Kannada News

ಬಾಲಚಂದ್ರ ಜಾರಕಿಹೊಳಿ ಮನೆತನದ ಧರ್ಮರಾಯ – ಹುಕ್ಕೇರಿ ಶ್ರೀ ; ಕಷ್ಟದಿಂದ ಬರುವವರಿಗೆ ನಮ್ಮ ಬಾಯಿಯಿಂದ ಇಲ್ಲ ಅನ್ನುವ ಶಬ್ಧವೇ ಬರುವುದಿಲ್ಲ – ಬಾಲಚಂದ್ರ ಜಾರಕಿಹೊಳಿ

ಸ್ವಾರ್ಥ ಬಿಟ್ಟು ಕೆಲಸ ಮಾಡಿದ್ದಾದರೆ ಇಡೀ ಸಮಾಜವೇ ಉದ್ಧಾರವಾಗುತ್ತದೆ : ಶಾಸಕ ಬಾಲಚಂದ್ರ ಜಾರಕಿಹೊಳಿ

ಹುಣಶ್ಯಾಳ ಪಿಜಿ ಗ್ರಾಮದಲ್ಲಿ ನಡೆಯುತ್ತಿರುವ ಸಿದ್ಧಲಿಂಗ ಕೈವಲ್ಯಾಶ್ರಮದ ಜಾತ್ರೆಯಲ್ಲಿ ಪಾಲ್ಗೊಂಡ ಶಾಸಕ ಬಾಲಚಂದ್ರ ಜಾರಕಿಹೊಳಿ

ಪ್ರಗತಿವಾಹಿನಿ ಸುದ್ದಿ, ಮೂಡಲಗಿ : ಮಠಾಧೀಶರು, ರಾಜಕಾರಣಿಗಳು ಹಾಗೂ ಅಧಿಕಾರಿಗಳು ಸ್ವಾರ್ಥ ಬಿಟ್ಟು ಕೆಲಸ ಮಾಡಿದರೇ ಇಡೀ ಸಮಾಜವೇ ಉದ್ಧಾರವಾಗುತ್ತದೆ. ನಿಸ್ವಾರ್ಥ ಮನೋಭಾವನೆಯಿಂದ ಕೆಲಸಗಳನ್ನು ಮಾಡಿದರೆ ಮುಂದೊಂದು ದಿನ ದೇವರು ಯಾವುದಾದರೂ ರೂಪದಲ್ಲಿ ಬಂದು ಸಹಾಯ ಮಾಡುತ್ತಾನೆ. ಸ್ವಾರ್ಥವನ್ನಿಟ್ಟುಕೊಂಡು ಕೆಲಸ ಮಾಡಿದ್ದಾದರೆ ದೇವರು ಎಂದಿಗೂ ಮೆಚ್ಚುವುದಿಲ್ಲ ಎಂದು ಶಾಸಕ, ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ತಿಳಿಸಿದರು.

ತಾಲೂಕಿನ ಹುಣಶ್ಯಾಳ ಪಿಜಿ ಗ್ರಾಮದ ಸಿದ್ಧಲಿಂಗ ಕೈವಲ್ಯಾಶ್ರಮದಲ್ಲಿ ಜರುಗುತ್ತಿರುವ ಜಾತ್ರೆ, ೨೪ನೇ ಸತ್ಸಂಗ ಮಹೋತ್ಸವ, ತೊಟ್ಟಿಲೋತ್ಸವ ಹಾಗೂ ಪೂಜ್ಯರ ತುಲಾಭಾರ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ನಿಸ್ವಾರ್ಥತೆಯಿಂದ ಕೆಲಸ ಮಾಡಿದರೆ ನಮಗೆ ಪುಣ್ಯ ಪ್ರಾಪ್ತಿಯಾಗುತ್ತದೆ ಎಂದು ಹೇಳಿದರು.

