ಕಾರ್ಯಕರ್ತರ  ಬಳಿ ಪ್ರಮಾಣ ಮಾಡಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ; ಕಾಂಗ್ರೆಸ್ ನವರದ್ದು 85 %  ಸರ್ಕಾರ ಎಂದ CM

*ಕಪ್ಪ ಕೊಡುವ ಸಂಸ್ಕೃತಿ ಕಾಂಗ್ರೆಸ್ಸಿನದ್ದು : ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ*

ಪ್ರಗತಿವಾಹಿನಿ ಸುದ್ದಿ, ಬಳ್ಳಾರಿ :  ಕಪ್ಪ ಕೊಡುವ ಸಂಸ್ಕೃತಿ ಕಾಂಗ್ರೆಸ್ಸಿನದ್ದು, ಐದು ವರ್ಷ ಕರ್ನಾಟಕವನ್ನು ಎಟಿಎಂ ಮಾಡಿದ್ದೀರಿ, ಕಪ್ಪ ಕೊಡುವ ಸಂಸ್ಕೃತಿ  ನಮ್ಮ ಪಕ್ಷದಲ್ಲಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಎಂದರು.
ಅವರು ಇಂದು ಹೂವಿನಹಡಗಲಿ ಜನಸಂಕಲ್ಪ ಯಾತ್ರೆಯಲ್ಲಿ ಉದ್ಘಾಟಿಸಿ ಮಾತನಾಡಿದರು.
ಹಿಂದಿನ ಮುಖ್ಯಮಂತ್ರಿ ಕಪ್ಪ ಕೊಡುವ ಬಗ್ಗೆ ಮಾತನಾಡುತ್ತಾರೆ. ಆ ಸಂಸ್ಕೃತಿ ಇರೋದು ಕಾಂಗ್ರೆಸ್ ನಲ್ಲಿ ಮಾತ್ರ. ತಾವು ಅಧಿಕಾರದಲ್ಲಿದ್ದಾಗ ಐದು ವರ್ಷ ಕರ್ನಾಟಕವನ್ನು ಎಟಿಎಂ ಮಾಡಿದ್ದೀರಿ, ಕಪ್ಪ ಕೊಡುವ ಸಂಸ್ಕೃತಿ  ನಮ್ಮ ಪಕ್ಷದಲ್ಲಿಲ್ಲ. ಕಾಂಗ್ರೆಸ್‌ ರಾಜ್ಯಾಧ್ಯಕ್ಷರು ಕಪ್ಪ ಕೊಡಲು ಹೋಗಿಯೇ ಇಡಿ ಕೈಗೆ ಸಿಲುಕಿಕೊಂಡಿದ್ದಾರೆ. ನಿಮ್ಮಿಂದ ಪಾಠ ಕಲಿಯುವ ಅಗತ್ಯವಿಲ್ಲ.  ಜನರು ಈಗ ಜಾಗೃತರಾಗಿದ್ದಾರೆ‌‌ .  ನಿಮ್ಮ ಆ ಭಾಗ್ಯ ಈ ಭಾಗ್ಯ ಅಂತ ಲೂಟಿ ಮಾಡಿದಿರಿ, ಅನ್ನಭಾಗ್ಯ ಅಂತ ಹೇಳಿ ಕನ್ನ ಭಾಗ್ಯ ಮಾಡಿದಿರಿ, ಎಸ್ಸಿ ಎಸ್ಟಿಗೆ ಕೊಳವೆಬಾವಿ ಕೊರೆಸಿದ್ದೇವೆ ಅಂತ ಲೂಟಿ ಮಾಡಿದಿರಿ. ನೀವು  ಭಾಗ್ಯ ಕೊಟ್ಟಿದ್ದ ರೆ ಜನರು ನಿಮ್ಮನ್ನು ಯಾಕೆ ಸೋಲಿಸುತ್ತಿದ್ದರು‌ ಎಂದು ಪ್ರಶ್ನಿಸಿ, ಕರ್ನಾಟಕದಲ್ಲಿ ಅಭಿವೃದ್ಧಿಗೆ ಹಿನ್ನಡೆಯಾಗಿದ್ದರೆ, ಅದು ಕಾಂಗ್ರೆಸ್ ನ ಭ್ರಷ್ಟಾಚಾರದಿಂದ ಆಗಿದೆ ಎಂದರು.
