Kannada NewsLatest
ಟೈಮ್ ಪಾಸೀಗಾಗಿ ಬರೆದ ಪುಸ್ತಕಗಳು ಗ್ರಂಥಗಳಾಗಿವೆ: ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ
* ಮನೆ ಮನೆಗೆ ಬುದ್ಧ, ಬಸವ, ಅಂಬೇಡ್ಕರ್ ವಿನೂತನ ಕಾರ್ಯಕ್ರಮ
* ಇದು ಟ್ರೇಲರ್ ಅಷ್ಟೇ ಪಿಕ್ಚರ್ ಅಭಿ ಬಾಕಿ ಹೈ ಎಂದ ಸಾಹುಕಾರ
ಪ್ರಗತಿವಾಹಿನಿ ಸುದ್ದಿ, ನಿಪ್ಪಾಣಿ: ಟೈಮ್ ಪಾಸೀಗಾಗಿ ಬರೆದ ಪುಸ್ತಕಗಳು ಇಂದು ಗ್ರಂಥಗಳಾಗಿವೆ. ಆ ಗ್ರಂಥಗಳು ಇಂದು ನಮ್ಮನ್ನು ಆಳುವಂತಾಗಿದೆ. ಕೈ, ಕಾಲಿಗೆ ಬೇಡಿ ಹಾಕಿಲ್ಲ ಮಿದುಳಿಗೆ ಬೇಡಿ ಹಾಕಿದ್ದಾರೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ, ಶಾಸಕ ಸತೀಶ್ ಜಾರಕಿಹೊಳಿ ಅವರು ಹೇಳಿದರು.
ಪಟ್ಟಣದಲ್ಲಿ ಮಾನವ ಬಂಧುತ್ವ ವೇದಿಕೆ ಕರ್ನಾಟಕ ವತಿಯಿಂದ ಹಮ್ಮಿಕೊಂಡಿದ್ದ “ಮನೆ ಮನೆಗೆ ಬುದ್ಧ, ಬಸವ, ಅಂಬೇಡ್ಕರ್ ವಿನೂತನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ನಮ್ಮ ಹಕ್ಕುಗಳನ್ನು ಪಡೆಯಬೇಕಾಗಿದ್ದು, ಆದಕಾರಣ ಈ ಹೋರಾಟ ಪ್ರಾರಂಭ ಮಾಡಲಾಗಿದೆ ಎಂದು ತಿಳಿಸಿದರು.
ಮನುಷ್ಯರಾಗಿ ಮನುಷ್ಯರನ್ನ ನೋಡುವುದು ಬಹಳ ಮುಖ್ಯ. ಅವನು ಆ ಜಾತಿ, ಈ ಜಾತಿ ಅಂತಾ ಮುಟ್ಟಿಸಿಕೊಳ್ಳುವುದಿಲ್ಲ. ಅನಿಷ್ಟ ಪದ್ಧತಿಗಳು ಹೋಗಬೇಕು, ಅದಕ್ಕೆ ನಮ್ಮ ಹೋರಾಟ. ದಲಿತ ನೀರು ಮುಟ್ಟಿದ್ರೆ ಅಶುದ್ಧ ಅಂತಾರೆ. ಅದೇ ಒಂದು ಎಮ್ಮೆ ಬೆಳಗ್ಗೆಯಿಂದ ಸಂಜೆವರೆಗೂ ನೀರಲ್ಲೇ ಇರುತ್ತೆ. ಇದರ ವಿರುದ್ಧ ನಮ್ಮ ಹೋರಾಟವಿದೆ. ಗುಡಿ ಕಟ್ಟುವವರೂ ನಾವು, ದೇಣಿಗೆ ಕೊಡುವವರೂ ನಾವು. ದೇಗುಲ ರೆಡಿಯಾದ ಮೇಲೆ ದಲಿತರಿಗೆ ಅಲ್ಲಿ ಪ್ರವೇಶ ಇಲ್ಲ ಅಂತೀವಿ. ದೇವಸ್ಥಾನದಲ್ಲಿ ಎಲ್ಲರಿಗೂ ಸಮಾನ ಅವಕಾಶ ಸಿಗಲಿ. ಶಿಕ್ಷಣ ಹಾಗೂ ಜ್ಞಾನ ಒಂದೇ ನಮ್ಮನ್ನ ಬದುಕಿಸಲು ಸಾಧ್ಯವಿಲ್ಲ. ಬದುಕಿನಲ್ಲಿ ಬರುವ ಜ್ಞಾನ ಬಹಳ ಮುಖ್ಯ ಎಂದರು.