ದಿನನಿತ್ಯ ತಮ್ಮ ಗೃಹ ಕಛೇರಿ ಎನ್‌ಎಸ್‌ಎಫ್‌ಗೆ ದೂರು ದುಮ್ಮಾನುಗಳನ್ನು ಹೇಳಿಕೊಳ್ಳಲು ಬರುವ ಸಾರ್ವಜನಿಕರಿಗೆ ಕೈಲಾದ ಸಹಾಯವನ್ನು ಮಾಡುತ್ತಿರುತ್ತೇವೆ. ನಮಗೆ ಸಾಧ್ಯವಿದ್ದಷ್ಟು ಅವರ ಕಷ್ಟ-ಕಾರ್ಪಣ್ಯಗಳಿಗೆ ಸ್ಪಂದನೆ ಮಾಡುತ್ತಿರುತ್ತೇವೆ. ಕಷ್ಟದಿಂದಲೇ ಬರುವ ಜನರಿಗೆ ನಮ್ಮ ಬಾಯಿಯಿಂದ ಇಲ್ಲ ಅನ್ನುವ ಶಬ್ಧವೇ ಬರುವುದಿಲ್ಲ. ದೇವರು ನಮಗೆ ಯಾವ ಕಾಲಕ್ಕೂ ಇಲ್ಲ ಎನ್ನುವ ಶಬ್ಧವನ್ನೇ ಹಾಕಿಲ್ಲ. ಅಷ್ಟೊಂದು ಆಶೀರ್ವಾದ, ಹರಕೆ ದೇವರು ನಮಗೆ ನೀಡಿದ್ದಾನೆ. ಹೀಗಾಗಿ ದೇವರ ಅನುಗೃಹದಿಂದ ಜನ ಸೇವೆಯನ್ನು ಅತ್ಯಂತ ಪ್ರಾಮಾಣಿಕವಾಗಿ ಮಾಡುತ್ತಿದ್ದೇವೆ.

 

ನಮಗೆ ಸಾವಿರಾರು ಜನರಿಗೆ ಸಹಾಯ ಹಸ್ತ ನೀಡುವ ಅವಕಾಶವನ್ನು ದೇವರು ಕಲ್ಪಿಸಿದ್ದಾನೆ. ಮುಂದಿನ ದಿನಗಳಲ್ಲಿಯೂ ನಮಗೆ ಜನರಿಗೆ ನಿರಂತರವಾಗಿ ಸಹಾಯ ಮಾಡುವ ಆಶೀರ್ವಾದವನ್ನು ದೇವರು ಮಾಡಲಿ ಎಂದು ತಿಳಿಸಿದರು.

ಎಷ್ಟೇ ಅಭಿವೃದ್ಧಿಪರ ಕಾರ್ಯಗಳನ್ನು ಮಾಡುತ್ತಿದ್ದರೂ ಕೆಲವರ ಟೀಕೆಗಳು ತಪ್ಪಿದ್ದಲ್ಲ. ಅವುಗಳಿಗೆ ನಾವಂತೂ ಕಿವಿಗೊಡುವುದಿಲ್ಲ. ಬಿ.ಎಸ್. ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಹುಣಶ್ಯಾಳ ಪಿಜಿ ಗ್ರಾಮದ ಪ್ರವಾಹದಿಂದ ಹಾನಿಗೊಳಗಾದ ೩೦೦ ಮನೆಗಳನ್ನು ನಿರ್ಮಿಸಿಕೊಡಲಾಗಿದೆ. ಪ್ರತಿ ಮನೆಗೆ ೫ ಲಕ್ಷ ರೂ.ಗಳ ಸಹಾಯಧನ ನೀಡಲಾಗಿದೆ. ಆದರೂ ಕೆಲವರು ಈಗಲೂ ಮನೆಗಾಗಿ ಬರುತ್ತಿರುತ್ತಾರೆ. ಮನೆಗಳನ್ನು ಮಂಜೂರು ಮಾಡಿಸುವುದು ನಾವೇ. ನಮ್ಮನ್ನು ಬಿಟ್ಟು ಯಾರೂ ಮನೆಗಳನ್ನು ನೀಡುವುದಿಲ್ಲ. ಆದ್ದರಿಂದ ಸಂತ್ರಸ್ತರು ಯಾರ ಬಳಿಗೂ ಹೋಗಬೇಡಿ ಎಂದು ಹೇಳಿದರು.

ನಮಗೆ ಅನ್ನ ನೀಡುವ ರೈತನು ಸುಖವಾಗಿರಬೇಕು. ರೈತ ಸುಖವಾಗಿದ್ದರೆ ನಾವೆಲ್ಲ ಶಾಂತಿಯಿಂದ ಇರುತ್ತೇವೆ. ರೈತರ ಅಭಿವೃದ್ಧಿಗಾಗಿ ನಾವು ಬದ್ಧರಿದ್ದೇವೆ. ಮಠಾಧೀಶರ ಮಾರ್ಗದರ್ಶನದಲ್ಲಿ ನಾವು ಕ್ಷೇತ್ರವನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ಯುತ್ತಿದ್ದೇವೆ. ಸಮಾಜದ ಉನ್ನತಿಯಲ್ಲಿ ಮಠಾಧೀಶರ ಪಾತ್ರ ಮಹತ್ವದ್ದಾಗಿದೆ ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿ ತಿಳಿಸಿದರು.

