Latest

ಆಸ್ಪತ್ರೆಯಲ್ಲಿ ರೋಗಿಗಳ ಹಾಸಿಗೆ ಮೇಲೆ ಗಡದ್ದಾಗಿ ನಿದ್ರಿಸಿದ ಬೀದಿ ನಾಯಿಗಳು!

ಪ್ರಗತಿವಾಹಿನಿ ಸುದ್ದಿ, ಜಬಲ್ ಪುರ : ಆಸ್ಪತ್ರೆಯೊಂದರ ಹಾಸಿಗೆಗಳ ಮೇಲೆ ಬೀದಿ ನಾಯಿಗಳು ಹಾಯಾಗಿ ಮಲಗಿರುವ ವಿಡಿಯೊವೊಂದು ವೈರಲ್ ಆಗಿದೆ.

ಮಧ್ಯಪ್ರದೇಶದ ಜಬಲ್ ಪುರದ ಶಹಾಪುರ ಆರೋಗ್ಯ ಕೇಂದ್ರದಲ್ಲಿ ಈ ಘಟನೆ ನಡೆದಿದೆ.

ತಮಗಾಗಿಯೇ ಇಟ್ಟ ಮಂಚಗಳೇನೋ ಎಂಬಂತೆ ಗಡದ್ದಾಗಿ ನಿದ್ರಿಸುತ್ತಿದ್ದ ನಾಯಿಗಳನ್ನು ಕಂಡ ರೋಗಿಗಳ ಸಂಬಂಧಿಗಳು ಒಂದು ಕ್ಷಣ ಹೌಹಾರಿದ್ದಾರೆ. ಆಸ್ಪತ್ರೆಯವರ ಬೇಜವಾಬ್ದಾರಿ ಪ್ರಚುರಪಡಿಸಲು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.

ಶಹಾಪುರದ ನಿವಾಸಿ ಸಿದ್ಧಾರ್ಥ್ ಜೈನ್ ಎಂಬುವವರು ಭಾನುವಾರ ಬೆಳಗಿನಜಾವ 2.30 ರ ಸುಮಾರಿಗೆ ಚಿಕಿತ್ಸೆಗಾಗಿ ತಮ್ಮ ಪತ್ನಿಯನ್ನು ಶಹಾಪುರ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದಿದ್ದರು. ಅಲ್ಲಿಗೆ ತಲುಪಿದಾಗ ಯಾವುದೇ ಸಿಬ್ಬಂದಿ ಅಥವಾ ವೈದ್ಯರು  ಇರಲಿಲ್ಲ. ಆದರೆ ರೋಗಿಗಳ ಹಾಸಿಗೆಯ ಮೇಲೆ ಬೀದಿ ನಾಯಿಗಳು ಮಲಗಿದ್ದವು. ಅಲ್ಲದೆ, ವಾರ್ಡ್‌ಗಳಲ್ಲಿ ಕಸದ ರಾಶಿ ಬಿದ್ದಿರುವುದನ್ನು ವೀಕ್ಷಿಸಿದರು. ಈ ಆರೋಗ್ಯ ಕೇಂದ್ರದಲ್ಲಿ ಹಗಲಿನಲ್ಲಿಯೂ ವೈದ್ಯರು ಇರುವುದಿಲ್ಲ ಎಂದು ಜೈನ್ ಆರೋಪಿಸಿದ್ದಾರೆ.

Home add -Advt

ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ನಂತರ, ಮುಖ್ಯ ವೈದ್ಯಕೀಯ ಆರೋಗ್ಯ ಅಧಿಕಾರಿ (CMHO), ಡಾ. ಸಂಜಯ್ ಮಿಶ್ರಾ ಅವರು ಬ್ಲಾಕ್ ಮೆಡಿಕಲ್ ಆಫೀಸರ್ (BMO) ಡಾ. ಸಿ.ಕೆ. ಅಟ್ರೌಲಿಯಾ ಅವರಿಗೆ 24 ಗಂಟೆಗಳ ಒಳಗೆ ಉತ್ತರ ನೀಡುವಂತೆ ನೋಟಿಸ್ ಜಾರಿ ಮಾಡಿದ್ದಾರೆ.

ವಿಷಯ ಗಂಭೀರವಾಗಿರುವುದರಿಂದ ಜವಾಬ್ದಾರಿಯುತ ಅಧಿಕಾರಿಗಳು ಪ್ರತಿಕ್ರಿಯಿಸುವಂತೆ ಕೇಳಲಾಗಿದೆ ಎಂದು ಮಿಶ್ರಾ ಮಾಧ್ಯಮದವರಿಗೆ ಹೇಳಿದ್ದಾರೆ. ಇದಕ್ಕೆ ಕಾರಣರಾದವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಭರವಸೆ ನೀಡಿದ್ದಾರೆ.

ಕೆಲ ದಿನಗಳ ಹಿಂದೆ ಆಪರೇಷನ್‌ಗೆ ಬಂದಿದ್ದ ಮಹಿಳೆಯನ್ನು ನೆಲದ ಮೇಲೆ ಮಲಗಿದ್ದು ದೊಡ್ಡ ಪ್ರಮಾಣದ ವಿವಾದಕ್ಕೆ ಕಾರಣವಾಗಿತ್ತು. ಈ ಪ್ರಕರಣದ ನಂತರ ಮನುಷ್ಯರ ಜಾಗದಲ್ಲಿ ನಾಯಿ, ನಾಯಿ ಜಾಗದಲ್ಲಿ ಮನುಷ್ಯರು’ ಮಲಗಬೇಕಾದ ಆಸ್ಪತ್ರೆ ಅವ್ಯವಸ್ಥೆ ವಿರುದ್ಧ ಜನಾಕ್ರೋಶ ವ್ಯಕ್ತವಾಗಿದೆ.

ಆನೆ ಪ್ರತಿಮೆ ಅಡಿಯಿಂದ ತೆವಳಲು ಹೋಗಿ ಸಿಲುಕಿಬಿದ್ದು ಪೇಚಾಡಿದ ವ್ಯಕ್ತಿ

Related Articles

Back to top button