ನಾಲ್ಕು ವರ್ಷದ ನಂತರ ಸೈನ್ಯದಿಂದ ವಾಪಾಸ್ ಕಳುಹಿಸುವ ಕೆಲಸ ನಡೆಯುತ್ತಿದೆ. ಅಲ್ಲಿಯೂ ನಮ್ಮ ಹಕ್ಕುಗಳನ್ನ ಕಸಿದುಕೊಳ್ಳುವ ಪ್ರಯತ್ನ ನಡೆದಿದೆ. ಬೃಹತ್ ಸಭೆಗಳ ಬದಲು ಚಿಕ್ಕ ಚಿಕ್ಕ ಸಭೆ ಮಾಡಿ ಮನೆಗಳಿಗೆ ಬರುವ ಕಾರ್ಯಕ್ರಮ ನಮ್ಮದು. ಬುದ್ಧ, ಬಸವ ಉಳಿಸಿಕೊಳ್ಳಬೇಕು ಅಂದ್ರೇ ಸ್ವಲ್ಪ ಕಷ್ಟದ ಕೆಲಸ ನಾವು ಮಾಡಬೇಕು. ಈ ಕಾರ್ಯಕ್ರಮ ಪದೇ ಪದೇ ಮಾಡುತ್ತೇವೆ. ನಿಮ್ಮನ್ನ ಆಹ್ವಾನಿಸುತ್ತೇವೆ. ನಮ್ಮ ವಿಚಾರಗಳಿಗೆ ತಕ್ಷಣ ಸ್ಪಂದನೆ ಸಿಗುವುದಿಲ್ಲ. ಅವರಲ್ಲಿರುವ ಪರಂಪರೆಗಳಿಂದ ಇದು ವಿಭಿನ್ನವಾಗಿದೆ ಎಂದು ಹೇಳಿದರು.
ಮಾನವ ಬಂಧುತ್ವ ಕೆಲಸ ವೇದಿಕೆ ಆಯೋಜನೆ ಮಾಡುವುದು ಅಷ್ಟೇ. ಬೆಳಗ್ಗೆ ಎದ್ದ ಕೂಡಲೇ ನಿಪ್ಪಾಣಿಗೆ ಸಾಹುಕಾರ್ ಬರ್ತಾರೆ ಅನ್ನೋದು ಆಗಬಾರದು. ಅವರ ಮಗಳು ಬರ್ತಾರೆ ಅಂತಾ ಚರ್ಚೆ ಪ್ರಾರಂಭ ಆಗಬಾರದು. ನಾವು ಆ ಉದ್ದೇಶಕ್ಕಾಗಿ ಕಾರ್ಯಕ್ರಮ ಮಾಡಿಲ್ಲ. ರಾಜಕೀಯ ಅಧಿಕಾರಕ್ಕಿಂತ ನಮಗೆ ಈ ಅಧಿಕಾರ ಬಹಳ ಮುಖ್ಯ. ಮನುಷ್ಯರಾಗಿ ಮನುಷ್ಯರನ್ನ ನೋಡುವುದು ಬಹಳ ಮುಖ್ಯ. ಅಧಿಕಾರ ಬರುತ್ತೆ ಅಧಿಕಾರ ಹೋಗುತ್ತೆ ಎಂದರು.
