*ಸೈನಿಕರಂತೆ ಹೋರಾಡಿ; ಮುಂದಿನ 100 ದಿನಗಳಲ್ಲಿ ಕಾಂಗ್ರೆಸ್ ಕಾರ್ಯಕ್ರಮ ಮನೆ ಮನೆಗೆ ತಲುಪಿಸಿ; ಕೈ ಕಾರ್ಯಕರ್ತರಿಗೆ ಡಿ.ಕೆ.ಶಿವಕುಮಾರ್ ಕರೆ*
ಪ್ರಗತಿವಾಹಿನಿ ಸುದ್ದಿ; ಹಾಸನ: ರಾಜ್ಯದ ಪ್ರಜೆಗಳ ಧ್ವನಿ ಆಲಿಸಿ, ಅವರ ಭಾವನೆಗೆ ಸ್ಪಂದಿಸಿ ಆಡಳಿತ ನೀಡಬೇಕು ಎಂಬ ಉದ್ದೇಶದಿಂದ ಈ ಪ್ರಜಾಧ್ವನಿ ಕಾರ್ಯಕ್ರಮ ಮಾಡುತ್ತಿದ್ದೇವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.
ಹಾಸನದಲ್ಲಿ ನಡೆದ ಕಾಂಗ್ರೆಸ್ ಪ್ರಜಾಧ್ವನಿ ಸಮವೇಶದಲ್ಲಿ ಮಾತನಾಡಿದ ಅವರು, ಹಾಸನ ಜಿಲ್ಲೆ ಎಂದರೆ ಇಡೀ ದೇಶಕ್ಕೆ ಗೊತ್ತು. ದೇಶಕ್ಕೆ ಪ್ರಧಾನಿಯನ್ನು ಕೊಟ್ಟ ಜಿಲ್ಲೆಯಾಗಿದೆ. ಆದರೆ ಇಂದು ನಮ್ಮ ಮುಂದೆ ದೊಡ್ಡ ಸವಾಲುಗಳಿವೆ. ಆ ಸವಾಲುಗಳನ್ನು ಎದುರಿಸಲು ಮಹಾನ್ ನಾಯಕರನ್ನು ಕೊಟ್ಟ ಜಿಲ್ಲೆಯಲ್ಲಿ ಮತ್ತೆ ಕಾಂಗ್ರೆಸ್ ಪಕ್ಷ ಕಟ್ಟುವ ಕೆಲಸ ಮಾಡುತ್ತಿದ್ದೇವೆ. ಈ ಪಕ್ಷ 10-15 ವರ್ಷಗಳಿಂದ ಜಿಲ್ಲೆಯಲ್ಲಿ ಕಷ್ಟ ಅನುಭವಿಸುತ್ತಿದೆ ಎಂದು ನಾಯಕರು ಹೇಳಿದ್ದಾರೆ. ಆದರೆ ಹಾಸನ ಜಿಲ್ಲೆ ಹಾಗೂ ರಾಜ್ಯದಲ್ಲಿ ಜನ ಬದಲಾವಣೆ ಬಯಸಿದ್ದಾರೆ. ಪ್ರತಿ ಹಂತದಲ್ಲಿ ಲಂಚಾವತಾರ ತಾಂಡವವಾಡುತ್ತಿದೆ. ಈ ಕೆಟ್ಟ ವ್ಯವಸ್ಥೆ ಕಿತ್ತುಹಾಕಲು ತೀರ್ಮಾನ ಮಾಡಲಾಗಿದ್ದು, ನಾನು ಜನರಲ್ಲಿ ಒಂದು ಮನವಿ ಮಾಡುತ್ತಿದ್ದೇನೆ. ನಿಮಗೆ ಬದಲಾವಣೆ ತರಲು ಒಂದು ಅವಕಾಶ ಸಿಕ್ಕಿದ್ದು ಜಿಲ್ಲೆಯಲ್ಲಿ 7 ಕ್ಷೇತ್ರಗಳಲ್ಲಿ 7 ಕ್ಷೇತ್ರ ಗೆಲ್ಲುವ ಸೂಚನೆ ಕಾಣುತ್ತಿದ್ದೇವೆ. ಈ ಎಲ್ಲಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲ್ಲಿಸುವ ತೀರ್ಮಾನವನ್ನು ಇಲ್ಲಿನ ಮತದಾರರು ಮಾಡಬೇಕು. ನಾವೆಲ್ಲರೂ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿ ಮಲ್ಲಿಕಾರ್ಜುನ ಅವರ ಕೈ ಬಲಪಡಿಸುತ್ತೇವೆ, ಎಂದು ಸಂಕಲ್ಪ ಮಾಡಬೇಕು ಎಂದರು.
