Latest

ಸ್ಟಾರ್ಟ್ ಅಪ್ ಗಳಿಗೆ ಸೂಕ್ತ ಸ್ಥಳ ಬೆಂಗಳೂರು – ಸಿಎಂ ಬೊಮ್ಮಾಯಿ

*
ಪ್ರಗತಿವಾಹಿನಿ ಸುದ್ದಿ, ಬೆಂಗಳೂರು: ಬೆಂಗಳೂರು ಸ್ಟಾರ್ಟ್ ಅಪ್ ಗಳಿಗೆ ಸೂಕ್ತ ಸ್ಥಳವಾಗಿದ್ದು, ಇಲ್ಲಿ ಉತ್ತಮ ವಾತಾವರಣ ಇದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಹೇಳಿದರು.
ಎಕನಾಮಿಕ್ ಟೈಮ್ಸ್ ಅವರು ಪ್ರತಿ ವರ್ಷ ಸ್ಟಾರ್ಟ್ ಅಪ್ ಪ್ರಶಸ್ತಿ ಕೊಡುತ್ತಿದ್ದಾರೆ. ಪ್ರತಿಬಾರಿಯೂ ಅವರು ಇದನ್ನು ಬೆಂಗಳೂರಿನಲ್ಲಿ ಆಯೋಜನೆ ಮಾಡುತ್ತಿದ್ದಾರೆ. ಇದು ಖುಷಿಯ ವಿಚಾರ. ಯಾಕೆಂದರೆ ಇದು ಸೂಕ್ತ ಸ್ಥಳ ಎಂದು ಪತ್ರಿಕೆಯವರಿಗೂ ಗೊತ್ತಿದೆ ಎಂದು  ಅವರು ಹೇಳಿದರು.
ಅವರು ದಿ ಎಕನಾಮಿಕ್ ಟೈಮ್ಸ್ ದಿನಪತ್ರಿಕೆ ಆಯೋಜಿಸಿದ್ದ “ದಿ ಎಕನಾಮಿಕ್ ಟೈಮ್ಸ್ ಸ್ಟಾರ್ಟ್ ಅಪ್ ಪ್ರಶಸ್ತಿ – 2022” ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ಎಕನಾಮಿಕ್ ಟೈಮ್ಸ್ ಹೆಸರೇ ಹಲವು ವಿಷಯಗಳನ್ನು ಹೇಳುತ್ತದೆ. ಆರ್ಥಿಕತೆ ಮತ್ತು ಸಮಯ ಎರಡೂ ಸಹ ಬಹಳ ಹತ್ತಿರವಾದವುಗಳು. ಹಣಕ್ಕೆ ನಿಜವಾದ ಅರ್ಥ ಬರುವುದು ನಮಗೆ ಬೇಕಾದ ಸಮಯಕ್ಕೆ ಸಿಕ್ಕಾಗ ಮಾತ್ರ. ನಮಗೆ ಬೇಡದಿದ್ದಾಗ ಹಣ ಸಿಕ್ಕರೆ ಅದಕ್ಕೆ ಮೌಲ್ಯ ಇರುವುದಿಲ್ಲ. ನಮಗೆ ಬೇಕಾದಾಗಲೂ ಹಣ ಸಿಗದಿದ್ದಾಗ ಅದಕ್ಕೆ ಮೌಲ್ಯ ಇರುವುದಿಲ್ಲ. ಇದೆಲ್ಲವನ್ನೂ ಎಕನಾಮಿಕ್ ಟೈಮ್ಸ್ ಹೇಳುತ್ತದೆ. ಭಾರತೀಯ ವ್ಯವಹಾರದಲ್ಲಿ ಈ ಎಕನಾಮಿಕ್ ಟೈಮ್ಸ್ ಸದಾ ಮುಂದಿದೆ. ಅವರು ಮೊದಲಿನಿಂದಲೂ ವರದಿಗಾರಿಕೆಯಲ್ಲಿ ಅಂತರಾಷ್ಟ್ರೀಯ ಗುಣಮಟ್ಟ ಕಾಪಾಡಿಕೊಂಡಿಕೊಂಡು ಬಂದಿದ್ದಾರೆ. ಪ್ರತಿ ವ್ಯವಹಾರ ಮಾಡುವವ ಎಕನಾಮಿಕ್ ಟೈಮ್ಸ್ ಅನ್ನು ಬೈಬಲ್ ನಂತೆ ಓದಬೇಕು ಎಂದು ಸಿಎಂ ಬಸವರಾಜ ಬೊಮ್ಮಾಯಿ ಅವರು ಹೇಳಿದರು.
