Kannada NewsKarnataka News

ಖಾನಾಪುರ ತಾಲೂಕಿನಲ್ಲಿ 2 ವಿದ್ಯಾರ್ಥಿ ನಿಲಯ – CM ಘೋಷಣೆ

 

ಪ್ರಗತಿವಾಹಿನಿ ಸುದ್ದಿ, ಖಾನಾಪುರ: ಹಳ್ಳಿಗಳಲ್ಲಿ ಕುಂಬಾರಿಕೆ, ಕಮ್ಮಾರಿಕೆ, ಬಡಟಿಗತನ, ಗಾಣಿಗ ಕಾರ್ಯಗಳನ್ನು ಮಾಡುತ್ತಿರುವ ಕುಶಲಕರ್ಮಿಗಳಿಗೆ ಪ್ರತಿ ಕುಟುಂಬಕ್ಕೆ 50 ಸಾವಿರ ಸಹಾಯಧನ
ನೀಡಲಾಗುವುದು, ಪ್ರತಿ ಗ್ರಾಮದ 2 ಸ್ತ್ರೀ ಶಕ್ತಿ ಸ್ವ ಸಹಾಯ ಸಂಘಗಳಿಗೆ ತಲಾ 5 ಲಕ್ಷ
ಸಹಾಯಧನ ಒದಗಿಸುವ ಮೂಲಕ ಹಳ್ಳಿಗಾಡಿನ ಹೆಣ್ಣುಮಕ್ಕಳಿಗೆ ಸ್ಥಳೀಯವಾಗಿ ಉದ್ಯೋಗ
ಕಲ್ಪಿಸಲಾಗುವುದು ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು.
ಪಟ್ಟಣದಲ್ಲಿ ಬುಧವಾರ ಸಂಜೆ ಜರುಗಿದ ಜನಸಂಕಲ್ಪ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು,
ತಾಲ್ಲೂಕಿನ ಗ್ರಾಮೀಣ ಭಾಗದಲ್ಲಿ ಹೈನುಗಾರಿಕೆಯ ಮೂಲಕ ಹಾಲು ಉತ್ಪಾದನೆ
ಕೈಗೊಂಡಿರುವ ಗೌಳಿ ಸಮಾಜದವರಿಗೆ ದನಕರುಗಳನ್ನು ಖರೀದಿಸಲು ಮತ್ತು ದನದ ಕೊಟ್ಟಿಗೆ
ನಿರ್ಮಿಸಿಕೊಳ್ಳಲು ಮರಾಠಾ ಅಭಿವೃದ್ಧಿ ನಿಗಮದ ಮೂಲಕ ಆರ್ಥಿಕ ಸಹಾಯ ಒದಗಿಸಲಾಗುವುದು.
ಶೀಘ್ರದಲ್ಲೇ ಖಾನಾಪುರ ತಾಲ್ಲೂಕಿನ ಹಿಂದುಳಿದ ವರ್ಗಗಳ ಮತ್ತು
ಎಸ್.ಸಿ, ಎಸ್.ಟಿ ವಿದ್ಯಾರ್ಥಿಗಳಿಗಾಗಿ ಎರಡು ವಿದ್ಯಾರ್ಥಿ ನಿಲಯಗಳನ್ನು
ಪ್ರಾರಂಭಿಸಲು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.
ಅತೀವೃಷ್ಟಿಯಿಂದ ಹಾಳಾದ ತಾಲ್ಲೂಕಿನ ರಸ್ತೆಗಳ ದುರಸ್ತಿಗೆ ವಿಶೇಷ ಅನುದಾನ
ಒದಗಿಸಲಾಗುವುದು, ಕಳಸಾ-ಬಂಡೂರಿ, ಮಹದಾಯಿ ಯೋಜನೆಯನ್ನು ಅನುಷ್ಠಾನಗೊಳಿಸಲಾಗುವುದು,

ಜಾಂಬೋಟಿಯಲ್ಲಿ ಜೇನು ಅಭಿವೃದ್ಧಿಗಾಗಿ 5 ಕೋಟಿ
ಅನುದಾನವನ್ನುಬಿಡುಗಡೆಗೊಳಿಸಲಾಗುವುದು, ತಾಲ್ಲೂಕಿನ 106 ಗ್ರಾಮಗಳಿಗೆ ನಿರಂತರ ನೀರು
ಪೂರೈಕೆಗಾಗಿ 434 ಕೋಟಿ ಅನುದಾನ, ಖಾನಾಪುರ ತಾಲ್ಲೂಕಿನಲ್ಲಿ ಕೆಐಎಡಿಬಿ
ಮೂಲಕ ಕೈಗಾರಿಕೆಗಳ ಸ್ಥಾಪನೆಗೆ ಪ್ರಯತ್ನಿಸಲಾಗುವುದು ಎಂದು ಅವರು ವಿವರಿಸಿದರು.

