Latest

ಸಶಕ್ತ ಭಾಷಾ ಕೌಶಲದ ಕೊರತೆ; ಮಾತೃಭಾಷೆಯ ಮೇಲೊಂದು ವಿಚಾರ

ಲೇಖನ – ರವಿ ಕರಣಂ.
ಸುಲಿದ ಬಾಳೆಯ ಹಣ್ಣಿನಂದದಿ.
ಕಳೆದ ಸಿಗುರಿನ ಕಬ್ಬಿನಂದದಿ.
ಅಳಿದ ಉಷ್ಣದ ಹಾಲಿನಂದದಿ ಸುಲಭವಾಗಿರ್ಪ.
ಲಲಿತವಹ ಕನ್ನಡದ ನುಡಿಯಲಿ.
ತಿಳಿದು ತನ್ನೊಳು ತನ್ನ ಮೋಕ್ಷವ.
ಗಳಿಸಿಕೊಂಡರೆ ಸಾಲದೇ? ಸಂಸ್ಕೃತದಲಿನ್ನೇನು?
– ಕವಿ ಮಹಲಿಂಗರಂಗ.
(ಚಿತ್ರದುರ್ಗ ಜಿಲ್ಲೆ, ಉಚ್ಚಂಗಿ ದುರ್ಗದಲ್ಲಿ ಜನಿಸಿದ ಈ ಕವಿ, ಕ್ರಿ ಶ ೧೬೭೫ (1675) ಇದ್ದನು ಎಂದು ನಂಬಲಾಗಿದೆ.)

ಇದನ್ನು ಕೇಳದವರು ಯಾರಿದ್ದಾರೆ ? ( ಈಗಿನ ಪೀಳಿಗೆಯವರನ್ನು ಬಿಟ್ಟು ) ಇದು ಅಚ್ಚ ಕನ್ನಡದ ಕವಿಯೊಬ್ಬನ ಕನ್ನಡ ಪ್ರೇಮ. ಬೆಲೆ ಕಟ್ಟಲಾದೀತೇ ? ಹಾಗೆಯೇ
“ಸಿರಿಗನ್ನಡಂ ಗೆಲ್ಗೆ ಸಿರಿಗನ್ನಡಂ ಬಾಳ್ಗೆ” ಎಂದು ಹಿರಿಯರು ಹೇಳಿರುವುದು, ಭಾಷೆಯ ಬಗೆಗೆ ಮನಸ್ಸನ್ನು ಜಾಗೃತಗೊಳಿಸುವ ಮಂತ್ರ. ಎಲ್ಲಿ ಸಾಗುತ್ತಿದೆ ನಮ್ಮ ಕನ್ನಡ ? ಎಂದು ವಿಚಾರ ಮಾಡುತ್ತಾ ಕುಳಿತಾಗ, ಹಲವಾರು ವಿಷಯಗಳು ಕಣ್ಣ ಮುಂದೆ ಹಾದು ಹೋಗುತ್ತವೆ.