ಸ್ಟಾರ್ಟ್ ಅಪ್ ಗೆ ಸಂಬಂಧಿಸಿದಂತೆ ನೀವು ಕಳೆದೊಂದು ವಾರದಿಂದ ನೋಡುತ್ತಲೇ ಬಂದಿದ್ದೀರಿ. ಬೆಂಗಳೂರು ಟೆಕ್ ಸಮ್ಮಿಟ್ ನಲ್ಲಿ ಸುಮಾರು 300ಕ್ಕೂ ಹೆಚ್ಚು ಅಂತರಾಷ್ಟ್ರೀಯ ಪ್ರತಿನಿಧಿಗಳು ಭಾಗವಹಿಸಿದ್ದರು. ಸುಮಾರು 130ಕ್ಕೂ ಹೆಚ್ಚು ಕಂಪನಿಗಳು ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಹಲವಾರು ವಿಷಯಗಳು ಮಾತುಕತೆಗೆ ಬಂದವು. ಮಾನವನ ಜೀವನ ಸುಧಾರಣೆಗೆ ತಂತ್ರಜ್ಞಾನ ಬಳಕೆ ವಿಷಯ ಇನ್ನಷ್ಟು ಮುಂದಕ್ಕೆ ಹೋದವು ಎಂದು ಸಿಎಂ ಬಸವರಾಜ ಬೊಮ್ಮಾಯಿ ಅವರು ಹೇಳಿದರು.
*ಬೆಂಗಳೂರು ನಂಬರ್ 1 ಆಗಬೇಕು*
ನಮ್ಮ ಅಧಿಕಾರಿಗಳಿಗೆ ನಾನು ಕೆಲವೊಂದು ಗುರಿಗಳನ್ನು ನೀಡಿದ್ದೀನಿ. ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ, ಸ್ಟಾರ್ಟ್ ಅಪ್ ಗಳಲ್ಲಿ ಬೆಂಗಳೂರು ನಂಬರ್ 1 ಆಗಬೇಕು. ಜತೆಗೆ ಬೆಂಗಳೂರು ದೇಶದ ಆರ್ಥಿಕತೆಯ ರಾಜಧಾನಿ ಆಗಬೇಕು. ಸ್ಟಾರ್ಟ್ ಅಪ್ ಎಂಬುದು ಒಂದು ವಿಶೇಷ ಅನುಭವ. ಸ್ಟಾರ್ಟ್ ಅಪ್ ಗಳಲ್ಲಿ ಏನು ಮಾಡುತ್ತೀರೆಂಬ ಖಚಿತತೆ ನಿಮಗಿರುವುದಿಲ್ಲ. ಸಂಸ್ಥೆ ಎಲ್ಲಿಗೆ ಹೋಗುತ್ತದೆ ಎಂದೂ ಗೊತ್ತಿರುವುದಿಲ್ಲ. ಗುರಿ ಹೊಂದಿದ್ದರೂ ನಿಜವಾದ ಗುರಿ ಏನೆಂದು ಗೊತ್ತಿರುವುದಿಲ್ಲ. ಆದರೂ ಸಾಹಸಮಯವಾಗಿರುವುದು ಬಹಳ ಕ್ರಿಯಾಶೀಲವಾಗಿರುತ್ತದೆ. ಈ ಮೂಲಕ ಏನಾದರೊಂದು ಸಾಧನೆ ಮಾಡುವಂತೆ ಪ್ರೇರಣೆ ಕೊಡುತ್ತದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು.
ಉದ್ಯಮಗಳನ್ನು ಮಾಡುವ ಆಸೆ ಹೊಂದಿರುವವರು ಸ್ಟಾರ್ಟ್ ಅಪ್ಗಳ ಕಡೆ ಬರಬೇಡಿ. ಸ್ಟಾರ್ಟ್ ಅಪ್ ಎನ್ನುವುದು ಬಹಳ ದೊಡ್ಡ ಸಾಹಸ. ಇದೊಂದು ರೀತಿ ಕತ್ತಲಲ್ಲಿ ಪಟಾಕಿ ಹೊಡೆಯುವಂತೆ. ಹೊಡೆದರೆ ದಿವಾಲಿ. ಹೊಡೆಯದಿದ್ದರೆ ದಿವಾಳಿ ಎಂದು ಹಾಸ್ಯಭರಿತವಾಗಿ ನಗೆ ಚಟಾಕಿಯನ್ನು ಹಾರಿಸಿದರು.
