ರಸ್ತೆಗಳಿಗೆ ಇಲ್ಲ ಮರು ಜನ್ಮ – ವೆಚ್ಚಕ್ಕಿದೆ ಹಲವು ಜನ್ಮಗಳು !

ಪ್ರಗತಿವಾಹಿನಿ ವಿಶೇಷ:

ಮೇಲಿಂದ ಮೇಲೆ ಪತ್ರಿಕೆಗಳಲ್ಲಿ, ದೃಶ್ಯ ಮಾಧ್ಯಮಗಳಲ್ಲಿ ನಾವು ಓದುವ,ನೋಡುವ ವಿಷಯ “ರಸ್ತೆಗುಂಡಿ ತಪ್ಪಿಸಲು ಹೋಗಿ ಮರಣ”. ಇದೇ ತಿಂಗಳೊಂದರಲ್ಲಿ ಹಲವಾರು ಘಟನೆಗಳು ಸಂಭವಿಸಿರುವುದು ನಿಜಕ್ಕೂ ಬೇಸರದ ಸಂಗತಿ. ಇಂತಹ ಆಧುನಿಕ ಯುಗದಲ್ಲೂ ಕೂಡ ರಸ್ತೆಗಳು ಸಮರ್ಪಕವಾಗಿ ಇರದಿರುವುದು ಆಡಳಿತ ವೈಖರಿಗೆ ಹಿಡಿದ ಕನ್ನಡಿ. ಕೋಟಿ ಕೋಟಿ ವೆಚ್ಚದಲ್ಲಿ ತಯಾರಾದ ರಸ್ತೆಗಳು, ಹೀಗೇಕೆ ಗುಂಡಿಗಳಾಗಿ ಹೋಗುತ್ತವೆ ಎಂಬುದನ್ನು ವಿಚಾರ ಮಾಡಿ ನೋಡಿದರೆ, ಕಳಪೆ ಕಾಮಗಾರಿ ನಡೆಯುತ್ತಿದೆ ಎಂದೇ ಅರ್ಥ. ಇದಕ್ಕೆ ರಸ್ತೆ ಗುಣಮಟ್ಟ ಮಾಪನ ಮಾಡುವ ಒಂದು ಇಲಾಖೆ/ವ್ಯವಸ್ಥೆ ಖಂಡಿತವಾಗಿಯೂ ಬೇಕಾಗಿದೆ. ಈ ನಿಟ್ಟಿನಲ್ಲಿ ಸರಕಾರ ಹೆಜ್ಜೆ ಇಡಬೇಕು.

