Latest

ಎಲ್ಲಿ ಹೋದವು.. ಮೌಲ್ಯಗಳೇ ಮನೆ ತುಂಬಿದ್ದ ಆ ದಿನಗಳು..?

ಅಶ್ವಿನಿ ಅಂಗಡಿ, ಬಾದಾಮಿ

ಆಧುನಿಕ ಜೀವನ ಶೈಲಿಗಾಗಿ ಮುನ್ನುಗ್ಗುತ್ತಿರುವ ಭರದಲ್ಲಿ ಮಕ್ಕಳಲ್ಲಿ ಭಾಂಧವ್ಯ, ನೈತಿಕ ಮೌಲ್ಯಗಳ ಕೊರತೆಯುಂಟಾಗದಂತೆ ನೋಡಿಕೊಳ್ಳುವುದು ನಮ್ಮ ನಿಮ್ಮೆಲರ ಜವಾಬ್ದಾರಿಯಾಗಿದೆ.

ಒಂದು ಕಾಲವಿತ್ತು. ದೊಡ್ಡ ಮಣ್ಣಿನ ಮನೆ, ಮನೆಯ ಮುಂದೆ ಮಾವು, ಬೇವಿನ ಮರಗಳು, ಆ ಮರಕ್ಕೆ ಕಟ್ಟಿದ ಹಗ್ಗದ ಜೋಕಾಲಿ ಎಲ್ಲಾ ಕಾಲದಲ್ಲಿಯೂ ತೂಗುತ್ತಿತ್ತು. ಮನೆಯ ಹೊಸ್ತಿಲು ಗಲೀವರ ಮಲಗಿದಂತೆ ಕಾಣುತಿತ್ತು. ಮನೆಯ ಬಾಗಿಲುಗಳು ಕೋಟೆಯ ಬಾಗಿಲಿನಂತೆ ಭಾಸವಾಗುತ್ತಿದ್ದವು. ಹೊಸ್ತಿಲು ದಾಟಿ ಒಳಗೆ ಬಂದರೆ ವಿಶಾಲ ಕೊಟ್ಟಿಗೆ, ದನಕರುಗಳ ಶಾಲೆಯೆಂತೆ ಸರತಿ ಸಾಲಿನ ನಿಂತ ದನಗಳು ಹಾಯಾಗಿ ಹುಲ್ಲಿನ ಮೆಲಕು ಹಾಕುತ್ತಿದ್ದವು.

Home add -Advt

ಇನ್ನು ಪಡಸಾಲೆಯಲ್ಲಿ ಕಟ್ಟಿಗೆಯ ಕುರ್ಚಿಯ ಮೇಲೆ ಹುರಿ ಮೀಸೆ ಪಟಗ ಸುತ್ತಿಕೊಂಡು ಗಂಭೀರವಾಗಿ ಕುಳಿತಿರುತಿದ್ದ ಅಜ್ಜ, ಕೆಳಗಡೆ ಸೊಟ್ಟ ಕನ್ನಡಕಕ್ಕೆ ದಾರದ ಆಸರೆ ಕಟ್ಟಿಕೊಂಡು ಬಾಯಲ್ಲಿ ಎಲೆ ಅಡಿಕೆ ಜಗಿಯುತ್ತ ಹಿರಿಯ ಸಿರಿದೇವಿ ಮೊಮ್ಮಕ್ಕಳನ್ನು ಆಟವಾಡಿಸುತ್ತ ಕುಳಿತಿರುತಿತ್ತು. ಅಡುಗೆ ಮನೆಯಿಂದ ಸೊಸೆಯಂದಿರ ದಬದಬ ರೊಟ್ಟಿಯ ಸದ್ದು.. ಸರ್ ಬರ್ ಎಂದು ಮಜ್ಜಿಗೆ ಕಡೆಯುವ ಸದ್ದು.. ಅಡುಗೆ ಮನೆಯಲ್ಲ ತುಂಬಿತ್ತು ಹೊಗೆಯ ಹೊದ್ದು.

