Uncategorized
ಸರಕಾರಿ ಸ್ಕ್ರ್ಯಾಪ್ ವಾಹನ ಸಮಸ್ಯೆ ಸದನಕ್ಕೆ ತಂದ ಶಾಸಕ ಹರ್ಷವರ್ಧನ್; ಮುಕ್ತಕಂಠದಿಂದ ಪ್ರಶಂಸಿಸಿದ ಸ್ಪೀಕರ್ ಕಾಗೇರಿ
ತುರ್ತಾಗಿ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ ಕಾನೂನು ಸಚಿವ ಮಾಧುಸ್ವಾಮಿ
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ರಾಜ್ಯದ ವಿವಿಧ ಸರ್ಕಾರಿ ಕಚೇರಿಗಳ ಆವರಣಗಳಲ್ಲಿ ಬಳಕೆಗೆ ಬಾರದ ಅನುಪಯುಕ್ತ ವಾಹನಗಳು ತುಕ್ಕು ಹಿಡಿದು ನಿಂತಿರುವ ಗಂಭೀರ ಸಮಸ್ಯೆಯ ಕುರಿತು ವಿಧಾನಸಭೆಯಲ್ಲಿ ಪ್ರಸ್ತಾಪಿಸಿದ ಬಿಜೆಪಿಯ ಹರ್ಷವರ್ಧನ್, ತಕ್ಷಣ ಈ ಕುರಿತು ಕ್ರಮ ತೆಗೆದುಕೊಳ್ಳುವಂತೆ ಆಗ್ರಹಿಸಿದರು.
ಬೆಳಗಾವಿಯಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲಿ ಶುಕ್ರವಾರ ಗಮನ ಸೆಳೆಯುವ ಸೂಚನೆ ಮಂಡಿಸಿ ಅವರು ವಿಷಯ ಪ್ರಸ್ತಾಪಿಸಿದರು. ನನ್ನ ಕ್ಷೇತ್ರದ ಕೆಲಸ ಕಾರ್ಯಗಳಿಗಾಗಿ ನಾನು ವಿವಿಧ ಸರ್ಕಾರಿ ಕಛೇರಿಗಳಿಗೆ ಭೇಟಿ ನೀಡಿದಂತಹ ಸಂದರ್ಭದಲ್ಲಿ ಕಚೇರಿ ಆವರಣದಲ್ಲಿ ಹತ್ತಾರು ವರ್ಷಗಳಿಂದ ತುಕ್ಕು ಹಿಡಿಯುತ್ತ ನಿಂತಿರುವ ಸರಕಾರಿ ವಾಹನಗಳನ್ನು ಗಮನಿಸಿದ್ದೇನೆ. ಇದರಿಂದ ಕಚೇರಿಗೆ ಬರುವವರಿಗೆ ವಾಹನಗಳ ಪಾರ್ಕಿಂಗ್ ಸಮಸ್ಯೆ ಉಂಟಾಗುತ್ತಿದೆ. ಈ ವಾಹನಗಳಿಗೆ ಮುಕ್ತಿ ನೀಡಲು ಸರಕಾರ ಮುಂದಾಗಬೇಕು ಎಂದು ಆಗ್ರಹಿಸಿದರು.
ಬೆಂಗಳೂರಿನಂತಹ ಮಹಾನಗರದ ವಿವಿಧ ಸರ್ಕಾರಿ ಕಚೇರಿಗಳಲ್ಲೂ ಇಂತಹ ಅನುಪಯುಕ್ತ ವಾಹನಗಳು ಸಾಲುಗಟ್ಟಿ ನಿಂತಿವೆ. ಇದರಿಂದ ಪಾರ್ಕಿಂಗ್ ಸಮಸ್ಯೆ ಕಾಡುತ್ತಿದೆ ಸಕಾ೯ರಿ ಕಚೇರಿ ಆವರಣಗಳಲ್ಲಿ ಇರುವ ಪಾರ್ಕಿಂಗ್ ಜಾಗವನ್ನು ತುಕ್ಕು ಹಿಡಿದಿರೋ ವಾಹನಗಳು ಆಕ್ರಮಿಸಿಕೊಂಡಿದ್ದರೆ ಕೆಲಸ ಕಾರ್ಯಗಳಿಗೆ ಆಗಮಿಸುವ ಜನರ ವಾಹನಗಳನ್ನು ಕಚೇರಿ ಹೊರಗೆ ನಿಲ್ಲಿಸಬೇಕಾಗಿದೆ. ಅಲ್ಲಿ ನಿಲ್ಲುವ ವಾಹನಗಳಿಗೆ ಸಂಚಾರಿ ಪೊಲೀಸರು ನೋಪಾರ್ಕಿಂಗ್ ಹೆಸರಿನಲ್ಲಿ ದಂಡ ವಿಧಿಸುತ್ತಿದ್ದಾರೆ. ಇಂತಹ ಕಿರಿಕಿರಿಯನ್ನು ತಪ್ಪಿಸಲು ತುಕ್ಕು ಹಿಡಿದಿರುವ ವಾಹನಗಳನ್ನು ತ್ವರಿತವಾಗಿ ತೆರವುಗೊಳಿಸಲು ಮುಂದಾಗಬೇಕೆಂದು ಒತ್ತಾಯಿಸಿದರು.