ಸರಕಾರ ತನ್ನ ಸಾಧನೆಗಳನ್ನು ತಿಳಿಸಲೆಂದೇ ಸಾರ್ವಜನಿಕ ಸಭೆಗಳನ್ನು ಏರ್ಪಡಿಸಿ, ಜಂಭ ಕೊಚ್ಚಿಕೊಳ್ಳುವ, ಬಾಯಿ ಬಡುಕ ಸರ್ಕಾರಗಳಿಗೆ ಕಿಂಚಿತ್ತು ನಾಚಿಕೆಯಾದರೂ ಆಗಬೇಕು. ಸರಕಾರ ತಾನು ಮಾಡಿದ ಸಾಧನೆಗಳನ್ನು ಹೇಳಿಕೊಳ್ಳುವ ಪ್ರಮೇಯವೇ ಬರುವುದಿಲ್ಲ. ಅದು ಅದರ ಜವಾಬ್ದಾರಿ ಮತ್ತು ಕರ್ತವ್ಯ. ನಮಗೆ ಮಾಡಿಕೊಟ್ಟ ಉಪಕಾರಗಳೇನಲ್ಲ. ಹಾಗೆಂದೇ ಚುನಾವಣೆಯಲ್ಲಿ ಜನ ಆದೇಶವಾಗಿರುತ್ತದೆ. ಈಗ ಜನ ಪ್ರಬುದ್ಧರಾಗಿದ್ದಾರೆ. ಎಲ್ಲವನ್ನೂ ಗಮನಿಸುತ್ತಿದ್ದಾರೆ. ರಾಜಕೀಯ ಧುರೀಣರು, ಅಧಿಕಾರ ವರ್ಗದವರು ಓಡಾಡುವ,ತಮ್ಮ ಮನೆಯ ಮುಂದಿನ ರಸ್ತೆಗಳನ್ನು ಅಚ್ಚುಕಟ್ಟಾಗಿ ಇಟ್ಟುಕೊಂಡಿರುತ್ತಾರೆ. ಸಚಿವರು, ಮುಖ್ಯಮಂತ್ರಿಗಳು, ಪ್ರಧಾನಮಂತ್ರಿಗಳು, ರಾಷ್ಟ್ರಪತಿಗಳು, ಮತ್ತಿತರ ಗಣ್ಯ ವ್ಯಕ್ತಿಗಳು ಓಡಾಡುವ ರಸ್ತೆಗಳನ್ನು ಸುಂದರವಾಗಿ ಇಟ್ಟಿರುತ್ತಾರೆ ಸಂತೋಷ. ಆದರೆ ಒಂದು ದೇಶಕ್ಕೆ ಆಹಾರ ಭದ್ರತೆ,ಸೇವೆಗಳನ್ನು ಒದಗಿಸುವ ಜವಾಬ್ದಾರಿಯನ್ನು ಹೊತ್ತ ರೈತರು, ಕಾರ್ಮಿಕರು,ಕೂಲಿಕಾರರು,ವಾಹನ ಚಾಲಕರು, ವ್ಯಾಪಾರ ವಹಿವಾಟುದಾರರು ಓಡಾಡುವ ರಸ್ತೆಗಳನ್ನು ಕೆಟ್ಟದ್ದಾಗಿ ಇಟ್ಟಿರುತ್ತಾರೆ. ಇದು ನಮ್ಮ ದೇಶದ ಪರಿಸ್ಥಿತಿ !

ಹಳ್ಳಿಯಿಂದ ಪಟ್ಟಣಕ್ಕೆ, ಪಟ್ಟಣದಿಂದ ನಗರಕ್ಕೆ, ನಗರದಿಂದ ಮಹಾ ನಗರಗಳಿಗೆ ಸಂಪರ್ಕ ಕೊಂಡಿಯಾಗಿರುವ ಈ ರಸ್ತೆಗಳು ಸುಸಜ್ಜಿತವಾಗಿಲ್ಲದಿದ್ದರೆ ಸರಕು ಸಾಮಗ್ರಿ, ಸರಂಜಾಮುಗಳು ಸರಿಯಾದ ಸಮಯಕ್ಕೆ ತಲುಪದೇ ವಿಳಂಬವಾಗುತ್ತದೆ. ಇದರಿಂದಾಗಿ ಹಲವಾರು ತೊಂದರೆಗಳು ಉಂಟಾಗುತ್ತವೆ. ಸರಕಾರದ ಲೆಕ್ಕಪತ್ರಗಳಲ್ಲಿ ಕೋಟಿ ಕೋಟಿ ಹಣವನ್ನು ವ್ಯಯಿಸಲಾಗಿರುತ್ತದೆ ಆದರೆ ರಸ್ತೆಗಳೇಕೆ ಆರು ತಿಂಗಳು ಕೂಡಾ ನಿಲ್ಲುವುದಿಲ್ಲ ಏಕೆ ? ಈ ಪ್ರಶ್ನೆಗೆ ಉತ್ತರ ಕೊಡುವವರು ಯಾರು ? ಕೆಲವು ಪ್ರದೇಶಗಳಲ್ಲಿ ಅತಿ ಹೆಚ್ಚು ಮಳೆ ಬೀಳುವುದರಿಂದ ಮಳೆಗೆ ಹಾಳಾಗಿ ಹೋಗುತ್ತವೆ ಎಂಬ ಸಬೂಬು ಕೊಡಬಹುದು. ಆದರೆ ಒಣ ಪ್ರದೇಶಗಳಲ್ಲಿ ಅದು ಹೇಗೆ ಕಿತ್ತಿ ಹೋಗುತ್ತದೆ ? ಏನೇ ಕಾರಣಗಳನ್ನು ಕೊಟ್ಟರು ಕೂಡ, ಗುಣಮಟ್ಟದ ರಸ್ತೆಗಳನ್ನು ಹಾಕಿದಲ್ಲಿ ಅವು ದೀರ್ಘಕಾಲ ಬಾಳಿಕೆಗೆ ಬರುತ್ತವೆ. ಅಂಥ ಗುಣಮಟ್ಟದ ಕಾರ್ಯ ಯಾವ ಸರ್ಕಾರಗಳಿಂದಲೂ ಆಗಿಲ್ಲವೆಂಬುದು ಇಲ್ಲಿ ಉಲ್ಲೇಖ ಮಾಡಬಹುದು.

