ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯಿಂದ ಪ್ರತಿ ಮತದಾರರಿಗೆ 6 ಸಾವಿರ ರೂ. ನೀಡಿ ಮತ ಕೇಳಲಾಗುವುದು. ಎದುರಾಳಿ ಅಭ್ಯರ್ಥಿ ಎಷ್ಟೇ ದುಡ್ಡು ಖರ್ಚು ಮಾಡಿದರೂ ಅದಕ್ಕಿಂತ 10 ಕೋಟಿ ಹೆಚ್ಚಿನ ಹಣ ಖರ್ಚು ಮಾಡಲು ನಾವು ಸಿದ್ಧವಿದ್ದೇವೆ ಎಂಬ ಹೇಳಿಕೆ ನೀಡಿರುವ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರ ವಿರುದ್ಧ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹಾಗೂ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ನೇತೃತ್ವದ ನಿಯೋಗ ಹೈಗ್ರೌಂಡ್ ಪೊಲೀಸ್ ಠಾಣೆಯಲ್ಲಿ ಬುಧವಾರ ದೂರು ದಾಖಲಿಸಿತು.
ರಮೇಶ್ ಜಾರಕಿಹೊಳಿ, ಪ್ರತಿ ಮತದಾರನಿಗೆ 6000 ರೂಪಾಯಿ ಲಂಚದ ಬಹಿರಂಗ ಆಮಿಷದ ಮೂಲಕ ರಾಜ್ಯದ 5 ಕೋಟಿ ಮತದಾರರನ್ನು 30 ಸಾವಿರ ಕೋಟಿ ಲಂಚದ ಮೂಲಕ ಖರೀದಿ ಮಾಡಲು ಸಂಚು ನಡೆಸಿರುವ ಮಾಜಿ ಸಚಿವ ರಮೇಶ್ ಜಾರಕಿಹೊಳಿ, ಅವರಿಗೆ ಪ್ರೇರಣೆ ನೀಡಿರುವ ಸಿಎಂ ಬಸವರಾಜ ಬೊಮ್ಮಾಯಿ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೇಲ್, ರಾಷ್ಟ್ರೀಯ ಅಧ್ಯಕ್ಷ ಜೆ ಪಿ ನಡ್ಡ ವಿರುದ್ಧ ತನಿಖೆ ನಡೆಸುವಂತೆ ಬೆಂಗಳೂರಿನ ಹೈಗ್ರೌಂಡ್ಸ್ ಪೊಲೀಸರಿಗೆ ಈ ನಿಯೋಗ ಬುಧವಾರ ದೂರು ದಾಖಲಿಸಿದೆ.
ದೂರು ದಾಖಲಿಸಿದ ನಂತರ ಮಾಧ್ಯಮಗಳ ಜತೆ ಮಾತನಾಡಿದ ಡಿ.ಕೆ. ಶಿವಕುಮಾರ್, ‘ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಬಿಜೆಪಿ ನಡೆಯನ್ನು ಎಲ್ಲರೂ ಗಮನಿಸುತ್ತಿದ್ದಾರೆ. ಮಾಜಿ ಮಂತ್ರಿಗಳು, ಬಿಜೆಪಿ ಶಾಸಕರು ನಾವು ಮುಂಬರುವ ಚುನಾವಣೆಯಲ್ಲಿ ಗೆಲ್ಲುವುದಿಲ್ಲ, ಆದರೂ ಸರ್ಕಾರ ರಚನೆ ಮಾಡುತ್ತೇವೆ ಎಂಬ ಸಂಕಲ್ಪ ಮಾಡಿಕೊಂಡು ಕೆಲಸ ಮಾಡುತ್ತಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಬಿಜೆಪಿಯ ಮೂರ್ನಾಲ್ಕು ಶಾಸಕರ ಹೇಳಿಕೆಗಳು, ರಾಜ್ಯದ ಮತದಾರರಿಗೆ ಆಮೀಷ ಒಡ್ಡುತ್ತಿರುವುದರ ಸ್ಪಷ್ಟ ಉದಾಹರಣೆ ಆಗಿವೆ. ಬಿಜೆಪಿ ಸರ್ಕಾರ 40% ಕಮಿಷನ್ ಮೂಲಕ ಸಾವಿರಾರು ಕೋಟಿ ಹಣ ಸಂಗ್ರಹಿಸಿದೆ. ಇತ್ತೀಚೆಗೆ ಮಾಜಿ ಮಂತ್ರಿ ರಮೇಶ್ ಜಾರಕಿಹೊಳಿ ಅವರು ಪ್ರತಿ ಮತಕ್ಕೆ 6 ಸಾವಿರ ನೀಡುತ್ತೇವೆ ಎಂದು ಹೇಳಿದ್ದಾರೆ. ಯಾವುದೇ ಎದುರಾಳಿ ಅಭ್ಯರ್ಥಿ ಎಷ್ಟೇ ಖರ್ಚು ಮಾಡಿದರೂ ಅದಕ್ಕಿಂತ 10ಕೋಟಿ ಹೆಚ್ಚಿನ ಮೊತ್ತವನ್ನು ಖರ್ಚು ಮಾಡುವುದಾಗಿ ಅವರು ಹೇಳಿರುವ ವಿಡಿಯೋ, ಮಾಧ್ಯಮ ವರದಿ ದಾಖಲೆಗಳಿವೆ.
