ಹಿರಿಯ ಪತ್ರಕರ್ತ ಸತ್ಯನಾರಾಯಣ ವಿಧಿವಶ

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು – ಹಿರಿಯ ಪತ್ರಕರ್ತರ ಕೆ.ಸತ್ಯನಾರಾಯಣ ವಿಧಿವಶರಾಗಿದ್ದಾರೆ. ಅವರಿಗೆ 87 ವರ್ಷ ವಯಸ್ಸಾಗಿತ್ತು.

ಕನ್ನಡಪ್ರಭ ಸೇರಿದಂತೆ ಹಲವಾರು ಪತ್ರಿಕೆಗಳಲ್ಲಿ ಕೆಲಸ ಮಾಡಿದ್ದ ಸತ್ಯನಾರಾಯಣ, ಕನ್ನಡಪ್ರಭದ ಸಂಪಾದಕರಾಗಿ ಅನೇಕ ವರ್ಷಗಳ ಕಾಲ ಮುನ್ನಡೆಸಿದ್ದರು.

ಬೆಂಗಳೂರಿನ ಜಯನಗರದ ಎಲ್ಐಸಿ ಕಾಲೋನಿಯ ನಿವಾಸದಲ್ಲಿ ಅವರು ಭಾನುವಾರ ಬೆಳಗ್ಗೆ ನಿಧನರಾದರು. 1956ರಲ್ಲೇ ಸ್ವತಂತ್ರ ಪತ್ರಿಕೆಯ ಮೂಲಕ ಪತ್ರಿಕೋದ್ಯಮಕ್ಕೆ ಕಾಲಿಟ್ಟಿದ್ದ ಅವರು, ಹಲವಾರು ಪತ್ರಿಕೆಗಳಲ್ಲಿ ಕೆಲಸ ಮಾಡಿದ್ದರು. 1965ರಲ್ಲಿ ಎಕ್ಸಪ್ರೆಸ್ ಗ್ರುಪ್ ಸೇರಿ ಸುದೀರ್ಘ ಕಾಲ ಕೆಲಸ ಮಾಡಿದ್ದರು.

ಪತ್ರಕರ್ತರಿಗೆ ಆದರ್ಶರಾಗಿ ಬದುಕಿದ್ದ ಅವರು ತಾಳ್ಮೆ, ನಿಷ್ಠೆಗೆ ಹೆಸರಾಗಿದ್ದರು. ಕನ್ನಡಪ್ರಭದಿಂದ ನಿವೃತ್ತರಾದರೂ ಇಳಿವಯಸ್ಸಿನಲ್ಲೂ ಅವರು ಅಂಕಣಕಾರರಾಗಿ ಮುಂದುವರಿದಿದ್ದರು.

ಸಂತಾಪ: ಸತ್ಯನಾರಾಯಣ ಅವರ ನಿಧನಕ್ಕೆ ಪ್ರಗತಿವಾಹಿನಿ ತೀವ್ರ ಸಂತಾಪ ವ್ಯಕ್ತಪಡಿಸುತ್ತದೆ. `ನಾನು ಕನ್ನಡಪ್ರಭ ಸೇರುವ ಸಂದರ್ಭದಲ್ಲಿ ಸಂಪಾದಕರಾಗಿದ್ದ ಸತ್ಯನಾರಾಯಣ, ಅನೇಕ ವರ್ಷಗಳ ಕಾಲ ಮಾರ್ಗದರ್ಶನ ನೀಡುತ್ತಿದ್ದರು. ಮಾದರಿ ಪತ್ರಕರ್ತರಾಗಿ ಅವರ ನೆನಪು ಸದಾ ಇರುತ್ತದೆ’ ಎಂದು ಪ್ರಗತಿವಾಹಿನಿ ಸಂಪಾದಕ ಎಂ.ಕೆ.ಹೆಗಡೆ ಸ್ಮರಿಸಿದ್ದಾರೆ.

ಟೈಮ್ಸ್ ಆಫ್ ಇಂಡಿಯಾ ಕನ್ನಡ, ವಿಜಯವಾಣಿ, ವಿಜಯಕರ್ನಾಟಕಗಳಲ್ಲಿ ಸಂಪಾದಕರಾಗಿ ಕೆಲಸ ನಿರ್ವಹಿಸಿರುವ ತಿಮ್ಮಪ್ಪ ಭಟ್, ಕನ್ನಡಪ್ರಭ, ಸುವರ್ಣ ನ್ಯೂಸ್ ಸಂಪಾದಕರಾಗಿದ್ದ ಇಂದಿನ ಪಬ್ಲಿಕ್ ಟಿವಿ ಸಂಪಾದಕ ಎಚ್.ಆರ್.ರಂಗನಾಥ, ಸುವರ್ಣ ನ್ಯೂಸ್, ಉದಯವಾಣಿ ಸಂಪಾದಕರಾಗಿ ಕೆಲಸ ಮಾಡಿದ್ದ ಇಂದಿನ ಕನ್ನಡಪ್ರಭ ಸಂಪಾದಕ ರವಿ ಹೆಗಡೆ, ಕನ್ನಡಪ್ರಭ ಮ್ಯಾಗ್ಜಿನ್ ಡಿಟರ್ ಜೋಗಿ, ಹಿರಿಯ ಪತ್ರಕರ್ತರಾದ ಜಯರಾಮ ಅಡಿಗ, ಸದಾಶಿವ. ಉದಯಮರಕಿಣಿ ಸೇರಿದಂತೆ ನೂರಾರು ಪತ್ರಕರ್ತರು ಸತ್ಯನಾರಾಯಣ ಅವರ ಸಂಪಾದಕತ್ವದ ಅಡಿಯಲ್ಲಿ ಕೆಲಸ ನಿರ್ವಹಿಸಿದ್ದಾರೆ.