*ಸ್ಟಾರ್ಟ್ ಅಪ್ ಹುಟ್ಟುಹಾಕುವುದು ಹವ್ಯಾಸವಾಗಿದೆ*
ಬೆಂಗಳೂರು ಸ್ಟಾರ್ಟ್ ಅಪ್ಗಳ ಕೇಂದ್ರವಾಗಿದೆ. ಆ ರೀತಿಯ ಸಂಸ್ಕೃತಿ ಬೆಂಗಳೂರಿನಲ್ಲಿ ಬೆಳೆಯುತ್ತಿದೆ. ಕೃಷಿ ತಂತ್ರಜ್ಞಾನದಿಂದ ಹಿಡಿದು ಬಾಹ್ಯಾಕಾಶ ವಲಯಗಳ ವರೆಗೆ ಸ್ಟಾರ್ಟ್ ಅಪ್ ಗಳು ಬೆಂಗಳೂರಿನಲ್ಲಿ ಇದೆ. ಬೆಂಗಳೂರಿಗರಿಗೆ ಸ್ಟಾರ್ಟ್ ಅಪ್ ಹುಟ್ಟುಹಾಕುವುದು ಮತ್ತು ಯೂನಿಕಾರ್ನ್ ಸಂಸ್ಥೆಗಳನ್ನಾಗಿ ಮಾಡುವುದು ಹವ್ಯಾಸವಾಗಿದೆ. ಅದೇ ರೀತಿ ಡೆಕಾಕಾರ್ನ್ ಮಾಡುವುದೂ ಹವ್ಯಾಸ ಆಗಬೇಕು. ಮುಂದಿನ ವರ್ಷಕ್ಕೆ ಬೆಂಗಳೂರಿನಲ್ಲಿ ಕನಿಷ್ಠ 10 ಡೆಕಾಕಾರ್ನ್ ಸಂಸ್ಥೆಗಳು ಇರಬೇಕೆಂಬುದು ನನ್ನ ಆಸೆ. ಎಂದು ಸಿಎಂ ಬಸವರಾಜ ಬೊಮ್ಮಾಯಿ ಅವರು ಹೇಳಿದರು.
*ಬೆಂಗಳೂರು ಪ್ರತಿಭೆಗಳ ತವರು*
ಬೆಂಗಳೂರಿನಲ್ಲಿ ಪ್ರತಿಭೆಗಳು ಸಾಕಷ್ಟಿದ್ದಾರೆ. ಇದೆಲ್ಲವೂ ರಾತ್ರೋ ರಾತ್ರಿ ಆದದ್ದಲ್ಲ. ಹಲವಾರು ವರ್ಷಗಳ ಸಂಸ್ಥೆಗಳ, ಪರಿಣಿತರ ಹಾಗೂ ಹಲವು ಸರ್ಕಾರಗಳ ಕಠಿಣ ಪರಿಶ್ರಮದಿಂದ ಇದು ಸಾಧ್ಯವಾಗಿದೆ. ಆದರೆ ನಮ್ಮ ಸರ್ಕಾರ ಇತರೆ ಸರ್ಕಾರಗಳಿಂದ ಕೊಂಚ ಭಿನ್ನವಾಗಿದೆ. ಹಿಂದಿನ ಸರ್ಕಾರಗಳು ಕೇವಲ ವಲಯದ ವಿಸ್ತರಣೆಗೆ ಒತ್ತು ನೀಡಿದವು. ಆದರೆ ನಾವು ಇರುವುದನ್ನು ಇನ್ನಷ್ಟು ಉತ್ತಮಗೊಳಿಸಲು ಪ್ರಯತ್ನ ಪಡುತ್ತಿದ್ದೇವೆ. ಶಾಸ್ತ್ರೀಯ ಚಿಂತನೆಯಿಂದ ಹೊರಬಂದು ಔಟ್ ಆಫ್ ದಿ ಬಾಕ್ಸ್ ಯೋಚನೆ ಮಾಡಬೇಕು. ಈ ಮೂಲಕ ಯಶಸ್ಸು ಗಳಿಸಿ ಎಂದು ಸಿಎಂ ಬೊಮ್ಮಾಯಿ ಅವರು ಹೇಳಿದರು.
ಕಾರ್ಯಕ್ರಮದಲ್ಲಿ ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯುಷ್ ಗೋಯಲ್ ಹಾಜರಿದ್ದರು.
https://pragati.taskdun.com/voter-id-scamchilume-ngopolice-raid/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button