ಇನ್ನು ಅಪ್ಪ ಚಿಕ್ಕಪ್ಪ ದೊಡ್ಡಪ್ಪಂದಿರು ತಮ್ಮ ಹೊಲ ಮನೆಯ ಕೆಲಸ ಮುಗಿಸಿ ಪಡಸಾಲೆಯ ಮೆಟ್ಟಿಲ ಮೇಲೆ ಕುಳಿತು ಅಜ್ಜನ ಮಾರ್ಗದರ್ಶನ ಪಡೆಯುತ್ತಿದ್ದರು. ಮನೆಯ ತುಂಬಿರುವ ಕರುಳ ಕುಡಿಗಳು ತಮ್ಮ ಪಾಟಿಚೀಲ ತೆಗೆದು ಓದುತ್ತಿದ್ದರು. ಇವೆಲ್ಲವನ್ನು ನೋಡಿದರೆ ಯಾವ ಸ್ವರ್ಗಕ್ಕೂ ಕಡಿಮೆಯೇನಿಲ್ಲ ಈ
ಮನೆ ಎನ್ನುವಂತಿತ್ತು.

ಈಗಂತೂ ಚಿಕ್ಕ ಚಿಕ್ಕ ಕುಟುಂಬಗಳು ಮನೆಗಳು ಬಣ್ಣ ಬಣ್ಣದ ಚಿತ್ತಾರ ಹೊಂದಿ ಸುಂದರವಾಗಿವೆ. ಆದರೆ ಸುಂದರ ಮನಸ್ಸುಗಳಿಲ್ಲ. ಮನೆ ತುಂಬ ಅಲಂಕಾರಿಕ ವಸ್ತುಗಳಿವೆ. ಅಂದ ಮೊಗದ ಮಕ್ಕಳ ಓಡಾಟವಿಲ್ಲ. ಎಲ್ಲೋ ಮೂಲೆಯಲ್ಲಿ ಒಂದು ಕಡೆ ತೊಟ್ಟಿಲನ್ನು ನಿಲ್ಲಿಸಿ ಅದರಲ್ಲಿದ್ದ ಮಗು ಮೇಲೆ ಕಟ್ಟಿದ ಗೊಂಬೆಯೆನ್ನೇ ನೋಡುತ್ತಾ ಒಬ್ಬನೇ ಆಡುತ್ತಾ ಮಲಗಬೇಕು.

ಇನ್ನು ಮಕ್ಕಳು ದೊಡ್ಡವರಾದಂತೆ ಅವರ ಓದಿಗಾಗಿ ನಿಶ್ಯಬ್ದ ಕೊಣೆಯೊಂದು ಮಿಸಲಾಗಿರುತ್ತದೆ. ಆ ಕೋಣೆಯೊಳಗೆ ಅನ್ಯರ ಯಾರ ಪ್ರವೇಶವಿಲ್ಲ. ಏಕೆಂದರೆ ಅದು ಬರೀ ಓದುವ ಕೋಣೆ. ಅಲ್ಲಿ ಯಾವ ಭಾವನಾತ್ಮಕ ವಸ್ತುಗಳಿಲ್ಲ. ವಿದ್ಯಾಭ್ಯಾಸದ ಪುಸ್ತಕ ಒಂದು ಕಂಪ್ಯೂಟರ್ ಹೊರತು ಪಡಿಸಿ,ಇನ್ನೂ ತಂದೆ ತಾಯಿಯರ ಪ್ರೀತಿಯಂತೂ ಗಾವುದ ದೂರ, ಒಟ್ಟಿಗೆ ಕೂಡುವುದಿಲ್ಲ, ನಗುವುದಿಲ್ಲ, ಊಟ ಮಾಡುವುದಿಲ್ಲ. ಚೇಷ್ಟೆ, ಕುಚೋದ್ಯಗಳಿಗಂತೂ ಪೂರ್ಣ ವಿರಾಮ.