ಇಂದು ಜನರಲ್ಲಿ ಭಾಷಾ ಕೌಶಲದ ಕೊರತೆಯಾಗುತ್ತಿರುವುದು ಕಂಡು ಬರುತ್ತಿದೆ. ಅಭಿವ್ಯಕ್ತಿ ಸಾಮರ್ಥ್ಯಕ್ಕೆ ಯಾವ ರೀತಿಯ ತೂಕವಿದೆ ? ಎಂದು ಲಾಂದ್ರ ಹಿಡಿದು ನೋಡಬೇಕೆಂದೆನಿಸುತ್ತಿದೆ. ಯಾವ ಭಾಷೆಯಲ್ಲಿಯೂ ಕೂಡ ಪರಿಪೂರ್ಣತೆಯನ್ನು ಸಾಧಿಸದ ವ್ಯಕ್ತಿಗಳನೇಕ ನಮ್ಮ ಸುತ್ತಮುತ್ತಲು ತುಂಬಿದ್ದಾರೆ. ವಿಶೇಷವಾಗಿ ವಿದ್ಯಾರ್ಥಿಗಳು, ರಾಜಕಾರಣಿಗಳು, ಸಿನಿಮಾ ನಟ ನಟಿಯರು ಸ್ಪಷ್ಟವಾಗಿ ಮಾತಾಡಲು ಬರದೇ, ಭಾಷೆಯ ಸಮಸ್ಯೆಯನ್ನು ಎದುರಿಸುತ್ತಿರುವುದು ಏಕೆಂಬುದೇ ಅರ್ಥವಾಗುತ್ತಿಲ್ಲ. ಗೊಂದಲವನ್ನು ಉಂಟು ಮಾಡುತ್ತಿದೆ. ಅದರಲ್ಲೂ ಮಾಧ್ಯಮಗಳಲ್ಲಿ ಇಂದು ಬಳಸುತ್ತಿರುವ ಭಾಷೆ ಮತ್ತು ಶೈಲಿಗಳು ವಿಚಿತ್ರವೆನಿಸುತ್ತವೆ. ಯಾಕೆ ಹೀಗಾಗುತ್ತಿದೆ ? ಎಂಬುದನ್ನು ಯೋಚಿಸಲೇಬೇಕು.

ಕೆಲವರು ನಿಮ್ಮ ಭಾಷೆ ಎಷ್ಟು ಚೆನ್ನಾಗಿದೆ ! ಕನ್ನಡವನ್ನು ಎಷ್ಟು ಚೆನ್ನಾಗಿ ವೇಗವಾಗಿ, ತಪ್ಪಿಲ್ಲದಂತೆ ಮಾತನಾಡುತ್ತೀರಿ ! ಎಂದಾಗ ನಾನು ಅವಕ್ಕಾಗಿ ನಿಂತದ್ದು ಇದೆ. ಕಾರಣ ನಾವು ಕನ್ನಡಿಗರೇ ಆದ ಮೇಲೆ, ಕನ್ನಡ ಭಾಷೆಯ ಪದೋಚ್ಛಾರವನ್ನು ಹೇಗೆ ಮಾಡುತ್ತೇವೆ ಎಂಬುದನ್ನು ಹೊಗಳಿಸಿಕೊಳ್ಳುವ, ಪ್ರಶಂಸೆಗೆ ಒಳಪಡುವ ಪರಿಸ್ಥಿತಿ ಬಂದಿದೆಯೆ ? ವಿಚಿತ್ರವಲ್ಲವೇ ? ನೀವೇನಾದರೂ ದೃಶ್ಯ ಮಾಧ್ಯಮಗಳ ಕೈಗೆ ಸಿಕ್ಕರೆ, ನಿಮ್ಮನ್ನು ಖಂಡಿತವಾಗಿಯೂ ಬಿಡುವುದಿಲ್ಲ. ಕೆಲಸ ದೊರೆಯುತ್ತದೆ. ನೀವು ಅಲ್ಲಿ ಮಿಂಚುತ್ತೀರಿ. ಎಂದೆಲ್ಲಾ ಹೊಗಳುವುದನ್ನು ನೋಡಿದಾಗ ನಗು ಬರುತ್ತದೆ. ಮತ್ತು ಇವರ ಅಜ್ಞಾನಕ್ಕೆ ಏನು ಹೇಳಬೇಕೆಂದು ತಲೆ ಚಚ್ಚಿಕೊಳ್ಳುವಂತಾಗುತ್ತದೆ. ಭಾಷಾ ಉಚ್ಛಾರ ಅತ್ಯಂತ ಮುಖ್ಯವಾದದ್ದು. ಅಲ್ಲಿ ಅಲ್ಪ ಪ್ರಾಣ, ಮಹಾ ಪ್ರಾಣ, ಭಾವಭಿವ್ಯಕ್ತಿ, ಎಲ್ಲವೂ ಕೂಡ ಗಣನೆಗೆ ಬರುತ್ತದೆ.