 *ಸುಳ್ಳು ಆಶ್ವಾಸನೆಗಳನ್ನು ನೀಡಿದ ಕಾಂಗ್ರೆಸ್ :*
ನಾಳೆ ಕಾಂಗ್ರೆಸ್ ಪಾದಯಾತ್ರೆ ಬಳ್ಳಾರಿಗೆ ಬರುತ್ತಿದೆ. ನೀವೆಲ್ಲಾ  ಸೇರಿ ಸೋನಿಯಾ ಗಾಂಧಿಗೆ ಎಂಪಿ ಮಾಡಿ ಆರಿಸಿ ಕಳುಹಿಸಿದಿರಿ. ಅವರು ಆರಿಸಿ ಬಂದ ಮೆಲೆ ಇಲ್ಲಿನ ಸ್ಥಾನಕ್ಕೆ ರಾಜಿನಾಮೆ ನೀಡಿ ಉತ್ತರ ಪ್ರದೇಶಕ್ಕೆ ಹಾರಿ ಹೋದರು. ಆಗ 3000 ಕೋಟಿ ರೂ. ಪ್ಯಾಕೇಜ್ ಕೊಡುತ್ತೇನೆ ಎಂದು ಹೇಳಿದ್ದರು. 3000 ಕೋಟಿ ಎಲ್ಲಿ ಹೋಯಿತು. ನಿಮ್ಮ ಮತವನ್ನು ಪಡೆದುಕೊಂಡು, ಈ ಕ್ಷೇತ್ರವನ್ನು ತಿರುಗಿಯೂ ನೋಡದ ಕಾಂಗ್ರೆಸ್ ನವರು ಸುಳ್ಳು ಆಶ್ವಾಸನೆಗಳನ್ನು ನೀಡಿದ್ದಾರೆ. ಈಗ ಅವರ ಮಗ ಬರುತ್ತಿದ್ದಾನೆ. ನಿಮ್ಮ ತಾಯಿಯನ್ನು ಆರಿಸಿ ಕಳುಹಿಸಿದ್ದೇವು, ಅವರು ಏನು ಮಾಡಿದರು. ಈಗ ನೀವು ಏನು ಸುಳ್ಳು ಹೇಳಲು ಬಂದಿದ್ದೀರಿ ಎಂದು ಜನ ಪ್ರಶ್ನಿಸಬೇಕು. ಈ ಭಾಗದಲ್ಲಿ ಸುಳ್ಳು ನಡೆಯುವುದಿಲ್ಲ ಎಂಬ ಸಂದೇಶ ನೀಡಬೇಕು. ಎಂದರು.
*ಪಕ್ಷದ ನಿಷ್ಠೆಯೇ ನಮ್ಮ ಶಕ್ತಿ :*
ಹೂವಿನ ಹಡಗಲಿಯಲ್ಲಿ ಈ ಬಾರಿ ಕಮಲ ಅರಳುತ್ತದೆ. ನಾಯಕರುಗಳು ನಿಮ್ಮಲ್ಲಿರುವ ಸಣ್ಣ ಪುಟ್ಟ ವ್ಯತ್ಯಾಸವನ್ನು ಬದಿಗಿಟ್ಟು ಯಾರಿಗೆ ಟಿಕೆಟ್ ನೀಡಿದರೂ ನಿಷ್ಟೆಯಿಂದ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸಿಕೊಂಡು ಬರುತ್ತೇವೆ ಎಂದು ಕಾರ್ಯಕರ್ತರ  ಬಳಿ ಮುಖ್ಯಮಂತ್ರಿಗಳು ಪ್ರಮಾಣ ಮಾಡಿಸಿದರು.
ನಮ್ಮ ಹಿರಿಯರಾದ ಎಂ.ಪಿ.ಪ್ರಕಾಶ್  ಅವರು ಇಡೀ ಜೀವನವನ್ನು ಕಾಂಗ್ರೆಸ್‌ ವಿರೋಧ ಮಾಡುತ್ತ ಬಂದಿದ್ದರು‌. ಅವರು ಯಾಕೆ ಕಾಂಗ್ರೆಸ್ ಗೆ ಹೋದರೊ ಗೊತ್ತಿಲ್ಲ. ಕಾಂಗ್ರೆಸ್ ಅಂದರೆ ಸೋಲು, ಅಲ್ಲಿಗೆ ಹೋದರೆ ಸೋಲುವುದು ಖಚಿತ. ಆದರೆ ಅವರ ಕನಸಿನ ಯೋಜನೆಗಳನ್ನು ನಾನು ಜಾರಿಗೊಳಿಸುವ ಕೆಲಸ ಮಾಡುತ್ತೇನೆ ಎಂದರು.