ಮಹಾತ್ಮಾ ಜ್ಯೋತಿಬಾ ಫುಲೆ ಇಲ್ಲದಿದ್ದರೇ ಛತ್ರಪತಿ ಶಿವಾಜಿ ಅವರ ಇತಿಹಾಸ ಹೊರಗೆ ಬರುತ್ತಿರಲಿಲ್ಲ. ಅವರ ಇತಿಹಾಸವನ್ನು ಮುಚ್ಚಿಡಲಾಗಿತ್ತು. ಸತ್ಯ ಶೋಧಕ ಸಂಸ್ಥೆಯಿಂದ ಅವರ ಇತಿಹಾಸ ಹೊರಗೆ ಬಂದಿದೆ. ಶಿವಾಜಿ ಎಲ್ಲರನ್ನು ಸಮಾನತೆಯಿಂದ ನೋಡುತ್ತಿದ್ದರು. ವಿಶ್ವದಲ್ಲಿ ಶಿವಾಜಿ ಅವರ ಒಂದೇ ಪೇಂಟಿಂಗ್ ಇರುವುದು ಅದನ್ನು ಯಾರೋ ಕುಲಕರ್ಣಿ, ದೇಶಪಾಂಡೆ ಅವರು ತಯಾರಿಸಿಲ್ಲ. ಮೊಹಮ್ಮದ್ ಮದಾರಿ ಎನ್ನುವ ಚಿತ್ರಕಾರ ಆ ಪೇಂಟಿಂಗ್ ತಯಾರಿಸಿದ್ದರು ಎಂದು ತಿಳಿಸಿದ್ದಾರೆ.
ಪ್ರತಾಪಗಡ್ ಕೋಟೆಯಲ್ಲಿ ಶಿವಾಜಿ ಮಸೀದಿ ನಿರ್ಮಾಣ ಮಾಡಿರುವ ಇತಿಹಾಸವಿದೆ. ಅವರ ಕಾಲದಲ್ಲಿ ಸಮಾನತೆಯಿತ್ತು. ಆದರೆ ಈಗ ಮರಾಠಾ, ಮುಸ್ಲಿಂ, ದಲಿತರ ನಡುವೆ ದಿನನಿತ್ಯ ಜಗಳವಾಗುತ್ತಿವೆ. ಇತಿಹಾಸ ಬೇರೆ ಇದೆ. ನಮಗೆ ಬೇರೆ ಇತಿಹಾಸ ತೋರಿಸಲಾಗುತ್ತಿದೆ. ಬಸವಣ್ಣ, ಶಿವಾಜಿ, ಸಂತ ತುಕಾರಾಮ ಸೇರಿದಂತೆ ಮಹಾನ್ ಪುರುಷರ ಇತಿಹಾಸವನ್ನು ಬೇರೆ ತೋರಿಸಲಾಗುತ್ತಿದೆ. ಬಸವಣ್ಣವರ ಕಾಲದಲ್ಲಿ ಸಾಕಷ್ಟು ಹತ್ಯೆಗಳು ನಡೆದವು ಅದನ್ನು ಮುಸ್ಲಿಮರು ಮಾಡಿದ್ರಾ? ಒಂದು ಲಕ್ಷ ಜೈನರ ಹತ್ಯೆಗಳಾಗಿವೆ ಎಂದು ಜೈನ್ ಸ್ವಾಮೀಜಿ ಹೇಳಿದ್ದಾರೆ. ಜೈನರ ಹತ್ಯೆಯನ್ನು ಆದೀಲ್ ಶಾ ಮಾಡಿದ್ರಾ? ಈ ಎಲ್ಲದರ ಕುರಿತು ಚರ್ಚೆ ಆಗಬೇಕಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಇದು ಟ್ರೇಲರ್ ಅಷ್ಟೇ ಪಿಕ್ಚರ್ ಅಭಿ ಬಾಕಿ ಹೈ ಎಂದ ಸಾಹುಕಾರ: ಸ್ಥಳೀಯರಿಗೆ ನಿಪ್ಪಾಣಿಯಲ್ಲಿ ಆದ್ಯತೆ ನೀಡಲಾಗುವುದು. ಅದಕ್ಕೆ ಈ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಮುಂದಿನ ದಿನಗಳಲ್ಲಿ ನಿಪ್ಪಾಣಿಯಲ್ಲಿ ಇನ್ನಷ್ಟು ಕಾರ್ಯಕ್ರಮಗಳನ್ನು ನಡೆಸಿ, ಜನ ಜಾಗೃತಿ ಮೂಡಿಸಲಾಗುತ್ತದೆ. ಇದು ಟ್ರೇಲರ್ ಅಷ್ಟೇ ಪಿಕ್ಚರ್ ಅಭಿ ಬಾಕಿ ಹೈ ಎಂದು ವಿರೋಧಿಗಳಿಗೆ ಶಾಸಕ ಸತೀಶ್ ಜಾರಕಿಹೊಳಿ ಅವರು ಎಚ್ಚರಿಕೆ ಸಂದೇಶವನ್ನು ರವಾನಿಸಿದರು.
