Kannada News

ನಾನು ಶಾಂತ ರೀತಿಯಿಂದ ಚುನಾವಣೆ ಮಾಡಬೇಕೆಂದಿದ್ದೇನೆ, ಕೊರೋನಾ ಟೈೆಂ ನಲ್ಲಿ ಇವರೆಲ್ಲ ಎಲ್ಲಿದ್ದರು? – ಲಕ್ಷ್ಮೀ ಹೆಬ್ಬಾಳಕರ್

 

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ :  ”ನಾನು ಬಹಳ ಶಾಂತರೀತಿಯಿಂದ ಚುನಾವಣೆ ಮಾಡಬೇಕೆದಿದ್ದೇನೆ. ಜನರು ಎಲ್ಲವನ್ನೂ ನೋಡುತ್ತಿದ್ದಾರೆ. ಜನರೇ ತೀರ್ಮಾನ ತೆಗೆದುಕೊಂಡು ಇದಕ್ಕೆಲ್ಲ  ಉತ್ತರಿಸುತ್ತಾರೆ”
ಶಾಸಕ ರಮೇಶ ಜಾರಕಿಹೊಳಿ ಶುಕ್ರವಾರ ಸುಳೇಬಾವಿಯ ಸಮಾವೇಶದಲ್ಲಿ ಆಡಿದ ಮಾತುಗಳಿಗೆ ಮಾಧ್ಯಮ ಪ್ರತಿನಿಧಿಗಳು ಪ್ರತಿಕ್ರಿಯೆ ಕೇಳಿದಾಗ ಅವರು ಅತ್ಯಂತ ಶಾಂತವಾಗಿಯೇ ಉತ್ತರಿಸಿದರು.
ನನ್ನ ಅಭಿವೃದ್ಧಿ ನೋಡಿ ಜನ ನನ್ನನ್ನು ಒಪ್ಪಿಕೊಂಡಿದ್ದಾರೆ. ಬೇರೆಯವರ ಮಾತಿಗೆಲ್ಲ ಪ್ರತಿಕ್ರಿಯಿಸಲು ನನಗೆ ಸಮಯವೂ ಇಲ್ಲ. ಟೈಂ ವೇಸ್ಟ್ ಮಾಡಲು ಇಷ್ಟವೂ ಇಲ್ಲ. ಆದರೂ ನೀವು ಬಂದು ಕೇಳುತ್ತಿದ್ದೀರಿ. ಎಂದು ಉತ್ತರಿಸುತ್ತಿದ್ದೇನೆ. ಯಾರು ಯಾವ ರೀತಿ ಇದ್ದಾರೆ,  ಒಬ್ಬ ಮಹಿಳೆಯ ಬಗ್ಗೆ ಹೇಗೆಲ್ಲ ಮಾತನಾಡುತ್ತಾರೆ ಎನ್ನುವುದನ್ನು ಸಮಾಜಕ್ಕೆ ನೀವು ತೋರಿಸುತ್ತಿರುವುದಕ್ಕೆ ನಾನು ಧನ್ಯವಾದಗಳನ್ನು ಸಲ್ಲಿಸುತ್ತೇನೆ ಎಂದು ಹೇಳಿದರು.
ಬಿಜೆಪಿಗೆ ಮತ ಹಾಕಲು ಒಬ್ಬರಿಗೆ ಆರು ಸಾವಿರ ರೂ. ಉಡುಗೊರೆ ಕೊಡುವುದಾಗಿ ರಮೇಶ ಜಾರಕಿಹೊಳಿ ಹೇಳಿದ್ದಾರಲ್ಲ ಎನ್ನುವ ಪ್ರಶ್ನೆಗೆ, ರಾಜ್ಯದಲ್ಲಿ ಕಾನೂನು ಇದೆ, ಚುನಾವಣೆ ಆಯೋಗ  ಇದೆ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ ಕಟೀಲು ಇದನ್ನೆಲ್ಲ ನೋಡಿ ಅವರ ಪಕ್ಷ ಯಾವ ಕ್ರಮ ಕೈಗೊಳ್ಳುತ್ತದೆ ಎನ್ನುವುದು ಅವರ ಪಕ್ಷಕ್ಕೆ ಬಿಟ್ಟ ವಿಚಾರ. ನಾನು ಪ್ರತಿಕ್ರಿಯೆ ನೀಡಲು ಇಷ್ಟಪಡುವುದಿಲ್ಲ ಎಂದು  ಹೆಬ್ಬಾಳ್ಕರ್ ಹೇಳಿದರು.