ಇಂದಿಗೂ ತಾಯಿ-ತಂದೆಯವರನ್ನು ದೇವರಂತೆ ಪೂಜಿಸುತ್ತಿರುವ ಶಾಸಕ ಬಾಲಚಂದ್ರ ಜಾರಕಿಹೊಳಿ : ಹುಕ್ಕೇರಿ ಶ್ರೀಗಳು

ಕಾರ್ಯಕ್ರಮದ ನೇತೃತ್ವ ವಹಿಸಿದ್ದ ಹುಕ್ಕೇರಿ ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳು ಮಾತನಾಡಿ, ಬಾಲಚಂದ್ರ ಜಾರಕಿಹೊಳಿ ಅವರು ತಮ್ಮ ತಾಯಿ-ತಂದೆಯವರನ್ನೇ ನಿಜವಾದ ದೇವರು ಎಂದು ಪ್ರತಿನಿತ್ಯ ಪೂಜಿಸುತ್ತಾರೆ. ನೋಂದವರನ್ನು, ಕಷ್ಟದಲ್ಲಿದ್ದವರನ್ನು ಅಪ್ಪಿಕೊಳ್ಳುವ ಸ್ವಭಾವ ಇವರದ್ದಾಗಿದೆ. ಬಾಲಚಂದ್ರ ಅವರು ಕೊಡುಗೈ ದಾನಿಯಾಗಿದ್ದು, ತಮ್ಮ ಕುಟುಂಬದ ಸದಸ್ಯರನ್ನು ಎಂದಿಗೂ ಬಿಟ್ಟುಕೊಡುವುದಿಲ್ಲ. ಇವರೊಬ್ಬ ಜಾರಕಿಹೊಳಿ ಮನೆತನದಲ್ಲಿಯೇ ಧರ್ಮರಾಯ ಆಗಿದ್ದಾರೆ ಎಂದು ಶ್ಲಾಘಿಸಿದ ಅವರು, ಇಂದು ಕೆಎಂಎಫ್ ಜಾಗತಿಕ ಮಟ್ಟದಲ್ಲಿ ಗುರುತಿಸುವಲ್ಲಿ ಅಧ್ಯಕ್ಷರಾಗಿರುವ ಬಾಲಚಂದ್ರ ಅವರ ಪಾತ್ರ ಅನನ್ಯವಾಗಿದೆ.

ಇವರ ಕಾರ್ಯವನ್ನು ಸ್ವತಃ ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮೀತ ಶಾ ಅವರು ಕೊಂಡಾಡಿದ್ದಾರೆ. ಯಾರನ್ನೂ ವಿರೋಧ ಕಟ್ಟಿಕೊಳ್ಳದ ಬಾಲಚಂದ್ರ ಜಾರಕಿಹೊಳಿ ಅಜಾತಶತ್ರು ಎಂದು ಬಣ್ಣಿಸಿದರು. ಮುಂದಿನ ವರ್ಷ ನಿಜಗುಣ ದೇವರ ೬೦ನೇ ವರ್ಷದ ಹುಟ್ಟುಹಬ್ಬವನ್ನು ಸಡಗರ ಸಂಭ್ರಮದಿಂದ ಆಚರಿಸಲಾಗುವುದು. ಅದರೊಳಗೆ ಬಾಲಚಂದ್ರ ಭವನ ನಿರ್ಮಾಣಕ್ಕೆ ಶಾಸಕರು ಅಗತ್ಯವಿರುವ ಎಲ್ಲ ಸಹಕಾರ ನೀಡುವಂತೆ ಅವರು ಬಾಲಚಂದ್ರ ಜಾರಕಿಹೊಳಿ ಬಳಿ ಮನವಿ ಮಾಡಿಕೊಂಡರು.

ಶಿವಾನಂದ ಕೌಜಲಗಿ ಮತ್ತು ಬಾಲಚಂದ್ರ ಜಾರಕಿಹೊಳಿ ಅವರು ನಮ್ಮ ಶ್ರೀಮಠದ ಎರಡು ಕಣ್ಣುಗಳು : ನಿಜಗುಣ ದೇವರು