ಈ ಎಲ್ಲಾ ಅವಾಂತರಗಳಿಗೆ ನಮ್ಮ ಶಿಕ್ಷಣ ಪದ್ಧತಿಯೇ ಕಾರಣವಾಗಿದೆ. ಯಾವ ಭಾಷೆಯಲ್ಲಿಯೂ ಪರಿಪೂರ್ಣತೆಯನ್ನು ಕಲ್ಪಿಸಿಕೊಡದ ಶಿಕ್ಷಣ, ಇಂದು ಜನರನ್ನು ತ್ರಿಶಂಕು ಸ್ಥಿತಿಯಲ್ಲಿ, ಅರೆಬರೆ ಪದ್ಧತಿಯಲ್ಲಿಟ್ಟಿದೆ. ಅದರಲ್ಲೂ ಆಂಗ್ಲ ಮಾಧ್ಯಮ ಶಾಲೆಗಳಲ್ಲಿ (ಕಾನ್ವೆಂಟ್) ಸ್ಪಷ್ಟವಾದ ಆಂಗ್ಲ ಭಾಷೆ (ಇಂಗ್ಲಿಷ್‌) ಇರುವುದಿಲ್ಲ. ವ್ಯಾಕರಣ ಬದ್ದ ವಾಕ್ಯಗಳೆಲ್ಲ ಅಪಭ್ರಂಶಗೊಂಡಿವೆ. ಕನ್ನಡವನ್ನು ಕೇಳುವವರೇ ಇಲ್ಲ. ಎಲ್ಲವೂ ಅರ್ಧಂಬರ್ಧ. ಇಂತಹ ಪರಿಸ್ಥಿತಿಯಲ್ಲಿ ವಿದ್ಯಾರ್ಥಿಗಳು, ಹೇಗೆ ತಾನೇ ಒಂದು ಭಾಷೆಯ ಮೇಲೆ ಹಿಡಿತವನ್ನು ಸಾಧಿಸಲು ಸಾಧ್ಯವಿದೆ ? ಅರೆ ಬರೆ ಭಾಷೆಯ ಬಳಕೆಯಿಂದ ಭಾಷಾಲೋಕಕ್ಕೆ ಗರ ಬಡಿದಂತಾಗಿದೆ!

ಇನ್ನು ದೃಶ್ಯ ಮಾಧ್ಯಮಗಳಲ್ಲಿ ನೋಡಿದಂತೆ ಪದಗಳನ್ನು ಗ್ರಾಂಥಿಕವನ್ನು ಬಿಟ್ಟು, ಆಡು ಭಾಷೆಯಲ್ಲಿಯೇ ಬರೆಯುತ್ತಾರೆ. ಯಾವ ರೀತಿ ಉಚ್ಚಾರವನ್ನು ಮಾಡುತ್ತಾರೆಯೋ ಅದೇ ರೀತಿಯಲ್ಲಿ ಬರವಣಿಗೆಯ ರೂಪಕ್ಕೆ ತಂದುಬಿಡುತ್ತಾರೆ. ಏನಾದ್ರೂ ಇದ್ಯಾ?ಹೋಗಿದ್ಯಾ? ಬಂದಿದ್ಯಾ? ಮಾಡಿದ್ಯಾ? ಆಗ್ತಿದ್ಯಾ ? ಇವು ಕೆಲ ಉದಾಹರಣೆಗಳು. ಸ್ಕ್ರೀನ್ ಮೇಲಿನ ಸ್ಥಳದ ಕೊರತೆಯಿಂದ, ಈ ರೀತಿ ಪದಗಳನ್ನು ಮೊಂಡು ಮಾಡಲು ಹೋಗಿ, ಪದದ ಸ್ವಾರಸ್ಯ, ಅದರ ಗತ್ತು, ಘನತೆಯನ್ನು ಹಾಳು ಮಾಡಿಬಿಡುವ ಸಂಸ್ಕೃತಿ ಇತ್ತೀಚೆಗೆ ಬೆಳೆದು ಬರುತ್ತಿದೆ. ಇದು ಭಾಷಾ ದೃಷ್ಟಿಯಿಂದಲೂ ಅಪಾಯಕಾರಿ ಮತ್ತು ಜನರಲ್ಲಿ ಗ್ರಾಂಥಿಕ ಭಾಷೆಯ ಕೊರತೆಯನ್ನುಂಟು ಮಾಡುತ್ತದೆ. ಹಾಗಾಗಿ ಯಾವತ್ತೂ ಕೂಡ ಬರವಣಿಗೆಯು, ಗ್ರಾಂಥಿಕದಲ್ಲಿ ಇರಬೇಕು. ಅದಕ್ಕಾಗಿ ‘ಗ್ರಂಥಸ್ಥ ಭಾಷೆ’ ಎಂದು ಕರೆಯುತ್ತಾರೆ.

