ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಸರ್ಕಾರಿ ನೌಕರರ ಬಹುದಿನಗಳ ಬೇಡಿಕೆಯಾದ ಎನ್ ಪಿ ಎಸ್ ಪಿಂಚಣಿ ಯೋಜನೆ ವಿರೋಧಿಸಿ, ಹಳೆ ಪಿಂಚಣಿ ಯೋಜನೆ ಓಪಿಎಸ್ ಮತ್ತೆ ಜಾರಿಗೆ ಬರಬೇಕು ಅದಕ್ಕಾಗಿ ಡಿಸೆಂಬರ್ 19 ಸೋಮವಾರದಂದು ಬೆಂಗಳೂರಿನ ಪ್ರೀಡಂ ಪಾರ್ಕ್ ನಲ್ಲಿ ಅನಿರ್ಧಿಷ್ಟ ಹೋರಾಟ ಮಾಡಲಾಗುವುದು ಎಂದು ಕರ್ನಾಟಕ ರಾಜ್ಯ ಸರ್ಕಾರಿ ಎನ್ ಪಿ ಎಸ್ ನೌಕರರ ಸಂಘದ ಜಿಲ್ಲಾಧ್ಯಕ್ಷ ಎನ್ ಟಿ ಲೋಕೇಶ ಅವರು ಆಗ್ರಹಿಸಿದರು.
ಶನಿವಾರ (ಡಿ.17) ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರತಿಭಟನೆಗೆ ಪ್ರತಿ ತಾಲೂಕು, ಜಿಲ್ಲಾ ಕೇಂದ್ರದಿಂದ ನೌಕರರು ಆಗಮಿಸಲಿದ್ದು, ಸರ್ಕಾರ ನಮ್ಮ ಬೇಡಿಕೆ ಈಡೇರಿಸುವರೆಗೆ ಹೋರಾಟ ಕೈ ಬಿಡುವುದಿಲ್ಲ. ಸರ್ಕಾರದ 38 ಇಲಾಖೆಯ ನೌಕರರ ಬೆಂಬಲ ಇದ್ದು, ಬೆಳಗಾವಿ ಜಿಲ್ಲೆಯ ಎಲ್ಲಾ ನೌಕರರು ನಮ್ಮ ಹೋರಾಟಕ್ಕೆ ಬೆಂಬಲ ನೀಡುತ್ತಾರೆ ಎಂದರು.
ನಮ್ಮ ಜೀವನವನ್ನು ಸರ್ಕಾರಿ ಸೇವೆಗೆ ಮೀಸಲಿಟ್ಟಿದ್ದು, ಮುಂದೆ ನಮ್ಮ ನಿವೃತ್ತಿಯ ನಂತರ ನಮಗೆ ಬರುವ ಪಿಂಚಣಿಯಲ್ಲಿ ಜೀವನ ಸಾಗಿಸಲು ಆಗದಿರುವುದು ಸರ್ಕಾರಿ ಉದ್ಯೋಸ್ತರಿಗೆ ನುಂಗಲಾರದ ತುತ್ತಾಗಿದೆ. ವೃದ್ದಾಪ್ಯದಲ್ಲಿ ಮೂಲಭೂತ ಸೌಕರ್ಯವನ್ನು ಸಹ ಪಿಂಚಣಿ ಹಣದಲ್ಲಿ ಪೂರೈಸಿಕೊಳ್ಳಲು ಆಗುತ್ತಿಲ್ಲ, ಸರ್ಕಾರ ಈ ವಿಚಾರವಾಗಿ ನಿರ್ಧಾರ ತೆಗೆದುಕೊಳ್ಳಬೇಕು ಎಂದರು.
ಹೊಸ ಪಿಂಚಣಿ ಯೋಜನೆ ಎನ್ ಪಿ ಎಸ್ ನಮಗೆ ಬೇಕಾಗಿಲ್ಲ ಹಳೆ ಪಿಂಚಣಿ ಯೋಜನೆ ಓಪಿಎಸ್ ಮತ್ತೆ ಜಾರಿಗೆ ಬರಬೇಕು. ಹೋರಾಟಕ್ಕಿಂತ ಮುಂಚೆ ಓಪಿಎಸ್ ಜಾರಿ ಮಾಡ್ತಿವಿ ಎಂದು ಸಿಎಂ ಅವರು ಘೋಷಣೆ ಮಾಡಬೇಕು. ಸರ್ಕಾರ ಆದಷ್ಟೂ ಬೇಗ ತಮ್ಮ ಬೇಡಿಕೆ ಈಡೇರಿಸುತ್ತಾರೆ ಎಂಬ ಭರವಸೆ ನಮಗಿದೆ ಎಂದು ತಿಳಿಸಿದರು.
ಸೋಮವಾರ ರಾಜ್ಯದ ಎಲ್ಲ ಜಿಲ್ಲೆಯ ಸರ್ಕಾರಿ ನೌಕರರು ಬೆಂಗಳೂರಿಗೆ ಹೋಗುತ್ತಿದ್ದು, ಫ್ರೀಡಂ ಪಾರ್ಕ್ ನಲ್ಲಿ ಅನಿರ್ಧಿಷ್ಟಾವಧಿ ಧರಣಿ ಮಾಡುತ್ತೇವೆ. ಧರಣಿ ಪ್ರಾರಂಭಿಸುವ ಒಳಗಾಗಿ ನಮ್ಮ ಬೇಡಿಕೆ ಈಡೇರಿಸುತ್ತೇವೆ ಎಂದು ಸಿಎಂ ಅವರು ವಿಶ್ವಾಸ ನೀಡಿದರೆ ಧರಣಿ ನಿಲ್ಲಿಸುತ್ತೇವೆ. ಇಲ್ಲದಿದ್ದರೆ ಧರಣಿ ಅತೀ ಪ್ರಬಲವಾಗುತ್ತದೆ ಎಂದು ಲೋಕೇಶ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
ಸಂಘದ ಪ್ರಧಾನ ಕಾರ್ಯದರ್ಶಿ ಶ್ರೀಧರ ಸರದಾರ, ಗೌರವ ಸಲಹೆಗಾರ ಕೆ ಎಂ ನದಾಫ್, ಜಯಕುಮಾರ ಹೇಬಳಿ, ರಾಮು ಗುಡವಾಡ ಹಾಗೂ ಬಾಬು ಸೊಗಲನ್ನವರ ಮುಂತಾದವರು ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