ಅಗಾಗ ತಾಯಿ ಕೋಣೆಯನ್ನು ಊಟದೊಂದಿಗೆ ಹಾಲು ನೀರಿನೊಂದಿಗೆ ಪ್ರವೇಶಿಸುತ್ತಾಳೆ. ಎಲ್ಲವನ್ನು ಕೊಟ್ಟು ಮಗುವಿನ ತಲೆ ಸವರುತ್ತ “ಕಂದಾ ಈ ಬಾರಿ ಪರೀಕ್ಷೆಯಲ್ಲಿ ಮೊದಲ ರ‍್ಯಾಂಕ್ ಬರಬೇಕು” ಎಂದು ಜವಾಬ್ದಾರಿ ಹೊರಿಸಿ ಹೋಗುತ್ತಾಳೆ. ಜೊತೆಗೆ ದಿನಪೂರ್ತಿ ದುಡಿದು ಬಂದ ಅಪ್ಪ ಸೋಫಾದಮೇಲೆಯೇ ನಿದ್ದೆಗೆ ಜಾರಿರುತ್ತಾರೆ. ಮಲಗುವ ಹೊತ್ತಲ್ಲಿ ಮಕ್ಕಳ ಕೋಣೆಗೆ ಇಣುಕಿ ಮಗು “ಚೆನ್ನಾಗಿ ಓದುತ್ತಿದ್ದಿಯಾ..?” ಎಂದು ಕೇಳುತ್ತಾರೆ. ಹೇಗಿದ್ದಿಯಾ ನಿನ್ನ ಕಷ್ಟ ಸುಖವೇನು ಎಂದು ಯಾವತ್ತೂ ಕೇಳುವುದಿಲ್ಲ. ಹೀಗಿದ್ದಾಗ ಎಲ್ಲಿಂದ ಹುಟ್ಟಬೇಕು ಭಾಂಧವ್ಯ, ಪ್ರೀತಿ ಮಮತೆ?.

ಇನ್ನೂ ಮಕ್ಕಳಿಗೆ ಆಟವಂತರು ಕನಸಿನ ಮಾತು ಅಮ್ಮ ಶರತ್ತಿನಲ್ಲಿ ಕೊಟ್ಟ ಒಂದು ತಾಸಿನ ಅವಧಿಯಲ್ಲಿಯೇ ಸ್ನೇಹಿತರೊಂದಿಗೆ ನಿರ್ಲಿಪ್ತ ಉದ್ಯಾನವನಕ್ಕೆ ಹೋಗಿ ಆಡಿ ಮತ್ತೆ ಕೋಣೆ ಸೇರಬೇಕು. ಅಲ್ಲದೆ ಈಗೀನ ನವ ಜೀವನ ಶೈಲಿಯಲ್ಲಿ ತಮ್ಮ ಮಕ್ಕಳು ವಿದೇಶದಲ್ಲಿ ವಿದ್ಯಾಭ್ಯಾಸ ಮಾಡಬೇಕು, ಅಲ್ಲದೆ ಅಲ್ಲೇ ನೌಕರಿಯನ್ನು ಸೇರಿ ಲಕ್ಷ ಲಕ್ಷ ಸಂಪಾದನೆ ಮಾಡಬೇಕೆಂಬುದು ಪಾಲಕರ ಹೆಬ್ಬಯಕೆ. ಹೀಗಿದ್ದಾಗ ಅವರು ಅಲ್ಲೇ ಕೆಲಸ ಅಲ್ಲೇ ಮದುವೆ, ಅಲ್ಲೇ ಮಕ್ಕಳನ್ನು ಮಾಡಿಕೊಂಡು ಆರಾಮದ ಜೀವನ ನಡೆಸುತ್ತಾರೆ ಇತ್ತ ಹೆತ್ತವರು ಅವರಿಂದ ದೂರವಾಗಿ ತವರು ನೆಲದಲ್ಲಿಯೇ ಒಂಟಿ ಜೀವನ ದೂಡುತ್ತಿರುತ್ತಾರೆ.ಒಂದು ದಿನ ಮಕ್ಕಳಿಗೆ ಭಾರವಾಗಿ ವೃದ್ಧಾಶ್ರಮವನ್ನು ಸೇರುತ್ತಾರೆ. ಇದೆಲ್ಲಾ ಯಾರು ತಾನೇ ಮಾಡಿದ್ದು ನೀವೇ ಹೇಳಿ, ನೀವೇ ಅಲ್ಲವೇ ನಮ್ಮ ಮಕ್ಕಳು ಓದಲಿ ಓದಲಿ ಎಂದು ಅವರನ್ನು ಚಿಕ್ಕಂದಿನಿಂದಲೇ ದೂರವಿಟ್ಟು ಈಗಾ ನೀವು ಅವರಿಂದ ದೂರವಾಗಿರುವುದು.