ಲಕ್ಷ್ಮೀ ಹೆಬ್ಬಾಳಕರ್ ಸಮಾಜಕ್ಕೆ ಕೆಟ್ಟ ಹುಳ ಎನ್ನುವ ಪದ ಬಳಕೆ ಮಾಡಿರುವುದು ಅವರ ಸಂಸ್ಕೃತಿಯನ್ನು ತೋರಿಸುತ್ತಿದೆ. ಗ್ರಾಮೀಣ ಕ್ಷೇತ್ರದ ಜನರು ಇದರ ಬಗ್ಗೆ ತೀರ್ಮಾನ ಮಾಡುತ್ತಾರೆ. ಅವರು ಈ ರೀತಿ ಮಾತನಾಡಿದರೆ ಅವರದೇ ಪಕ್ಷ ಬಿಜೆಪಿ ಏನು ಮಾಡಲು ಸಾಧ್ಯ ಎಂದು ಪ್ರಶ್ನಿಸಿದರು.
ಗ್ರಾಮೀಣ ಭಾಗದ ರಸ್ತೆಯ ಅಕ್ಕಪಕ್ಕ ಬಹಳಷ್ಟು ಬಾರ್ ಹಾಗೂ ಕ್ಲಬ್ ಗಳು ಬಂದಿವೆ ಎನ್ನುವ ರಮೇಶ ಜಾರಕಿಹೊಳಿ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ಕೇಂದ್ರ ಮತ್ತು ರಾಜ್ಯದಲ್ಲಿ ಅವರದೇ ಸರಕಾರ ಇದೆ. ಅಧಿಕಾರಿಗಳು ಅವರ ಮಾತು ಕೇಳುತ್ತಾರೆ, ಮತ್ಯಾಕೆ ತಡ ಎಂದು ಪ್ರಶ್ನಿಸಿದರು.
ಅವರ ಸಮಾವೇಶ ಮುಗಿದ ಮೇಲೆ ಬಂದ ಜನರಿಗೆ ಹಣ ಹಂಚುವ ಮತ್ತು ಮಹಿಳೆಯೋರ್ವರು ಅವರನ್ನು ತರಾಟೆಗೆ ತೆಗೆದುಕೊಂಡು, ಲಕ್ಷ್ಮೀ ಹೆಬ್ಬಾಳಕರ್ ಅವರ ಅಭಿವೃದ್ಧಿ ಕಾರ್ಯಗಳನ್ನು ಹೊಗಳುತ್ತಿರುವ ವಿಡಿಯೋ ವೈರಲ್ ಆಗಿರುವ ವಿಚಾರವನ್ನು  ಮಾಧ್ಯಮ ಪ್ರತಿನಿಧಿಗಳು ಗಮನಕ್ಕೆ ತಂದಿದ್ದಕ್ಕೆ ಪ್ರತಿಕ್ರಿಯಿಸಿದ ಲಕ್ಷ್ಮೀ ಹೆಬ್ಬಾಳಕರ್, ಬಹಳ ಸಂತೋಷ. ನನ್ನ ಕೆಲಸಕ್ಕೆ ಪ್ರಶಂಸೆ ವ್ಯಕ್ತಪಡಿಸಿದ ಮಹಿಳೆಗೆ ಧನ್ಯವಾದ ಎಂದರು.