ಮೈಸೂರಿನ ಉರಿಲಿಂಗ ಪೆದ್ದಿ ಮಠದ ಶ್ರೀ ಪರಮಪೂಜ್ಯ ಜ್ಞಾನ ಪ್ರಕಾಶ ಸ್ವಾಮಿಜಿ ಮಾತನಾಡಿ, ಧರ್ಮಗಳನ್ನು ಒಡೆಯುವ ಹಿಂದುತ್ವ ಬೇಡ, ಒಡೆದಿರುವ ಜಾತಿಗಳನ್ನು ಒಗ್ಗೂಡಿಸುತ್ತಿರುವ ಮಾನವ ಬಂಧುತ್ವ ದಾರಿಯಲ್ಲಿ ಸಾಗಬೇಕು. ನಿಜವಾದ ಇತಿಹಾಸ ಬಚ್ಚಿಟ್ಟು, ಸುಳ್ಳು ಇತಿಹಾಸ ಸೃಷ್ಟಿಸಿದ್ದಾರೆ. ಇಂತವರಿಗೆ ಮತಗಳನ್ನು ಮಾರಿ ಅಂಬೇಡ್ಕರ್ ಗೆ ಜೈಕಾರ ಹಾಕಬೇಡಿ ಎಂದು ಸಲಹೆ ನೀಡಿದರು.
ನಿಮ್ಮಂಥ ನೂರು ಸ್ವಾಮೀಜಿ, ಜಾರಕಿಹೊಳಿ ಅವರು ಬಂದರೂ ಹಿಂದುತ್ವವನ್ನು ಬದಲಾವಣೆ ಮಾಡಲು ಸಾಧ್ಯವಿಲ್ಲ ಎನ್ನುತ್ತಾರೆ. ಮಾನವನ ತಲೆಯಲ್ಲಿರುವುದು ದೇವರವೆಂಬ ಮನುಸ್ಮೃತಿ ಚಿಪ್ ಹಾಕಿದ್ದಾರೆ. ಕಾರಣ ಆ ಚಿಪ್ ಅಳಿಯಬೇಕು ಎಂದರೇ, ಮಾನವ ಬಂಧುತ್ವ ವೇದಿಕೆಯ ನಡೆಯುವ ವೈಚಾರಿಕ ಚಿಂತನೆಯನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.
ಇಂದು ಮಂತ್ರಗಳ ಭಾರತವಾಗಿದೆ. ದೇಶದಲ್ಲಿ ಇಂತಹ ಬೆಳವಣಿಗೆಗಳಿಗೆ ಜನತೆ ಮರಳಾಗುತ್ತಿದ್ದಾರೆ. ಕಾರಣ ಸಂವಿಧಾನ ತತ್ವದಲ್ಲಿ ನಡೆದಿರುವ ಬಂಧುತ್ವದ ರೂವಾರಿಗಳು ನೀವು ಆಗಬೇಕು. ಧರ್ಮದ ಹೆಸರಲ್ಲಿ ದೇಶವನ್ನು ಒಡೆಯುವವರು ಆತಂಕವಾದಿಗಳು ಎಂದು ಟೀಕಿಸಿದರು.
ದೇಶಕ್ಕೆ ಬೆಂಕಿ ಬಿದಿದೆ ಅದನ್ನುಇಂಚಿಂಚೂ ಅಳಿಸುವ ಅನಿರ್ವಾಯತೆ ಇದೆ. ಗಾಳಿ, ಸಮುದ್ರ ಅಲೆಗಳಿಗೆ ಎದುರಾಗಿ ಸಾಗಿದವರು ಡಾ. ಬಾಬಾ ಸಾಹೇಬ್ ಅಂಬೇಡ್ಕರ್ , ಅಂತಹ ಮಹಾನ್ ವ್ಯಕ್ತಿ ಮಾರ್ಗದಲ್ಲಿ ಸತೀಶ್ ಜಾರಕಿಹೊಳಿ ಅವರು ಗಾಳಿ- ಸಮುದ್ರಕ್ಕೆ ಬಂಡೆಯಾಗಿ ನಿಂತಿದ್ದಾರೆ. ಮೂವರು ಮಹಾನ್ ಚೇತನರ ವೈಚಾರಿಕ ದೇಶಕ್ಕೆ ತಿಳಿಸುವ ಹೋರಾಟ ಸತೀಶ್ ಜಾರಕಿಹೊಳಿ ಅವರ ಕಾರ್ಯ ಮೆಚ್ಚಬೇಕೆಂದು ತಿಳಿಸಿದರು.