ಕಾಂಗ್ರೆಸ್ ಪಕ್ಷ ಪ್ರತಿ ಮನೆಗೆ 200 ಯೂನಿಟ್ ವಿದ್ಯುತ್ ಉಚಿತವಾಗಿ ನೀಡಲಾಗುವುದು ಎಂದು ಘೋಷಣೆ ಮಾಡಲಾಗಿದೆ. ಇದು ಕೇವಲ ಭರವಸೆ ಅಲ್ಲ. ಕಾಂಗ್ರೆಸ್ ಪಕ್ಷ ಸದಾ ಕೊಟ್ಟ ಮಾತು ಉಳಿಸಿಕೊಂಡಿದ್ದೇವೆ. ಕಾಂಗ್ರೆಸ್ ಪಕ್ಷ 2013ರಲ್ಲೀ ಕೊಟ್ಟಿದ್ದ 165 ಭರವಸೆಗಳ ಪೈಕಿ 159 ಭರವಸೆ ಈಡೇರಿಸಿದ್ದು, ಸಿದ್ದರಾಮಯ್ಯ ಅವರ ನೇತೃತ್ವದ ಕಾಂಗ್ರೆಸ್ ಸರ್ಕಾರ.
ಬಿಜೆಪಿ ನಾಯಕರು ಎಲ್ಲಿ 200 ಯೂನಿಟ್ ನೀಡುತ್ತಾರೆ ಎಂದು ಕೇಳುತ್ತಿದ್ದಾರೆ. ಒಂದು ಕಾಲದಲ್ಲಿ ರಾಜ್ಯ ವಿದ್ಯುತ್ ಕ್ಷಾಮ ಎದುರಿಸುತ್ತಿತ್ತು. ಸಿದ್ದರಾಮಯ್ಯ ಅವರ ಕಾಲದಲ್ಲಿ ಡಿ.ಕೆ. ಶಿವಕುಮಾರ್ ಅವರು ಇಂಧನ ಸಚಿವರಾಗಿದ್ದಾಗ 9 ಸಾವಿರ ಮೆ.ವ್ಯಾ ವಿದ್ಯುತ್ ಅನ್ನು 14 ಸಾವಿರ ಮೆ.ವ್ಯಾ ಹೆಚ್ಚುವರಿ ಉತ್ಪಾದನೆ ಮಾಡಿತ್ತು. ಈ ಯೋಜನೆ ಕೇವಲ ಒಂದು ಜಾತಿಗೆ ಅಲ್ಲ. ಕಾಂಗ್ರೆಸ್ ಕಾರ್ಯಕ್ರಮ ರೂಪಿಸಿದರೆ ಎಲ್ಲಾ ವರ್ಗದ ಜನರಿಗೆ, ಬಡವರಿಗೆ ನೆರವಾಗುವ ಯೋಜನೆ ನೀಡುತ್ತದೆ. ಈ ಉಚಿತ ವಿದ್ಯುತ್ ಅನ್ನು ಡಿ.ಕೆ. ಶಿವಕುಮಾರ್, ಸಿದ್ದರಾಮಯ್ಯ ಅವರ ನಾಯಕತ್ವದಲ್ಲಿ ಖರ್ಗೆ ಅವರ ಮಾರ್ಗದರ್ಶನದಲ್ಲಿ ಎಲ್ಲರಿಗೂ ನೀಡುವ ಕೆಲಸ ಮಾಡುತ್ತೇವೆ. ಇನ್ನು ಮಹಿಳೆಯರಿಗೆ ಅನುಕೂಲವಾಗಲು ಪ್ರಿಯಾಂಕಾ ಗಾಂಧಿ ಅವರು ರಾಜ್ಯಕ್ಕೆ ಬಂದು ಪ್ರತಿ ಮನೆಯೊಡತಿಗೆ 2 ಸಾವಿರ ಆರ್ಥಿಕ ನೆರವು ನೀಡುವ ಯೋಜನೆ ಘೋಷಿಸಿದ್ದಾರೆ. ಬೆಲೆ ಏರಿಕೆಯಿಂದ ಜನ ತತ್ತರಿಸಿದ್ದಾರೆ. ನಮ್ಮ ಅವಧಿಯಲ್ಲಿ ಅಡುಗೆ ಅನಿಲ ಬೆಲೆ 410 ರೂ. ಇತ್ತು. ಆದರೆ ಇಂದು 1100 ಆಗಿದೆ. ಅತಿಯಾದ ತೆರಿಗೆ ಹಾಕಿ ಬಿಜೆಪಿ ಸರ್ಕಾರ ನಿಮ್ಮ ಜೇಬಿಗೆ ಕತ್ತರಿ ಹಾಕುತ್ತಿದ್ದಾರೆ. ಇದಕ್ಕೆ ಜೆಡಿಎಸ್ ನಾಯಕರು ಬೆಂಬಲ ನೀಡುತ್ತಿದ್ದಾರೆ. ಅವರು ಬೆಲೆ ಏರಿಕೆ ವಿರುದ್ಧ ಒಂದು ದಿನ ಹೋರಾಟ ಮಾಡಲಿಲ್ಲ.
