ಪ್ರಗತಿವಾಹಿನಿ ಸುದ್ದಿ; ಅಥಣಿ: ಅಥಣಿ ಪುರಸಭೆ ಚುನಾವಣೆಯ ಫಲಿತಾಂಶ ಬಂದು ಒಂದು ವರ್ಷ ಕಳೆದರೂ ಇದುವರೆಗೆ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ನಡೆಯದಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ಮುಖಂಡ ಗಜಾನನ ಮಂಗಸೂಳಿ ನೇತೃತ್ವದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು.
ಅಥಣಿ ಪುರಸಭೆ ಕಛೇರಿ ಮುಂದೆ ಕಾಂಗ್ರೇಸ್ ಮುಖಂಡರು ಮತ್ತು ಪುರಸಭೆಗೆ ಆಯ್ಕೆಯಾದ 15 ಕಾಂಗ್ರೆಸ್ ಸದಸ್ಯರು ಕಪ್ಪು ಪಟ್ಟಿ ಧರಿಸಿ ಪ್ರತಿಭಟನೆ ನಡೆಸಿದರು.
ಪ್ರತಿಭಟನಾಕರರನ್ನುದ್ದೇಶಿಸಿ ಮಾತನಾಡಿದ ಗಜಾನನ ಮಂಗಸೂಳಿ, ಒಂದು ವರ್ಷದ ಹಿಂದೆ ಜರುಗಿದ ಚುನಾವಣೆಯಲ್ಲಿ ಬಿಜೆಪಿ ಹಿನ್ನಡೆಯನ್ನು ಅನುಭವಿಸಿದೆ. ಈಗ ಕಾಂಗ್ರೆಸ್ ಅಧಿಕಾರಕ್ಕೆ ಬರುವುದನ್ನು ತಪ್ಪಿಸಲು ಕುತಂತ್ರ ಮಾಡುತ್ತಿದೆ. ಕಾಂಗ್ರೆಸ್ ಪಕ್ಷಕ್ಕೆ ಅಥಣಿ ಜನತೆ ಆರ್ಶಿವದಿಸಿ ಬಹುಮತ ಒದಗಿಸಿದ್ದರು. ಆದರೆ ಅಧ್ಯಕ್ಷರ ಆಯ್ಕೆ ಮಾಡದಿರುವುದು ಮತ್ತು ಜನರಿಗೆ ಮೂಲಭೂತ ಸೌಲಭ್ಯ ನೀಡಲು ಅನುವು ಮಾಡಿಕೊಡದೆ ಇರುವುದು ಜನತೆಗೆ ಮಾಡಿದ ಅಪಮಾನ ಎಂದರು.
ಇಂತಹ ಕ್ಷುಲ್ಲಕ ರಾಜಕಾರಣಿಗಳಿಗೆ ಮುಂಬರುವ ದಿನಗಳಲ್ಲಿ ಜರುಗುವ ಚುನಾವಣೆಯಲ್ಲಿ ಅಥಣಿ ಮತದಾರರು ಉತ್ತರ ನೀಡಲಿದ್ದಾರೆ ಎಂದರು.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನರಿಂದ ಆಯ್ಕೆಯಾದ ಜನಪ್ರತಿನಿಧಿಗಳನ್ನು ಅಧಿಕಾರ ವಂಚಿತರನ್ನಾಗಿ ಮಾಡುವ ಮೂಲಕ, ಪುರಸಭೆಯ ಆಡಳಿತ ವ್ಯವಸ್ಥೆ ದಾರಿತಪ್ಪಿಸುವ ಕಾರ್ಯ ಬಿಜೆಪಿ ಸರಕಾರದಿಂದ ನಡೆಯುತ್ತಿದೆ. ಪಟ್ಟಣದ ಅಭಿವೃದ್ಧಿ ವಿಚಾರದಲ್ಲಿ ಇಂತಹ ಬೆಳವಣಿಗೆ ಸರಿಯಾದುದಲ್ಲ ಅಧಿಕಾರಿಗಳೆ ಆಡಳಿತ ನಡೆಸುವದಾದರೆ ಚುನಾವಣೆಗಳು ಯಾಕೆ ನಡೆಯಬೇಕು. ಇಂತಹ ಸರ್ವಾಧಿಕಾರಿ ಧೋರಣೆಯು ಸರಿಯಲ್ಲ ಕಾಲವೇ ಎಲ್ಲದಕ್ಕೂ ಉತ್ತರಿಸಲಿದೆ ಎಂದು ಕಿಡಿ ಕಾರಿದರು.
ಪುರಸಭೆ ಹಿರಿಯ ಸದಸ್ಯ ರಾವಸಾಬ ಐಹೊಳೆ ಮಾತನಾಡಿ ಕಳೆದ ಒಂದು ವರ್ಷದಿಂದ ಪಟ್ಟಣದಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಗಳು ನಡೆಯದೆ ಅಧಿಕಾರಿಗಳು ನಡೆದದ್ದೇ ದಾರಿ ಅನ್ನುವಂತಾಗಿದ್ದು ವಿವಿಧ ಯೋಜನೆಗಳ ಅನುದಾನ ಸದ್ಬಳಕೆಯಾಗದೆ ದುರುಪಯೋಗವಾಗುತ್ತಿದೆ. ಸ್ವಚ್ಛತೆ, ಜನರ ಆರೋಗ್ಯ ಇವುಗಳತ್ತ ಗಮನ ಹರಿಸಬೇಕಾದ ಅಗತ್ಯತೆ ಇದೆ. ಈ ಕುರಿತು ಸ್ಥಳೀಯ ಶಾಸಕರು ಗಮನ ಹರಿಸಬೇಕಾದ ಅವಶ್ಯಕತೆ ಇದೆ ಎಂದರು.
ಈ ವೇಳೆ ಪುರಸಭೆಯ ಸದಸ್ಯರಾದ ಸಯ್ಯದ್ ಅಮೀನ ಗದ್ಯಾಳ, ಪ್ರಮೋದ ಬಿಳ್ಳೂರ, ಉದಯ ಸೋಳಸಿ, ವಿಲೀನ ಎಳಮಲ್ಲೆ, ರಿಯಾಜ ಸನದಿ,ರಮೇಶ ಪವಾರ, ಬ್ಲಾಕ್ ಕಾಂಗ್ರೆಸ್ ಅದ್ಯಕ್ಷ ಸಿದ್ಧಾರ್ಥ ಸಿಂಗೆ, ಶ್ರೀಕಾಂತ್ ಪೂಜಾರಿ, ರವಿ ಬಡಕಂಬಿ, ಸಚಿನ್ ಬುಟಾಳಿ,ಬೀರಪ್ಪ ಯಂಕಂಚಿ ಮೊದಲಾದವರು ಇದ್ದರು.
https://pragati.taskdun.com/62-calls-for-sp-phone-in/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