ಈ ದಾಖಲೆಗಳ ಸಮೇತ ನಾನು, ಸಿದ್ದರಾಮಯ್ಯ ಹಾಗೂ ಪಕ್ಷದ ಇತರ ನಾಯಕರೆಲ್ಲರೂ ಸೇರಿ ಹೈಗ್ರೌಂಡ್ಸ್ ಪೋಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದೇವೆ. ಬಿಜೆಪಿಯವರು ರಾಜ್ಯದ 5 ಕೋಟಿ ಮತದಾರರಿಗೆ ಪ್ರತಿಯೊಬ್ಬರಿಗೆ 6 ಸಾವಿರ ರೂ.ನಂತೆ ಒಟ್ಟು 30 ಸಾವಿರ ಕೋಟಿ ಹಣ ಹಂಚಲು ತಯಾರಿ ಮಾಡಿಕೊಂಡಿದ್ದಾರೆ. ಹೀಗಾಗಿ ಮತದಾರರಿಗೆ ಆಮಿಷ ಒಡ್ಡುತ್ತಿರುವ ಬಿಜೆಪಿ ವಿರುದ್ಧ ದಾಖಲೆ ಸಮೇತ ಐಪಿಸಿ ಸೆಕ್ಷನ್ 171ಬಿ, 506, ಜನಪ್ರತಿನಿಧಿ ಕಾಯ್ದೆ 123 ಪ್ರಕಾರ ದೂರು ದಾಖಲಿಸಿದ್ದೇವೆ ಎಂದರು.
ಅಧಿಕಾರಿಗಳು ಕೂಡಲೇ ಎಫ್ಐಆರ್ ದಾಖಲಿಸಬೇಕು. ಈ ದೇಶದ ಕಾನೂನು ಪ್ರಕಾರ ಕ್ರಮ ಕೈಗೊಳ್ಳಬೇಕು. ನಾವು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ, ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ರಮೇಶ್ ಜಾರಕಿಹೊಳಿ ಅವರ ವಿರುದ್ಧ ದೂರು ನೀಡಿದ್ದೇವೆ. ಅವರ ಪಕ್ಷದ ನಾಯಕರು ಇಂತಹ ಹೇಳಿಕೆ ಕೊಟ್ಟರು ಯಾವುದೇ ಶಿಸ್ತಿನ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ನಾವು ಆ ಪಕ್ಷದ ಮುಖ್ಯಸ್ಥರ ಮೇಲೂ ದೂರು ನೀಡುತ್ತಿದ್ದೇವೆ. ಮಾಜಿ ಸಚಿವರ ಹೇಳಿಕೆ ತಿರಸ್ಕರಿಸಿದ ಮಾತ್ರಕ್ಕೆ ಎಲ್ಲವೂ ಸರಿಯಾಗುವುದಿಲ್ಲ. ಅಗತ್ಯ ಕ್ರಮ ಆಗಲೇಬೇಕು, ರಮೇಶ್ ಜಾರಕಿಹೊಳಿ ಅವರ ಬಂಧನವಾಗಬೇಕು ಎಂದು ಆಗ್ರಹಿಸಿದರು.