ಈ ಸಂದರ್ಭದಲ್ಲಿ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ, ಜಲ ಸಂಪನ್ಮೂಲ ಸಚಿವರಾದ ಗೋವಿಂದ ಕಾರಜೋಳ, ಶಶಿಕಲಾ ಜೊಲ್ಲೆ, ಬಿ.ಶ್ರೀರಾಮುಲು, ಆನಂದಸಿಂಗ್ ಹಾಗೂ ಮತ್ತಿತರರು  ಹಾಜರಿದ್ದರು.

*ಕಾಂಗ್ರೆಸ್ ನವರದ್ದು 85 %  ಸರ್ಕಾರ.* : 

 ಕಾಂಗ್ರೆಸ್ ನವರದ್ದು 85 %  ಸರ್ಕಾರ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. 
ಅವರು ಇಂದು ಸಿರಗುಪ್ಪದಲ್ಲಿ ಆಯೋಜಿಸಿದ್ದ ಜನಸಂಕಲ್ಪ ಯಾತ್ರೆಯನ್ನು ಉದ್ಘಾಟಿಸಿ ಮಾತನಾಡಿದರು.
 ಈ ಮಾತನ್ನು ಹಿಂದೆಯೇ ರಾಜೀವ್ ಗಾಂಧಿ ಹೇಳಿದ್ದರು. ರಾಹುಲ್ ಗಾಂಧಿ ಅವರ ತಂದೆ ರಾಜೀವ್ ಗಾಂಧೀ ಇವರೆಲ್ಲರಿಗಿಂತ ಸಜ್ಜನರು. ದಿಲ್ಲಿಯಿಂದ ನೂರು ರೂಪಾಯಿ ಕಳಿಸಿದರೆ. ಹಳ್ಳಿಗೆ 15 ರೂಪಾಯಿ ತಲುಪುತ್ತಿತ್ತು  ಎಂ ದು ಪ್ರಾಮಾಣಿಕವಾಗಿ ಹೇಳಿದ್ದರು. 85 ರೂ.ಗಳು ಮಧ್ಯದಲ್ಲಿ ಸೋರಿಹೋಗುತ್ತಿತ್ತು.  ಆಗ ಕೇಂದ್ರದಲ್ಲಿ ಕಾಂಗ್ರೆಸ್ , ರಾಜ್ಯದಲ್ಲಿಯೂ ಕಾಂಗ್ರೆಸ್ ಪಕ್ಷವಿತ್ತು. ಇದು ಅಂದಿನ ವ್ಯವಸ್ಥೆ . ನರೇಂದ್ರ ಮೋದಿಯವರು ಬಂದ ನಂತರ  ಎಲ್ಲಾ ಯೋಜನೆಗಳನ್ನು ನೇರವಾಗಿ ಎಲ್ಲಾ ಫಲಾನುಭವಿಗಳಿಗೆ ಶೇ 100 ರಷ್ಟು ಮೊತ್ತವನ್ನು ಡಿಬಿಟಿ ವ್ಯವಸ್ಥೆಯಡಿ ತಲುಪಿಸಿದ್ದಾರೆ ಎಂದರು.
*ಭೂಮಿ, ಆಕಾಶ, ಪಾತಾಳದಲ್ಲಿ ಭ್ರಷ್ಟಾಚಾರ*
 ಇವರ ಕಾಲದಲ್ಲಿ ಭೂಮಿಯ ಮೇಲೆ, ಆಕಾಶಕ್ಕೆ ಹಾಗೂ ಪಾತಾಳಕ್ಕೆ ಭ್ರಷ್ಟಾಚಾರ ಮಾಡಿದರು. ಆಕಾಶಕ್ಕೆ ಭ್ರಷ್ಟಾಚಾರ ಅಂದರೆ 2 ಜಿ ಹಗರಣ. ಕಾಮನ್ ವೆಲ್ತ್ ಹಾಗೂ ಕಲ್ಲಿದ್ದಲು ಹಗರಣ ಮಾಡುವ ಆಕಾಶ, ಭೂಮಿ, ಪಾತಾಳದಲ್ಲಿ ಭ್ರಷ್ಟಾಚಾರ ಮಾಡಿದ ಕಾಂಗ್ರೆಸ್ ಭ್ರಷ್ಟಾಚಾರದ ಬಗ್ಗೆ ಮಾತನಾಡುತ್ತಾರೆ. ಕೆರೆ ತುಂಬಿಸುವ ಯೋಜನೆಯಡಿ ಭ್ರಷ್ಟಾಚಾರ, ನೀರಾವರಿ,ಸಣ್ಣ ನೀರಾವರಿ,  ಗಂಗಾಕಲ್ಯಾಣ ಯೋಜನೆಯಡಿ 36 ಕೊಳವೆಬಾವಿಗಳನ್ನು ಒಂದೇ ದಿನ ಮಂಜೂರು ಮಾಡಿ ದುಡ್ಡು ಹೊಡೆದರು ಎಂದರು.
