Kannada NewsKarnataka News
*ಗೋವಾ ಹಾಗೂ ಉತ್ತರ ಕರ್ನಾಟಕ ಭಾಗದ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುತ್ತಿದೆ ಗೋಗಟೆ ಶಿಕ್ಷಣ ಸಂಸ್ಥೆ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ವಕೀಲರು, ಉದ್ಯಮಿಗಳಾಗಿದ್ದ ಗೋಗಟೆಯವರು ಶಿಕ್ಷಣ ಸಂಸ್ಥೆ ಆರಂಭಿಸಿ ಗೋವಾ ಹಾಗೂ ಉತ್ತರ ಕರ್ನಾಟಕ ಭಾಗದ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಇಂದು ನಗರದ ಖಾಸಗಿ ಹೋಟೇಲ್ ನಲ್ಲಿ ರಾವ್ ಸಾಹೇಬ ಗೋಗಟೆ ಪುತ್ಥಳಿ ಅನಾವರಣ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಇದೊಂದು ದಿನ ಓರ್ವ ಹಿರಿಯರನ್ನು ನೆನೆಸಿಕೊಳ್ಳುವ ದಿನ. ನಮ್ಮ ಹಿರಿಯರು ಇಷ್ಟು ದೊಡ್ಡ ಸಂಸ್ಥೆ, ಆಸ್ತಿ ಬಿಟ್ಟು ಹೋಗಿದ್ದಾರೆ. ನಾವು ಅವರಿಂದ ಪ್ರೇರಣೆ ಪಡೆಯಬೇಕಿದೆ ಎಂದು ಸಿಎಂ ಬೊಮ್ಮಾಯಿ ಅವರು ಹೇಳಿದರು.
ರಾವ್ ಸಾಹೇಬ ಗೋಗಟೆಯವರು ಪ್ರಸಿದ್ದ ವಕೀಲರಾಗಿದ್ದರು. ಆಗ ಉತ್ತರ ಕರ್ನಾಟಕದ ಬೆಳಗಾವಿಯಲ್ಲಿ ಮಾತ್ರ ಸೆಸೆನ್ಸ್ ಕೋರ್ಟ್ ಇತ್ತು. ಗೋಗಟೆಯವರು ಈ ಭಾಗದ ಎಲ್ಲ ಪ್ರಕರಣಗಳಿಗೆ ವಕಾಲತ್ತು ವಹಿಸುತ್ತಿದ್ದರು. ಆದರೆ, ಅವರೊಳಗೊಬ್ಬ ಉದ್ಯಮಿಯಿದ್ದರಿಂದ ಟೆಕ್ಸ್ ಟೈಲ್ ಉದ್ಯಮ ಪ್ರವೇಶಿಸಿದರು. ನಂತರ ಗಣಿ ಉದ್ಯಮ, ಆಮೇಲೆ ಎಂಜನೀಯರಿಂಗ್ ಕಾಲೇಜು ಆರಂಭಿಸುವ ಮೂಲಕ ಗೋವಾ ಹಾಗೂ ಉತ್ತರ ಕರ್ನಾಟಕ ಭಾಗದ ವಿದ್ಯಾರ್ಥಿಗಳಿಗೆ ಶಿಕ್ಷಣ ಒದಗಿಸುವ ಕೆಲಸ ಮಾಡಿದ್ದಾರೆ ಎಂದು ಸಿಎಂ ಬೊಮ್ಮಾಯಿ ತಿಳಿಸಿದರು.
ಗೋಗಟೆಯವರು ಮಹಾರಾಷ್ಟ್ರದಲ್ಲಿಯೂ ಉದ್ಯಮ ಸ್ಥಾಪನೆ ಮಾಡಿ ಯಶಸ್ವಿಯಾಗಿದ್ದಾರೆ. ಅವರು ಎಲ್ಲ ವರ್ಗದವರೊಂದಿಗೂ ಸ್ನೇಹ ಇಟ್ಟುಕೊಂಡಿದ್ದರು. ನಾನು ಇಲ್ಲಿಗೆ ಸಿಎಂ ಆಗಿ ಬಂದಿಲ್ಲ. ಗೋಗಟೆ ಕುಟುಂಬದ ಒಬ್ಬ ಸದಸ್ಯನಾಗಿ ಬಂದಿದ್ದೇನೆ. ಹುದ್ದೆಗಳಿಗಿಂತ ಸ್ನೇಹ ಸಂಬಂಧ ಮುಖ್ಯ. ಗೋಗಟೆ ಕುಟುಂಬದ ಸೇವಾ ಕಾರ್ಯ ನಿರಂತರ ಮುಂದುವರೆಯಲಿ ಎಂದು ಸಿಎಂ ಬಸವರಾಜ ಬೊಮ್ಮಾಯಿ ಆಶಿಸಿದರು.
ರಾಜ್ಯಸಭಾ ಸದಸ್ಯ ಡಾ.ಪ್ರಭಾಕರ ಕೋರೆ ಸೇರಿದಂತೆ ವಿವಿಧ ಗಣ್ಯರು ಇದ್ದರು.
https://pragati.taskdun.com/2a-reservation-for-panchamasali-yatnal-warns-cm-bommai/