ನಾವು ರಾಜ್ಯ ಪ್ರವಾಸದಲ್ಲಿದ್ದ ಕಾರಣ ಕಳೆದ ಎರಡು ಮೂರು ದಿನಗಳಿಂದ ಬಂದು ದೂರು ನೀಡಲು ಸಾಧ್ಯವಾಗಲಿಲ್ಲ. ಅಲ್ಲದೆ ಇಂದು ರಾಷ್ಟ್ರೀಯ ಮತದಾರರ ದಿನ. ಈ ಮತದಾನದ ಹಕ್ಕಿಗೆ ಅದರದೇ ಆದ ಗೌರವ ಇದೆ. ಈ ಪವಿತ್ರವಾದ ಹಕ್ಕನ್ನು ಉಳಿಸಲು ಈ ದಿನ ಬಿಜೆಪಿಯ ಷಡ್ಯಂತ್ರದ ವಿರುದ್ಧ ದೂರು ನೀಡಿದ್ದೇವೆ. ನಾಳೆ ನಮ್ಮ ನಾಯಕರ ಸಭೆ ಇದ್ದು, ಪ್ರತಿ ಕ್ಷೇತ್ರದಲ್ಲಿ ನಿಗಾ ವಹಿಸಲು ಕಾರ್ಯಕರ್ತರಿಗೆ ತಿಳಿಸಲಾಗುವುದು.
ಪಿಎಸ್ಐ ನೇಮಕಾತಿ ಅಕ್ರಮ
ಪಿಎಸ್ಐ ನೇಮಕಾತಿ ಹಗರಣದ ಪ್ರಮುಖ ಆರೋಪಿ ಆರ್.ಡಿ. ಪಾಟೀಲ ಅವರು, ತನಿಖಾಧಿಕಾರಿಯು ಈ ಪ್ರಕರಣವನ್ನು ಮುಚ್ಚಿಹಾಕಲು 3 ಕೋಟಿ ಲಂಚ ಕೇಳಿದ್ದು, ಅದರಲ್ಲಿ 76 ಲಕ್ಷ ರೂ. ನೀಡಲಾಗಿದೆ. ಉಳಿದ 2.24 ಕೋಟಿ ಹಣಕ್ಕಾಗಿ ಬೇಡಿಕೆ ಇಟ್ಟಿದ್ದಾರೆ ಎಂದು ಆರೋಪಿಸಿದ್ದಾರೆ. ಈ ಪ್ರಕರಣದ ಹಿಂದೆ ಕೇವಲ ಎಸ್ಐ ಅಥವಾ ಅಧಿಕಾರಿಗಳು ಮಾತ್ರವಲ್ಲ, ಇಡೀ ವ್ಯವಸ್ಥೆಯೇ ಭಾಗಿಯಾಗಿದೆ. ಈ ನೇಮಕಾತಿಯಲ್ಲಿ ಯಾವುದೇ ಅಕ್ರಮ ನಡೆದಿಲ್ಲ ಎಂದ ಅರಗ ಜ್ಞಾನೇಂದ್ರ, ಈಗ ಪ್ರಮುಖ ಆರೋಪಿಯೇ ಪ್ರಕರಣದ ತನಿಖಾಧಿಕಾರಿ ವಿರುದ್ಧ ಲೋಕಾಯುಕ್ತಕ್ಕೆ ದೂರು ನೀಡಿದ್ದಾರೆ. ಯಾರೆಲ್ಲಾ ಆರೋಪಿಗಳನ್ನು ಮುಕ್ತಗೊಳಿಸಲು ಎಷ್ಟು ವಸೂಲಿ ಮಾಡಲಾಗಿದೆ ಎಂಬುದರ ಬಗ್ಗೆ ಲೋಕಾಯುಕ್ತದಿಂದ ವಿಸ್ತೃತ ತನಿಖೆಯಾಗಬೇಕು. ಬೆಂಗಳೂರಿನಲ್ಲಿ ಅಭ್ಯರ್ಥಿಗಳಿಂದ ಹಣಪಡೆದು ನಂತರ ಅವುಗಳನ್ನು ಹಿಂದಿರುಗಿಸುವುದಾಗಿ ಕೆಲವು ನಾಯಕರು ಒಪ್ಪಿಕೊಂಡಿದ್ದಾರೆ. ಈ ಪ್ರಕರಣದಲ್ಲಿ ಕೆಲವರು ಮಂತ್ರಿಗಳ ಹೆಸರು ಹೇಳಿದರೆ, ಮತ್ತೆ ಕೆಲವರು ಗೃಹ ಸಚಿವರು, ಮುಖ್ಯಮಂತ್ರಿಗಳು, ಡಿಜಿಪಿ ಅವರ ಹೆಸರು ಹೇಳುತ್ತಿದ್ದಾರೆ. ಬಂಧನವಾಗಿರುವ ಐಪಿಎಸ್ ಅಧಿಕಾರಿಗೆ ನ್ಯಾಯಾಲಯದ ಮುಂದೆ ಹೇಳಿಕೆ ನೀಡಲು ಅವಕಾಶ ನೀಡುತ್ತಿಲ್ಲ.