ಇಡೀ ಕರ್ನಾಟಕವನ್ನು ಒಂದು ಸುತ್ತು ಹಾಕಿ ನೋಡಿ. ಎಲ್ಲಿ ಬೇಕೆಂದರಲ್ಲಿ ಗುಂಡಿಗಳು ನಿರ್ಮಾಣವಾಗಿವೆ. ಕೆಲವು ಕಡೆಗಳಲ್ಲಂತೂ ಹಿಮಾಲಯದಲ್ಲಿ ಬೆಟ್ಟವನ್ನು ಹತ್ತಿ ಇಳಿದಂಥ ಅನುಭವವಾಗುತ್ತದೆ. ಇದನ್ನು ಉತ್ಪ್ರೇಕ್ಷೆ ಎಂದು ಭಾವಿಸದೆ ಇದನ್ನು ಗಂಭೀರವಾಗಿ ಪರಿಗಣಿಸಬೇಕು. ಯಾವುದೇ ಒಂದು ದೇಶದ ಅಭಿವೃದ್ಧಿಯನ್ನು ನಾವು ಆರ್ಥಿಕ ದೃಷ್ಟಿಯಿಂದ ಅಳೆಯುತ್ತೇವೆ. ಆರ್ಥಿಕ ಚಟುವಟಿಕೆಗಳು ನಡೆಯುವುದು ಮುಖ್ಯವಾಗಿ, ಸುಸಜ್ಜಿತ ರಸ್ತೆಗಳ ಮೇಲೆ ಎಂಬುದನ್ನು ಗಮನದಲ್ಲಿರಿಸಬೇಕು. ಕಾರಣ ಉತ್ಪನ್ನವಾದ ವಸ್ತುಗಳು ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ರವಾನೆಯಾಗುತ್ತವೆ. ಕೊಡುವ ಮತ್ತು ತೆಗೆದುಕೊಳ್ಳುವ ಕೆಲಸ ಜರುಗುವುದೆ ರಸ್ತೆಗಳ ಮೇಲೆ.

