ ಹಬ್ಬದ ಸಂಭ್ರಮ ಕಳೆ ಕಟ್ಟಿದ್ದು ಜಂಬೂ ಸವಾರಿಗೆ ಕ್ಷಣಗಣನೆ ನಡೆದಿದೆ.

ಇಂದು ಮಧ್ಯಾಹ್ನ 2.36 ರಿಂದ 2.50ರ ಶುಭ ಮಕರ ಲಗ್ನದಲ್ಲಿ ಅರಮನೆಯ ಬಲರಾಮ ದ್ವಾರದಲ್ಲಿ ನಂದಿ ಧ್ವಜಕ್ಕೆ ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪೂಜೆ ನೆರವೇರಿಸುವ ಮೂಲಕ ಜಂಬೂ ಸವಾರಿ ಮರೆವಣಿಗೆಗೆ ಚಾಲನೆ ನೀಡಲಿದ್ದಾರೆ.

ಈ ಬಾರಿ 750 ಕೆಜಿ ತೂಕದ ಅಂಬಾರಿಯಲ್ಲಿ ಶ್ರೀ ಚಾಮುಂಡೇಶ್ವರಿ ದೇವಿಯನ್ನು ಆನೆ ಅಭಿಮನ್ಯು ಹೊತ್ತು ಸಾಗಲಿದ್ದಾನೆ.

ಸಂಜೆ 5.07ರಿಂದ 5.18ರವರೆಗೆ ಮಕರ ಲಗ್ನ ಮುಹೂರ್ತದಲ್ಲಿ ಅಂಬಾರಿಯಲ್ಲಿ ಶ್ರೀ ಚಾಮುಂಡೇಶ್ವರಿ ವಿಗ್ರಹಕ್ಕೆ ಸಿಎಂ ಬೊಮ್ಮಾಯಿ ಪುಷ್ಪಾರ್ಚನೆ ಮಾಡಲಿದ್ದಾರೆ. ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್, ಸಚಿವ ಎಸ್.ಟಿ. ಸೋಮಶೇಖರ, ಮೇಯರ್ ಶಿವಕುಮಾರ್,  ಜಿಲ್ಲಾಧಿಕಾರಿ ಡಾ ಬಗಾದಿ ಗೌತಮ್,  ಪೊಲೀಸ್ ಕಮಿಷನರ್ ಡಾ. ಚಂದ್ರಗುಪ್ತ ಮತ್ತಿತರ ಗಣ್ಯರು ಭಾಗವಹಿಸಲಿದ್ದಾರೆ.

ಅನಂತರ ಅರಮನೆ ಆವರಣದಿಂದ ಬನ್ನಿ ಮಂಟಪದವರೆಗೆ ಮೆರವಣಿಗೆ ನಡೆಯಲಿದೆ. ಇನ್ನು ಸಂಜೆ ನಡೆಯಲಿರುವ ಜಂಬೂ ಸವಾರಿ ಮೆರವಣಿಗೆಯಲ್ಲಿ 750 ಕೆಜಿ ತೂಕದ ಅಂಬಾರಿಯಲ್ಲಿ ಚಾಮುಂಡಿ ದೇವಿಯನ್ನ ಹೊತ್ತು ಆನೆ ಅಭಿಮನ್ಯು ಸಾಗಲಿದ್ದಾನೆ.

ಜಂಬೂಸವಾರಿ ಹಿನ್ನೆಲೆಯಲ್ಲಿ ಮೈಸೂರಿನಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ. ವಿವಿಧ ಜಿಲ್ಲೆಗಳಿಂದ ಪೊಲೀಸರು ಮೈಸೂರಿಗೆ ಆಗಮಿಸಿದ್ದಾರೆ. ಗರುಡ ಪಡೆ, ಶ್ವಾನದಳ, ಬಾಂಬ್ ನಿಷ್ಕ್ರಿಯ ದಳ​​ ಆಗಮಿಸಿದ್ದು,  ಮೆರವಣಿಗೆ ಸಾಗುವ ಮಾರ್ಗದುದ್ದಕ್ಕೂ ತಪಾಸಣೆ ಕೈಗೊಳ್ಳಲಾಗಿದೆ.     

ಅರಮನೆಯಲ್ಲಿ ನಾನಾ ಕಾರ್ಯಕ್ರಮ:

ದಸರಾ ನಿಮಿತ್ತ ಮೈಸೂರು ಅರಮನೆಯಲ್ಲಿ ನಾನಾ ಕಾರ್ಯಕ್ರಮಗಳು ನಡೆಯಲಿವೆ.

ಬೆಳಗ್ಗೆ 10.30ಕ್ಕೆ ಅರಮನೆ ಆವರಣದಲ್ಲಿ ಜಟ್ಟಿ ಕಾಳಗ ನಡೆಯಲಿದೆ. ಎರಡು ವರ್ಷಗಳ ನಂತರ ಈಗ ಜಟ್ಟಿ‌ಕಾಳಗಕ್ಕೆ ಅವಕಾಶ ನೀಡಲಾಗಿದೆ. ಬಳಿಕ 11 ಗಂಟೆಗೆ ವಿಜಯದಶಮಿ ಯಾತ್ರೆ ಆರಂಭವಾಗಲಿದೆ.  ಅರಮನೆ ಆನೆ ಬಾಗಿಲಿನಿಂದ ಅರಮನೆ ಆವರಣದಲ್ಲಿರುವ ಭುವನೇಶ್ವರಿ ದೇಗುಲದವರೆಗೂ ಮೆರವಣಿಗೆ ನಡೆಯಲಿದೆ.

ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಪಲ್ಲಕ್ಕಿಯಲ್ಲಿ ವಿಜಯ ಯಾತ್ರೆ ನಡೆಸಲಿದ್ದು ಭುವನೇಶ್ವರಿ ದೇಗುಲದಲ್ಲಿ ಶಮಿ ಪೂಜೆ ನಡೆಸಲಿದ್ದಾರೆ. ಬಳಿಕ ಬನ್ನಿ ಮರಕ್ಕೆ ಪೂಜೆ ಸಲ್ಲಿಸಿ ಅರಮನೆಗೆ ಮರಳಲಿದ್ದಾರೆ.

ಕಂದಕಕ್ಕೆ ಬಿದ್ದ ಮದುವೆ ದಿಬ್ಬಣದ ಬಸ್;  25 ಮಂದಿ ಸಾವು

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button