ಬರವಣಿಗೆಯಲ್ಲಿ ನಮ್ಮ ಅಲಕ್ಷತನದಿಂದ ಸಾಕಷ್ಟು ಬರವಣಿಗೆಯ ದೋಷಗಳಾಗುತ್ತವೆ. ನಾವು ಅವುಗಳನ್ನು ಮತ್ತೊಮ್ಮೆ ಓದುವುದೇ ಇಲ್ಲ. ಒಮ್ಮೆ ಬರೆದರೆ ಮುಗಿದೇ ಹೋಯಿತು. ಅದನ್ನು ಮತ್ತೆ ಮತ್ತೆ ಓದುವ, ತಿದ್ದುವ ಕೆಲಸಕ್ಕೆ ಮುಂದಾಗುವುದಿಲ್ಲ. ನಮಗೆ ಸಮಯದ ಅಭಾವ. ಹೀಗಾಗಿ ನಿರ್ಲಕ್ಷವೇ ಈ ಹಲವಾರು ತಪ್ಪುಗಳಿಗೆ ಕಾರಣವಾಗಿ ಹೋಗುತ್ತದೆ. ಇದರಿಂದ ಶುದ್ಧ ಭಾಷೆಗೆ ಹೊಡೆತವಲ್ಲದೇ ಮತ್ತಿನ್ನೇನು ? ಲೇಖನ ಚಿನ್ಹೆಗಳಿಗೆ ನಾವು ಎಂದೋ ತಿಲಾಂಜಲಿ ಇಟ್ಟು ಬಿಟ್ಟಿದ್ದೇವೆ. ಉದ್ದಕ್ಕೆ ಬರೆಯುತ್ತಾ ಹೋಗುವುದೊಂದೇ ನಮ್ಮ ಕಾಯಕವಾಗಿದೆ. ಸರ್ಕಾರಿ ಪತ್ರಗಳು, ದಾಖಲೆಗಳು, ಮುದ್ರಣ ಮತ್ತು ದೃಶ್ಯ ಮಾಧ್ಯಮಗಳು, ಎಲ್ಲಾ ಕಡೆಗಳಲ್ಲಿಯೂ ಬಹಳಷ್ಟು ಲೋಪ ದೋಷಗಳು ಉಂಟಾಗುತ್ತಿರುವುದನ್ನು, ನಾವು ಸಹಿಸಿಕೊಂಡು ಬಿಡುತ್ತೇವೆ. ಅದನ್ನು ಸರಿ ಮಾಡಿಕೊಳ್ಳುವ ಮನಸ್ಸು ಮಾಡುವುದೇ ಇಲ್ಲ. ಏಕೆಂದರೆ ಸಮಯದ ಅಭಾವ.