ತಾಲ್ಲೂಕಿನಲ್ಲಿ 2018ರಲ್ಲಿ ಕಾಂಗ್ರೆಸ್ ತನ್ನ ಸ್ವಂತ ಬಲದಿಂದ ಗೆಲುವು ಸಾಧಿಸಿಲ್ಲ,
ಬಿಜೆಪಿಯಲ್ಲಿದ್ದ ಆಂತರಿಕ ಒಡಕಿನಿಂದ ಗೆದ್ದಿದೆ. ಆದರೆ ಈಗ ಪರಿಸ್ಥಿತಿ ಬದಲಾಯಿಸಿದೆ.
ಕ್ಷೇತ್ರದಲ್ಲಿ ಪಕ್ಷದ 8 ಮುಖಂಡರು ಟಿಕೆಟ್ ಆಕಾಂಕ್ಷಿಯಾಗಿದ್ದು, ಅವರೆಲ್ಲರೂ ಒಂದಾಗಿ
ಒಮ್ಮತದ ಅಭ್ಯರ್ಥಿಯನ್ನು ಆರಿಸಿ ಚುನಾವಣೆಗೆ ನಿಲ್ಲಿಸಲಿದ್ದಾರೆ ಮತ್ತು ಪಕ್ಷದ
ಗೆಲುವಿಗೆ ಎಲ್ಲರೂ ಒಗ್ಗಟ್ಟಿನಿಂದ ಶ್ರಮಿಸಲಿದ್ದಾರೆ ಎಂದು ಹೇಳಿದ ಮುಖ್ಯಮಂತ್ರಿಗಳು
ಬಳಿಕ ಎಲ್ಲ ಟಿಕೆಟ್ ಆಕಾಂಕ್ಷಿಗಳನ್ನು ವೇದಿಕೆಯ ಮುಂಭಾಗಕ್ಕೆ ಕರೆಯಿಸಿ ಅವರಿಗೆ
ಪಕ್ಷನಿಷ್ಠರಾಗಿ ಉಳಿಯುವ ಕುರಿತು ಪ್ರಮಾಣವಚನವನ್ನು ಬೋಧಿಸಿದರು.

 

 *ಖಾನಾಪುರದ 100 ಗ್ರಾಮಗಳ ಪ್ರತಿ ಮನೆಗೆ ಕುಡಿಯುವ ನೀರು ಯೋಜನೆ 

ಜಲಜೀವನ್ ಮಿಷನ್ ನ ಹರ್ ಘರ್ ಜಲ್ ಯೋಜನೆಯಡಿ ಖಾನಾಪುರದ 100 ಗ್ರಾಮಗಳ ಪ್ರತಿಯೊಂದು ಮನೆಗೆ ಕುಡಿಯುವ ನೀರಿನ ಪೂರೈಕೆಗಾಗಿ 434 ಕೋಟಿ ರೂ. ಮೊತ್ತದ ಯೋಜನೆ ಕೈಗೊಳ್ಳಲಾಗುತ್ತಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
*ಹೈನುಗಾರಿಕೆ ಅಭಿವೃದ್ಧಿಗೆ ವಿಶೇಷ ಕಾರ್ಯಕ್ರಮ:*
ಖಾನಾಪುರ ತಾಲ್ಲೂಕಿನಲ್ಲಿ ಹೈನುಗಾರಿಕೆ ಮಾಡುವ ಗೌಳಿ ಜನಾಂಗ ಸಾಕಷ್ಟಿದ್ದಾರೆ. ಮರಾಠ ಅಭಿವೃದ್ಧಿ ನಿಗಮಕ್ಕೆ ಹೆಚ್ಚುವರಿ ಅನುದಾನ ನೀಡಿ, ಗೌಳಿ ಜನಾಂಗಕ್ಕೆ ಶೆಡ್ ಗಳು , ದನಕರುಗಳು ಸೇರಿದಂತೆ , ಹೈನುಗಾರಿಕೆಗೆ ಬೇಕಾದ ವ್ಯವಸ್ಥೆಗಳನ್ನು ಪೂರೈಸಲು ತಿಳಿಸಲಾಗಿದ್ದು, ಈ ವಿಶೇಷ ಕಾರ್ಯಕ್ರಮಕ್ಕೆ ಆದೇಶ ಮಾಡುವ ಮೂಲಕ ಗೌಳಿ ಜನಾಂಗದವರಿಗೆ ಅನುಕೂಲ ಕಲ್ಪಿಸಲಾಗುತ್ತಿದೆ ಎಂದರು.
*ಖಾನಾಪುರದಲ್ಲಿ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ನಿಲಯ ನಿರ್ಮಾಣ:*
ಖಾನಾಪುರದಲ್ಲಿ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಹಿಂದುಳಿದ ವರ್ಗದವರಿಗೆ ಹಾಗೂ ಎಸ್ ಸಿ ಎಸ್ ಟಿ ವರ್ಗಕ್ಕೆ ವಿದ್ಯಾರ್ಥಿ ನಿಲಯಗಳ ನಿರ್ಮಾಣಕ್ಕೆ ಮಂಜೂರಾತಿ ನೀಡಲಾಗುವುದು. ಈ ಭಾಗದಲ್ಲಿ ಮಳೆಯಿಂದ ಹಾನಿಯಾಗಿರುವ ರಸ್ತೆಗಳ ಅಭಿವೃದ್ಧಿಗೆ ಅನುದಾನವನ್ನು ಶೀಘ್ರದಲ್ಲಿ ಒದಗಿಸಲಾಗುವುದು. ಮಹದಾಯಿ ನೀರಾವರಿ ಯೋಜನೆಯಡಿಯಲ್ಲಿ  ಚೆಕ್ ಡ್ಯಾಂ  ನಿರ್ಮಾಣ ಹಾಗೂ ನೀರಾವರಿ ವ್ಯವಸ್ಥೆಗೆ  ಖಾನಾಪುರವನ್ನು ಜೋಡಿಸಲಾಗುವುದು. ಜಾಂಬೂಟಿ ಜೇನಿನ ಅಭಿವೃದ್ಧಿಗೆ 5 ಕೋಟಿ ರೂ.ನ್ನು ಬಜೆಟ್ ನಲ್ಲಿ ಮೀಸಲಿರಿಸಿದ್ದು, ಕೂಡಲೇ ಅನುದಾನ ಬಿಡುಗಡೆ ಮಾಡಲಾಗುವುದು. ಖಾನಾಪುರದಲ್ಲಿ ಕೈಗಾರಿಕಾ ಅಭಿವೃದ್ಧಿಗೆ  ಮಾಡುವ ಮೂಲಕ ಯುವಕರಿಗೆ ಉದ್ಯೋಗ ಒದಗಿಸಲಾಗುವುದು ಎಂದರು.