*ಅಧಿಕಾರಕ್ಕಾಗಿ  ರಾಜಕಾರಣ*
ಜನಸಂಕಲ್ಪ ಯಾತ್ರೆ ರಾಯಚೂರು, ವಿಜಯನಗರ, ಕೊಪ್ಪಳಕ್ಕೆ ಹೋಗಿ ಬಳ್ಳಾರಿಗೆ ಬಂದಿದೆ.  ಹೋದಲ್ಲೆಲ್ಲಾ ಜನಬೆಂಬಲ ಹಾಗೂ ಜೋಶ್ ದೊರೆತಿದೆ. ಕಾಂಗ್ರೆಸ್ ಪಕ್ಷದವರು ಪಾದಯಾತ್ರೆ ಮಾಡುತ್ತಿದ್ದಾರೆ.  ಜನಪರವಾದ ನಿರ್ಣಯ ತೆಗೆದುಕೊಳ್ಳಲು ಕಾಂಗ್ರೆಸ್ಸಿಗೆ  ಬರುವುದಿಲ್ಲ.  ಅಧಿಕಾರಕ್ಕಾಗಿ  ರಾಜಕಾರಣ ಮಾಡುತ್ತಾರೆ. ಅಧಿಕಾರ ಕ್ಕೆ ಬಂದಾಗ ಅವರು ತಮ್ಮ ಸ್ವಂತ ಅಭಿವೃದ್ಧಿ ಮಾಡಿಕೊಂಡರು.  ಜನರನ್ನು ಸಂಪೂರ್ಣವಾಗಿ ಮರೆಯುತ್ತಾರೆ.  ಕಾಂಗ್ರೆಸ್ಸಿನ ಮಾಜಿ ಮಂತ್ರಿಗಳೊಬ್ಬರು ನಾವು ಅಧಿಕಾರ ದಲ್ಲಿದ್ದಾಗ  ಮತ್ತು ಅಧಿಕಾರದಲ್ಲಿಲ್ಲದಾಗ ಅವರು ಏನಾಗುತ್ತಾರೆ ಎಂದು ತಿಳಿಸಿದ್ದರು.  ಅಂದರೆ ಈ ರಾಷ್ಟ್ರವನ್ನು 50 ವರ್ಷ ಆಳಿ, ಈ ರಾಜ್ಯದ ಪ್ರಗತಿಗೆ ಮಾರಕವಾಗಿ, ರಾಜ್ಯವನ್ನು ತಮ್ಮ ಹೈ ಕಮಾಂಡಿಗೆ ಒತ್ತೆ ಇಟ್ಟು, ಕರ್ನಾಟಕ ರಾಜ್ಯದ ಸ್ವಾಭಿಮಾನವನ್ನೂ ಲೆಕ್ಕಿಸದೇ, ಕೇವಲ ಅಧಿಕಾರಕ್ಕಾಗಿ ರಾಜಕಾರಣ ಮಾಡಿರುವ ಕಾಂಗ್ರೆಸ್ಸನ್ನು ಶಾಶ್ವತವಾಗಿ ಮನೆಗೆ ಕಳಿಸುವ ಕೆಲಸವನ್ನು ಕರ್ನಾಟಕದ ಜನತೆ 2023 ರಲ್ಲಿ ಮಾಡಲಿದ್ದಾರೆ ಎಂದರು.