ನಾನೇನು ಯಾರಿಗೂ ಉಡುಗೊರೆ ಕೊಟ್ಟಿಲ್ಲ.  ಉಡುಗೊರೆ ಕೊಡುವುದಾದರೆ ಪುರುಷರಿಗೂ ಕೊಡಬೇಕಿತ್ತಲ್ಲವೇ?  ಗ್ರಾಮೀಣ ಮತಕ್ಷೇತ್ರದಲ್ಲಿ ಗ್ರಾಮೀಣ ಉತ್ಸವ ಮಾಡಿ ಮಹಿಳೆಯರಿಗೆ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಿ ಬಹುಮಾನ ಕೊಡುವ ಕಾರ್ಯಕ್ರಮವನ್ನು ಪ್ರತಿಬಾರಿ ಮಾಡುತ್ತಿರುತ್ತೇನೆ. ರಂಗೋಲಿ ಸ್ಪರ್ಧೆ ಆಯೋಜಿಸಿ, ಅರಿಶಿನ, ಕುಂಕುಮ ಕಾರ್ಯಕ್ರಮ ಆಯೋಜಿಸಿ ಅದರಲ್ಲಿ ವಿಜೇತರಾದವರಿಗೆ ಬಹುಮಾನ ಕೊಟ್ಟಿದ್ದೇನೆ. ಕ್ಷೇತ್ರದಲ್ಲಿ ಮನೆ ಮಗಳು ಎಂದು ಕರೆಸಿಕೊಳ್ಳುತ್ತೇನೆ. ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದೇನೆ. ಗುಡಿಗಳನ್ನು ಕಟ್ಟಿಸಿದ್ದೇನೆ. ಅವನ್ನೆಲ್ಲ ಯಾಕೆ ಇವರು ನೋಡುತ್ತಿಲ್ಲ ಎಂದು ಪ್ರಶ್ನಿಸಿದರು.
ನನ್ನ ಕ್ಷೇತ್ರದ ಜನರು ಸ್ವಾಭಿಮಾನಿಗಳು. ನನ್ನ ಕೆಲಸದ ಬಗ್ಗೆ ಗ್ರಾಮೀಣ ಭಾಗದ ಜನರಿಗೆ ಚೆನ್ನಾಗಿ ಗೊತ್ತಿದೆ. ಬ್ಯಾನರ್ ಹಾಕಿಕೊಂಡು ನನ್ನ ಕ್ಷೇತ್ರದಲ್ಲಿ ನನ್ನ ವಿರುದ್ಧ ಮಾತನಾಡುವವರು ಕೊರೊನಾ ಸಂದರ್ಭದಲ್ಲಿ ಎಲ್ಲಿದ್ದರು? ಜನರು ಕಷ್ಟದಲ್ಲಿದ್ದಾಗ ಅವರು ಏನು ಮಾಡಿದ್ದಾರೆ? ಯಾರು ಸಹಾಯಕ್ಕೆ ಬಂದರು? ಎಷ್ಟು ಜನರಿಗೆ ಸಹಾಯ ಮಾಡಿದ್ದರು? ಪ್ರವಾಹದ ಸಂದರ್ಭದಲ್ಲಿ ಎಲ್ಲಿದ್ದರು? ಕೊರೋನಾ ಸಂದರ್ಭದಲ್ಲಿ ನಾನು ಕಿಟ್ ಕೊಟ್ಟಿದ್ದೇನಲ್ಲ ಆಗ ಯಾಕೆ ಯಾರೂ ಬಂದಿಲ್ಲ? ಪ್ರವಾಹದ ಸಂದರ್ಭದಲ್ಲಿ ಅವರ ಕಷ್ಟಕ್ಕೆ ಸ್ಪಂದಿಸಿದ್ದೇನಲ್ಲ, ಆಗ ಯಾಕೆ ಇವರು ಮಾತನಾಡಲಿಲ್ಲ? ಆಗ ಇವರೆಲ್ಲ ಎಲ್ಲಿದ್ದರು? ಎಂದು ಪ್ರಶ್ನಿಸಿದರು‌.