ನೀವು ನೋಡಬೇಕು ಹಲವಾರು ರಾಷ್ಟ್ರೀಯ ಹೆದ್ದಾರಿಗಳು, ರಾಜ್ಯ ಹೆದ್ದಾರಿಗಳು, ಜಿಲ್ಲಾ ಹೆದ್ದಾರಿಗಳಂತೂ ಹೇಳ ತೀರದಾಗಿದೆ. ಓಡಾಟ ಬೇಸರ ಎಂಬುದಕ್ಕಿಂತ ಹೆಚ್ಚಾಗಿ ಪ್ರಾಣವನ್ನು ಕಳೆದುಕೊಳ್ಳುತ್ತಿರುವ ಘಟನೆಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇರುವುದೇ ಬೇಸರದ ಸಂಗತಿ. ಇವುಗಳನ್ನು ಸರ್ಕಾರ ತೀವ್ರಗತಿಯಲ್ಲಿ ಬದಲಾವಣೆಗೆ ಮುಂದಾಗದಿರುವುದು ಶೋಚನೀಯ ಸಂಗತಿ. ಊರ ಮಧ್ಯೆಯ ರಸ್ತೆಯಲ್ಲಿ ಬಿದ್ದು ಸಾಯುವ ಘಟನೆಗಳನೇಕ. ನೀವು ಪತ್ರಿಕೆಗಳಲ್ಲಿ ಓದಿದ್ದೀರಿ, ದೃಶ್ಯ ಮಾಧ್ಯಮಗಳಲ್ಲಿ ಕಣ್ಣಾರೆ ನೋಡಿದ್ದೀರಿ. ಇಂತಹ ಘಟನೆಗಳು ವರದಿಯಾದ ಮೇಲೂ ಕೂಡ ಸರ್ಕಾರ, ಸ್ಥಳೀಯ ಆಡಳಿತ ಮರುಕಳಿಸದಂತೆ ಎಚ್ಚರಿಕೆ ವಹಿಸದಿರುವುದು ಬೇಜವಾಬ್ದಾರಿತನದ ವರ್ತನೆ. ರಸ್ತೆ ಹಾಳಾಗುವುದೇನೋ ಸರಿ, ಗುಂಡಿಗಳಾದ ತಕ್ಷಣ ಅದರ ಹಿಂದೆಯೇ ಪರಿಹಾರಾತ್ಮಕ ಕ್ರಮಗಳನ್ನು ಕೈಗೊಂಡಲ್ಲಿ ಮತ್ತಷ್ಟು ಹಾಳಾಗುವ ರಸ್ತೆಯನ್ನು ಕಾಪಾಡಿಕೊಳ್ಳಬಹುದು. ಇಂತಹ ಸಾವು ನೋವುಗಳೂ ಕೂಡಾ ಸಂಭವಿಸುವುದಿಲ್ಲ.

ದಿನದಿಂದ ದಿನಕ್ಕೆ ವಾಹನಗಳ ಸಂಖ್ಯೆ, ಓಡಾಟ ಅತಿ ಹೆಚ್ಚಾಗಿದೆ. ಇದು ಅನಿವಾರ್ಯವೂ ಕೂಡ. ಬೃಹತ್ ಗಾತ್ರದ ಜನಸಂಖ್ಯೆಯನ್ನು ಹೊಂದಿದ ಭಾರತ ತನ್ನೆಲ್ಲ ಆವಶ್ಯಕತೆಗಳನ್ನು ಪೂರೈಸಿಕೊಳ್ಳಲು ವಾಹನ ಸಹಿತ, ರಸ್ತೆಗಳನ್ನು ಬಳಸಲೇಬೇಕಾಗಿದೆ. ಆದರೆ ರಸ್ತೆ ಹಾಳಾಗುವ ಪ್ರದೇಶಗಳಲ್ಲಿ ಸುಸಜ್ಜಿತವಾದ ಕಾಂಕ್ರೀಟ್ ರಸ್ತೆಗಳನ್ನು ಹಾಕಿ ಸುಗಮಗೊಳಿಸಬೇಕು. ಇದರಲ್ಲಿ ಹಾಸ್ಯಾಸ್ಪದ ಸಂಗತಿ ಎಂದರೆ, ಮಳೆ ಅತಿ ಹೆಚ್ಚು ಬೀಳುವ ಪ್ರದೇಶಗಳಲ್ಲಿ ರಸ್ತೆ ಗುಂಡಿಗಳನ್ನು ಮಣ್ಣಿನಿಂದ ಮುಚ್ಚುತ್ತಿದ್ದಾರೆ. ನೀವೇ ಯೋಚಿಸಬೇಕು. ಮಳೆ ಬಂದರೆ ಸಿಮೆಂಟ ರಸ್ತೆಯೇ ತಡೆಯಲಾರದು. ಅಂಥದ್ದರಲ್ಲಿ ಮಣ್ಣನ್ನು ಹಾಕಿ ಮುಚ್ಚುತ್ತಾರೆ ಮತ್ತು ವೆಚ್ಚವನ್ನು ಬರೋಬ್ಬರಿ ಬರೆದಿಡುತ್ತಾರೆ ಅಂದರೆ ಊಹಿಸಿಕೊಳ್ಳಬೇಕು. ಇದರ ಹಿಂದಿನ ಮಸಲತ್ತು. ‘ರಸ್ತೆ ದುರಸ್ತಿ” ಎಂಬುದು ‘ಜೇಬು ಭರ್ತಿ’ ಎಂಬುದಾಗಿ ಪರಿವರ್ತನೆಯಾಗುತ್ತದೆಯೋ ಏನೋ!