*ಕಾಂಗ್ರೆಸ್ ಸಂಸ್ಕೃತಿ*
ಅಧಿಕಾರಕ್ಕೆ ಬಂದಾಗ ಜನರನ್ನು ಮರೆತಿದ್ದಕ್ಕೆ ಉದಾಹರಣೆ ಎಂದರೆ.  ಸೋನಿಯಾ ಗಾಂಧಿ ಬಳ್ಳಾರಿಗೆ ಸಂಸದರಾಗಿ ಬಂದರು. ಮೂರು ಸಾವಿರ ಕೋಟಿ ಪ್ಯಾಕೇಜ್ ಮಾಡುವುದಾಗಿ ಹೇಳಿದರು. ಎಲ್ಲಿದೆ ಪ್ಯಾಕೇಜ್? ಯಾರ ಮನೆಗೆ ಹೋಗಿದೆ? ಬಳ್ಳಾರಿ ಜಿಲ್ಲೆಗೆ ಒಂದು  ಪೈಸೆಯನ್ನೂ ಕೊಡಲಿಲ್ಲ. ಧನ್ಯವಾದಗಳನ್ನೂ ಹೇಳಲಿಲ್ಲ. ಇದು ಕಾಂಗ್ರೆಸ್ ಸಂಸ್ಕೃತಿ ಎಂದರು.

 

*ಸಿಂಗಾಪುರ-  ನಿಟ್ಟೂರು  ಸೇತುವೆ ಕಾಮಗಾರಿಗೆ ಅನುದಾನ

  ತುಂಗಭದ್ರಾ ನದಿಗೆ ಅಡ್ಡಲಾಗಿ ಸಿಂಗಾಪುರ ನಿಟ್ಟೂರು  ಸೇತುವೆ ಕಾಮಗಾರಿಗೆ ಸಂಪೂರ್ಣ ಅನುದಾನ ಒದಗಿಸುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಅವರು ಇಂದು ಸಿರಗುಪ್ಪದಲ್ಲಿ ಹಮ್ಮಿಕೊಂಡಿದ್ದ ಜನಸಂಕಲ್ಪ ಯಾತ್ರೆಯಲ್ಲಿ ಮಾತನಾಡಿದರು.
ಸಂಸದ ಸಂಗಪ್ಪ ಕರಡಿ ಹಾಗೂ ಸೋಮಲಿಂಗಪ್ಪ ಅವರು ಬಹಳಷ್ಟು ಬೇಡಿಕೆಗಳನ್ನು ಇಟ್ಟಿದ್ದಾರೆ.   ಬೈಪಾಸ್ ರಸ್ತೆ ಯೋಜನೆ ಸಿದ್ಧವಾಗುತ್ತಿದ್ದು ಬರುವ ದಿನಗಳಲ್ಲಿ ಅದಕ್ಕೆ ಅಗತ್ಯವಿರುವ  ಅನುದಾನ ಒದಗಿಸಲಿದೆ. ಒಳಚರಂಡಿ ವ್ಯವಸ್ಥೆಯನ್ನು ಕೈಗೆತ್ತಿಕೊಳ್ಳಲು    ಕರ್ನಾಟಕ ಗ್ರಾಮೀಣ ಕುಡಿಯುವ ನೀರು ಸರಬರಾಜು ಮಂಡಳಿಗೆ  ಸೂಚಿಸಿದ್ದೇನೆ ಎಂದರು.  ಸಿರಗುಪ್ಪ ತಾಲ್ಲೂಕಿನ ಅಭಿವೃದ್ಧಿಗೆ ಸಂಪೂರ್ಣ ವಾಗಿ ಅನುದಾನ ಒದಗಿಸಲು  ನಮ್ಮ ಸರ್ಕಾರ ಬದ್ದ ಎಂದು ಮುಖ್ಯ ಮಂತ್ರಿಗಳು ತಿಳಿಸಿದರು.