ನಿಮ್ಮ ಬಗ್ಗೆ ಯಾಕೆ ಇಷ್ಟೊಂದು ಟಾರ್ಗೆಟ್ ಮಾಡುತ್ತಾರೆ ಎನ್ನುವ ಪ್ರಶ್ನೆಗೆ, ಮೋರ್ ಎನಿಮೀಸ್ ಮೋರ್ ಸ್ಟ್ರಾಂಗ್, ಲೆಸ್ ಎನಿಮೀಸ್ ಲೆಸ್ ಸ್ಟ್ರಾಂಗ್, ನೋ ಎನಿಮೀಸ್ ನೋ ಸ್ಟ್ರಾಂಗ್ ಎಂದರು.
ಕ್ಷೇತ್ರದಲ್ಲಿ ಪ್ರಚಾರ ಆರಂಭಿಸಿದ್ದೀರಾ? ನಿಮ್ಮ ಪ್ರಬಲ ಎದುರಾಳಿ ಯಾರು ಎನ್ನುವ ಪ್ರಶ್ನೆಗೆ,  ನಾನು ಜನರ ಜತೆ ನಿರಂತರ ಸಂಪರ್ಕದಲ್ಲಿದ್ದೇನೆ. ಚುನಾವಣೆ ಸಂದರ್ಭದಲ್ಲಿ ಮಾತ್ರ ಪ್ರಚಾರ ಮಾಡುವವಳಲ್ಲ, ಜನರೇ ನಿರಂತರವಾಗಿ ನನ್ನ ಪರವಾಗಿ ಪ್ರಚಾರ ಮಾಡ್ತಾರೆ ಎದ ಅವರು, ಚುನಾವಣೆಗೆ ನಿಂತವರೆಲ್ಲರೂ ನನ್ನ ಎದುರಾಳಿಗಳೇ. ಎಲ್ಲರೂ ಸ್ಟ್ರಾಂಗ್ ಎಂದೇ ಪರಿಗಣಿಸುತ್ತೇನೆ ಎಂದು ಹೆಬ್ಬಾಳಕರ್ ಉತ್ತರಿಸಿದರು.
ರಾಜಹಂಸಗಡದಲ್ಲಿ ಶಿವಾಜಿ ಪುತ್ಥಳಿ ಸ್ಥಾಪನೆ ವಿಷಯವಾಗಿ ಕೇಳಿದ ಪ್ರಶ್ನೆಗೆ, ಕೆಲಸ ಮುಗಿದಿದೆ. ಕಾರ್ಯಕರ್ತರು, ಮುಖಂಡರ ಜೊತೆ ಚರ್ಚಿಸಿ ಆದಷ್ಟು ಶೀಘ್ರ ಪುತ್ಥಳಿ ಲೋಕಾರ್ಪಣೆ ದಿನ ನಿಗದಿಪಡಿಸಲಾಗುವುದು ಎಂದರು.
ಬೆಳಗಾವಿಯ 12 ವಿಮಾನ ಸಂಚಾರ ಸ್ಥಗಿತವಾಗುತ್ತಿರುವ ಕುರಿತು ಪ್ರಶ್ನಿಸಿದಾಗ, ನಾನು ಈ ಕುರಿತು ಈಗಾಗಲೆ ಸಂಬಂಧಿಸಿದವರಿಗೆ ಪತ್ರ ಬರೆದಿದ್ದೇನೆ. ಇಚ್ಚಾಶಕ್ತಿಯ ಕೊರತೆ ನಮ್ಮಲ್ಲಿದೆ. ಪಕ್ಷಾತೀತವಾಗಿ ಎಲ್ಲರೂ ಸೇರಿ ಬೆಳಗಾವಿ ಜಿಲ್ಲೆಯನ್ನು ಬೆಳೆಸುವ ಕೆಲಸವಾಗಬೇಕು. ಹುಬ್ಬಳ್ಳಿಯಂತೆ ಜಿಲ್ಲೆಯ ಜನಪ್ರತಿನಿಧಿಗಳೆಲ್ಲರೂ ಒಟ್ಟಾಗಿ ಕೆಲಸ ಮಾಡಬೇಕು ಎಂದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button