ಹಾಗೇ ಮೊನ್ನೆ ಮೊಬೈಲ್ ನಲ್ಲಿ ಒಂದು ಮನಕಲಕುವ ವಿಡಿಯೋ ನೋಡಿದೆ ಅದೇನೆಂದರೆ ಒಬ್ಬ ವಿದೇಶದಲ್ಲಿ ಪ್ರಖ್ಯಾತ ಅಭಿಯಂತರನಾಗಿ ಕೆಲಸ ಮಾಡುವ ವ್ಯಕ್ತಿ ಸ್ವದೇಶದಲ್ಲಿರುವ ತನ್ನ ತಾಯಿಯ ಯೋಗಕ್ಷೇಮಕ್ಕಾಗಿ ತಾನು ತಯಾರಿಸಿದ ಯಂತ್ರ ಮಾನವ (ರೋಬೋಟ್) ನ್ನು ಇಟ್ಟು ಹೋಗಿರುತ್ತಾನೆ. ಆ ತಾಯಿ ತನ್ನ ಕೆಲಸವನ್ನು ರೋಬೋಟ್ ನ ಸಹಾಯದಿಂದ ಮಾಡಿಸಿಕೊಳ್ಳುತ್ತಿರುತ್ತಾಳೆ. ರೋಬೋಟ್ ಶೆಲ್ ವೀಕ್ ಆಗಿ ಕೆಲಸದಲ್ಲಿ ಕುಂಠಿತ ವಾದಾಗ ಅದಕ್ಕೆ ಮತ್ತೆ ಶೆಲ್ ಗಳನ್ನು ಜೋಡಿಸಿ ಕಾರ್ಯದಲ್ಲಿ ತೊಡಗಿಸುತ್ತಾಳೆ ಇದೆಲ್ಲವನ್ನು ಆ ಯಂತ್ರ ಮಾನವ ಗಮನಿಸಿರುತ್ತೇ ಒಂದು ದಿನ ಆ ಅಜ್ಜಿ ತೀವ್ರ ಖಾಯಿಲೆಯಿಂದ ಬಳಲಿ ಬಳಲಿ ಬಾಗಿಲ ಮುಂದೆ ಕುರ್ಚಿಯ ಮೇಲೆ ಕುಳಿತು ತನ್ನ ಪ್ರಾಣ ಬಿಟ್ಟಿರುತ್ತಾಳೆ.

ಇದನ್ನು ಅರಿಯದ ಆ ರೋಬೋಟ್ ಅಜ್ಜಿ ಮಾಡಿದ ಹಾಗೆಯೇ ಓಡಿ ಹೋಗಿ ಡ್ರಾಯರ್ ನಲ್ಲಿದ್ದ ನಾಲ್ಕು ಶೆಲ್ ಗಳನ್ನು ತಂದು ಸತ್ತ ಅಜ್ಜಿಯ ಮಡಿಲಲ್ಲಿ ಹಾಕಿ ಅವಳನ್ನು ಏಳುವಂತೆ ಪ್ರೇರೇಪಿಸುತ್ತದೆ. ಅದು ಸಾಧ್ಯವಾದಾಗ ಸೋತು ಸುಮ್ಮನೆ ತಾನು ಕೂತು ದಿನ ಕಳೆದಂತೆ ಆ ರೋಬೋಟ್ ಕೂಡಾ ನಿಸ್ತೇಜವಾಗುತ್ತದೆ.