ದೇಶದಲ್ಲಿ ನೂತನ ಶಿಕ್ಷಣ ನೀತಿ ಕೆಸರೀಕರಣವಾಗಿದೆ. ಈ ಶಿಕ್ಷಣದಿಂದ ಮಕ್ಕಳಲ್ಲಿ ಗೊಂದಲ ಸೃಷ್ಟಿಯಾಗಿದ್ದು, ಜಾತೀಯತೆ ಮತ್ತೆ ತಳಹದಿಗೆ ತಳ್ಳುವವ ಹುನ್ನಾರ ದೇಶದಲ್ಲಿ ನಡೆದಿದೆ. ಇದಕ್ಕೆಲ್ಲಾ ಬ್ರೇಕ್ ಹಾಕಬೇಕಾದರೆ ಸತೀಶ ಜಾರಕಿಹೊಳಿ ಅವರನ್ನು ಬೆಂಬಲಿಸಿ ಎಂದರು.
ಬಸವ ಭವನ ಹೆಬ್ಬಾಳದ ಪರಮಪೂಜ್ಯ ಶ್ರೀ ಬಸವ ಚೇತನ ದೇವರು ಆಶೀರ್ವಚನ ನೀಡಿದರು. ಈ ಸಂದರ್ಭದಲ್ಲಿ , ಮಹಾರಾಷ್ಟ್ರದ ಕೀರ್ತನಕಾರರಾದ ಪರಮಪೂಜ್ಯ ಶ್ರೀ ಚೈತನ್ಯ ಮಹಾರಾಜರು, ಮಾನವ ಬಂಧುತ್ವ ವೇ ದಿಕೆ ನೂತನ ರಾಜ್ಯ ಸಂಚಾಲಕ ಡಾ. ಎ.ಬಿ. ರಾಮಚಂದ್ರಪ್ಪ, ಯುವ ನಾಯಕ ರಾಹುಲ್ ಜಾರಕಿಹೊಳಿ, ಮಾಜಿ ಸಚಿವ ವೀರಕುಮಾರ ಪಾಟೀಲ್, ಮಾಜಿ ಶಾಸಕ ಕಾಕಾ ಸಾಹೇಬ್ ಪಾಟೀಲ್, ಮಹಾವೀರ ಮೋಹಿತೆ, ಪಂಕಜ ಪಾಟೀಲ್, ರಾಜಣ್ಣ ವಡ್ಡರ, ಗಜಾನನ ಮಂಗಸೂಳಿ, ಸದಾಶಿವ ಬೂಟಾಳಿ, ಚಂದ್ರಕಾಂತ್ ಇಮ್ಮಡಿ, ಸುನೀಲ್ ಹಣಮನ್ನವರ್, ರವೀಂದ್ರ ನಾಯ್ಕರ್, ಸರಳಾ ಸಾತ್ಪುತ್ರೆ, ಕಿರಣ ರಜಪೂತ, ಭರಮಣ್ಣ ತೋಳಿ, ಗೋಕಾಕ ಕಾಂಗ್ರೆಸ್ ಹಿರಿಯ ಮುಖಂಡರಾದ ವಿವೇಕರಾವ ಜತ್ತಿ, ಪಾಂಡು ಮಣಿಕೆರಿ ಹಾಗೂ ಬೆಳಗಾವಿ ಜಿಲ್ಲಾ ಗ್ರಾಮೀಣ ಕಾಂಗ್ರೆಸ್ ಸಮಿತಿಯ ಎಸ್ ಟಿ ಅಧ್ಯಕ್ಷರಾದ ಬಾಳೇಶ ದಾಸನಟ್ಟಿ ಮತ್ತು ಇನ್ನಿತರ ಕಾರ್ಯಕರ್ತರು ಈ ಸಮಾರಂಭದಲ್ಲಿ ಭಾಗವಹಿಸಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