ಯಾವಾಗಲೂ ಸರಕಾರವೇ ಮುಂದೆ ನಿಂತಿದ್ದು, ಇದರ ಜವಾಬ್ದಾರಿಯನ್ನು ಹೊರಬೇಕು. ಹೊರಗಿನ ಕಾಂಟ್ರಾಕ್ಟ್ ದಾರರಿಗೆ ಇದನ್ನು ವಹಿಸಿಕೊಡಲಾಗುತ್ತದೆ. ಅವರು ಎಷ್ಟರಮಟ್ಟಿಗೆ ಪ್ರಾಮಾಣಿಕತೆಯಿಂದ ಕೆಲಸವನ್ನು ಪೂರೈಸಿ ಕೊಡುತ್ತಾರೆ? ಕಾರ್ಯ ಪೂರ್ಣಗೊಂಡ ತಕ್ಷಣ ಅದರ ಗುಣಮಟ್ಟದ ಪರೀಕ್ಷೆಯನ್ನು ಯಾರು ಮಾಡುತ್ತಾರೆ? ಕಳಪೆ ಕಾಮಗಾರಿಗೆ ಕೈಗೊಂಡ ಕಾನೂನಾತ್ಮಕ ಕ್ರಮಗಳೇನು? ಇವೆಲ್ಲವನ್ನು ಯೋಚಿಸುತ್ತ ಹೋದರೆ ಗೊಂದಲಮಯ ! ಜಾರಿಕೊಳ್ಳುವ, ತಪ್ಪಿಸಿಕೊಳ್ಳುವ ಸರಳವಾದ ಉತ್ತರಗಳನ್ನು ಮೊದಲೇ ಸಿದ್ಧಪಡಿಸಿಕೊಂಡಿರುತ್ತಾರೆ. ಪತ್ರಿಕೆಗಳಲ್ಲಿ ದೃಶ್ಯ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿದ್ದಂತೆಯೇ ಅದಕ್ಕೆ ವಿವರಣೆಗಳು ಸರಾಗವಾಗಿ ಹರಿದು ಬಂದು ಬಿಡುತ್ತವೆ. ಆದರೆ ನಷ್ಟವನ್ನು ತುಂಬಿ ಕೊಡುವವರು ಯಾರು?

ಕೆಲವೇ ವರ್ಷಗಳ ಹಿಂದೆ ಕೇರಳದ ಹೈಕೋರ್ಟ್ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಗಂಭಿರವಾಗಿ ಪರಿಗಣಿಸಿ,ರಾಜ್ಯ ಸರ್ಕಾರಕ್ಕೆ ಆದೇಶವನ್ನು ಮಾಡಿತ್ತು. ಕೇವಲ ಹದಿನೈದು ದಿನದೊಳಗಾಗಿ ರಾಜ್ಯಾದ್ಯಂತ ರಸ್ತೆಗಳನ್ನು ದುರಸ್ತಿಗೊಳಿಸುವುದು ಮತ್ತು ವ್ಯವಸ್ಥಿತವಾಗಿ ಇಡುವುದು ರಾಜ್ಯ ಸರ್ಕಾರದ ಜವಾಬ್ದಾರಿ ಎಂದು. ತಕ್ಷಣವೇ ರಾಜ್ಯ ಸರ್ಕಾರ ಎಚ್ಚೆತ್ತುಕೊಂಡು ಕಾರ್ಯಕ್ಕೆ ಮುಂದಾಯಿತು. ಅದೇ ರೀತಿ ನಮ್ಮ ರಾಜ್ಯದಲ್ಲಿಯೂ ಆಗಬೇಕಲ್ಲವೇ ?