ಸಿದ್ಧಲಿಂಗ ಕೈವಲ್ಯಾಶ್ರಮದ ನಿಜಗುಣ ದೇವರು ಮಾತನಾಡಿ, ಇಡೀ ಕನ್ನಡ ನಾಡು ಕಣ್ಣೆತ್ತಿ ನೋಡುವ ಶಾಸಕರು ಯಾರಾದರೂ ಇದ್ದರೇ ಅದು ಬಾಲಚಂದ್ರ ಜಾರಕಿಹೊಳಿ ಅವರು. ಮಾಜಿ ಸಚಿವ ಶಿವಾನಂದ ಕೌಜಲಗಿ ಮತ್ತು ಜಾರಕಿಹೊಳಿ ಕುಟುಂಬವು ನಮ್ಮ ಶ್ರೀಮಠದ ಎರಡು ಕಣ್ಣುಗಳಿದ್ದಂತೆ. ೨೫ ವರ್ಷಗಳ ಹಿಂದೆ ಪ್ರವಚನ ಹೇಳಲು ಆಗಾಗ ಹುಣಶ್ಯಾಳ ಪಿಜಿಗೆ ಬರುತ್ತಿದ್ದ ನನಗೆ ಇಲ್ಲಿ ಮಠವನ್ನು ನೀಡಿ ಮಠಾಧಿಪತಿಯಾಗಲು ಈ ಎರಡು ಕುಟುಂಬಗಳು ಸಹಕಾರ ನೀಡಿವೆ. ಬಾಲಚಂದ್ರ ಜಾರಕಿಹೊಳಿ ಅವರು ಅರಭಾವಿ ಜನರ ದೇವರು ಎಂದೇ ಕಾರ್ಯಕ್ರಮವೊಂದರಲ್ಲಿ ಇಂಚಲದ ಶಿವಾನಂದ ಭಾರತಿ ಮಹಾಸ್ವಾಮಿಗಳು ಉಲ್ಲೇಖಿಸಿದ್ದಾರೆ.

ಬಾಲಚಂದ್ರ ಅವರು ಸೇವಕರಂತೆ ಜನಸೇವೆ ಮಾಡುತ್ತಿದ್ದಾರೆ. ಕಳೆದ ೫ ವರ್ಷದಲ್ಲಿ ಈ ಗ್ರಾಮಕ್ಕೆ ೮ ಕೋಟಿ ರೂ.ಗಳಿಗೂ ಅಧಿಕ ಮೊತ್ತದ ಅಭಿವೃದ್ಧಿಪರ ಕಾಮಗಾರಿಗಳನ್ನು ಕೈಗೊಂಡಿದ್ದಾರೆ ಎಂದು ನಿಜಗುಣ ದೇವರು ಹೇಳಿದರು.

ಇದೇ ಸಂದರ್ಭದಲ್ಲಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರನ್ನು ಶ್ರೀಗಳು ಪುಷ್ಪಾರ್ಪನೆ ಮಾಡಿ ಸತ್ಕರಿಸಿದರು. ನಿಜಗುಣ ದೇವರ ತುಲಾಭಾರವನ್ನು ಇದೇ ಸಂದರ್ಭದಲ್ಲಿ ಭಕ್ತರು ನಡೆಸಿಕೊಟ್ಟರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬೀದರಿನ ಗಣೇಶಾನಂದ ಮಹಾರಾಜರು ವಹಿಸಿದ್ದರು.

ಈ ಸಂದರ್ಭದಲ್ಲಿ ಮಹಾದೇವಾನಂದ ಸರಸ್ವತಿ ಸ್ವಾಮಿಗಳು, ವೆಂಕಟೇಶ ಮಹಾರಾಜರು, ಶಿವಾನಂದ ಮಹಾಸ್ವಾಮಿಗಳು, ಪ್ರಭು ದೇವರು, ಕೃಪಾನಂದ ಸ್ವಾಮಿಗಳು, ಚಿದಾನಂದ ಸ್ವಾಮಿಗಳು, ಮಲ್ಲಿಕಾರ್ಜುನ ಸ್ವಾಮಿಗಳು, ಬಸವರಾಜ ಮಹಾರಾಜರು, ಸಿದ್ದಾರೂಢ ಮಹಾಸ್ವಾಮಿಗಳು, ಬಸವರಾನಂದ ಮಹಾಸ್ವಾಮಿಗಳು, ಸದಾನಂದ ಮಹಾಸ್ವಾಮಿಗಳು, ಚಿದಾನಂದ ಮಹಾಸ್ವಾಮಿಗಳು, ಸಿದ್ಧಾನಂದ ಸ್ವಾಮಿಗಳು, ಭೀಮಾನಂದ ಸ್ವಾಮಿಗಳು, ನಿಂಗಯ್ಯಾ ಸ್ವಾಮಿಗಳು, ಬಸವರಾಜ ಶರಣರು, ಸಿದ್ಧೇಶ್ವರ ತಾಯಿ, ಅನುಸೂಯಾ ದೇವಿ ಯವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

*ಮಹದಾಯಿ ಆದೇಶ, ಪಂಚಮಸಾಲಿ ಮೀಸಲಾತಿ ಬಿಜೆಪಿ ಚುನಾವಣೆ ಗಿಮಿಕ್: ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ವಾಗ್ದಾಳಿ*

https://pragati.taskdun.com/mahadai-orderpanchamasali-reservationbjp-election-gimiksatish-jarakiholibelagavi/

 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button