ಕಾರ್ಯಕ್ರಮದ ಅಂಗವಾಗಿ ಬಿಜೆಪಿ ಖಾನಾಪುರ ಬ್ಲಾಕ್ ಮತ್ತು ಪಟ್ಟಣ ಪಂಚಾಯ್ತಿ ವತಿಯಿಂದ
ಮುಖ್ಯಮಂತ್ರಿಗಳನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮ ಉದ್ದೇಶಿಸಿ ರಾಜ್ಯಸಭಾ ಸದಸ್ಯ
ಈರಣ್ಣ ಕಡಾಡಿ, ಶಾಸಕರಾದ ಅನೀಲ ಬೆನಕೆ, ಲಕ್ಷ್ಮಣ ಸವದಿ, ಸಚಿವ ಗೋವಿಂದ ಕಾರಜೋಳ
ಮಾತನಾಡಿದರು. ವೇದಿಕೆಯಲ್ಲಿ ಸಚಿವ ಭೈರತಿ ಬಸವರಾಜ, ಶಾಸಕರಾದ ಅಭಯ ಪಾಟೀಲ, ಮಹಾಂತೇಶ ದೊಡಗೌಡರ, ರವಿಕುಮಾರ, ಪಕ್ಷದ ಜಿಲ್ಲಾಧ್ಯಕ್ಷ ಸಂಜಯ ಪಾಟೀಲ, ವಕ್ತಾರ ಮಾರುತಿ ಝಿರಲಿ, ಮರಾಠಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಮಾರುತಿ ಮುಳೆ, ಮಾಜಿ ಶಾಸಕ ಅರವಿಂದ ಪಾಟೀಲ,
ಮುಖಂಡರಾದ ವಿಠ್ಠಲ ಹಲಗೇಕರ, ಸಂಜಯ ಕುಬಲ, ಧನಶ್ರೀ ದೇಸಾಯಿ, ಸೋನಾಲಿ ಸರನೋಬತ್
ಮತ್ತಿತರರು ಇದ್ದರು.

 

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಖಾನಾಪುರ ತಾಲೂಕಿಗೆ ಹಲವು ಪ್ರಮುಖ ಯೋಜನೆಗಳ ಘೋಷಣೆಗಳನ್ನು ಮಾಡಿದ್ದಾರೆ. ತಾಲೂಕಿನ ಸಮಸ್ತ ಜನತೆಯ ಪರವಾಗಿ ಅವರಿಗೆ ಧನ್ಯವಾದಗಳನ್ನು ಸಲ್ಲಿಸುತ್ತೇನೆ

-ಡಾ.ಸೋನಾಲಿ ಸರ್ನೋಬತ್

 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button