ಪ್ರಗತಿವಾಹಿನಿ ಸುದ್ದಿ, ಬೆಳಗಾವಿ:
ಕಾಡು ಬೆಳೆಸಿ ನಾಡು ಉಳಿಸುವುದು ಪ್ರತಿಯೊಬ್ಬ ವ್ಯಕ್ತಿಯ ಆದ್ಯ ಕರ್ತವ್ಯವಾಗಿದೆ. ಜೀವನದ ಅಮೂಲ್ಯ ದಿನಗಳಂದು ಸವಿನೆನಪಿಗಾಗಿ ದುಂದುವೆಚ್ಚಮಾಡದೆ ಒಂದು ಗಿಡನೆಡುವುದರಿಂದ ಅದು ನಮ್ಮ ಮುಂದಿನ ಪೀಳಿಗೆಗೆ ನೆರಳಾಗುವುದು ಎಂದು ಕೆಎಲ್ಇ ಶತಮಾನೋತ್ಸವ ಚಾರಿಟೆಬಲ್ ಆಸ್ಪತ್ರೆಯ ನಿರ್ದೇಶಕ ಡಾ. ಎಸ್ ಸಿ ಧಾರವಾಡ ಕರೆ ನೀಡಿದ್ದಾರೆ.
ಅವರು ಇಂದು ನಗರದ ಕೆಎಲ್ಇ ಶತಮಾನೋತ್ಸವ ಚಾರಿಟೆಬಲ್ ಆಸ್ಪತ್ರೆಯಲ್ಲಿ ವಿಶ್ವ ಪರಿಸರ ದಿನಾಚರಣೆಯ ಕಾರ್ಯಕ್ರಮವನ್ನು ಸಸಿ ನೆಡುವ ಮೂಲಕ ಉದ್ಘಾಟಿಸಿ ಮಾತನಾಡುತ್ತಿದ್ದರು. ಬೆಳಗಾವಿ ಎಂದರೆ ಮೊದಲು ಮಲೆನಾಡು ಎಂದು ನಾಮಾಂಕಿತ ಗೊಂಡಿತ್ತು. ಕಾರಣ ಮಲೆನಾಡಿನಂತೆ ಯತೇಚ್ಛವಾಗಿ ಮಳೆ ಬೀಳುತ್ತಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಮಳೆ ಬೀಳುವ ಪ್ರಮಾಣವು ತೀರ ಕಡಿಮೆಯಾಗಿ ಬರಗಾಲ ಬೀಳುವಂತಹ ಪರಿಸ್ಥಿತಿ ಉಂಟಾಗಿರುವ ಕಾರಣದಿಂದ ಇಂದಿನ ಪೀಳಿಗೆಯು ಹೆಚ್ಚಿನ ಸಂಖ್ಯೆಯಲ್ಲಿ ಸಸಿಗಳನ್ನು ನೆಡುವ ಮೂಲಕ ಮುಂದಿನ ಪೀಳಿಗೆಯು ನೆಮ್ಮದಿಯ ಜೀವನ ನಡೆಸಲು ವೃಕ್ಷ ಕ್ರಾಂತಿಯು ಅನಿರ್ವಾಯವಾಗಿದೆ ಹಾಗೂ ಪರಿಸರವನ್ನು ಉಳಿಸುವುದು ಕರ್ತವ್ಯವಾಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಆಸ್ಪತ್ರೆಯ ವೈದ್ಯರಾದ ಡಾ. ಎ.ಎಸ್.ಗೋದಿ ಮಾತನಾಡುತ್ತ ಇತ್ತೀಚಿನ ದಿನಗಳಲ್ಲಿ ವಾಯುಮಾಲಿನ್ಯವು ಅಧಿಕವಾಗಿದ್ದು ಶ್ವಾಸಕೋಶ ಉಸಿರಾಟ ಸಂಬಂಧಿತ ರೋಗಗಳಿಗೆ ಕಾರಣೀಭೂತವಾಗಿದೆ. ಆದ್ದರಿಂದ ವಾಯುಮಾಲಿನ್ಯವನ್ನು ತಗ್ಗಿಸಲು ೧೨೫ ಕೋಟಿ ಜನಸಂಖ್ಯೆಯನ್ನು ಹೊಂದಿರುವ ನಮ್ಮ ಭಾರತವು, ಒಬ್ಬ ವ್ಯಕ್ತಿ ವರ್ಷಕ್ಕೆ ಒಂದು ಸಸಿಯನ್ನು ನೆಟ್ಟರೆ ಹತ್ತು ವರ್ಷಗಳಲ್ಲಿ ಇಡೀ ಭಾರತ ದೇಶವೇ ಹಚ್ಚ ಹಸುರಿನ ಬೀಡಾಗುವುದರಲ್ಲಿ ಎರಡು ಮಾತಿಲ್ಲ ಎಂದರು.
ಈ ಕಾರ್ಯಕ್ರಮಲ್ಲಿ ಹಿರಿಯ ವೈದ್ಯ ಡಾ. ಆರ್.ಆರ್. ವಾಳವೇಕರ, ಡಾ. ಡಾ.ಬಿ.ಎಸ್.ಮಾಹಾಂತ ಶೆಟ್ಟಿ, ಡಾ.ಸತೀಶ ಧಾಮನಕರ, ಡಾ.ಎಂಎಸ್.ಕಡ್ಡಿ, ಡಾ.ನಾಗರಾಜ ಪಿ, ಡಾ ಪ್ರಕಾಶ ಕೊನ್ನೂರ, ಡಾ.ಸಂತೋಷ ಕರಮಶಿ ಮತ್ತು ವೈದ್ಯಕೀಯೇತರ ಸಿಬ್ಬಂದಿ ಉಪಸ್ಥಿತರಿದ್ದರು.
ಹೆಚ್ಚಿನ ಸುದ್ದಿಗಳಿಗಾಗಿ pragztivehini.com ನೋಡಿ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