ಇನ್ನು ಗೃಹಲಕ್ಷ್ಮೀ ಯೋಜನೆ ಕೂಡ ಆಮಿಷ ಎಂಬ ಮುಖ್ಯಮಂತ್ರಿಗಳ ಆರೋಪದ ಬಗ್ಗೆ ಕೇಳಿದಾಗ, ‘ನಾವು ಏನೇ ಮಾತನಾಡಿದ್ದರೂ ಕಾನೂನಿನ ಚೌಕಟ್ಟಿನಲ್ಲಿ ಮಾತನಾಡಿದ್ದೇವೆ’ ಎಂದರು.
ಭ್ರಷ್ಟಾಚಾರಕ್ಕೆ ಜನ್ಮ ಕೊಟ್ಟಿದ್ದು ಕಾಂಗ್ರೆಸ್ ಎಂಬ ಸಿಎಂ ಹೇಳಿಕೆ ಬಗ್ಗೆ ಕೇಳಿದಾಗ, ‘ಭ್ರಷ್ಟಾಚಾರದ ಪಿತಾಮಹಾ ಬಸವರಾಜ ಬೊಮ್ಮಾಯಿ ಹಾಗೂ ಅವರ ತಂಡ’ ಎಂದರು.
ಇದಕ್ಕೂ ಮುನ್ನ ಕೆಪಿಸಿಸಿ ಕಚೇರಿ ಬಳಿ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಅವರು ಬಿಜೆಪಿ ಸರ್ಕಾರ 40% ಕಮಿಷನ್ ಮೂಲಕ ಸಂಗ್ರಹಿಸಿರುವ ಸಾವಿರಾರು ಕೋಟಿ ಹಣವನ್ನು ಮುಂಬರುವ ಚುನಾವಣೆಯಲ್ಲಿ ಹಂಚಲು ಮುಂದಾಗಿದೆ. ಆದರೂ ಐಟಿ, ಇಡಿ ತನಿಖಾ ಸಂಸ್ಥೆಗಳು ಸುಮ್ಮನೆ ಕೂತಿವೆ. ನಾನು ನನ್ನ ಸ್ವಂತ ಹಣದಲ್ಲಿ ಸಂಸದರಿಗೆ ಸಣ್ಣ ಉಡುಗೊರೆ ನೀಡಿದ್ದಕ್ಕೆ ಆದಾಯ ತೆರಿಗೆ ಅಧಿಕಾರಿಗಳು ನನಗೆ ನೋಟೀಸ್ ಜಾರಿ ಮಾಡಿದ್ದಾರೆ. ಆದರೆ ಈ ವಿಚಾರದಲ್ಲಿ ಅವರು ಮೌನವಾಗಿರುವುದೇಕೆ?
ಬಿಜೆಪಿ ಚುನಾವಣೆ ಗೆಲ್ಲದಿದ್ದರೂ ಸರ್ಕಾರ ರಚಿಸುತ್ತೇವೆ ಎಂದು ಬಿಜೆಪಿ ನಾಯಕರು ಹೇಳುತ್ತಿದ್ದಾರೆ. ಆ ಮೂಲಕ ಹಣಬಲದ ಮೂಲದ ಚುನಾವಣೆಯನ್ನು ನಿಯಂತ್ರಿಸಲು ಬಿಜೆಪಿ ಮುಂದಾಗಿದೆ ಎಂದು ಹೇಳಿದರು.
*ಆರೋಗ್ಯ ಇಲಾಖೆಯಲ್ಲಿ 3000 ಕೋಟಿ ಹಗರಣ; ಸಚಿವ ಸುಧಾಕರ್ ವಿರುದ್ಧ ಗಂಭೀರ ಆರೋಪ*
https://pragati.taskdun.com/siddaramaiahdr-sudhakarbjp-govt/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