ಭಾಷೆ ಎಂಬುದು ಭಾವನೆಗಳನ್ನು ಇತರರಿಗೆ ತಿಳಿಸಲು ಇರುವ ಸಶಕ್ತ ಮಾಧ್ಯಮ. ಅದನ್ನು ಪರಿಣಾಮಕಾರಿಯಾಗಿ ಬಳಸಬಲ್ಲ ವ್ಯಕ್ತಿಯು, ತನ್ನ ಭಾವನೆಗಳನ್ನು, ನಿರರ್ಗಳವಾಗಿ, ಸುಲಲಿತವಾಗಿ, ಸುಂದರವಾಗಿ ವ್ಯಕ್ತಪಡಿಸಬಲ್ಲ. ಆದರೆ ಇಂದಿನ ಪೀಳಿಗೆಯವರನ್ನು ನೋಡಿ ಬಿಟ್ಟರೆ, ಅವರಲ್ಲಿ ಇದೆಲ್ಲವೂ ಮಂಗಮಾಯವಾಗುತ್ತಿರುವುದು ಕಂಡು ಬರುತ್ತಿದೆ ಮತ್ತು ಬೇಸರವು ಆಗುತ್ತಿದೆ. ಯಾರನ್ನು ದೂಷಿಸಬೇಕು ? ಯಾರನ್ನು ಯಾವ ರೀತಿ ಇದನ್ನು ನಿಭಾಯಿಸಬೇಕು ? ಎಂಬುದೇ ದೊಡ್ಡ ತಲೆನೋವಿನ ಸಂಗತಿ.

ನಾಲ್ಕು ದಶಕಗಳ ಹಿಂದಿನ ಜನರು ಬಳಸುತ್ತಿದ್ದ ಭಾಷೆ ಮತ್ತು ಇಂದಿನವರು ಬಳಸುತ್ತಿರುವ ಭಾಷೆಗೂ ಅಜಗಜಾಂತರ ವ್ಯತ್ಯಾಸವಾಗಿದೆ. ಸ್ಪಷ್ಟ ಕನ್ನಡದ ಪದಗಳು ಮಾಯವಾಗಿ, ಅಲ್ಲಲ್ಲಿ ಬೇರೆ ಬೇರೆ ಭಾಷೆಯ ಪದಗಳು ಸೇರಿಕೊಂಡು, ಇದು ವಿಚಿತ್ರ ಕನ್ನಡವಾಗಿ ಮಾರ್ಪಾಡಾಗಿದೆ. ಭಾಷೆಯಲ್ಲಿ ಕೊಡು ಮತ್ತು ತೆಗೆದುಕೊಳ್ಳುವ ಪದ್ಧತಿ ಮೊದಲಿನಿಂದಲೂ ನಡೆದಿದೆ. ಅದೇನೋ ಸರಿ. ಹಾಗೆಂದ ಮಾತ್ರಕ್ಕೆ ಕನ್ನಡದ ಪದಗಳೇ ಕಡಿಮೆಯಾಗಿ, ಅನ್ಯ ಭಾಷೆಯ ಪದಗಳೇ ಹೆಚ್ಚಾಗಿ ತುಂಬಿಕೊಂಡರೆ, ನಮ್ಮ ಕನ್ನಡದ ಉಳಿವು ಹೇಗೆ ? ಎಂಬುದನ್ನು ವಿಚಾರ ಮಾಡಬೇಕಾಗುತ್ತದೆ. ಮತ್ತು ಇದು ಮುಂದಿನ ದಿನಗಳಲ್ಲಿ ಗಂಭೀರ ಸಮಸ್ಯೆಯಾಗಿ ಪರಿಣಮಿಸುತ್ತದೆ. ಇದನ್ನು ಎಲ್ಲರೂ ಕೂಡ ಗಮನಿಸಬೇಕು. ಸರ್ಕಾರ, ಭಾಷಾಲೋಕ ಭಾಷಾ ತಜ್ಞರು, ಪರಿಣಿತರು,ಬೋಧಕ ವರ್ಗದವರು ಕಣ್ತೆರೆದು ನೋಡಬೇಕು.