ಮಧ್ಯಪ್ರವೇಶಿಸಿದ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು, ಇಂತಹ ಸೂಕ್ಷ್ಮ ವಿಷಯ ಕಂಡು ಹಿಡಿದು ಸದನದವರೆಗೆ ತಂದಿರುವುದು ಪ್ರಶಂಸನೀಯ ಎಂದು ಹರ್ಷವರ್ಧನ್ ಅವರನ್ನು ಮುಕ್ತಕಂಠದಿಂದ ಶ್ಲಾಘಿಸಿದರು.
ಈ ಬಗ್ಗೆ ನಾನೂ ಸಹ ಹಲವಾರು ಬಾರಿ ಆರ್ಟಿಓ ಸೇರಿದಂತೆ ಹಲವು ಇಲಾಖೆ ಅಧಿಕಾರಿಗಳಿಗೆ ಹೇಳಿ ಸಾಕಾಗಿದೆ. ಅನುಪಯುಕ್ತ ವಾಹನಗಳನ್ನು ವಿಲೇವಾರಿ ಮಾಡಲು ಸಂಬಂಧಿಸಿದ ಇಲಾಖೆಯ ಹಿರಿಯ ಅಧಿಕಾರಿಗಳು ಸಭೆ ಮಾಡಿ ಆರ್ಟಿಓ ಕಚೇರಿಯಿಂದ ವಾಹನದ ಮೌಲ್ಯ ತೀರ್ಮಾನಿಸಬೇಕು. ಬಳಿಕ ಡಿಸಿ ಅಧ್ಯಕ್ಷತೆಯ ಕಮಿಟಿಯಲ್ಲಿ ಸಭೆ ಮಾಡಿ ತೀರ್ಮಾನಿಸಬೇಕಿದೆ. ಅವರು ತೀರ್ಮಾನಿಸಿದ ಅಷ್ಟು ಹಣಕ್ಕೆ ಖರೀದಿಸಲು ಸ್ಥಳೀಯರು ಯಾರೂ ಬರುವುದಿಲ್ಲ. ಹಾಗಾಗಿ ವಾಹನಗಳು ಅಲ್ಲೇ ನಿಂತಿರುತ್ತವೆ. ಸರ್ಕಾರಿ ಕಚೇರಿಗಳ ಮುಂಭಾಗ ಪುರಾತನ ಯುದ್ಧ ಸ್ಮಾರಕಗಳಂತೆ ತುಕ್ಕು ಹಿಡಿದಿರುವ ವಾಹನಗಳು ಸಾಲುಗಟ್ಟಿ ನಿಂತಿರುತ್ತವೆ. ಹೀಗೆ ತುಕ್ಕು ಹಿಡಿದಿರುವ ವಾಹನಗಳನ್ನು ತ್ವರಿತವಾಗಿ ವಿಲೇವಾರಿ ಮಾಡಲು ಅಗತ್ಯ ಕ್ರಮಕೈಗೊಳ್ಳುವಂತೆ ಸರಕಾರಕ್ಕೆ ಸಲಹೆ ನೀಡಿದರು.
ಇದಕ್ಕೆ ಸರಕಾರದ ಪರವಾರಿ ಉತ್ತರಿಸಿದ ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ, ಇಂತಹ ವಾಹನಗಳನ್ನು ಹರಾಜು ಮಾಡಲು ನಿಯಮದಲ್ಲಿ ಅವಕಾಶವಿದೆ. ಆದರೆ 15 ವರ್ಷ ಮೀರಿದ ವಾಹನಗಳನ್ನು ನಿಷೇಧಿಸಬೇಕು ಎಂದು ಸರಕಾರ ತೀರ್ಮಾನಿಸಿದೆ. ಬಳಕೆಗೆ ಯೋಗ್ಯವಿಲ್ಲ ಎಂದು ತೀರ್ಮಾನ ಮಾಡಿ ಗುಜರಿಗೆ ಕೊಡಬೇಕು. ಅಂತಹ ವಾಹನ ಮಾಲಿಕರಿಗೆ ಹೊಸ ವಾಹನ ನೊಂದಣಿ ವೇಳೆ ರಿಯಾಯಿತಿ ನೀಡಬೇಕೆಂದು ಯೋಚಿಸಲಾಗಿದೆ. ಪೊಲೀಸ್ ಠಾಣೆಗಳ ಆವರಣದಲ್ಲಿ ನಿಲ್ಲುವ ವಾಹನಗಳಿಗೆ ಸಂಬಂದಿಸಿದಂತೆ ನ್ಯಾಯಾಲಯಗಳಲ್ಲಿ ಪ್ರಕರಣಗಳಿರುವುದರಿಂದ ವಿಲೇವಾರಿ ಸಾಧ್ಯವಿಲ್ಲ. ಉಳಿದಂತೆ ಸರಕಾರದ ಅನುಪಯುಕ್ತ ವಾಹನಗಳನ್ನು ವಿಲೇವಾರಿ ಮಾಡಲು ನಿಯಮ ಸರಳೀಕರಣ ಮಾಡಿ ತಕ್ಷಣ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
https://pragati.taskdun.com/cm-basavaraja-bommai-visited-savadatti-yallamma-temple/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