 

*ಕೆ.ಸತ್ಯನಾರಾಯಣ ಅವರ ನಿಧನಕ್ಕೆ ಮುಖ್ಯಮಂತ್ರಿಗಳ ಸಂತಾಪ*

ಕನ್ನಡಪ್ರಭ ದಿನಪತ್ರಿಕೆಯ ಸಂಪಾದಕರಾಗಿದ್ದ ಕೆ. ಸತ್ಯನಾರಾಯಣ ಅವರ ನಿಧನಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

ಸತ್ಯನಾರಾಯಣ ಅವರು ತಾಯಿ ನಾಡು ಪತ್ರಿಕೆಯ ಮೂಲಕ ಪತ್ರಿಕೋದ್ಯಮಕ್ಕೆ ಕಾಲಿರಿಸಿ ಕನ್ನಡಪ್ರಭ ಪತ್ರಿಕೆಯಲ್ಲಿ ಮೂರು ದಶಕಗಳಿಗೂ ಹೆಚ್ಚು ಕಾಲ ಕಾರ್ಯ ನಿರ್ವಹಿಸಿದ್ದರು.

ಸತ್ಯನಾರಾಯಣ ಅವರು ಇಳಿವಯಸ್ಸಿನಲ್ಲೂ ಬರೆಯುತ್ತಿದ್ದ ಅಂಕಣಗಳ ಮೂಲಕ ಸಮಕಾಲೀನ ರಾಜಕೀಯ, ವಾಣಿಜ್ಯ ವಿಷಯಗಳ ಮೇಲೆ ಬೆಳಕು ಚೆಲ್ಲುತ್ತಿದ್ದರು. ಮೌಲ್ಯಾಧಾರಿತ ಪತ್ರಿಕೋದ್ಯಮದ ಸಂಕೇತವಾಗಿದ್ದ ಅವರು ಪತ್ರಿಕೋದ್ಯಮಕ್ಕೆ ನೀಡಿದ ಕೊಡುಗೆಗಾಗಿ ಟಿ.ಎಸ್.ಆರ್ ಪ್ರಶಸ್ತಿ ಸೇರಿದಂತೆ ಅನೇಕ ಪ್ರಶಸ್ತಿಗಳಿಗೆ ಭಾಜನರಾಗಿದ್ದರು.

ಅವರ ನಿಧನ ಕನ್ನಡ ಪತ್ತಿಕೋದ್ಯಮಕ್ಕೆ ದೊಡ್ಡ ನಷ್ಟವಾಗಿದ್ದು ಹಳೆ ತಲೆಮಾರಿನ ಪತ್ರಿಕೋದ್ಯಮದ ಕೊಂಡಿಯೊಂದು ಕಳಚಿಕೊಂಡತಾಗಿದೆ.
ಶ್ರೀಯುತರ ನಿಧನದ ದುಃಖವನ್ನು ಭರಿಸುವ ಶಕ್ತಿಯನ್ನು ಪರಮಾತ್ಮ ಅವರ ಕುಟುಂಬದ ಸದಸ್ಯರಿಗೆ ಕರುಣಿಸಲಿ ಎಂದು ಪ್ರಾರ್ಧಿಸುವುದಾಗಿ ಮುಖ್ಯಮಂತ್ರಿಗಳು ತಮ್ಮ ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.

 

*ಡಿ.ಕೆ. ಶಿವಕುಮಾರ್ ಸಂತಾಪ*

 

ಹಿರಿಯ ಪತ್ರಕರ್ತ, ಕನ್ನಡ ಪ್ರಭ ಪತ್ರಿಕೆಯ ಮಾಜಿ ಸಂಪಾದಕರಾದ ಕೆ.ಸತ್ಯನಾರಾಯಣ ಅವರ ನಿಧನಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಸಂತಾಪ ಸೂಚಿಸಿದ್ದಾರೆ.

‘ಹಿರಿಯ ಪತ್ರಕರ್ತ ಕೆ.ಸತ್ಯನಾರಾಯಣ ಅವರ ನಿಧನದ ಸುದ್ದಿ ಕೇಳಿ ಬೇಸರವಾಗಿದೆ. ಅವರ ಅಗಲಿಕೆಯಿಂದ ಪತ್ರಿಕೋದ್ಯಮದ ಹಿರಿಯ ಕೊಂಡಿಯೊಂದು ಕಳಚಿದಂತಾಗಿದೆ. ಸತ್ಯನಾರಾಯಣ ಅವರು ತಮ್ಮ ಅಂಕಣಗಳಲ್ಲಿ ಸಮಕಾಲಿನ ರಾಜಕೀಯ ಸೇರಿದಂತೆ ಹಲವು ವಿಷಯಗಳ ಮೇಲೆ ಬೆಳಕು ಚೆಲ್ಲುತ್ತಿದ್ದರು.

ಸತ್ಯನಾರಾಯಣ ಅವರ ಕುಟುಂಬ ವರ್ಗಕ್ಕೆ ನನ್ನ ಸಂತಾಪಗಳನ್ನು ಸೂಚಿಸುತ್ತಾ, ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ’ ಎಂದು ಸಂತಾಪ ನುಡಿಯಲ್ಲಿ ಶಿವಕುಮಾರ್ ಅವರು ತಿಳಿಸಿದ್ದಾರೆ.

ಬರಹಗಾರನಿಗೆ ಓದುಗನಿಲ್ಲವೆಂದರೆ ಅವನು ಮೃತ ಬರಹಗಾರ

https://pragati.taskdun.com/book-readrsspecial-articleravi-karanam/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button