ಬೇರೆ ಭಾಷೆಗಳನ್ನು ಕಲಿಯಬಾರದೆಂದಲ್ಲ. ಜಾಗತಿಕ ಮಟ್ಟದಲ್ಲಿ ಸ್ಪರ್ಧೆ, ಅವಕಾಶಕ್ಕಾಗಿ, ಸಾಧನೆಗಾಗಿ, ಅವರವರಿಗೆ ಅನುಕೂಲವಾಗುವ ಭಾಷೆಗಳನ್ನು ಕಲಿಯುವುದರಲ್ಲಿ ತಪ್ಪಿಲ್ಲ. ಆದರೆ ತಾಯ್ನುಡಿಯು ಮುಖ್ಯವಲ್ಲವೇ ? ಅದು ನಮ್ಮ ಜೀವಾಳವಲ್ಲವೇ ? ಇನ್ನು ಮುಂದೆ ಭಾಷಾ ಕಾರ್ಯಗಾರಗಳನ್ನು ನಡೆಸುವ ಪರಿಸ್ಥಿತಿ ಉಂಟಾಗಿ ಬಿಡುತ್ತದೆ. ಮಾತಾಡುವುದು ಹೇಗೆ? ಪದೋಚ್ಛಾರ ಹೇಗೆ?ಅದರ ಸ್ವರೂಪ ಎಂತಹುದು? ಎಂದೆಲ್ಲ ಹೇಳಿಕೊಡಬೇಕಾಗುತ್ತದೆ. ‘ ಕನ್ನಡ ಭಾಷೆಯ ಸಮರ್ಥ ಬಳಕೆಯ ತರಬೇತಿ ಕೇಂದ್ರ’ ಆರಂಭವಾದರೂ ಅಚ್ಚರಿ ಪಡಬೇಕಾಗಿಲ್ಲ. ನಾವು ಆಂಗ್ಲ ಭಾಷೆ ಕಲಿಸಿಕೊಡುವ ಕೇಂದ್ರಗಳನ್ನು ಮಾಡಿದಂತೆ !

ಅದಕ್ಕಾಗಿ ಜನರನ್ನು ತಲುಪುವ ಮಾಧ್ಯಮಗಳೆಲ್ಲ ಸ್ಪಷ್ಟ, ಸ್ವಚ್ಛ ಕನ್ನಡ ಬಳಕೆಗೆ ಆದ್ಯತೆ ಕೊಡಬೇಕು. ಶಾಲೆ ಹಾಗೂ ಉನ್ನತ ವಿದ್ಯಾ ನಿಲಯಗಳಲ್ಲಿ ವ್ಯಾಕರಣ ಸಹಿತ ಶುದ್ದ ಕನ್ನಡ ಕಲಿಸಲು ಬೋಧಕ ವರ್ಗ ಮುಂದಾಗಬೇಕು. ಸರ್ಕಾರ, ಪರಿಷತ್ತುಗಳು, ಪ್ರಾಧಿಕಾರಗಳು, ಇಲಾಖೆಗಳು ಹೆಚ್ಚಿನ ಒತ್ತು ಕೊಡಬೇಕು. ನಮ್ಮ ನಮ್ಮ ನಡುವಿನ ವ್ಯವಹಾರಗಳು ಕನ್ನಡದಲ್ಲಿಯೇ ಹೆಚ್ಚಾಗಿರಬೇಕು. ಅವಶ್ಯಕತೆ ಇದ್ದಲ್ಲಿ ಮಾತ್ರ ಅನ್ಯ ಭಾಷೆಯನ್ನು ಬಳಸಬೇಕು. ಇಂತಹದೊಂದು ಸಂಕಲ್ಪವಿದ್ದಲ್ಲಿ, ಕನ್ನಡ ಭಾಷೆಗೆ ಕಾವಲು ಸಮಿತಿಗಳು ಬೇಕಾಗುವುದಿಲ್ಲ. ಕನ್ನಡಿಗರು ಎಚ್ಚೆತ್ತುಕೊಳ್ಳಬೇಕು.

ಗಡಿ ಕಿಚ್ಚು: ಡಿ.14ರಂದು ಕರ್ನಾಟಕ- ಮಹಾರಾಷ್ಟ್ರ ಸಿಎಂಗಳೊಂದಿಗೆ ಅಮಿತ್ ಶಾ ಚರ್ಚೆ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button