ಅಪಘಾತಕ್ಕೆ ರಸ್ತೆಗಳೇ ಕಾರಣ ಎಂದು ಏಕಾಏಕಿ ನಿರ್ಧರಿಸಲು ಬರುವುದಿಲ್ಲ. ಅದಕ್ಕೆ ನಮ್ಮ ಅಜಾಗರೂಕತೆಯೂ ಕಾರಣ. ಸಾವು ಸಂಭವಿಸುವುದು, ಗಾಯಗೊಳ್ಳುವುದು, ಇವೆಲ್ಲವೂ ಸರಿಯಾಗಿ ರಸ್ತೆ ನಿಯಮಗಳನ್ನು ಪಾಲಿಸದ ಜನತೆ, ತಮ್ಮನ್ನು ತಾವು ಹದ್ದುಬಸ್ತಿನಲ್ಲಿಟ್ಟುಕೊಳ್ಳದೆ ಬೇಕಾಬಿಟ್ಟಿ ವಾಹನಗಳನ್ನು ಚಲಾಯಿಸುವುದು, ರಸ್ತೆಯಲ್ಲಿ ಕೆಲವರು ವೀಲಿಂಗ್ ಮಾಡುವುದು, ನಗರ ಪ್ರದೇಶಗಳಲ್ಲಿ ಮುಖ್ಯ ಬೀದಿಗಳಲ್ಲಿಯೇ ಅತಿ ವೇಗವಾಗಿ ಚಲಾಯಿಸುವುದು, ಹುಡುಗಾಟ, ವೇಗವಾಗಿ ಚಲಾಯಿಸಲು ಸ್ಪರ್ಧೆಗಿಳಿಯುವುದು ಇತ್ಯಾದಿ ಕಾರಣಗಳಿವೆ.

ವ್ಯವಸ್ಥಿತವಾದ ಟಾರ್ ರಸ್ತೆಗಳ ನಿರ್ಮಾಣ,ನಿರ್ವಹಣೆಗೆ ನಿಲ್ಲಬಹುದಾದ ಇಲಾಖೆಯಲ್ಲಿ ಚುರುಕುತನ, ಕುಡಿದು ಅಜಾಗರೂಕತೆಯಿಂದ ವಾಹನ ನಡೆಸದಂತೆ, ಹಿಂದೆ ಮುಂದೆ ಅಕ್ಕ ಪಕ್ಕದ ವಾಹನಗಳಿಗೆ ತೊಂದರೆ ಮಾಡದಂತೆ ಸಾಗಲು ಕಠಿಣ ಕ್ರಮಗಳು, ಇವೆಲ್ಲವನ್ನು ಸರಿಪಡಿಸುವ ನಿಯಮಗಳ ಪಾಲನೆ ತುರ್ತಾಗಿ ಆಗಬೇಕು. ಇದಕ್ಕಾಗಿ ಕಾಣ್ಗಾವಲು ಪಡೆಯು ನಿರ್ವಹಣೆ ಮಾಡಬೇಕು. ಅದನ್ನೇ ನೆಪ ಮಾಡಿಕೊಂಡು ಹಣ ವಸೂಲಿಗಿಳಿಯಬಾರದು ಅಷ್ಟೇ.

ಲೇಖನ : ರವಿ ಕರಣಂ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button