*ಜಿಲ್ಲೆಯ ಅಭಿವೃದ್ಧಿಗಾಗಿ 5 ಸಾವಿರ ಕೋಟಿ ರೂ.ಗಳ ಯೋಜನೆ*
ಈ ವರ್ಷ ನಾವು ನೆನೆಗುದಿಗೆ ಬಿದ್ದಿದ್ದ ಖನಿಜ  ನಿಧಿಯನ್ನು ಸರ್ವೋಚ್ಚ ನ್ಯಾಯಾಲಯ ದ ಆದೇಶದ ಮೇರೆಗೆ ತಂದು 4-5 ಜಿಲ್ಲೆಗಳಿಗೆ 25 ಸಾವಿರ ಕೋಟಿ ರೂ.ಗಳ ಅಭಿವೃದ್ಧಿ ಯನ್ನು ಮಾಡುತ್ತಿದ್ದೇವೆ.  ತಲಾ 5 ಸಾವಿರ ಕೋಟಿ ರೂ ಗಳ ಕ್ರಿಯಾಯೋಜನೆ ರೂಪಿಸಿ, ಮುಂದಿನ 2 ವರ್ಷಗಳಲ್ಲಿ 5 ವರ್ಷಗಳಲ್ಲಿ 5 ಸಾವಿರ ಕೋಟಿ ರೂ.ಗಳ ಯೋಜನೆಯನ್ನು ಈ ಜಿಲ್ಲೆಯ ಅಭಿವೃದ್ಧಿಗಾಗಿ
ಒದಗಿಸುತ್ತೇವೆ ಎಂದರು.
*ಜನೋಪಯೋಗಿ ಶಾಸಕರು*
ಶಾಸಕ ಸೋಮಲಿಂಗಪ್ಪ ಅವರು ಜನೋಪಯೋಗಿ ಶಾಸಕರು.  ಈ ಕ್ಷೇತ್ರದ ಬಡವರು, ದೀನದಲಿತರರು, ಎಲ್ಲಾ ಸಮುದಾಯಗಳ ಬಗ್ಗೆ ಅತ್ಯಂತ ಪ್ರೀತಿ ಗೌರವ ದಿಂದ ಸಾಮಾನ್ಯ ಸೇವಕನ ರೀತಿಯಲ್ಲಿ ಕೆಲಸ ಮಾಡುತ್ತಿದ್ದಾರೆ.  ಕಳೆದ 5 ವರ್ಷಗಳಲ್ಲಿ 4 ವಸತಿ ಶಾಲೆಗಳು, ಸೇತುವೆ ನಿರ್ಮಾಣ ಕಾಮಗಾರಿ ಪ್ರಾರಂಭವಾಗಿದೆ.ಕುಡಿಯುವ ನೀರಿಗೆ ಸಿರಗುಪ್ಪೆ ಕೆರೆ ನಿರ್ಮಾಣ,  ಬ್ರಿಡ್ಜ್ ಕಂ ಬ್ಯಾರೇಜ್, ಹಾಸ್ಟೆಲ್ ಗಳು ಬಿ.ಆರ್.ಅಂಬೇಡ್ಕರ್ ಭವನ, ವಾಲ್ಮೀಕಿ ಭವನ, ಏತ ನೀರಾವರಿ ಯೋಜನೆಗಳು ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ಅನುಷ್ಠಾನ ಕ್ಕೆ ತಂದಿದ್ದಾರೆ. ಅವರ ರಿಪೋರ್ಟ್ ಕಾರ್ಡ್ ತಂದಿದ್ದು,  ಸೇವಕನನ್ನು ಆಯ್ಕೆ ಮಾಡುತ್ತೀರೋ, ನಾಯಕನನ್ನು ಆಯ್ಕೆ ಮಾಡುತ್ತೀರೋ ಎನ್ನುವ ತೀರ್ಮಾನ ಜನರದ್ದು. ಮನೆ ಬಾಗಿಲಿಗೆ ಬಂದು ಸೇವೆ ನೀಡುವ ಸಜ್ಜನ, ಸರಳ ವ್ಯಕ್ತಿ ಯಾದ ಸೋಮಲಿಂಗಪ್ಪ ಅವರಿಗೆ ಜನ ಮುಂದಿನ 5 ವರ್ಷ ಸೇವೆ ಮಾಡಲು ಆಶೀರ್ವಾದ ಮಾಡಬೇಕು ಎಂದರು.
ಈ ಸಂದರ್ಭದಲ್ಲಿ ಮಾಜಿ ಸಿಎಂ ಯಡಿಯೂರಪ್ಪ , ಸಚಿವರಾದ ಗೋವಿಂದ ಕಾರಜೋಳ,  ಬಿ‌. ಶ್ರೀರಾಮುಲು ಮತ್ತಿತರರು ಹಾಜರಿದ್ದರು.
https://pragati.taskdun.com/politics-2/congress-party-is-a-sinking-ship-says-cm-basavraj-bommai/
https://pragati.taskdun.com/latest/dayananda-sagarjanmashatamanotsavacm-basavaraj-bommai/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button