ಈ ವಿಡಿಯೋವನ್ನು ನೋಡುವಾಗ ನನ್ನ ಕಣ್ಣೀರು ತಾನೇ ಸುರಿಯುತ್ತಿತ್ತು. ಈಗ ಹೇಳಿ, ಇದಕ್ಕೆಲ್ಲ ಯಾರು ಹೊಣೆ? ನಾವೇ ತಾನೇ ಆ ತಾಯಿ ತನ್ನ ಮಗನನ್ನು ಭಾಂಧವ್ಯದ ಬಲೆಯಿಂದ ದೂರವಿಟ್ಟು ದೊಡ್ಡ ಎಂಜಿನಿಯರ್ ಆಗಿ ಮಾಡಿದಳು. ಆದರೆ ಜೀವವಿಲ್ಲದ ಅವನು ತಯಾರಿಸಿದ ಯಂತ್ರ ಮಾನವ (ರೋಬೋಟ್) ಅವಳ ಉಸಿರಿಗಾಗಿ ಹೋರಾಟ ನಡೆಸಿತ್ತು.

ಆದ್ದರಿಂದ ಭಾಂಧವ್ಯ ಪ್ರೀತಿ ಮಮತೆ ಸಹಸಂಬಂಧ, ಜೀವ, ಜೀವನಕ್ಕೆ ಅಮೃತದ ಹಾಗೆ. ಅದಕ್ಕಾಗಿ ನಾವು ಮೊದಲು ಮಕ್ಕಳಿಗೆ ಜೀವನ ಮೌಲ್ಯಗಳನ್ನು ಪರಿಚಯಿಸಬೇಕು ಹೊರತು ಸಂಬಳ ತರುವ ಶಿಕ್ಷಣವಲ್ಲ. ಸಂಸ್ಕಾರವಿಲ್ಲದ ಶಿಕ್ಷಣ ಎಷ್ಟಿದ್ದರೇನು ಫಲ? ಒಮ್ಮೆ ಪಟ್ಟಣದಲ್ಲಿರುವ ವೃದ್ಧಾಶ್ರಮಕ್ಕೆ ಭೇಟಿ ಕೊಟ್ಟು ನೋಡಿರಿ. ಅಲ್ಲಿರುವ ವೃದ್ಧರು ಯಾವ ಹಳ್ಳಿಯಿಂದ, ಬಡವರಿಂದ, ಹಾಗೂ ಅವಿಭಕ್ತ ಕುಟುಂಬದಿಂದ ಬಂದಿಲ್ಲ. ಬದಲಾಗಿ ನಗರದಿಂದ ಶ್ರೀಮಂತ ಮಕ್ಕಳನ್ನು ಹೊಂದಿರುವ ತಂದೆ, ತಾಯಿಗಳೇ ಅಲ್ಲಿರುವುದು.

ನೀವೇ ಹೇಳಿ, ಈಗ ಆಧುನಿಕ ಜೀವನ ಶೈಲಿಗಾಗಿ ನಾವು ಮಾನವೀಯ ಮೌಲ್ಯಗಳನ್ನು ಅನುಸರಿಸದೆ ಮುನ್ನುಗ್ಗುತ್ತಿದ್ದೇವೆ. ಬನ್ನಿ, ಮಕ್ಕಳಿಗೆ ಮೊದಲು ಮೌಲ್ಯಗಳ ಕೊರತೆಯುಂಟಾಗದಂತೆ ನೋಡಿಕೊಂಡು ಸಧೃಢ ಸಮಾಜದ ನಿರ್ಮಾಣಕ್ಕೆ ನಾಂದಿ ಹಾಡೋಣ..

ಮದುವೆಯಾದ ಕೆಲವೇ ಗಂಟೆಗಳಲ್ಲಿ ಚಿರನಿದ್ರೆಗೆ ಜಾರಿದ ಗಾಯಕ

Related Articles

Back to top button