ಕಾಂಗ್ರೆಸ್ ಅಧಿಕಾರದಲ್ಲಿ ಇದ್ದಾಗ ಸೀಮೆ ಎಣ್ಣೆ ಡಬ್ಬಾ ಇಟ್ಟುಕೊಂಡು ಹೋರಾಟ ಮಾಡಿದ್ದರು. ಅವರು ಬಿಜೆಪಿ ವಿರುದ್ಧದ ಹೋರಾಟ ಮಾಡುವ ಶಕ್ತಿ ಕಳೆದುಕೊಂಡಿದ್ದಾರೆ. ಅವರು ಒಳ ಒಪ್ಪಂದ ಮಾಡಿಕೊಂಡಿದ್ದಾರೆ.
ಡಬಲ್ ಇಂಜಿನ್ ಸರ್ಕಾರಕ್ಕೆ ಮಲ್ಲಿಕಾರ್ಜುನ ಖರ್ಗೆ, ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಅವರ ನೇತೃತ್ವದಲ್ಲಿ ಸದನದ ಒಳಗೆ ಹೊರಗೆ ಹೋರಾಟ ಮಾಡುತ್ತಿದ್ದೇವೆ. ಆದರೆ ಬಿಜೆಪಿ ಬೆಲೆ ಏರಿಕೆ ತಡೆಯಲಿಲ್ಲ. ಅದರ ಜತೆಗೆ ಕೂಲಿ ಕಾರ್ಮಿಕರ ಜೇಬಿಗೆ ಜಿಎಸ್ ಟಿ ಹೊರೆ ಹಾಕಿದ್ದು ಬಿಜೆಪಿ. ಹೀಗಾಗಿ ಮಹಿಳೆಯರಿಗೆ ಮನೆ ನಿಭಾಯಿಸಲು ಅನುಕೂಲವಾಗಲು ಪ್ರತಿ ತಿಂಗಳು 2 ಸಾವಿರ ನೀಡುವ ಗೃಹಲಕ್ಷ್ಮಿ ಯೋಜನೆ ಘೋಷಿಸಿದ್ದೇವೆ ಎಂದರು.
ಎಲ್ಲಾ ಕಾರ್ಯಕರ್ತರು ಮನೆ ಮನೆಗೆ ಹೋಗಿ ನಮ್ಮ ಕಾರ್ಯಕ್ರಮವನ್ನು ಜನರಿಗೆ ತಿಳಿಸಬೇಕು. ನೀವು ಸೈನಿಕರಂತೆ ಹೋರಾಡಬೇಕು. ಇಂದು ಸಂವಿಧಾನ ಹಾಗೂ ಪ್ರಜಾಪ್ರಭುತ್ವಕ್ಕೆ ಧಕ್ಕೆಯಾಗುತ್ತಿದೆ. ಹೀಗಾಗಿ ನಾವು ಎಲ್ಲಾ ವರ್ಗದ ಪರವಾಗಿ ಧ್ವನಿ ಎತ್ತುತ್ತಿದ್ದೇವೆ. ಇದು ಕೇವಲ ಒಂದು ದಿನದ ಕಾರ್ಯಕ್ರಮವಲ್ಲ. ನೀವು ಮನೆ ಮನೆಗೆ ಮುಂದಿನ ನೂರು ದಿನ ಹೋಗಿ ಈ ರಾಜ್ಯ ಹಾಗೂ ದೇಶಕ್ಕೆ ಕಾಂಗ್ರೆಸ್ ಅನಿವಾರ್ಯ. ಹೀಗಾಗಿ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ತರುತ್ತೇವೆ ಎಂಬ ಪ್ರತಿಜ್ಞೆ ಮಾಡಬೇಕಿದೆ. ಇಲ್ಲಿ 7ರಲ್ಲಿ 7 ಕ್ಷೇತ್ರ ಗೆದ್ದು ಹೊಸ ಇತಿಹಾಸ ಸೃಷ್ಟಿಸಬೇಕು. ಈ ಭಾಗದ ಜನರಿಗೆ ಉದ್ಯೋಗ ಸಿಗುತ್ತಿಲ್ಲ. ಈ ಜಿಲ್ಲೆ ಹಾಗೂ ಈ ಭಾಗದ ಜನರಿಗೆ ಉದ್ಯೋಗ ಸೃಷ್ಟಿಸುವ ಕಾರ್ಯಕ್ರಮವನ್ನು ಕಾಂಗ್ರೆಸ್ ಪಕ್ಷ ನೀಡಲಿದೆ ಎಂದು ಭರವಸೆ ನೀಡಿದರು.
*ಭಾಜಪಕ್ಕೆ 130 ಸ್ಥಾನಗಳ ಬಹುಮತ: ಸಿಎಂ ಬೊಮ್ಮಾಯಿ*
https://pragati.taskdun.com/tumakursiddaganga-muttbjpcm-basavaraj-bommai/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